ಒಂದು ಕಾಲವಿತ್ತು, ಆಗ ಭಾರತದ ಸೇನಾಪಡೆಗಳ ಸಿಬ್ಬಂದಿಯೆಲ್ಲರೂ ಒಂದೇ ಮೂಲತತ್ವವನ್ನು ಪಾಲಿಸುತ್ತಿದ್ದರು: ಅದೇನೆಂದರೆ ಅವರು ರಾಜಕೀಯ ಅಥವಾ ಮಹಿಳೆಯರ ಕುರಿತು ಚರ್ಚಿಸಬಾರದು ಎಂಬುದು. ಆದರೆ ಈಗ ಅದು ಬದಲಾದಂತೆ ಕಾಣುತ್ತಿದೆ. ಸೇವೆಯಲ್ಲಿರುವ ಮತ್ತು ನಿವೃತ್ತರಾಗಿರುವ – ಸೇನಾಪಡೆಗಳ ಸಿಬ್ಬಂದಿಯ ಬಹುನೆಚ್ಚಿನ ಚರ್ಚಾ ವಿಷಯ ರಾಜಕೀಯ ಎಂಬಂತೆ ಗೋಚರಿಸುತ್ತಿದೆ.
ಒಂದು ಕಡೆ ಭಾರತ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅತ್ಯವಶ್ಯವೆನಿಸಿದರೆ, ಮತ್ತೊಂದೆಡೆ ಸೇನಾಪಡೆಗಳ ಮೂಲತತ್ವವು ಭಾರತದ ಇತರ ವಲಯಗಳಲ್ಲಾಗಿರುವಂತೆ ಧರ್ಮನಿರಪೇಕ್ಷತೆಯಿಂದ ಬಹುಸಂಖ್ಯಾತವಾದದ ಕಡೆ ಹೊರಳಿರುವುದು ಇದೆಲ್ಲದಕ್ಕಿಂತ ಹೆಚ್ಚು ಆತಂಕಕಾರಿಯಾಗಿದೆ.
ಆರೆಸ್ಸೆಸ್ ಸಭೆಯಲ್ಲಿ ಸಮವಸ್ತ್ರದ ಸೇನಾಧಿಕಾರಿಗಳು?
ಕೆಲವರ್ಷಗಳ ಹಿಂದೆ, ಭಾರತೀಯ ಜನತಾ ಪಕ್ಷದ ಸೈದ್ಧಾಂತಿಕ ಮಾರ್ಗದರ್ಶಿಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಅಂಗಸಂಘಟನೆಯೊಂದು ಸಂಘಟಿಸಿದ್ದ ಕಾರ್ಯಕ್ರಮಕ್ಕೆ ನನ್ನನ್ನು ಭಾಷಣಕಾರನಾಗಿ ಆಹ್ವಾನಿಸಲಾಗಿತ್ತು. ಆ ಸಂಘಟನೆ ಗಡಿಪ್ರದೇಶಗಳಲ್ಲಿನ ಜನತೆಯ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿತ್ತು.
ಸಭೆಯಲ್ಲಿ ಅನೇಕ ಹಿರಿಯ ನಿವೃತ್ತ ಮಿಲಿಟರಿ ಅಧಿಕಾರಿಗಳು ಹಾಗೂ ಕೆಲವು ಸೇವಾನಿರತ ಯುವ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು. ಸಮವಸ್ತ್ರದಲ್ಲಿದ್ದ ಸೇವಾನಿರತ ಅಧಿಕಾರಿಗಳನ್ನು ಕಂಡು ನಾನು ಬೆರಗಾದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಪೈಕಿ ಪೊಲೀಸ್, ಬ್ಯಾಂಕ್ ಮತ್ತು ಇತರ ನಾಗರಿಕ ಸೇವಾ ಇಲಾಖೆಗಳ ಸಿಬ್ಬಂದಿಯೂ ಸೇರಿದ್ದರು.
ನನ್ನ ಭಾಷಣದಲ್ಲಿ, ಗಡಿಭಾಗಗಳಲ್ಲಿ ವಾಸಿಸುವ ಜನರ ಬದುಕನ್ನು ಸುಧಾರಿಸುವ ಕುರಿತು ನಾನು ಉತ್ಸಾಹದಿಂದ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಕೆಲವು ಸಭೆಗಳು ನಡೆದ ಮೇಲೆ ಆನಂತರ ನನಗೆ ಅರಿವಾಗಿದ್ದೇನೆಂದರೆ ಆ ಸಂಘಟನೆ ಗಡಿಪ್ರದೇಶಗಳ ಜನರನ್ನು ಮತೀಯ ಆಧಾರದಲ್ಲಿ ವಿಭಜಿಸಲು ಗಮನ ಕೇಂದ್ರೀಕರಿಸಿತ್ತು. ಅಷ್ಟೇ ಅಲ್ಲದೆ ಅನೇಕ ಭಾಷಣಕಾರರು ಈಶಾನ್ಯ ಪ್ರದೇಶದ ಗಡಿಭಾಗಗಳಲ್ಲಿ ವಾಸಿಸುವ ಮುಸ್ಲಿಮರ ರಾಷ್ಟ್ರಪ್ರೇಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದರು.
