‘ಮತ್ತೊಮ್ಮೆ ಮೋದಿ’ ಘೋಷಣೆಯೊಂದಿಗೆ ಭಾರೀ ಜನಾದೇಶ ಪಡೆದ ಅಧಿಕಾರದಲ್ಲಿ ಮುಂದುವರಿದಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ, ಗುರುವಾರ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರದೊಂದಿಗೆ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದೆ. ಆ ಹಿನ್ನೆಲೆಯಲ್ಲಿ, ನಾಳೆ ಮೋದಿಯವರೊಂದಿಗೆ ಯಾವೆಲ್ಲಾ ನಾಯಕರು ಕೇಂದ್ರದ ನೂತನ ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ? ಯಾವೆಲ್ಲಾ ಖಾತೆಗಳು ಯಾರ ಪಾಲಾಗಲಿವೆ? ಹಿಂದಿನ ಸಚಿವ ಸಂಪುಟದಲ್ಲಿದ್ದ ಎಷ್ಟು ಮಂದಿ ಸಚಿವರು, ಈ ಬಾರಿಯೂ ಸಂಪುಟದ ಭಾಗವಾಗಲಿದ್ದಾರೆ? ಯಾರೆಲ್ಲಾ ಹೊರಹೋಗಲಿದ್ದಾರೆ? ಎಂಬ ಕುತೂಹಲ ಎಲ್ಲೆಡೆ ಇದೆ.
ಪ್ರಮುಖವಾಗಿ ಹಿಂದಿನ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಅನಾರೋಗ್ಯ ಕಾರಣದಿಂದ ತಮ್ಮನ್ನು ಹೊಸ ಸಂಪುಟದಿಂದ ಹೊರಗಿಡುವಂತೆ ಈಗಾಗಲೇ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಆ ಹಿನ್ನೆಲೆಯಲ್ಲಿ ಸದ್ಯದ ದೇಶದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರೀ ಮಹತ್ವ ಪಡೆದುಕೊಂಡಿರುವ ಹಣಕಾಸು ಖಾತೆ ಯಾರ ಹೆಗಲೇರಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಆದರೆ, ಈವರೆಗೆ ಮೋದಿಯವರಾಗಲೀ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಾಗಲೀ ತಮ್ಮ ಸಂಪುಟದ ಸ್ವರೂಪದ ಬಗ್ಗೆ ಯಾವುದೇ ಗುಟ್ಟುಬಿಟ್ಟುಕೊಟ್ಟಿಲ್ಲ. ಆದಾಗ್ಯೂ ದಿಲ್ಲಿಯಿಂದ ಹಳ್ಳಿಯವರೆಗೆ ಸಂಪುಟದಲ್ಲಿ ಯಾರೆಲ್ಲಾ ಒಳಬರಲಿದ್ದಾರೆ? ಯಾರೆಲ್ಲಾ ಹೊರನಡೆಯಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
ಉತ್ಪಾದನಾ ವಲಯದ ಕುಸಿತ, ಬ್ಯಾಂಕಿಂಗ್ ವಲಯದ ಬಿಕ್ಕಟ್ಟು, ಹೂಡಿಕೆ ಹಿಂಜರಿತ, ನಿರುದ್ಯೋಗ ಏರಿಕೆ, ಕೃಷಿ ವಲಯದ ಬಿಕ್ಕಟ್ಟು ಮುಂತಾದ ಹಲವು ಸವಾಲುಗಳ ಹಿನ್ನೆಲೆಯಲ್ಲಿ ಇಡೀ ದೇಶದ ಅರ್ಥವ್ಯವಸ್ಥೆ ಸಾಕಷ್ಟು ಒತ್ತಡಕ್ಕೆ ಸಿಲುಕಿದೆ. ಆ ಹಿನ್ನೆಲೆಯಲ್ಲಿ ತತಕ್ಷಣಕ್ಕೆ ದೇಶದ ಅರ್ಥವ್ಯವಸ್ಥೆಯನ್ನು ಹಳಿಗೆ ತರುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರುವ ತುರ್ತು ಹೊಸ ಸರ್ಕಾರದ ಮುಂದಿದೆ. ಹಾಗಾಗಿ ಹಣಕಾಸು ಖಾತೆಯನ್ನು ನಿಭಾಯಿಸಲು ಅನುಭವಿ ಹಾಗೂ ದಿಟ್ಟ ನಿಲುವು ಕೈಗೊಳ್ಳುವ ಎದೆಗಾರಿಕೆಯ ಸಚಿವರ ಅಗತ್ಯವಿದೆ. ಆದ್ದರಿಂದ ಪ್ರಧಾನಿ ಮೋದಿಯವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನೇ ಆ ಖಾತೆಗೆ ಆಯ್ಕೆಮಾಡಿಕೊಳ್ಳಬಹುದು ಎಂಬುದು ರಾಜಕೀಯ ಪಂಡಿತರ ಅನಿಸಿಕೆ. ಅವರೊಂದಿಗೆ, ಪಿಯೂಶ್ ಗೋಯಲ್, ನಿತಿನ್ ಗಡ್ಕರಿ ಮತ್ತಿತರ ನಾಯಕರ ಹೆಸರುಗಳೂ ಆ ಖಾತೆಗೆ ಚಾಲ್ತಿಯಲ್ಲಿವೆ.
