ದಕ್ಷತೆ ಮತ್ತು ಪ್ರಾಮಾಣಿಕತೆಯೊಂದಿಗೆ ಸರಳತೆಗೆ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸೋಮವಾರ ಈ ವಿಷಯ ಬಹಿರಂಗಪಡಿಸಿದ್ದ ಅವರು, ಇಂದು ರಾಜ್ಯ ಡಿಜಿಐಜಿಪಿ ನೀಲಮಣಿ ರಾಜು ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಕಳೆದ ಒಂದೆರಡು ದಿನಗಳಿಂದ ತಮ್ಮ ರಾಜೀನಾಮೆ ಕುರಿತು ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಅಣ್ಣಾಮಲೈ ಅವರು 2013ರಿಂದ ಈವರೆಗೆ ರಾಜ್ಯದ ಉಡುಪಿ, ಚಿಕ್ಕಮಗಳೂರು ಮತ್ತು ರಾಜಧಾನಿ ಬೆಂಗಳೂರು ಸೇರಿದಂತೆ ತಾವು ಪೊಲೀಸ್ ಮುಖ್ಯಸ್ಥರಾಗಿ ಕೆಲಸ ಮಾಡಿದ ಕಡೆಯೆಲ್ಲಾ ಅಪಾರ ಜನಬೆಂಬಲ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದರು. ಕಾನೂನು ಸುವ್ಯವಸ್ಥೆ ಕಾಯುವ ನಿಟ್ಟಿನಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿದ್ದ ತಮಿಳುನಾಡು ಮೂಲದ ಯುವ ಅಧಿಕಾರಿ, ಅಷ್ಟೇ ಸರಳತೆ ಮತ್ತು ಪ್ರಾಮಾಣಿಕತೆಯ ಕಾರಣದಿಂದ ಇಲಾಖೆಯ ತಳಮಟ್ಟದ ಸಿಬ್ಬಂದಿ ಮತ್ತು ಜನಸಾಮಾನ್ಯರ ಅಪಾರ ಪ್ರೀತಿಗೆ ಪಾತ್ರರಾಗಿದ್ದರು. ಆ ಕಾರಣದಿಂದಾಗಿಯೇ ಇದೀಗ ಅವರ ದಿಢೀರ್ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ರಾಜ್ಯದ ಉದ್ದಗಲಕ್ಕೆ ಜನ ರಾಜೀನಾಮೆ ನಿರ್ಧಾರ ಬೇಡ ಎಂದು ಮೊರೆ ಇಡುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಿಂದಿನ ವರ್ಷಗಳ ಸಾಧನೆ ಮತ್ತು ವ್ಯಕ್ತಿತ್ವದ ಕುರಿತು ಸಾಕಷ್ಟು ಚರ್ಚೆಗಳು ವೈರಲ್ ಆಗಿವೆ.
ಹಾಗೇ ಯಾವುದೇ ಉನ್ನತ ಅಧಿಕಾರಿಯ ದಿಢೀರ್ ರಾಜೀನಾಮೆ ಸಂದರ್ಭಗಳಲ್ಲಿ ಆಗುವಂತೆ ಅಣ್ಣಾಮಲೈ ಅವರ ವಿಷಯದಲ್ಲಿಯೂ, ದಕ್ಷ ಅಧಿಕಾರಿಯ ರಾಜೀನಾಮೆ ನಿರ್ಧಾರದ ಹಿಂದೆ ಆಳುವ ಸರ್ಕಾರದ ಒತ್ತಡ ಕೆಲಸ ಮಾಡಿದೆ. ಆ ಸಚಿವರು, ಈ ಶಾಸಕರ ಕಿರುಕುಳದಿಂದ ಬೇಸತ್ತು ರಾಜೀನಾಮೆ ನೀಡುತ್ತಿದ್ದಾರೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಕೆಲಸ ಮಾಡಲು ಮುಕ್ತ ವಾತಾವರಣ ಈ ಸರ್ಕಾರದ ಅವಧಿಯಲ್ಲಿ ಇಲ್ಲ ಎಂಬ ಮಾತುಗಳೂ ಕೇಳಿಬಂದವು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಆಡಳಿತಾರೂಢರ ವಿರುದ್ಧ ಈ ರಾಜೀನಾಮೆ ಸಂಗತಿಯನ್ನು ಅಸ್ತ್ರವಾಗಿ ಬಳಸುವ ಪ್ರಯತ್ನಗಳೂ ನಡೆದವು.
