ಹರಪನಹಳ್ಳಿ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿದ್ದ ಎರಡು ಬಡಕುಟುಂಬಗಳಿಗೆ ಸೇರಿದ ಇಬ್ಬರು ಮಕ್ಕಳು ಮುಂಜಾನೆ ಪೋಷಕರ ಜೊತೆ ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಸಿಡಿಲು ಬಡಿದು ದುರ್ಮರಣಕ್ಕೀಡಾದ ಯುವಕರನ್ನು ಚಿಗಟೇರಿ ಗ್ರಾಮದ ಕಿರಣ (18) ಮತ್ತು ಅರವಿಂದ (19) ಎಂದು ಗುರುತಿಸಲಾಗಿದೆ. ಕಿರಣನ ತಂದೆ ಈರಪ್ಪ ಮತ್ತು ಅರವಿಂದನ ಅಣ್ಣ ಉಮೇಶ್ ಅವರುಗಳನ್ನು ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆಂದು ಹೇಳಲಾಗಿದೆ.
ಕಡುಬಡತನದಲ್ಲಿ ನಲುಗುತ್ತಿರುವ ಕಾಯಕಜೀವಿ ಕುಟುಂಬಗಳು
ತಂದೆ ಈರಪ್ಪ ಮತ್ತು ತಾಯಿ ಮಂಜುಳಾ ಅವರ ಮೂವರು ಮಕ್ಕಳ ಪೈಕಿ ಕೊನೆಯ ಮಗನಾದ ಕಿರಣ ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ. ಅವನ ಪೋಷಕರು ಮಹತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ (ಮನರೇಗಾ) ನೀಡಲಾಗುವ ಉದ್ಯೋಗ ಚೀಟಿಗಳನ್ನು ಪಡೆದು ಕೂಲಿಕೆಲಸ ಮಾಡುತ್ತಿದ್ದರು. ಚಿಗಟೇರಿ ಕಾಲನಿಯಲ್ಲಿ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಈ ಕುಟುಂಬಕ್ಕೆ ಸಣ್ಣಪುಟ್ಟ ಕೂಲಿಕೆಲಸವೇ ಆಧಾರವಾಗಿತ್ತು.
ಅಶೋಕಪ್ಪ ಮತ್ತು ಸುನೀತಾ ಇವರುಗಳ ಮಗನಾದ ಅರವಿಂದ ಸುಮಾರು ಪಿಯುಸಿ ಫೇಲಾಗಿ ಕೂಲಿಕೆಲಸದಲ್ಲಿ ಕುಟುಂಬಕ್ಕೆ ನೆರವಾಗುತ್ತಿದ್ದನೆಂದು ಗ್ರಾಮಸ್ಥರು ಹೇಳುತ್ತಾರೆ. ಅಶೋಕಪ್ಪ ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾರೆ. ಇವರ ಕುಟುಂಬವು ಇನ್ನೂ ಬಡತನದಲ್ಲೇ ನಲುಗುತ್ತಿದ್ದು ಇವರು ಹೊಟ್ಟೆಪಾಡಿಗಾಗಿ ಮನರೇಗಾ ಮತ್ತು ಕೂಲಿ ಕೆಲಸವನ್ನೇ ಆಶ್ರಯಿಸಿದೆ.
ವಾಲ್ಮೀಕಿ ಸಮುದಾಯಕ್ಕೆ ಸೇರಿದ ಈ ಎರಡೂ ಕುಟುಂಬಗಳು ಹತ್ತಿರದ ಸಂಬಂಧಿಗಳು. ಇಲ್ಲಿ ಬಹುತೇಕ ಗ್ರಾಮಸ್ಥರು ಮನರೇಗಾ ಕಾಯಕವನ್ನೇ ನಂಬಿದ್ದಾರೆ. ಈಗ ಹೆಚ್ಚೂಕಡಿಮೆ ಒಂದು ತಿಂಗಳಿನಿಂದ ಕೃಷಿ ಇಲಾಖೆ ಒದಗಿಸಿರುವ ಬದು ನಿರ್ಮಾಣ ಕೆಲಸದಲ್ಲಿ ಈ ಕುಟುಂಬಗಳು ಶ್ರಮ ವಹಿಸುತ್ತಿವೆ. ತಂದೆತಾಯಿಯರು ಉದ್ಯೋಗ ಚೀಟಿ ಅಥವಾ ಜಾಬ್ ಕಾರ್ಡ್ ಹೊಂದಿದ್ದಾಗಿಯೂ, ಈ ಮಕ್ಕಳು ಸಣ್ಣ ವಯಸ್ಸಿನ ಕಾರಣದಿಂದ ಜಾಬ್ ಕಾರ್ಡ್ ಇಲ್ಲದೆ ಅಪ್ಪಅಮ್ಮಂದಿರ ನೆರವಿಗೆ ಆಗಾಗ ಕೆಲಸದ ಸ್ಥಳಕ್ಕೆ ಹೋಗುತ್ತಿದುದಾಗಿ ಹೇಳಲಾಗಿದೆ.
