ಬೆಂಗಳೂರು: ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಮೇಲೆ ಜೆಡಿಎಸ್ ಕಾರ್ಯಕರ್ತರೊಬ್ಬರು ನೀಡಿದ್ದ ದೂರಿನ ಅನ್ವಯ ಮಾನನಷ್ಟ ಕೇಸು ದಾಖಲಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕುರಿತು ಮಾನಹಾನಿ ಆಗುವಂತಹ ವರದಿಯನ್ನು ವಿಶ್ವೇಶ್ವರ ಭಟ್ ಪ್ರಕಟಿಸಿದ್ದಾಗಿ ದೂರು ನೀಡಲಾಗಿತ್ತು. ಈ ಸಂಬಂಧ ಬೆಂಗಳೂರಿನ ಶ್ರೀರಾಮ್ ಪುರ ಪೊಲೀಸ್ ಠಾಣೆಯ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು.
ತಮ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ಅದನ್ನು ತಮ್ಮ ಅನುಕೂಲಕ್ಕೆ ತಿರುಗಿಸಿಕೊಳ್ಳಲು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಘಟನೆಯನ್ನು ಹಾಸ್ಯಾಸ್ಪದವಾಗಿ ವರದಿ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.
ದೇಶದಾದ್ಯಂತ ಖಂಡನೆಯೇ?
ವಿಶ್ವೇಶ್ವರ ಭಟ್ ತಮ್ಮ ಪತ್ರಿಕೆಯಲ್ಲಿ ಸುಳ್ಳು ವರದಿ ಪ್ರಕಟಿಸಿದ ಆರೋಪದಲ್ಲಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿರುವುದರ ವಿರುದ್ಧ “ದೇಶದಾದ್ಯಂತ ಖಂಡನೆ” ಎಂದು ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ದೇಶದಾದ್ಯಂತ ಹೋಗಲಿ ರಾಜ್ಯದಾದ್ಯಂತವೂ ಖಂಡನೆ ವ್ಯಕ್ತವಾಗಿರಲಿಲ್ಲ.
ವಿಶ್ವವಾಣಿಯಲ್ಲಿ ಹೀಗೆ ಬರೆದಿದ್ದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದು ಹೀಗೆ.
ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ?!
ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿ ಪತ್ರಿಕೆಯು ಇಂದು ಮುಖಪುಟದಲ್ಲಿ #EmergencyInKarnataka ಎಂದು ಬೃಹದಾಗಿ ಬರೆದುಕೊಂಡಿರುವುದನ್ನು ನೋಡಬಹುದು. ವಿಶ್ವೇಶ್ವರ ಭಟ್ ವಿರುದ್ಧ ಕೇಸು ದಾಖಲಾಗಿದ್ದನ್ನು ಬಿಜೆಪಿಯ ಮುಖಂಡರು ಖಂಡಿಸಿ, ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ಎಂಬ ಹ್ಯಾಶ್ ಟ್ಯಾಗ ಮೂಲಕ ಟ್ವೀಟ್ ಗಳನ್ನು ಮಾಡಿದ್ದರು. ಕೆಲ ದಿನಗಳ ಹಿಂದ ಫೇಕ್ ನ್ಯೂಸ್ ಹರಡಿಸಿದ್ದ ಆರೋಪದಲ್ಲಿ ಪತ್ರಕರ್ತರೊಬ್ಬರನ್ನು ವಿಚಾರಣೆ ನಡೆಸಿದ್ದನ್ನು ಸೇರಿಸಿಕೊಂಡು ಬಿಜೆಪಿ “ಪತ್ರಿಕಾ ಸ್ವಾತಂತ್ರ್ಯದ ಹರಣ” ಎಂದು ಆರೋಪಿಸಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ
ವಿಶ್ವವಾಣಿ ಪತ್ರಿಕೆಯಲ್ಲಿ ನಿಖಿಲ್ ಕುಮಾರ ಸ್ವಾಮಿ ಕುರಿತು ಸುಳ್ಳು ಸುದ್ದಿ ಪ್ರಕಟಿಸಿರುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಅದರಲ್ಲಿ,
“ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ.ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ.ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ” ಎಂದು ಬರೆದಿದ್ದರು.
ಕನ್ನಡಪತ್ರಿಕೆಯೊಂದು ಇಂದು ನಿಖಿಲ್ ಕುಮಾರಸ್ವಾಮಿ ಕುರಿತು ಪ್ರಕಟಿಸಿದ ಸುದ್ದಿ ಅವಾಸ್ತವಿಕ ಹಾಗೂ ಕಪೋಲಕಲ್ಪಿತ.ನಿಖಿಲ್ ಚಾರಿತ್ರ್ಯ ವಧೆ ಮಾಡುವ ಈ ಸುದ್ದಿಯಿಂದ ಒಬ್ಬ ತಂದೆಯಾಗಿ ಅನುಭವಿಸಿದ ನೋವನ್ನು ಸಂಪಾದಕರ ಗಮನಕ್ಕೆ ತಂದಿದ್ದೇನೆ.ಮಾಧ್ಯಮಗಳು ಇಂಥ ಸುಳ್ಳುಸುದ್ದಿಗಳ ಮೂಲಕ ಭಾವನೆಗಳೊಂದಿಗೆ ಚೆಲ್ಲಾಟವಾಡದಿರಿ ಎನ್ನುವುದು ನನ್ನ ಕಳಕಳಿಯ ಮನವಿ
— H D Kumaraswamy (@hd_kumaraswamy) May 25, 2019
ಪತ್ರಕರ್ತರ ಸಂಘದ ದೂರು- ಕೆಲವು ಪ್ರಶ್ನೆಗಳು
ಈ ನಡುವೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದು ವಿಶ್ವೇಶ್ವರ ಭಟ್ ಅವರ ಮೇಲೆ ಪೊಲೀಸ್ ದೂರು ದಾಖಲಿಸಿದ್ದನ್ನು ಖಂಡಿಸಿದ್ದಾರೆ. ಇದು ದ್ವೇಷದ ನಡವಳಿಕೆಗೆ ಇಂಬು ನೀಡಿದೆ ಎಂದು ದೂರಿದ್ದಾರೆ.
ಈ ಬಗ್ಗೆ ಕೆಲವು ಪತ್ರಕರ್ತರು ತೀವ್ರವಾಗಿ ಸ್ಪಂದಿಸಿ ಹೀಗೆ ಕೇಳಿದ್ದಾರೆ.
- “ವಿಶ್ವವಾಣಿ ಪತ್ರಿಕೆ ಸಂಬಳ ಸರಿಯಾಗಿ ನೀಡುತ್ತಿಲ್ಲ ಎಂದು ವಿಶ್ವವಾಣಿ ಪತ್ರಿಕೆಯ ಸಹೋದ್ಯೋಗಿಗಳು ದಯಾಮರಣ ಕೋರಿದ್ದಾಗ ಎಲ್ಲಿ ಹೋಗಿತ್ತು ಈ ಸಂಘ?”
- “ಮಹಿಳೆಯ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿ ಸಂಪಾದಕನ ವಿರುದ್ಧ ಕಾರ್ಯನಿರತ ಪತ್ರಕರ್ತರ ಸಂಘ ಯಾಕೆ ಕ್ರಮ ಕೈಗೊಳ್ಳಲಿಲ್ಲ?”
- “ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದಾಗ ಸಂಘ ಯಾವ ಹೇಳಿಕೆ ನೀಡಿತ್ತು? ಹತ್ಯೆ ಮಾಡಿದವರನ್ನು ಹಿಡಿದು ಶಿಕ್ಷಿಸಲು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡಿತ್ತೇ?
- “ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರ ಬಗ್ಗೆ ಇದೇ ವಿಶ್ವೇಶ್ವರ ಭಟ್ ಹೀನಾತಿಹೀನವಾಗಿ ಬರೆದಾಗ ಪತ್ರಕರ್ತರ ಸಂಘ ನಾಡಿನಲ್ಲಿ ತಮ್ಮದೇ ಗೌರವ ಘನತೆ ಹೊಂದಿದ್ದ ಪತ್ರಕರ್ತೆಯ ಕುರಿತು ಕೆಟ್ಟದಾಗಿ ಬರೆದಿದ್ದನ್ನು ಖಂಡಿಸಬಹುದಿತ್ತಲ್ಲವೇ?
- ಇದೇ ರೀತಿ ನಾಡಿನ ಹಲವಾರು ಗೌರವಾನ್ವಿತ ಸಾಹಿತಿಗಳ ಕುರಿತು ತೀರ ನಿಂದನೀಯ ಮಾತುಗಳಲ್ಲಿ ತಮ್ಮ ಎಳೆನಿಂಬೆಕಾಯಿಗಳ ವಿರುದ್ಧ ವಿಶ್ವೇಶ್ವರ ಭಟ್ ಬರೆಸಿದ್ದು ದ್ವೇಷದ ರಾಜಕಾರಣವೋ ಪತ್ರಿಕೋದ್ಯಮವೋ? ಆದರೆ ವಿಶ್ವೇಶ್ವರ ಭಟ್ ಸಂಪಾದಕರಾಗಿದ್ದ ಪತ್ರಿಕೆಯ ಬರಹಗಳ ಮೂಲಕ ತೀವ್ರ ನೊಂದುಕೊಂಡಿದ್ದ ಯು ಆರ್ ಅನಂತಮೂರ್ತಿ ಅವರಾದಿಯಾಗಿ ಯಾರೂ ವಿಶ್ವೇಶ್ವರ ಭಟ್ ಅವರ ಮೇಲೆ ಆಗ ಮಾನನಷ್ಟ ಮೊಕದ್ದಮೆ ನೀಡಿರಲಿಲ್ಲ. ಅಂತಹ ಸಂದರ್ಭದಲ್ಲಿ ಯಾವ ಪತ್ರಕರ್ತರ ಸಂಘ ವಿಶ್ವೇಶ್ವರ ಭಟ್ ಅವರಿಗೆ ಬುದ್ದಿ ಹೇಳುವ ಧೈರ್ಯ ತೋರಿತ್ತು?
ಪತ್ರಿಕೋದ್ಯಮದ ಹೆಸರಲ್ಲಿ ಮಾಡಬಾರದ ಕೆಲಸಗಳನ್ನು ವಿಶ್ವೇಶ್ವರ ಭಟ್ ಮಾಡಿದ್ದಾಗ ಆ ಬಗ್ಗೆ ಮಧ್ಯೆ ಪ್ರವೇಶಿಸಿ ಪತ್ರಿಕೋದ್ಯಮದ ಘನತೆಯನ್ನು ರಕ್ಷಿಸದ ಪತ್ರಕರ್ತರ ಸಂಘ ಈಗ ವಿಶ್ವೇಶ್ವರ ಭಟ್ ಮೇಲೆ ದೂರು ದಾಖಲಾದ ತಕ್ಷಣ ಅವರಿಗೆ ತುತ್ತೂರಿ ಊದುತ್ತಿರುವುದರ ಬಗ್ಗೆ ಹಲವು ಪತ್ರಕರ್ತರು ಪ್ರಶ್ನೆ ಎತ್ತುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ದೇವೇಗೌಡರ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮ ಸೋಲಿಗೆ ದೇವೇಗೌಡರು ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಕುಡಿದು ರಂಪಾಟ ಮಾಡಿದ್ದರು ಎಂದು ವಿಶ್ವವಾಣಿ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದರ ವಿರುದ್ಧ ಜೆ ಡಿ ಎಸ್ ಕಾರ್ಯಕರ್ತ ಪ್ರದೀಪ್ ಕುಮಾರ್ ಎಸ್ ದೂರು ಸಲ್ಲಿಸಿದ್ದರು.