ಇಂತಹ ಯತ್ನ ಮತ್ತು ಊಹಾಪೋಹಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ಸ್ವತಃ ಅಣ್ಣಾ ಮಲೈ ಅವರೇ ಮಂಗಳವಾರ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, “ಅಂತಹ ಯಾವ ಕಾರಣಗಳೂ ಇಲ್ಲ. ಅಂತಹ ಊಹಾಪೋಹಗಳೆಲ್ಲಾ ಸುಳ್ಳು. ಕಳೆದ ಆರು ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ. 2013ರಿಂದ ರಾಜ್ಯದಲ್ಲಿನ ತಮ್ಮ ವರ್ಷಗಳ ಸೇವಾ ಅವಧಿಯಲ್ಲಿ ಯಾವುದೇ ರಾಜಕಾರಣಿ ಅಥವಾ ಪಕ್ಷದಿಂದ ತಮಗೆ ಎಂದೂ ತೊಂದರೆಯಾಗಿಲ್ಲ. ಹಿಂದಿನ ಸಿದ್ದರಾಮಯ್ಯ ಅವರಾಗಲೀ ಈಗಿನ ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರವಾಗಲೀ ತಮಗೆ ಬೆಂಬಲವಾಗಿ ನಿಂತು ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡದೆ ಹೋಗಿದ್ದರೆ ಜನರ ಇಷ್ಟು ಪ್ರೀತಿ ಗಳಿಸುವಂತೆ ಕೆಲಸ ಮಾಡಲು ಸಾಧ್ಯವೇ ಇರಲಿಲ್ಲ. ಹಾಗಾಗಿ ತಮ್ಮ ಈ ನಿರ್ಧಾರ ಸಂಪೂರ್ಣ ವೈಯಕ್ತಿಕ. ಸಂಸಾರ, ಮನೆ, ಮಗು ಮತ್ತು ಸ್ವಂತ ಊರಿನ ಕೃಷಿಯೊಂದಿಗೆ ಉಳಿದ ದಿನಗಳಲ್ಲಿ ಅತ್ಯಂತ ನೆಮ್ಮದಿಯಿಂದ, ಅರ್ಥಪೂರ್ಣವಾಗಿ ಕಳೆಯುವ ಉದ್ದೇಶದಿಂದ ರಾಜೀನಾಮೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ತಮಗೆ ತಮ್ಮ ಮಿತಿಯಲ್ಲಿ ಒಳ್ಳೆಯ ಕೆಲಸ ಮಾಡಲು ಅವಕಾಶಮಾಡಿಕೊಟ್ಟ ರಾಜ್ಯದ ರಾಜಕೀಯ ನಾಯಕರು ಮತ್ತು ಜನರಿಗೆ ಕೃತಜ್ಞತೆಯನ್ನೂ ಸಲ್ಲಿಸಿರುವ ಅವರು, ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ನಿಧನರಾದ ದಕ್ಷ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರನ್ನು ನೆನೆದು, “ಅವರಂತೆ ನನ್ನ ಬದುಕೂ ಮುಕ್ತಾಯ ಕಾಣುವುದು ಬೇಡ ಎಂಬ ಹಿನ್ನೆಲೆಯಲ್ಲಿ, ಇಷ್ಟು ದಿನ ಸಮವಸ್ತ್ರಧಾರಿಯಾಗಿ ಜನ ಸೇವೆ ಮಾಡಿದ್ದು ಸಾಕು, ಇನ್ನು ಒಬ್ಬ ಸಾಮಾನ್ಯ ಮನುಷ್ಯನಾಗಿ ಜನ ಸೇವೆ ಮತ್ತು ನನ್ನ ಕೌಟುಂಬಿಕ ಬದುಕಿನ ಖುಷಿ ಹಂಚಿಕೊಳ್ಳಲು ನಿರ್ಧರಿಸಿದ್ದೇನೆ. ಬೆಳೆಯುತ್ತಿರುವ ಮಗನಿಗೆ ಸಮಯ ಕೊಟ್ಟು, ಹಳ್ಳಿಯ ಮನೆಯ ಮೇಕೆಯೊಂದಿಗೆ ಆಡುತ್ತಾ, ಕೃಷಿ ಮಾಡುತ್ತಾ ಇರುವ ಯೋಚನೆ ಇದೆ. ಆ ನಡುವೆ ಸಾಮಾಜಿಕವಾಗಿ ಏನೆಲ್ಲಾ ಮಾಡಬಹುದು ಎಂಬುದನ್ನು ಮುಂದಿನ ಮೂರು ತಿಂಗಳ ಬಿಡುವಿನ ಬಳಿಕ ನಿರ್ಧರಿಸುವೆ” ಎಂದಿದ್ದಾರೆ.
ಈ ನಡುವೆ, ಅಣ್ಣಾಮಲೈ ಅವರು ತವರೂರಿಗೆ ಮರಳಿ ಪ್ರಮುಖ ರಾಜಕೀಯ ಪಕ್ಷವೊಂದರ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲಿದ್ದಾರೆ. ಆ ಲೆಕ್ಕಾಚಾರದಲ್ಲೇ ಅವರು ಇದೀಗ ರಾಜೀನಾಮೆ ನೀಡಿದ್ದಾರೆ. ಬಹುತೇಕ ಅವರು ಡಿಎಂಕೆ ಸೇರಲಿದ್ದಾರೆ. ಅವರ ವೈಯಕ್ತಿಕ ರಾಜಕೀಯ ಒಲವು-ನಿಲುವುಗಳ ಹಿನ್ನೆಲೆಯಲ್ಲಿ ಆ ಪಕ್ಷವನ್ನೇ ಅವರು ಆಯ್ಕೆಮಾಡಿಕೊಳ್ಳಬಹುದು ಎಂಬ ಮಾತುಗಳೂ ಕೇಳಿಬಂದಿವೆ. ಹಿರಿಯ ಐಪಿಎಸ್ ಅಧಿಕಾರಿ ಹಾಗೂ ರಾಜ್ಯ ರೈಲ್ವೆ ಐಜಿಪಿ ಡಿ ರೂಪಾ ಅವರೂ ತಮ್ಮ ಟ್ವಿಟರ್ ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, “ದಕ್ಷ ಯುವ ಅಧಿಕಾರಿ ಅಣ್ಣಾಮಲೈ ಅವರು ರಾಜೀನಾಮೆ ನೀಡಿದ್ದಾರೆ. ರಾಜಕಾರಣಕ್ಕೆ ಪದಾರ್ಪಣೆ ಮಾಡುವ ಅವರಿಗೆ ಶುಭವಾಗಲಿ, ಹೆಚ್ಚು ಹೆಚ್ಚು ಯುವ ಅಧಿಕಾರಿಗಳು ರಾಜಕಾರಣಕ್ಕೆ ಕಾಲಿಡುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ” ಎಂದು ಹೇಳಿದ್ದಾರೆ. ಆದರೆ, ಸ್ವತಃ ಅಣ್ಣಾಮಲೈ ಅವರು ರಾಜಕಾರಣಕ್ಕೆ ಪ್ರವೇಶಿಸುವ ಬಗ್ಗೆ ಈಗಲೇ ಏನನ್ನೂ ಹೇಳಲಾರೆ. ಮೂರು ತಿಂಗಳ ಬಿಡುವಿನಲ್ಲಿ ಹಿಮಾಲಯಕ್ಕೆ ಹೋಗಿಬರುವ ಯೋಚನೆ ಇದೆ. ಅಲ್ಲಿಂದ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದಿದ್ದಾರೆ.
ಈ ನಡುವೆ ಅಣ್ಣಾಮಲೈ ಅವರು ಬಿಜೆಪಿ ಸೇರಿ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ. ಆ ಮೂಲಕ ಬಿಜೆಪಿಗೆ ದ್ರಾವಿಡ ರಾಜ್ಯದಲ್ಲಿ ಬಲತುಂಬಲಿದ್ದಾರೆ ಎಂಬ ವಾದಗಳೂ ಇವೆ. ಅಷ್ಟೇ ಅಲ್ಲದೆ, ಅವರು ಕೈಲಾಸ ಮಾನಸ ಸರೋವರಕ್ಕೆ ಕಳೆದ ವರ್ಷ ಭೇಟಿ ನೀಡಿದ ಬಳಿಕ ಅವರ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆ ಹಿನ್ನೆಲೆಯಲ್ಲಿ ಅವರು ಇದೀಗ ಹಿಂದುತ್ವಪರ ಧೋರಣೆ ತಳೆದಿದ್ದು, ಧರ್ಮ ರಕ್ಷಣೆಯ ನಿಟ್ಟಿನಲ್ಲಿ ಕೆಲಸ ಮಾಡಲು ಆರ್ ಎಸ್ ಎಸ್ ಸಂಘಟನೆಗೆ ಸೇರಿ ತಮಿಳುನಾಡಿನಲ್ಲಿ ಸಂಘಟನೆ ಕಟ್ಟುವ ನಿರ್ಧಾರ ಮಾಡಿದ್ದಾರೆ ಎಂಬ ಮಾತುಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ, ಈ ಎಲ್ಲಾ ವಾದ, ಊಹಾಪೋಹಗಳಿಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದಕ್ಕೆ ಪೂರಕವೆಂಬಂತೆ, ಇಲಾಖೆಯಲ್ಲಿ ಅವರೊಂದಿಗೆ ಕೆಲಸ ಮಾಡಿರುವ ಕೆಲವು ಆಪ್ತರ ಪ್ರಕಾರ, ಅಣ್ಣಾಮಲೈ ವೈಯಕ್ತಿಕವಾಗಿ ಹಿಂದುತ್ವದ ಪರ ಒಲವಿರುವ, ಅದರಲ್ಲೂ ಪ್ರಧಾನಿ ಮೋದಿಯವರ ಪರ ಅಭಿಮಾನವಿರುವ ವ್ಯಕ್ತಿಯಾಗಿದ್ದು, ಆ ಹಿನ್ನೆಲೆಯಲ್ಲಿ ಒಂದು ವೇಳೆ ರಾಜಕಾರಣಕ್ಕೆ ಪ್ರವೇಶಿಸುವುದೇ ಆದರೆ ಅವರು ಬಿಜೆಪಿ ಅಥವಾ ಸಂಘಪರಿವಾರದ ಮೂಲಕ ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಅಲ್ಲದೆ, ಹಿಂದುತ್ವದ ಪರ ಒಲವಿದ್ದರೂ ಅವರಿಗೆ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಬಗ್ಗೆಯಾಗಲೀ, ತಾರತಮ್ಯದ ಸಮಾಜದ ಬಗ್ಗೆಯಾಗಲೀ ಒಪ್ಪಿಗೆ ಇರಲಿಲ್ಲ. ಭಾರೀ ಶ್ರೀಮಂತ ಕುಟುಂಬದ ಹಿನ್ನಲೆಯಿಂದ ಬಂದಿದ್ದರೂ, ಅವರು ತಮ್ಮ ವೃತ್ತಿಜೀವನದಲ್ಲಿ ಎಂದೂ ಸಹೋದ್ಯೋಗಿಗಳೊಂದಿಗೆ ಮೇಲು-ಕೀಳಿನ, ಸ್ಥಾನಮಾನದ ತಾರತಮ್ಯ ತೋರಿಲ್ಲ ಎಂದೂ ಅವರು ಆಪ್ತರು ಹೇಳುತ್ತಾರೆ.
ತಮಿಳುನಾಡಿನ ಕೊಯಮತ್ತೂರು ಸಮೀಪದ ಕರೂರು ಮೂಲದ ಅಣ್ಣಾಮಲೈ ಅವರು, ಕೊಯಮತ್ತೂರು ಮತ್ತು ಲಖನೌದ ಐಐಎಂನಲ್ಲಿ ಅಧ್ಯಯನ ಮಾಡಿದ ಬಳಿಕ ಐಪಿಎಸ್ ಪರೀಕ್ಷೆ ಬರೆದು ವೃತ್ತಿಜೀವನ ಆರಂಭಿಸಿದ್ದರು. ಕೃಷಿ ಕುಟುಂಬದ ಹಿನ್ನೆಲೆಯ ಅವರು, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದರೂ, ಸಾಮಾನ್ಯ ಹಳ್ಳಿಗನ ಸರಳತೆ ಮತ್ತು ಪ್ರಾಮಾಣಿಕತೆಯ ಮೂಲಕ ಜನರ ಗಮನ ಸೆಳೆದಿದ್ದರು.
ಈ ನಡುವೆ, ತಮ್ಮ ರಾಜೀನಾಮೆಯ ಬಳಿಕ ರಾಜ್ಯದ ತಮ್ಮ ಸ್ನೇಹಿತರು ಮತ್ತು ಹಿತೈಷಿಗಳನ್ನು ಉದ್ದೇಶಿಸಿ ಅವರು ಬರೆದಿರುವ ಪತ್ರ ವೈರಲ್ ಆಗಿದ್ದು, ಕಳೆದ ವರ್ಷ ಕೈಲಾಸ ಮಾನಸ ಸರೋವರಕ್ಕೆ ನೀಡಿದ ಭೇಟಿ ನನ್ನ ಕಣ್ಣನ್ನು ತೆರೆಸಿದೆ. ಅದು, ಜೀವನದಲ್ಲಿ ಆದ್ಯತೆಯ ವಿಷಯಗಳನ್ನು ನನಗೆ ತಿಳಿಸಿಕೊಟ್ಟಿದೆ. ಮಧುಕರ್ ಶೆಟ್ಟಿ ಸರ್ ನಿಧನವು ಬದುಕಿನ ಬಗ್ಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.
ಅವರ ಆ ಪತ್ರದ ಯಥಾ ರೂಪ ಇಲ್ಲಿದೆ;
ಸ್ನೇಹಿತರೇ ಮತ್ತು ನನ್ನ ಹಿತೈಷಿಗಳೇ,
ಎಲ್ಲರಿಗೂ ನಮಸ್ಕಾರ. ನನ್ನ ರಾಜೀನಾಮೆ ಕುರಿತು ಪ್ರಕಟವಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಕೆಲವೊಂದು ವಿಷಯಗಳನ್ನು ನಿಮ್ಮ ಗಮನಕ್ಕೆ ತರ ಬಯಸುತ್ತೇನೆ.
ಇಂದು, ಮೇ 28, 2019 ರಂದು ನಾನು ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಇದರ ಆಡಳಿತಾತ್ಮಕ ಪ್ರಕ್ರಿಯೆ ಮುಗಿಯಲು ಕೆಲ ಸಮಯ ತಗಲಬಹುದು. ಈ ಕುರಿತು ಚರ್ಚೆಯಾಗುತ್ತಿರುವ ಎಲ್ಲಾ ಊಹಾಪೋಹಗಳಿಗೆ ಪೂರ್ಣವಿರಾಮವಿಡಲು ನಾನೇ ಖುದ್ದು ಇದನ್ನು ಬರೆಯುತ್ತಿದ್ದೇನೆ. 6 ತಿಂಗಳ ಸುದೀರ್ಘವಾದ ಗಹನ ಚಿಂತನೆಯ ಬಳಿಕ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಳೆದ 9 ವರ್ಷಗಳಿಂದ ನಾನು ಈ ಸೇವೆಯಲ್ಲಿದ್ದು, ಪ್ರತಿ ಕ್ಷಣವನ್ನು ‘ಖಾಕಿ’ ತತ್ವಕ್ಕೆ ಬದ್ಧವಾಗಿ ನಡೆದುಕೊಂಡು ಬಂದಿದ್ದೇನೆ. ಈ ಖಾಕಿಯಲ್ಲಿ ಸಿಗುವ ಹೆಮ್ಮೆಯ ಕ್ಷಣ ಹಾಗೂ ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣೀಯ. ಒಂದರ್ಥದಲ್ಲಿ ಪೊಲೀಸ್ ಸೇವೆಯೆಂದರೆ ದೇವರಿಗೆ ಅತೀ ಇಷ್ಟವಾದುದು ಎಂದು ನಾನು ನಂಬಿದ್ದೇನೆ. ಅತೀ ಒತ್ತಡದಲ್ಲಿ ನಿರ್ವಹಿಸುವ ಈ ಕೆಲಸದಲ್ಲಿ ಕುಂದು ಕೊರತೆಗಳು ಸಾಮಾನ್ಯ. ಅದೆಷ್ಟೋ ಕಾರ್ಯಕ್ರಮಗಳನ್ನು ನಾನು ಮಿಸ್ ಮಾಡಿದ್ದೇನೆ; ಹಲವು ಬಾರಿ ನನ್ನ ಕಷ್ಟಕಾಲದಲ್ಲಿ ನಿಂತವರ ಜೊತೆ ನನಗೆ ನಿಲ್ಲಲಿಕ್ಕಾಗಲಿಲ್ಲ, ಹಲವೊಮ್ಮೆ ಅಸಹಾಯಕತನ ಅನುಭವಿಸಿದ್ದೇನೆ; ಕೆಲವೊಮ್ಮೆ, ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ವಹಿಸಿದ್ದೇನೆ.
ಕಳೆದ ವರ್ಷ ಕೈಲಾಸ ಮಾನಸ ಸರೋವರಕ್ಕೆ ನೀಡಿದ ಭೇಟಿ ನನ್ನ ಕಣ್ಣನ್ನು ತೆರೆಸಿದೆ. ಅದು, ಜೀವನದಲ್ಲಿ ಆದ್ಯತೆಯ ವಿಷಯಗಳನ್ನು ನನಗೆ ತಿಳಿಸಿಕೊಟ್ಟಿದೆ. ಮಧುಕರ್ ಶೆಟ್ಟಿ ಸರ್ ನಿಧನವು ಬದುಕಿನ ಬಗ್ಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಲು ಪ್ರೇರೇಪಿಸಿದೆ. ಎಲ್ಲಾ ಒಳ್ಳೆ ಕೆಲಸಗಳು ಒಂದು ದಿನ ಕೊನೆಯಾಗಲೇಬೇಕು, ಹಾಗೆಯೇ ನನ್ನ ಖಾಕಿ ದಿನಗಳೂ.. ಈ ನಿಟ್ಟಿನಲ್ಲಿ, ಹಿಂದೆಯೇ ನಿರ್ಧಾರ ತೆಗೆದುಕೊಂಡಿದ್ದೆಯಾದರೂ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ ಸರ್ಕಾರಕ್ಕೆ ಸಮಸ್ಯೆ ಉಂಟುಮಾಡುವುದು ಸರಿ ಎನಿಸಲಿಲ್ಲ. ನನ್ನ ರಾಜೀನಾಮೆಯಿಂದ ನಿಮಗೆ ನೋವಾಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ. ಪ್ರಾಮಾಣಿಕವಾಗಿ ಹೇಳೋದಾದರೆ, ನಾನಿದನ್ನು ಈಗ ಮಾಡಲೇಬೇಕು. ಈ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನನ್ನ ಜೊತೆ ನಿಂತ ನನ್ನ ಆಪ್ತ ಸ್ನೇಹಿತೆ, ನನ್ನ ಮಡದಿಗೆ ಇದು ಬಹಳ ಭಾವನಾತ್ಮಕ ಸನ್ನಿವೇಶ.
ಮುಂದೇನು?
ನನ್ನ ಮುಂದಿನ ನಡೆಯೇನು ಎಂದು ತಿಳಿಯಲು ಬಯಸುವವರಿಗೆ ಹೇಳೋದಾದರೆ, ಬಹಳ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಲು, ನಾನೊಬ್ಬ ಸಣ್ಣ ಮನುಷ್ಯ. ನಾನು ಜೀವನದಲ್ಲಿ ಕಳೆದುಕೊಂಡಿರುವ ಸಣ್ಣ ಪುಟ್ಟ ಸಂತೋಷಗಳನ್ನು ಮತ್ತೆ ಪಡೆಯಲು ಸಮಯ ಕಳೆಯಬೇಕು. ಬೆಳೆಯುತ್ತಿರುವ ನನ್ನ ಮಗನಿಗೆ ಒಳ್ಳೆ ತಂದೆಯಾಗಬೇಕು. ಆತನಿಗೆ ನನ್ನ ಅಗತ್ಯವಿದೆ. ವಾಪಸು ಮನೆಗೆ ಮರಳಿ ಕೃಷಿ ಮಾಡಬೇಕು. ನಾನೀಗ ಪೊಲೀಸ್ ಅಧಿಕಾರಿಯಲ್ಲ, ನಾನೇ ಸಾಕಿದ ಕುರಿಗಳೂ ನಾನು ಹೇಳಿದ ಮಾತನ್ನು ಕೇಳುತ್ತವೋ, ಇಲ್ಲ ಗೊತ್ತಿಲ್ಲ. ನನ್ನಂಥ ನಶ್ವರ ಮನುಷ್ಯನಿಗೆ, ಸಿಕ್ಕಿರುವ ಇಂಥ ಜೀವನವೇ ಒಂದು ಬಲುದೊಡ್ಡ ಅವಕಾಶ. ನನ್ನ ವೃತ್ತಿ ಜೀವನದ ಪ್ರತಿ ಹೆಜ್ಜೆಯಲ್ಲೂ, ನ್ಯಾಯದ ಹೋರಾಟದಲ್ಲಿ ನನ್ನ ಜೊತೆ ನಿಂತ ಕಾರ್ಕಳ, ಉಡುಪಿ ಮತ್ತು ಬೆಂಗಳೂರಿನ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅಪೂರ್ಣವಾಗಿದ್ದ ನನ್ನನ್ನು ಪರಿಪೂರ್ಣ ಮನುಷ್ಯನಾಗಿ ರೂಪಿಸಿದ್ದು ಈ ಜನ. ನನಗೆ ವೃತ್ತಿಪಾಠವನ್ನು ಕಲಿಸಿದ ಹಿರಿಯ ಸಹದ್ಯೋಗಿಗಳ ಮಾರ್ಗದರ್ಶನ ಹಾಗೂ ವೃತ್ತಿನಿಷ್ಠರಾಗಿರುವ ಕಿರಿಯ ಸಹದ್ಯೋಗಿಗಳನ್ನು ನಾನು ಬಹಳ ಮಿಸ್ ಮಾಡುವೆ. ಹಿರಿಯ- ಕಿರಿಯ ಪೇದೆಗಳನ್ನೂ ಅಷ್ಟೇ ಮಿಸ್ ಮಾಡುವೆ. ನಾನು ಅವರಿಗಾಗಿ ಜೀವಿಸಿದ್ದೇನೆ, ಅವರ ಹಕ್ಕು-ಉತ್ತಮ ಜೀವನ ಗುಣಮಟ್ಟ ಅವರಿಗೆ ಸಿಗುವಂತಾಗಲು ನಾನು ಪರಿಶ್ರಮ ಪಟ್ಟಿದ್ದೇನೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಾನು ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ನನ್ನಿಂದ ಯಾವುದೇ ತಪ್ಪಾಗಿದ್ದರೂ, ನನ್ನಿಂದ ಯಾರಿಗಾದರೂ ನೋವಾಗಿದ್ದರೆ; ನಾನು ಕ್ಷಮೆ ಯಾಚಿಸುತ್ತೇನೆ. ನಾನೂ ನಿಮ್ಮಂತೆ ಒಬ್ಬ ಮನುಷ್ಯ. ನಾನು ನಿಮ್ಮೆಲ್ಲರನ್ನು ಮಿಸ್ ಮಾಡ್ತೇನೆ, ವಿಶೇಷವಾಗಿ ನಿಮ್ಮಲ್ಲೆರ ಪ್ರೀತಿ ಹಾಗೂ ವಿಶ್ವಾಸವನ್ನು..
ನಿಮ್ಮ ಪ್ರೀತಿಯ
– ಅಣ್ಣಾಮಲೈ