ಬಿಜೆಪಿ ನಾಯಕಿ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮೋದಿ ಹೆಸರಿನಲ್ಲಿ ಮತ್ತೊಮ್ಮೆ ಚುನಾಯಿತರಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಮೇ 26ರ ಭಾನುವಾರ ಕೋಮು ಸಾಮರಸ್ಯ ಕದಡುವ ರೀತಿಯಲ್ಲಿ ಪ್ರಚೋದನಾಕಾರಿ ಹೇಳಿಕೆಯೊಂದನ್ನು ಟ್ವೀಟ್ ಮಾಡಿದ್ದರು.
“19 ವರ್ಷದ ಶಿವಕುಮಾರ್ ಉಪ್ಪಾರ್ ಎಂಬ ಯುವಕನನ್ನು ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿ ನೇತು ಹಾಕಲಾಗಿದೆ. ಅವನು ಮಾಡಿದ ಒಂದೇ ಒಂದು ತಪ್ಪೆಂದರೆ ಗೋ ಕಳ್ಳಸಾಗಾಣಿಕೆದಾರರಿಂದ ಗೋವುಗಳನ್ನು ರಕ್ಷಿಸಿದ್ದು, ಅದಕ್ಕಾಗಿ ಅವನನ್ನು ಹತ್ಯೆ ಮಾಡಲಾಗಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಪರಾಧಿಗಳನ್ನು ಬಂಧಿಸಬೇಕೆಂದು ನಾನು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ” ಎಂದು ಶೋಭಾ ಕರಂದ್ಲಾಜೆ ಯುವಕನೊಬ್ಬ ಛಾವಣಿಯಿಂದ ನೇತಾಡುತ್ತಿರುವ ಚಿತ್ರವನ್ನು ಹಾಕಿ ಟ್ವಿಟ್ಟರ್ ನಲ್ಲಿ ಬರೆದಿದ್ದರು.
ಇದೇ ಸಂದೇಶವನ್ನು Justice For Hindus ಎಂಬ ಫೇಸ್ ಬುಕ್ ಪೇಜಿನಲ್ಲೂ ಅದೇ ದಿನ ಬೆಳಿಗ್ಗೆ ಹಂಚಿಕೊಳ್ಳಲಾಗಿತ್ತು. ಇನ್ನೂ ಕೆಲವರು ಇದನ್ನು ಕೋಮು ವಿಷಯವಾಗಿ ಪರಿವರ್ತಿಸಲು ಪ್ರಯತ್ನ ನಡೆಸಿದ್ದರು.
19 year old young Gau Rakshak Shivu Uppar ( Karnataka)was hacked to death and hanged in bhagewadi bus stand his only crime was to prevent cattle robbery by cattle smugglers we will not sit quite until action will be not taken..@Tejasvi_Surya pic.twitter.com/GH2YUAjrnV
— Meera Singh (@meeraremi11) May 26, 2019
ಸುಳ್ಳುಸುದ್ದಿಯನ್ನೇ ಪ್ರಸಾರ ಮಾಡುವ ಜಾಲತಾಣವಾದ Dainik Bharat ಕೂಡ ಲೇಖನವೊಂದನ್ನು ಪ್ರಕಟಿಸಿ ಗೋ ಸಾಕಾಣಿಕೆದಾರರಿಂದ ಬೆಳಗಾವಿಯಲ್ಲಿ ಉಪ್ಪಾರ್ ಎಂಬ ಯುವಕ ಹತನಾಗಿದ್ದಾನೆ ಎಂದಿತ್ತು. ಈ ಮೂಲಕ ಗೋರಕ್ಷಣೆಯ ನೆಪದಲ್ಲಿ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಬೃಹತ್ ಸಂಚು ರೂಪಿಸಲಾಗಿತ್ತು.
ಆದರೆ ನಿಜವಾಗಿ ಉಪ್ಪಾರ್ ಕೊಲೆಯಾಗಿದ್ದನೇ? ಶವಪರೀಕ್ಷೆ ವರದಿ ಹೇಳಿದ್ದೇನು?
19ರ ಹರೆಯದ ಶಿವು ಉಪ್ಪಾರ್ ಕೊಲೆಯಾಗಿಲ್ಲವೆಂದು, ಅವನು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾನೆಂಬುದಾಗಿ ಅವನ ಮರಣೋತ್ತರ ಪರೀಕ್ಷೆ ವರದಿ ದೃಢೀಕರಿಸಿದೆ. ಬೆಳಗಾವಿಯ ಪೊಲೀಸ್ ಆಯುಕ್ತರಾದ ಬಿ ಎಸ್ ಲೋಕೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯವನ್ನು ತಿಳಿಸಿ, “ಇದು ಆತ್ಮಹತ್ಯೆಯ ಪ್ರಕರಣವಾಗಿದ್ದು ಇದಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ವರದಿಯನ್ನು ಸ್ವೀಕರಿಸಿದ್ದೇವೆ. ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದರಲ್ಲಿ ಸ್ಪಷ್ಟವಾಗಿ ನಮೂದಾಗಿದೆ. ವರದಿಯ ಪ್ರಕಾರ ಶರೀರದ ಮೇಲೆ ಯಾವುದೇ ಗಾಯದ ಗುರುತುಗಳಿರುವುದಿಲ್ಲ. ಮೃತ ಯುವಕ ತನ್ನ ಕುಟುಂಬದ ಜೊತೆ ಜಗಳವಾಡಿಕೊಂಡಿದ್ದ. ಕುಟುಂಬಸ್ಥರೂ ಸಹ ಯುವಕ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ಜನ ಇದರ ಬಗ್ಗೆ ಸುಳ್ಳುಸುದ್ದಿಯನ್ನು ಹರಡುತ್ತಿದ್ದಾರೆ. ಇದರ ವಿರುದ್ಧ ಬೆಳಗಾವಿಯ ಜಿಲ್ಲಾ ಪೊಲೀಸ್ ಎಸ್ ಪಿ ಕ್ರಮ ಕೈಗೊಂಡಿದ್ದಾರೆ” ಎಂದಿದ್ದಾರೆ.
ಜಿಲ್ಲಾ ಎಸ್ ಪಿ ಸುಧೀರ್ ಕುಮಾರ್ ರೆಡ್ಡಿಯವರೂ Alt News ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ ಶಿವು ಉಪ್ಪಾರ್ ಎಂಬ ಬೆಳಗಾವಿಯ ಯುವಕನ ಸಾವನ್ನು ಗೋ ಕಳ್ಳಸಾಗಾಣಿಕೆದಾರರು ನಡೆಸಿದ ಕೊಲೆ ಎಂದು ಸುಳ್ಳುಸುದ್ದಿ ಹಬ್ಬಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ದೃಢೀಕರಿಸಿದ್ದಾರೆ. ಇದನ್ನು News18 ಸುದ್ದಿ ಸಂಸ್ಥೆಯೂ ವರದಿಮಾಡಿದೆ.
ಶಿವಕುಮಾರ್ ಉಪ್ಪಾರ್ ತಂದೆ ತಾಯಿಗಳು ಸಹ ಮಾತನಾಡಿ ತಮ್ಮ ಮಗನ ಸಾವು ಆತ್ಮಹತ್ಯೆ ಎಂದು ದೃಢೀಕರಿಸಿದ್ದಾರೆ, ಅವರು, “ನಮ್ಮ ಮಗ ಗೋರಕ್ಷಣೆ ಎಂದು ಹೋಗುತ್ತಿದ್ದ. ನಾವು ಮನೆಯ ಕಡೆ ನೋಡಿಕೊ ಎಂದು ಬೇಸರದಿಂದ ಗದರಿಸಿ ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ” ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆ ಬಯಲು ಮಾಡಿದ್ದೇನು?
ಶನಿವಾರ 19ರ ಹರೆಯದ ಶಿವಕುಮಾರ್ ಉಪ್ಪಾರ್ ಬಾಗೇವಾಡಿ ಬಸ್ ನಿಲ್ದಾಣದ ಬಳಿ ನೇತಾಡುತ್ತಿದ್ದುದು ಬೆಳಕಿಗೆ ಬಂದಿದೆ. ಆತ ತನ್ನ ಪೋಷಕರೊಂದಿಗೆ ಗೋಕಾಕ್ ಪಟ್ಟಣಕ್ಕೆ ಬಂದಿದ್ದನೆಂದು ಹೇಳಲಾಗಿದೆ. ಪ್ರಾಥಮಿಕ ತನಿಖೆಯಿಂದ ಮತ್ತು ಆತನ ತಂದೆ ನೀಡಿರುವ ಹೇಳಿಕೆಯ ಆಧಾರದ ಮೇರೆಗೆ CrPC ಯ ಸೆಕ್ಷನ್ 174ರ ಅನ್ವಯ ಅವನ ಸಾವನ್ನು ಅಸಹಜ ಸಾವು ಅಥವಾ ಆತ್ಮಹತ್ಯೆ ಎಂಬುದಾಗಿ ಪ್ರಕರಣ ದಾಖಲಿಸಲಾಗಿದೆ.
ಆದರೆ ಕೆಲಹೊತ್ತಲ್ಲೇ ಶಿವು ಉಪ್ಪಾರ್ ಸಾವಿಗೆ ಕೋಮುವಾದಿ ಬಣ್ಣ ಕಟ್ಟುವ ಯತ್ನ ನಡೆದು ಸುಳ್ಳುಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಪ್ರಾರಂಭವಾಗಿತ್ತು. ಇದರಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇವೆಲ್ಲವನ್ನೂ ಗಮನಿಸಿದ ಬೆಳಗಾವಿ ಪೊಲೀಸರು ಸುಳ್ಳುಸುದ್ದಿ ಮೂಲವನ್ನು ಪತ್ತೆಹಚ್ಚಿ ಫೇಸ್ ಬುಕ್ ಪೋಸ್ಟ್ ಗಳು ಮತ್ತು ಸುಳ್ಳುಸುದ್ದಿಗಳನ್ನು ಫಾರ್ವರ್ಡ್ ಮಾಡಿದ್ದ ವಾಟ್ಸಪ್ ನಂಬರ್ ಗಳ ಆಧಾರದಲ್ಲಿ ಅರ್ಜುನ್ ಮುತ್ತೆಪ್ಪ ಬಸರಗಿ (31) ಮತ್ತು ಫಕೀರಪ್ಪ ರಮೇಶ್ ತಳವಾರ್ (28) ಅವರುಗಳನ್ನು ಭಾನುವಾರ ಬಂಧಿಸಿದ್ದಾರೆ.
ಅವರಿಬ್ಬರ ವಿರುದ್ಧ ಗೋಕಾಕ್ ಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 A ಅನ್ವಯ ಮತಧರ್ಮ, ಜನಾಂಗ, ಭಾಷೆ, ಇತ್ಯಾದಿಗಳ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ಹಗೆತನ ಪ್ರಚೋದಿಸಿರುವ ಹಾಗೂ 505 (2) ರ ಅನ್ವಯ ಸಾರ್ವಜನಿಕ ಕಿರುಕುಳಕ್ಕೆ ಅನುಕೂಲಕರವಾದ, ವಿವಿಧ ವರ್ಗಗಳ ಮಧ್ಯೆ ಹಗೆತನ, ದ್ವೇಷ ಅಥವಾ ವೈರತ್ವ ಸೃಷ್ಟಿಸುವ ಇಲ್ಲವೇ ಉತ್ತೇಜಿಸುವ ಹೇಳಿಕೆಗಳನ್ನು ನೀಡಿರುವ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಫೇಕ್ ನ್ಯೂಸ್ ಹರಡಿಸುವ ಶೋಭಾ ಕರಂದ್ಲಾಜೆ
ಯಾರಾದರೂ ಹಿಂದೂ ಹುಡುಗರ ಹೆಣ ಬೀಳಲಿ ಎಂದೇ ಕಾಯುತ್ತಿರುವಂತೆ ವರ್ತಿಸುವ ಶೋಭಾ ಕರಂದ್ಲಾಜೆ ಆ ಹೆಣಗಳನ್ನು ಎಣಿಸುವ ಕೆಲಸಕ್ಕೆ ಖ್ಯಾತರಾಗಿದ್ದಾರೆ. ಜೀವಂತ ಇರುವವರನ್ನೂ ಕೊಲೆಯಾಗಿದ್ದಾರೆ ಎಂದು ಬಿಂಬಿಸಿದ್ದ ಕೀರ್ತಿಯೂ ಅವರಿಗೆ ಲಭಿಸುತ್ತದೆ. ಹಿಂದೆ ಡಿಸೆಂಬರ್ 2017ರಲ್ಲಿ ಕೂಡ ಉತ್ತರ ಕನ್ನಡದಲ್ಲಿ ಪರೇಶ್ ಮೆಸ್ತಾ ಎಂಬ ಹೊನ್ನಾವರದ ಯುವಕನ ಸಾವನ್ನು ಜೆಹಾದಿಗಳು ನಡೆಸಿದ ಬರ್ಬರ ಕೊಲೆ ಎಂದು ಸುಳ್ಳು ಸುದ್ದಿಯನ್ನು ಕಾಡ್ಗಿಚ್ಚಿನಂತೆ ಹಬ್ಬಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ಈ ಬಾರಿಯೂ ಅದನ್ನೇ ಮಾಡಿ, ಅದರಿಂದ ಹುಟ್ಟುವ ಕೋಮು ಗಲಭೆಗಳ ಬೆಂಕಿಯಿಂದ ಚಳಿ ಕಾಯಿಸಲು ಹೊರಟ್ಟಿದ್ದು ಸ್ಪಷ್ಟ. ಅವರು ಓರ್ವ ಸಂಸದರು ತೋರಬೇಕಾದ ಹೊಣೆಗಾರಿಕೆಯನ್ನು ಮರೆತಿದ್ದಾರೆ. ಅವರ ಹೇಳಿಕೆ 1,800 ಬಾರಿ ಮರುಟ್ವೀಟ್ ಆಗಿದ್ದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ, ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಮತ್ತು ಬೆಂಗಳೂರು ಕೇಂದ್ರದ ಸಂಸದ ಪಿ ಸಿ ಮೋಹನ್ ಅವರಿಗೂ ಟ್ಯಾಗ್ ಮಾಡಲಾಗಿದೆ.
ಕೊನೆಗೆ ಬೆಳಗಾವಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಉತ್ತರ ಕನ್ನಡ ಜಿಲ್ಲೆ ಎಂಪಿ ಅನಂತ ಕುಮಾರ್ ಹೆಗಡೆಯಂತೆ ಸುಳ್ಳುಸುದ್ದಿಗೆ ಕುಮ್ಮಕ್ಕು ಕೊಡದೇ ಕರಂದ್ಲಾಜೆಗೆ ಸ್ಪಷ್ಟವಾಗಿ ಶಿವು ಉಪ್ಪಾರನ ಸಾವು ಆತ್ಮಹತ್ಯೆ ಎಂದು ತಿಳಿಹೇಳಿದ ಮೇಲಷ್ಟೇ ಶೋಭಕ್ಕ ತಮ್ಮ ಟ್ವೀಟ್ ಡಿಲೀಟ್ ಮಾಡಿ ಮತ್ತೊಂದು ಸ್ಪಷ್ಟನೆ ನೀಡಿದ್ದಾರೆ.
Sri @AngadiMp spoke to the commissioner & he was clarified that the alleged murder was a suicide as per the postmortem report. https://t.co/ZHrIWkt2ee
— Shobha Karandlaje (@ShobhaBJP) May 28, 2019
ಸುಳ್ಳುಸುದ್ದಿ ಹರಡಿರುವ ಸಂಸದೆ ಶೋಭಾ ಕರಂದ್ಲಾಜೆಯವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಬೆಳಗಾವಿ ಜಿಲ್ಲಾ ಪೊಲೀಸರು ನಯವಾಗಿ ನುಣುಚಿಕೊಂಡಿದ್ದಾರೆ.
ಶಿವು ಉಪ್ಪಾರ್ ಸಾವು ಕೊಲೆಯೇ ಎಂದು ಶೋಭಾ ಕರಂದ್ಲಾಜೆ ಯಾವ ಆಧಾರದಲ್ಲಿ ತೀರ್ಮಾನಿಸಿದ್ದರು? ಹೋಗಲಿ ಅದು ಕೊಲೆ ಎಂದು ಅವರಿಗೆ ಹೇಳಿದ್ದಾದರೂ ಯಾರು? ಒಬ್ಬ ಸಂಸದೆಯ ಸ್ಥಾನದಲ್ಲಿ ಕುಳಿತು ಇಂತಹ ಹೇಳಿಕೆ ನೀಡಿದಾಗ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಎಂತಹ ಪರಿಣಾಮ ಉಂಟಾಗುತ್ತದೆ, ಕಾನೂನು ಶಾಂತಿ ಪಾಲನೆ ಎಷ್ಟು ಕಠಿಣವಾಗುತ್ತದೆ ಎಂಬ ಪ್ರಜ್ಞೆ ಸಂಸದರಾದವರಿಗೆ ಇರಬಾರದೇ? ತಮ್ಮ ರಾಜಕಾರಣಕ್ಕೆ ಉಪಯೋಗವಾಗುತ್ತದೆ ಎಂದಾದರೆ ಏನು ಬೇಕಾದರೂ ಮಾಡಬಹುದೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಈಗಲಾದರೂ ಶೋಭಾ ಕರಂದ್ಲಾಜೆ ಕೇಳಿಕೊಳ್ಳಬೇಕು.