ಹಣಕಾಸು ಅಷ್ಟೇ ಅಲ್ಲದೆ, ರಕ್ಷಣೆ ಮತ್ತು ಗೃಹ ಖಾತೆಗಳೂ ಸದ್ಯದ ಸ್ಥಿತಿಯಲ್ಲಿ; ಬಲಿಷ್ಠ ಭಾರತ ಎಂಬ ಬಿಜೆಪಿ ಕಟ್ಟಿದ ಚುನಾವಣಾ ವಾಗ್ವಾದದ ಹಿನ್ನೆಲೆಯಲ್ಲಿ, ಮಹತ್ವ ಪಡೆದುಕೊಂಡಿದ್ದು, ಆ ಹೊಣೆಗಾರಿಕೆಯನ್ನು ಯಾರು ನಿಭಾಯಿಸಲಿದ್ದಾರೆ? ಹಿಂದಿನ ಸಂಪುಟದಲ್ಲಿ ಆ ಎರಡು ಖಾತೆಗಳನ್ನು ನಿಭಾಯಿಸಿದ್ದ ನಿರ್ಮಲಾ ಸೀತಾರಾಮನ್(ರಕ್ಷಣೆ) ಮತ್ತು ರಾಜ್ ನಾಥ್ ಸಿಂಗ್(ಗೃಹ) ಅವರು ಈ ಬಾರಿಯೂ ಅದೇ ಖಾತೆಗಳಲ್ಲಿ ಮುಂದುವರಿಯುವರೇ? ಅಥವಾ ಆ ಖಾತೆಗಳಿಗೆ ಇತರ ನಾಯಕರು ಬರುವರೇ ಎಂಬುದನ್ನು ಕಾದುನೋಡಬೇಕಿದೆ.
ಅಲ್ಲದೆ, ಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿ, ಸುರೇಶ್ ಪ್ರಭು, ಜಯಂತ್ ಸಿನ್ಹಾ ಮತ್ತಿತರ ಸಚಿವರಿಗೆ ಈ ಬಾರಿ ಯಾವ ಹೊಸ ಹೊಣೆಗಾರಿಕೆಗಳು ಸಿಗಬಹುದು ಎಂಬುದು ಕೂಡ ಕುತೂಹಲ ಕೆರಳಿಸಿದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸೋಲಿಸುವ ಮೂಲಕ ‘ಜಾಯಿಂಟ್ ಕಿಲ್ಲರ್’ ಆಗಿ ಹೊರಹೊಮ್ಮಿರುವ ಸ್ಮೃತಿ ಇರಾನಿಯವರಿಗೆ ಈ ಸರ್ಕಾರದಲ್ಲಿ ದೊಡ್ಡ ಜವಾಬ್ದಾರಿ ಸಿಗಲಿದೆ ಎಂಬುದು ಎಲ್ಲರ ಊಹೆಯಾಗಿದ್ದು, ಅವರನ್ನು ಗೃಹ, ವಿದೇಶಾಂಗ ಅಥವಾ ರಕ್ಷಣಾ ಖಾತೆಗೆ ಬಡ್ತಿ ನೀಡಿದರೂ ಅಚ್ಚರಿಯಿಲ್ಲ. ಜೊತೆಗೆ ಪಕ್ಷದ ಅಧ್ಯಕ್ಷರನ್ನಾಗಿ ಸ್ಮೃತಿ ಅವರಿಗೆ ಹೊಣೆಗಾರಿಕೆಯನ್ನೂ ವಹಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬುದು ಪಂಡಿತರ ಅಭಿಪ್ರಾಯ.