ಯುವಕರ ಒಡಲು ಅಪ್ಪಳಿಸಿ ದಹಿಸಿದ ಸಿಡಿಲು
27 ಮೇ, ಅಂದರೆ ಸೋಮವಾರ ಮುಂಜಾನೆ, ಇನ್ನೂ ಕತ್ತಲು ಸರಿದಿರಲಿಲ್ಲ. ಮನರೇಗಾ ಕಾಯಕಜೀವಿಗಳು ಎಂದಿನಂತೆ ಕೆಲಸದ ಸ್ಥಳಕ್ಕೆ ಹಾಜರಾಗಿದ್ದಾರೆ. ಚಿಗಟೇರಿ ಗ್ರಾಮದಿಂದ ಸುಮಾರು 2 ಕಿ ಮೀ ದೂರದಲ್ಲಿರುವ ಮತ್ತೊಂದು ಹಳ್ಳಿಯಲ್ಲಿನ ಹೊಲ ತಲುಪಿದ ಈರಪ್ಪ ಮತ್ತು ಅಶೋಕಪ್ಪ ಅವರ ಕುಟುಂಬಗಳು ಇನ್ನು ಕೆಲಸವನ್ನೂ ಆರಂಭ ಮಾಡಿರಲಿಕ್ಕಿಲ್ಲ. ಅಷ್ಟೊತ್ತಿಗಾಗಲೇ ಮುಂಗಾರು ಮಳೆಯ ಆರ್ಭಟ ಅಬ್ಬರಿಸಲು ಶುರು ಮಾಡಿತ್ತು. ಮೂರ್ನಾಲ್ಕು ದಿನಗಳಿಂದ ಆಗೊಮ್ಮೆ ಈಗೊಮ್ಮೆ ಯಾವಾಗಲಾದರೂ ಮಳೆ ಮೋಡ ಮುಖ ತೋರಿಸಿ ಸಿಡಿಲು ಮಿಂಚುಗಳು ಕಾಣಿಸುತ್ತಿದ್ದವಾದರೂ, ಇಂದು ಬಡಿಯಬಹುದಾದ ಸಿಡಿಲು ಚಿಗಟೇರಿ ಯುವಕರನ್ನು ಬಲಿ ತೆಗೆದುಕೊಳ್ಳುತ್ತದೆಂದು ಯಾರೂ ಎಣಿಸಿರಲಿಲ್ಲ. ಯುವಕರು ಒಂದು ಕ್ಷಣ ಮರದಡಿ ನಿಂತಿದ್ದೇ ಅನಾಹುತಕ್ಕೆ ಕಾರಣವಾಗಿಬಿಟ್ಟಿತು. ದಿಢೀರನೆ ಬಡಿದ ಸಿಡಿಲು ಮರದ ಮೂಲಕ ಯುವಕರನ್ನು ಜೊತೆಜೊತೆಯಾಗಿ ದಹಿಸಿತ್ತು. ಮರದ ಕೆಳಗೆ ನಿಲ್ಲುವುದು ಬೇಡವೆಂದು ತಂದೆ ಅವರಿಗೆ ಹೇಳಿ ಕರೆಯುವುದರೊಳಗೆ ಕ್ಷಣಮಾತ್ರದಲ್ಲೇ ಮಕ್ಕಳನ್ನು ಸಾವು ಹೊತ್ತೊಯ್ದಿತ್ತು. ಈಗಿನ್ನೂ ಹೊಸ ಹುರುಪಿನಿಂದ ಜಗತ್ತನ್ನು ಎದುರಿಸಬೇಕಿದ್ದ ಇಬ್ಬರು ಯುವಕರನ್ನು ಅನ್ಯಾಯವಾಗಿ ಸಿಡಿಲು ಬಲಿ ಪಡೆದಿತ್ತು.

ಉದ್ಯೋಗಕ್ಕೆಂದು ಹೋಗಿದ್ದ, ಅಲ್ಲೇ ಸ್ಥಳದಲ್ಲಿದ್ದ ಕಿರಣನ ತಂದೆ ಈರಪ್ಪ ಮತ್ತು ಅರವಿಂದನ ಅಣ್ಣ ಉಮೇಶ ಸಿಡಿಲು ಬಡಿದು ಬಿದ್ದಿದ್ದ ಆ ಇಬ್ಬರು ಯುವಕರನ್ನು ಮೇಲೆತ್ತುವ ಸಂದರ್ಭದಲ್ಲಿ ಅವರಿಗೂ ಸ್ವಲ್ಪ ಅನಾರೋಗ್ಯ ಉಂಟಾಯಿತೆಂದು, ಆದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತೆನ್ನಲಾಗಿದೆ.
ಘಟನಾಸ್ಥಳಕ್ಕೆ ಹಾಜರಾತಿ ಹಾಕಿಹೋದ ಅಧಿಕಾರಿಗಳು
ಅಲ್ಲೇ ಪಕ್ಕದ ಹೊಲದಲ್ಲಿ ಇತರ ಕಾರ್ಮಿಕರಿಗೆ ಕೆಲಸ ಹಂಚುತ್ತಿದ್ದ ಕೃಷಿ ಅಧಿಕಾರಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾಗಿ ಮತ್ತು ಕೆಲಹೊತ್ತಿನಲ್ಲೇ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳೂ ಘಟನೆ ನಡೆದಲ್ಲಿ ಆಗಮಿಸಿ ಜೊತೆಗಿದ್ದದ್ದಾಗಿ ಕುಟುಂಬಸ್ಥರು ಹೇಳುತ್ತಾರೆ. ಅಂದಾಜು ಬೆಳಿಗ್ಗೆ 5.30 – 6 ಗಂಟೆಯೊಳಗೆ ಎಲ್ಲವೂ ಘಟಿಸಿಹೋಗಿದ್ದು, 9 ಗಂಟೆಯ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಬಂದು ಮಹಜರ್ ನಡೆಸಿದ್ದಾಗಿಯೂ ತಿಳಿಸಿದ್ದಾರೆ. ಸ್ಥಳೀಯ ಶಾಸಕ ಕರುಣಾಕರ ರೆಡ್ಡಿಯವರೂ ಘಟನಾ ಸ್ಥಳಕ್ಕೆ ಆಗಮಿಸಿ ಹಾಜರಾತಿ ಹಾಕಿದ್ದಾರೆಂದು ತಿಳಿದುಬಂದಿದೆ.
ಶವ ಸಾಗಿಸಲು ನೆರವಾಗುವ ಮಾನವೀಯತೆಯೂ ಇಲ್ಲದ ಆಡಳಿತ
ಚಿಗಟೇರಿಯಿಂದ ಸುಮಾರು 2 ಕಿ ಮೀ ದೂರದ ಕೆಲಸದ ಸ್ಥಳದಿಂದ ಬಡ ಯುವಕರ ಶವಗಳನ್ನು ಸ್ವಗ್ರಾಮಕ್ಕೆ ವಾಪಸ್ ತರಲು ತಾಲ್ಲೂಕು ಆಡಳಿತ ಯಾವುದೇ ನೆರವನ್ನೂ ನೀಡುವ ಸೌಜನ್ಯ ತೋರಲಿಲ್ಲವೆಂದು ಸ್ಥಳೀಯರು ಹೇಳುತ್ತಾರೆ. ಮೃತ ಯುವಕರ ಕುಟುಂಬಸ್ಥರೇ ಸಾವಿರಾರು ರೂಪಾಯಿಗಳಷ್ಟು ಸಾಲಸೋಲ ಮಾಡಿಕೊಂಡು ಬಾಡಿಗೆ ವಾಹನವೊಂದರಲ್ಲಿ ಶವಗಳನ್ನು ಗ್ರಾಮಕ್ಕೆ ಸಾಗಿಸಬೇಕಾಯಿತು.
ಪ್ರಾಕೃತಿಕ ದುರಂತಕ್ಕೆ ಬಲಿಯಾದ, ಬಡಕುಟುಂಬಗಳಿಗೆ ಸೇರಿದ ಯುವಕರ ಶವಗಳನ್ನು ಎರಡು ಕಿ ಮೀ ದೂರಕ್ಕೆ ಸಾಗಿಸಲು ತಾಲ್ಲೂಕು ಆಡಳಿತದ ಬಳಿ ವಾಹನವಿರಲಿಲ್ಲವೇ ಅಥವಾ ಕಡುಬಡತನದಲ್ಲಿ ಜೀವಿಸುತ್ತಿರುವ ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಲು ಹಣಕಾಸು ವ್ಯವಸ್ಥೆ ಇರಲಿಲ್ಲವೆ? ಆ ಪ್ರದೇಶವಂತೂ ಬೇರೆಬೇರೆ ಕಾರಣಗಳಿಗಾಗಿ ಹಿಂದುಳಿದಿದೆ ಎಂದಾದರೂ ಅಧಿಕಾರಿಗಳ ಮನಸ್ಥಿತಿಯೂ ಹಿಂದುಳಿದಿರಬೇಕೇ? ಕನಿಷ್ಠ ಶವ ಸಾಗಣೆಗೆ ನೆರವು ನೀಡಲಾರದಷ್ಟು ದುಃಸ್ಥಿತಿ ತಾಲ್ಲೂಕು ಆಡಳಿತಕ್ಕಿದೆಯೇ? ಬಡವರ ಬದುಕಿಗೆ ಬೆಲೆ ಇಲ್ಲದ, ಶ್ರಮಿಕರ ಜೀವಕ್ಕೆ ಗೌರವ ನೀಡದ ವ್ಯವಸ್ಥೆ ಇದು. ಕನಿಷ್ಠ ಮಾನವೀಯತೆ ಇಲ್ಲದಿದ್ದರೂ ತೋರಿಕೆಗೂ ಗೋಚರಿಸದಷ್ಟು ಕೊರತೆ ಈ ವ್ಯವಸ್ಥೆಯಲ್ಲಿ ಮನೆಮಾಡಿದೆಯೇ? ಪ್ರಪಂಚದೆಲ್ಲಾ ಸಂಪತ್ತು ಸೃಷ್ಟಿಸುವ ಕೂಲಿಕಾರ್ಮಿಕರ ಬದುಕಿಗೆ ಕಿಮ್ಮತ್ತು ನೀಡದವರು ಅವರ ಸಾವಿಗೆ ನೀಡುತ್ತಾರೆಯೇ?
ಪ್ರಥಮ ಚಿಕಿತ್ಸೆ ವ್ಯವಸ್ಥೆ ಇಲ್ಲದೆ ನೀಡುತ್ತಿರುವ ಮನರೇಗಾ ಕೆಲಸ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ನಿಯಮಾವಳಿಗಳ ಪ್ರಕಾರ ಪ್ರತಿ ಕೆಲಸದ ಸ್ಥಳದಲ್ಲೂ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಇರತಕ್ಕದ್ದು. ಅಲ್ಲದೆ ಹವಾಮಾನ ಮುನ್ಸೂಚನೆ ಗಮನಿಸಿ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆ ಕಲ್ಪಿಸುವುದು ಅಧಿಕಾರಿಗಳ ಹೊಣೆಗಾರಿಕೆಯೂ ಹೌದು. ನೌಕರಿ ಕೇಳಿದರೆಂದ ಮಾತ್ರಕ್ಕೆ ಕೂಲಿಕಾರ್ಮಿಕರನ್ನು ಜವಾಬ್ದಾರಿಯಿಲ್ಲದೆ ಕುರಿ ಮಂದೆಯಂತೆ ಬಿಟ್ಟುಬಂದರೆ ಇಂತಹ ಬೇರೆ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂಬುದು ಚಿಗಟೇರಿಯ ಮನರೇಗಾ ಕಾರ್ಮಿಕರ ಪ್ರಶ್ನೆ.
ಈ ಘಟನೆ ಕುರಿತು ಟ್ರೂಥ್ ಇಂಡಿಯಾದೊಂದಿಗೆ ಮಾತನಾಡಿದ ಭಾರತ ಕಮ್ಯುನಿಸ್ಟ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, “ಮೃತ ಯುವಕರು ತಂತಮ್ಮ ಕುಟುಂಬಗಳಿಗೆ ಭವಿಷ್ಯದ ಆಸರೆಯಾಗಿದ್ದರು. ಪ್ರಾಕೃತಿಕ ದುರಂತಕ್ಕೆ ಬಲಿಯಾದ ಯುವಕರ ಕುಟುಂಬಗಳಿಗೆ ಹತ್ತು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಹಾಗೂ ಆ ಎರಡೂ ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.

ಸೂರ್ಯನ ತಾಪವೇರುವ ಮುನ್ನವೇ ಕಾಯಕ ಶುರು
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಮತ್ತು ಸೂರ್ಯ ನೆತ್ತಿ ಮೇಲೆ ಏರಿದಂತೆಯೂ ಹೊಲಗದ್ದೆಗಳಲ್ಲಿ, ಬಯಲಿನಲ್ಲಿ ಕೆಲಸಮಾಡುವುದು ಶ್ರಮಜೀವಿಗಳಿಗೆ ತ್ರಾಸದಾಯಕ ಆಗುವುದರಿಂದ ಸಾಮಾನ್ಯವಾಗಿ ಬೇಸಿಗೆಯಲ್ಲಿ ಮುಂಜಾನೆ ಸೂರ್ಯನ ತಾಪವೇರುವ ಮುನ್ನವೇ ಕೆಲಸ ಆರಂಭಿಸಲಾಗುತ್ತದೆ.
ಚಿಗಟೇರಿಯಲ್ಲಿ ಅಂದಾಜು 300ರಿಂದ 400 ಕೃಷಿಕೂಲಿ ಕಾರ್ಮಿಕರು ಕೃಷಿ ಇಲಾಖೆ ಒದಗಿಸಿರುವ ಹೊಲಗಳಲ್ಲಿ ಬದು ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆಂದು ಸ್ಥಳೀಯರು ತಿಳಿಸುತ್ತಾರೆ. ಇನ್ನು ಸುಮಾರು 150-200 ಮಂದಿ ಪಂಚಾಯ್ತಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದೂ ಹೇಳಲಾಗಿದೆ. ದುರಂತಕ್ಕೀಡಾದ ಕುಟುಂಬಗಳು ಬದು ನಿರ್ಮಾಣ ಕೆಲಸದಲ್ಲಿ ದುಡಿಯುತ್ತಿದ್ದರು.
ಕೂಲಿಕಾರ್ಮಿಕರ ಗುಳೆ ತಪ್ಪಿಸಿರುವ ಮನರೇಗಾ ಉದ್ಯೋಗ
ಕೆಲವು ತಿಂಗಳ ಹಿಂದಷ್ಟೇ ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡ ಹರಪನಹಳ್ಳಿ ತಾಲ್ಲೂಕು ಬರಪೀಡಿತ ಪ್ರದೇಶಗಳ ಪೈಕಿ ಒಂದು. ಇಲ್ಲಿ ಸಹಸ್ರಾರು ಬಡ ಕೂಲಿಕಾರ್ಮಿಕರು ಮನರೇಗಾ ಕೆಲಸವನ್ನೇ ನಂಬಿ ಬದುಕಿದ್ದಾರೆ ಇಲ್ಲವೇ ಉದ್ಯೋಗ ಸಿಗದಿದ್ದಾಗ ಹೊಟ್ಟೆಪಾಡಿಗಾಗಿ ಮಲೆನಾಡಿನ ತೋಟಗಳಿಗೆ ಅಥವಾ ಇನ್ನಾವುದೋ ನಗರಕ್ಕೆ ಕೆಲಸ ಅರಸಿ ಗುಳೆ ಹೋಗುವ ಶೋಚನೀಯ ಪರಿಸ್ಥಿತಿ ಇದೆ. ಹೀಗಿರುವಾಗ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮನರೇಗಾ ಅಡಿ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಮನರೇಗಾದಲ್ಲಿ ಸಾರ್ವಜನಿಕ ಕಾಮಗಾರಿಗಳಾದ ಕೆರೆ ಹೂಳೆತ್ತುವುದು, ಇತ್ಯಾದಿಗಳನ್ನು ಸದ್ಯಕ್ಕೆ ನಿಲ್ಲಿಸಿ, ಹಿಂದೆ ನಡೆದಿದೆ ಎನ್ನಲಾದ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಲಾಗುತ್ತಿರುವುದರಿಂದ ಈ ಸದ್ಯ ಬದು ನಿರ್ಮಾಣ ಕೆಲಸ ಮತ್ತು ಮನರೇಗಾ ಅಡಿಯಲ್ಲಿ ನೀಡಬಹುದಾದ ವೈಯಕ್ತಿಕ ಕಾಮಗಾರಿಗಳನ್ನು ಮಾತ್ರ ಕಲ್ಪಿಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಹೇಳಿಕೆ.