ಹದಿನೇಳನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿಗೆ ಗದ್ದುಗೆ ಏರಲು ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಸಿದ್ಧತೆ ನಡೆಸಿದೆ. ಈ ಹಂತದಲ್ಲಿ ಹದಗೆಟ್ಟಿರುವ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ತುರ್ತಾಗಿ ಅನುಸರಿಸದ ಬೇಕಾದ ಕ್ರಮಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಕೆಲವು ಸಲಹೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೇ 30 ರಂದು ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಗ್ರಹಿಸಲಿದ್ದಾರೆ. ಈಗ ಅನೌಪಚಾರಿಕವಾಗಿ ಮೋದಿ ಸರ್ಕಾರದ ಮೊದಲ 100 ದಿನಗಳಲ್ಲಿ ಏನೇನು ಆಗಬೇಕು ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿ, ಸಚಿವ ಸಂಪುಟ ರಚಿಸಿದ ನಂತರ ಅಧಿಕೃತವಾಗಿ 100 ದಿನಗಳ ಗುರಿಯ ಬಗ್ಗೆ ಹೇಳಬಹುದು. ಅದಕ್ಕಾಗಿ ಕೆಲ ದಿನ ಕಾಯಬೇಕಿದೆ.
ದೇಶದ ಆರ್ಥಿಕತೆಯ ಆಗುಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಬಲ್ಲ ರಘುರಾಮ್ ರಾಜನ್ ಅವರು ತುರ್ತಾಗಿ ಆಗಬೇಕಾದ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಕೆಲವು ಸಲಹೆ ನೀಡಿದ್ದಾರೆ. ಈ ಸಲಹೆಗಳು ಈಗಾಗಲೇ ವಿವಿಧ ಅರ್ಥಶಾಸ್ತ್ರಜ್ಞರೊಂದಿಗೆ ಸೇರಿ ಬರೆದಿರುವ ‘What the Economy Needs Now’ ಆಯ್ದ ಭಾಗಗಳಾಗಿದ್ದು, ಅವುಗಳನ್ನು ಪರಿಷ್ಕರಿಸಿ ತಮ್ಮ ಬ್ಲಾಗ್ ಮೂಲಕ ಹಂಚಿಕೊಂಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೆಚ್ಚುತ್ತಿರುವ ವಿತ್ತೀಯ ಕೊರತೆ ತಗ್ಗಿಸಬೇಕಾದ ಅಗತ್ಯತೆ, ಸಂಕಷ್ಟ ಸ್ಥಿತಿಯಲ್ಲಿರುವ ಕೃಷಿ, ಬ್ಯಾಂಕಿಂಗ್ ಮತ್ತು ಇಂಧನ ವಲಯದ ಪುನಶ್ಚೇತನ ನೀಡಬೇಕೆಂಬುದು ಅವರ ಸಲಹೆಗಳಲ್ಲಿ ಪ್ರಮುಖವಾಗಿವೆ.
ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್ಆರ್ ಬಿಎಂ) ಕಾಯ್ದೆಯಡಿ ನಿಗದಿ ಮಾಡಿರುವ ಶೇ.5ರಷ್ಟು ವಿತ್ತೀಯ ಕೊರತೆ ಮಿತಿಯ ಗುರಿಯನ್ನು ಮುಟ್ಟಬೇಕು. ಆದರೆ, ಗುರಿಯನ್ನು ಮುಟ್ಟುವ ಮಾರ್ಗವು ಲೆಕ್ಕಪುಸ್ತಕದಲ್ಲಿನ ತೋರಿಕೆಯಾಗಿರದೇ ರಚನಾತ್ಮಕ ತೆರಿಗೆ ವ್ಯವಸ್ಥೆ ಮತ್ತು ಹೆಚ್ಚು ವಿನಿಯೋಜನೆಯ ಮೂಲಕ ಸಾಧಿಸಬೇಕು ಎಂದೂ ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.
ಮನಿಕಂಟ್ರೋಲ್ ಡಾಟ್ಕಾಮ್ ವರದಿ ಪ್ರಕಾರ, 2018ನೇ ವಿತ್ತೀಯ ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯಗಳ ವಿತ್ತೀಯ ಕೊರತೆಯು ಶೇ.5.8ರಷ್ಟಿದ್ದು, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಗಳು ಹೆಚ್ಚಿನ ವಿನಿಯೋಜನೆ ಮಾಡಿರುವುದರಿಂದ ವಿತ್ತೀಯ ಕೊರತೆ ಪ್ರಮಾಣ ಮತ್ತಷ್ಟು ಹಿಗ್ಗಲಿದೆ. ಕೇಂದ್ರ ಸರ್ಕಾರದ 2019ರ ವಿತ್ತೀಯ ಕೊರತೆ ಗುರಿ ಶೇ.3.4ರಷ್ಟಿದ್ದು, ಹಿಂದಿನ ವರ್ಷದ ಶೇ.5.3ರಷ್ಟಿತ್ತು.
‘ಅತ್ಯಂಕ ಸಂಕಷ್ಟ ಎದುರಿಸುತ್ತಿರುವ ಮೂರು ವಲಯಗಳೆಂದರೆ ಕೃಷಿ, ಇಂಧನ ಮತ್ತು ಬ್ಯಾಂಕಿಂಗ್ ವಲಯಗಳು. ಹಿಂದಿನ ಅವಧಿಯಲ್ಲಿ ಮೋದಿ ಸರ್ಕಾರ ಇತ್ತ ಗಮನ ಹರಿಸದೇ ಇದ್ದುದು ಇದಕ್ಕೆ ಕಾರಣ. ಸಾಲ ಮನ್ನಾ, ದಾಸ್ತಾನು ವ್ಯವಸ್ಥೆ ಮಾಡದೇ ಘೋಷಿಸಿರುವ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಮತ್ತು ಹೆಚ್ಚಿನ ಸಹಾಯಧನದಿಂದಾಗಿ ಸಮಸ್ಯೆಗಳು ಉಲ್ಬಣಗೊಂಡಿವೆ. ಉತ್ತಮ ವಹಿವಾಟು ಪರಿಸರ ನಿರ್ಮಾಣ ಮಾಡುವುದು ಕೇಂದ್ರ ಮತ್ತು ರಾಜ್ಯ ಉತ್ಪಾದಕ ಮಂಡಳಿ ಮೂಲಕ ಮತ್ತೆ ವಿಶೇಷ ಆರ್ಥಿಕ ವಲಯ ಪರಿಕಲ್ಪನೆಯನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ಇಂತಹ ವಿಶೇಷ ಆರ್ಥಿಕ ವಲಯಗಳು ಕೇವಲ ರಫ್ತಿನ್ನೇ ಗುರಿಯಾಗಿಟ್ಟುಕೊಳ್ಳಬೇಕಿಲ್ಲ’ ಎಂದು ಸಲಹೆ ಮಾಡಿದ್ದಾರೆ.
‘ನಾವು ನೋಡಿದಂತೆ, ನೀತಿನಿಯಮಗಳ ಪುನರ್ವಿಮರ್ಶಿಸುವ ಸರ್ಕಾರವು ಪ್ರಮುಖವಾಗುತ್ತದೆ. ಆದರೆ, ಸರ್ಕಾರದ ಸಾಮರ್ಥ್ಯಕ್ಕೆ ಮಿತಿ ಇದೆ. ಸಾಮರ್ಥ್ಯವನ್ನು ಹಿಗ್ಗಿಸಲು ಯತ್ನಿಸುತ್ತಾ ಉತ್ತಮ ಗುರಿ ನಿಗದಿ ಮಾಡಿಕೊಳ್ಳುವ ಅಗತ್ಯವಿದೆ. ಸರ್ಕಾರದ ನೀತಿಗಳಲ್ಲಿ ಸ್ಥಿರತೆ ಮುಖ್ಯ, ಇದರಿಂದ ರೈತರು ಮತ್ತು ಸಂಸ್ಥೆಗಳು ಉತ್ತಮ ಯೋಜನೆಗಳನ್ನು ರೂಪಿಸಿಕೊಳ್ಳಬಹುದು, ಇದರಿಂದಾಗಿ ಮಾರುಕಟ್ಟೆಯು ಪರಿಣಾಮಕಾರಿ ಪಾತ್ರ ವಹಿಸಲು ಸಾಧ್ಯ’ ಎಂದು ರಾಜನ್ ಹೇಳಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಉತ್ತಮ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಸ್ಥಿರ ಸರ್ಕಾರ ಮತ್ತು ಸುಧಾರಣೆಗಳು ಮುಂದುವರೆಯುವ ನಿರೀಕ್ಷೆಯಲ್ಲಿ ಶೇರುಪೇಟೆ ಸೂಚ್ಯಂಕಗಳು ಏರುಹಾದಿಯಲ್ಲಿ ಸಾಗಿ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿವೆ.
ಆದರೆ, ಶೇರುಪೇಟೆಯ ಏರುಹಾದಿ ಏನೇ ಇರಲಿ, ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ವಾಸ್ತವಿಕ ಸತ್ಯ. ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. 45 ವರ್ಷಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿದೆ. ಇದೇ ವೇಳೆ ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಶಕ್ತಿ ತಗ್ಗಿದೆ. ಗ್ರಾಹಕರ ಖರೀದಿಸುವ ಶಕ್ತಿ ಚೇತರಿಸಿಕೊಳ್ಳದೇ ಆರ್ಥಿಕತೆಗೆ ಚೇತರಿಕೆ ಬರಲಾಗದು. ಹಣಕಾಸು ಮಾರುಕಟ್ಟೆಯಲ್ಲಿನ ನಗದು ಕೊರತೆಯು ಸಾಲ ನೀಡಿಕೆಗೆ ಅಡ್ಡಿಯಾಗಿದೆ. ಇದು ಸಣ್ಣ ವ್ಯಾಪಾರಿಗಳು ಮತ್ತು ಮನೆ, ವಾಹನ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗೆ ಖರೀದಿಯನ್ನು ಮುಂದೂಡುವಂತೆ ಮಾಡುತ್ತಿದೆ. ಇಷ್ಟೆಲ್ಲದ ನಡುವೆಯೂ ಒಟ್ಟಾರೆ ದೇಶದ ಜಿಡಿಪಿ ಶೇ.6.8ಕ್ಕೆ ಕುಸಿಯುವ ಮುನ್ನಂದಾಜು ಮಾಡಲಾಗಿದೆ. ಮತ್ತೆ ಮೋದಿ ಸರ್ಕಾರವೇ ಅಧಿಕಾರಕ್ಕೆ ಬಂದಿರುವುದರಿಂದ ಜಿಡಿಪಿ ಅಂಕಿ ಅಂಶಗಳನ್ನು ಘೋಷಣೆ ಮಾಡುವಾಗ ಅವುಗಳನ್ನು ತಿರುಚಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.