ಹಾಗೇ, ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಖಾತೆ ಉಳಿಸಿಕೊಳ್ಳುವರೇ ಅಥವಾ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗೆ ವರ್ಗಾವಣೆಯಾಗಲಿದ್ದಾರೆಯೇ ಎಂಬ ಪ್ರಶ್ನೆಯೂ ಇದೆ. ಜೊತೆಗೆ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ ಅವರು ಕೂಡ ಸಂಪುಟಕ್ಕೆ ಪ್ರವೇಶಪಡೆಯಬಹುದು ಎಂಬ ನಿರೀಕ್ಷೆ ಕೂಡ ರಾಜಧಾನಿಯ ರಾಜಕೀಯ ವಲಯದಲ್ಲಿದೆ.
ಅದೇ ವೇಳೆಗೆ, ಆರ್ ಎಸ್ಎಸ್ ಆಪ್ತರಾದ ನಿತಿನ್ ಗಡ್ಕರಿ ಅವರನ್ನು ಉಪ ಪ್ರಧಾನಿ ಹುದ್ದೆ ನೀಡುವ ಮೂಲಕ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಮಾತು ಆರ್ ಎಸ್ ಎಸ್ ಮತ್ತು ಬಿಜೆಪಿಯ ಒಂದು ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಅದರಲ್ಲೂ, ಈ ಬಾರಿಯ ಅನಿರೀಕ್ಷಿತ ಜನಾದೇಶದ ಬಳಿಕ ಮೋದಿ ಮತ್ತು ಮೋದಿತ್ವ, ಆರ್ ಎಸ್ ಎಸ್ ಮತ್ತು ಅದರ ಹಿಂದುತ್ವ ಅಜೆಂಡಾಕ್ಕಿಂತ ಬೃಹತ್ತಾಗಿ ಬೆಳೆದುನಿಂತಿದ್ದಾರೆ. ಆ ಹಿನ್ನೆಲೆಯಲ್ಲಿ, ಮೋದಿಯವರಿಗೆ ಸಮಾನಂತರ ವ್ಯಕ್ತಿಯೊಬ್ಬರನ್ನು ನಿಲ್ಲಿಸುವ ಮೂಲಕ ಇಡೀ ರಾಜಕೀಯ ವ್ಯವಸ್ಥೆ ಮತ್ತು ಸರ್ಕಾರ ಮೋದಿಯೊಬ್ಬರ ಏಕಸ್ವಾಮ್ಯಕ್ಕೆ ಒಳಗಾಗುವುದನ್ನು ತಡೆಯುವ ಲೆಕ್ಕಾಚಾರ ಆರ್ ಎಸ್ ಎಸ್ ಗೆ ಇದೆ. ಆ ಹಿನ್ನೆಲೆಯಲ್ಲೇ ಆರ್ ಎಸ್ ಎಸ್ ಈಗಾಗಲೇ ನಿತಿನ್ ಗಡ್ಕರಿಯವರಿಗೆ ಪ್ರಧಾನಿ ಹುದ್ದೆಗೆ ಸಮಾನಾಂತರ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪಿಸಿದೆ. ಹಾಗಾಗಿ, ಗಡ್ಕರಿಗಾಗಿಯೇ ಉಪ ಪ್ರಧಾನಿ ಹುದ್ದೆ ಸೃಷ್ಟಿಯಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಅಲ್ಲದೆ, ಹೊಸ ಯುವ ಮುಖಗಳಿಗೆ ಈ ಬಾರಿ ಮೋದಿ ಅವರು ತಮ್ಮ ಸಂಪುಟದಲ್ಲಿ ಅವಕಾಶ ನೀಡಬಹುದು. ಹಾಗಾದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಎರಡು- ಮೂರು ಬಾರಿ ಸಂಸದರಾಗಿ ಆರಿಸಿಬಂದಿರುವ ಅನುಭವಿ ಯುವ ಸಂಸದರು ಹೆಚ್ಚಿನ ಅವಕಾಶ ಪಡೆಯುವ ಸಾಧ್ಯತೆ ಇದೆ. ಸಂಪುಟ ದರ್ಜೆಯಲ್ಲಿ ಹಿರಿಯರಿಗೆ ಅವಕಾಶ ನೀಡಿ, ಸಹಾಯಕ ಸಚಿವರನ್ನಾಗಿ ಬಹುತೇಕ ಯುವಕರಿಗೆ ಅವಕಾಶ ಸಿಗಬಹುದು.
ಅಲ್ಲದೆ, ರಾಜ್ಯವಾರು ಪ್ರಾತಿನಿಧ್ಯ ಎಷ್ಟು ಸಿಗಲಿದೆ? ಯಾವ ರಾಜ್ಯದಿಂದ ಎಷ್ಟು ಮಂದಿ ಸಚಿವರಾಗಲಿದ್ದಾರೆ? ರಾಜ್ಯಗಳಲ್ಲಿ ಈ ಬಾರಿಯ ಚುನಾವಣೆಯಲ್ಲಿನ ಬಿಜೆಪಿಯ ಸಾಧನೆಯ ಹಿನ್ನೆಲೆಯಲ್ಲಿ ಎಷ್ಟು ಮಂದಿ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ? ಎಷ್ಟು ಮಂದಿ ಹೊಸ ಅವಕಾಶ ಪಡೆಯಬಹುದು ಎಂಬ ಲೆಕ್ಕಾಚಾರಗಳೂ ಇವೆ. ಆ ಹಿನ್ನೆಲೆಯಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿಗೆ ನೀಡಿರುವ ಕರ್ನಾಟಕದಿಂದ ಎಷ್ಟು ಮಂದಿ ಸಂಪುಟ ಮತ್ತು ರಾಜ್ಯ ದರ್ಜೆ ಸಚಿವ ಸ್ಥಾನ ಪಡೆಯಲಿದ್ದಾರೆ? ಎಂಬ ಕುತೂಹಲಕ್ಕೂ ನಾಳೆ ತೆರೆಬೀಳಲಿದೆ.
ರಾಜ್ಯದಿಂದ ಡಿ ವಿ ಸದಾನಂದ ಗೌಡ, ವಿ ಶ್ರೀನಿವಾಸ ಪ್ರಸಾದ್, ಪ್ರಹ್ಲಾದ್ ಜೋಷಿ, ಶಿವಕುಮಾರ ಉದಾಸಿ, ಸುರೇಶ್ ಅಂಗಡಿ, ಅನಂತಕುಮಾರ ಹೆಗಡೆ, ರಮೇಶ್ ಜಿಗಜಿಣಗಿ, ಶೋಭಾ ಕರಂದ್ಲಾಜೆ ಅವರ ಹೆಸರುಗಳು ಕೇಳಿಬರುತ್ತಿವೆ. ಅಲ್ಲದೆ, ಯುವ ಸಂಸದರ ಪೈಕಿ ಬಿ ವೈ ರಾಘವೇಂದ್ರ, ಪ್ರತಾಪ ಸಿಂಹ, ತೇಜಸ್ವಿ ಸೂರ್ಯ, ನಳೀನ್ ಕುಮಾರ ಕಟೀಲು ಅವರ ಹೆಸರಗಳೂ ಇದ್ದು, ಯಾರ ಅದೃಷ್ಟು ಖುಲಾಯಿಸಲಿದೆ, ಯಾರ ಅದೃಷ್ಟ ಕೈಕೊಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಅದೇ ಹೊತ್ತಿಗೆ, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿರುವ ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿ, ಸ್ವತಃ ಅವರ ಪುತ್ರ ಬಿ ವೈ ರಾಘವೇಂದ್ರ ಅವರುಗಳಿಗೆ ಸಂಪುಟದಲ್ಲಿ ಅವಕಾಶ ಸಿಗಲಿದೆಯೇ? ಅಥವಾ ಇಲ್ಲವೇ? ಎಂಬುದು ಕೂಡ ಭವಿಷ್ಯದಲ್ಲಿ ರಾಜ್ಯ ಬಿಜೆಪಿಯಲ್ಲಿ ಬಿಎಸ್ ವೈ ವಾರಸುದಾರರಿಗೆ ಸಿಗಬಹುದಾದ ಮನ್ನಣೆಯ ಮುನ್ಸೂಚನೆ ಕೂಡ ಆಗಿರಲಿದೆ. ಆ ಹಿನ್ನೆಲೆಯಲ್ಲಿ, ನಾಳೆಯ ಕೇಂದ್ರ ಸಂಪುಟ ಪ್ರಮಾಣ ವಚನ ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ, ರಾಜ್ಯಮಟ್ಟದಲ್ಲೂ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿದೆ.