ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ಸಲ್ಲಿಸಿರುವ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಊಹಾಪೋಹವನ್ನು ಖಡಾಖಂಡಿತವಾಗಿ ಅಲ್ಲಗಳೆದಿದ್ದಾರೆ.
ಅಣ್ಣಾಮಲೈ ಆರೆಸ್ಸೆಸ್ ಸೇರಲಿದ್ದಾರೆ ಎಂಬುದು ಫೇಕ್ ನ್ಯೂಸ್ ಎಂದು ದೃಢವಾಗಿದೆ.
9 ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿರುವ ನಿಷ್ಟಾವಂತ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಗೆ ಬದುಕಿನಲ್ಲಿ ಹೊಸದೇನಾದರೂ ಕಂಡುಕೊಳ್ಳುವ ಆಸಕ್ತಿ ಇದೆ, ಸಮಾಜ ಸೇವೆಯಲ್ಲೇ ತೊಡಗಿಕೊಳ್ಳಬೇಕು, ಆದರೆ ಸ್ವತಂತ್ರವಾಗಿ ಕೆಲಸ ಮಾಡಬೇಕು ಎಂದು ಮಾಧ್ಯಮಗಳ ಎದುರಿಗೆ ತಿಳಿಸಿದ್ದರು. ಸದ್ಯ ಕೆಲವು ತಿಂಗಳುಗಳ ಕಾಲ ಬಿಡುವು ಬೇಕಿದೆ, ಕುಟುಂಬದ ಜೊತೆ ಕಾಲ ಕಳೆಯಬೇಕು, ಈ ನಡುವೆ ಒಂದು ಪುಸ್ತಕ ಬರೆಯುವುದಿದೆ ಎಂದೂ ಅಣ್ಣಾಮಲೈ ತಿಳಿಸಿದ್ದಾರೆ.
ಈ ನಡುವೆ ಪೋಸ್ಟ್ ಕಾರ್ಡ್ ಎಂಬ ಫೇಕ್ ನ್ಯೂಸ್ ಜಾಲತಾಣವು ಅಣ್ಣಾಮಲೈ ಆರೆಸ್ಸೆಸ್ ಕಡೆ ಹೋಗಲಿದ್ದಾರೆ ಎಂಬ ಸುದ್ದಿಯನ್ನು ಪ್ರಕಟಿಸಿದೆ. ಮಾತ್ರವಲ್ಲದೇ ಅಣ್ಣಾಮಲೈ ಆರ್ ಎಸ್ ಎಸ್ ಪಾದಾರ್ಪಣೆ ಎಂಬ ಪೋಸ್ಟರ್ ಸೃಷ್ಟಿಸಿ ಹಂಚಲಾಗುತ್ತಿದೆ. ಅದರಲ್ಲಿ ಅಣ್ಣಾಮಲೈ ಆರ್ ಎಸ್ ಎಸ್ ಸೇರ್ಪಡೆಗೊಂಡು ದೇಶ ಧರ್ಮದ ಕಾರ್ಯ ಮಾಡಲಿದ್ದಾರೆ, ತಮ್ಮ ಮುಂದಿನ ದಿನಗಳಲ್ಲಿ ಸಂಘವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ, ಇದಕ್ಕೆಲ್ಲಾ ಮೋದಿಯವರೇ ಸ್ಪೂರ್ತಿ” ಎಂದು ಬರೆದುಕೊಳ್ಳಲಾಗಿದೆ.
ಈ ಸುದ್ದಿಗಳ ಕುರಿತು ಟ್ರೂಥ್ ಇಂಡಿಯಾ ಸುದ್ದಿತಾಣವು ಅಣ್ಣಾಮಲೈ ಅವರನ್ನು ಸಂಪರ್ಕಿಸಿದಾಗ, “ಈ ಬಗೆಯ ಸುದ್ದಿ ಮತ್ತು ಊಹಾಪೋಹಗಳನ್ನು ನಾನು ಬಲವಾಗಿ ಅಲ್ಲಗಳೆಯುತ್ತೇನೆ. (I Strongly deny this) ಅಂತಹ ಯಾವುದೇ ಉದ್ದೇಶ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.