ಆ ಕ್ಷಣವೇ ನಾನು ಆ ಸಂಘಟನೆಯ ಜೊತೆಗಿನ ಸಂಪರ್ಕವನ್ನು ಕಡಿದುಕೊಂಡೆ.
ಸೇವಾನಿರತ ರಕ್ಷಣಾ ಅಧಿಕಾರಿಗಳು ರಾಜಕೀಯ-ಮತಧಾರ್ಮಿಕ ಸಂಘಟನೆಯೊಂದರ ಜೊತೆ ಸಕ್ರಿಯವಾಗಿ ಸಂಬಂಧ ಹೊಂದಿರುವುದು ಮತ್ತು ಹಲವಾರು ನಿವೃತ್ತ ಹಿರಿಯ ರಕ್ಷಣಾ ಅಧಿಕಾರಿಗಳು ತಾವು ನಿವೃತ್ತಿ ಹೊಂದಿದ ಕೂಡಲೇ ಹೆಚ್ಚುಹೆಚ್ಚು ಸಕ್ರಿಯ ರಾಜಕಾರಣದಲ್ಲಿ ಸೇರ್ಪಡೆಗೊಳ್ಳುತ್ತಿರುವ ವಿದ್ಯಮಾನ, ಇವು ಭಾರತದ ರಕ್ಷಣಾ ಪಡೆಗಳು ಕ್ಷಿಪ್ರಗತಿಯಲ್ಲಿ ರಾಜಕೀಕರಣಗೊಳ್ಳುತ್ತಿರುವುದಕ್ಕೆ ಸಾಕ್ಷಿ ಒದಗಿಸುತ್ತದೆ.
ಭಾರತದ ರಾಜಕಾರಣಿಗಳು, ಮಿಲಿಟರಿ ನಾಯಕತ್ವ ಮತ್ತು ಒಂದು ಹಂತಕ್ಕೆ ಮಾಧ್ಯಮಗಳು ಈ ಪ್ರವೃತ್ತಿಗೆ ಕಾರಣವಾಗಿವೆ.
ಸೇನಾಪಡೆಗಳು ರಾಜಕೀಕರಣದತ್ತ ವಾಲುತ್ತಿರುವುದನ್ನು ನಿಲ್ಲಿಸದೆ ಹೋದರೆ, ಅವುಗಳ ವೃತ್ತಿಪರತೆ ಮೊದಲ ಬಲಿಯಾಗಲಿದೆ ಎಂಬುದನ್ನು ಭಾರತ ಮೊಟ್ಟಮೊದಲಿಗೆ ಅರ್ಥಮಾಡಿಕೊಳ್ಳಬೇಕಿದೆ. ಅಧಿಕಾರಿಯೊಬ್ಬನ ರಾಜಕೀಯ ಸಿದ್ಧಾಂತದ ಆಧಾರದಲ್ಲಿ ಅವನಿಗೆ ಮುಂಬಡ್ತಿ ಉಂಟಾದಲ್ಲಿ ಉತ್ತಮ ಅಧಿಕಾರಿಗಳಿಗೆ ಬಡ್ತಿ ಸಿಗುವುದೇ ಇಲ್ಲ. ಇದರಿಂದಾಗಿ ಭಾರತದ ಭದ್ರತೆ ರಾಜಿಯಾಗುತ್ತದೆ. ಹಾಗೇನಾದರೂ ಆದಲ್ಲಿ, ದಶಕಗಳ ಹಿಂದೆಯೇ ಆ ಹಾದಿಯನ್ನು ತುಳಿದ ಪಾಕಿಸ್ತಾನಕ್ಕಿಂತ ನಾವೇನೂ ಭಿನ್ನವಾಗಿರಲಾರೆವು.
ಬಿಜೆಪಿ ಮತ್ತು ಸೇನಾಪಡೆಗಳು
ಸೇನಾಪಡೆಗಳ ರಾಜಕೀಯ ತಟಸ್ಥತೆಯನ್ನು ನಾಶಗೊಳಿಸುವಲ್ಲಿ ಭಾರತದ ರಾಜಕಾರಣಿಗಳ ಪಾಲು ಅತಿಹೆಚ್ಚಿನದ್ದು. ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ದೇಶ ನಾಲ್ಕು ಯುದ್ಧಗಳನ್ನು ಸೆಣೆಸಿದೆ. ಭಾರತ ಮೂರು ಯುದ್ಧಗಳಲ್ಲಿ ನಿರ್ಣಾಯಕವಾಗಿ ಗೆದ್ದಿದೆಯಾದರೂ ಆ ಕಾಲಘಟ್ಟದ ಯಾವ ರಾಜಕೀಯ ನಾಯಕರೂ ಆ ಗೆಲುವುಗಳಿಂದ ರಾಜಕೀಯ ಲಾಭ ಗಳಿಸಲು ಯತ್ನಿಸಲಿಲ್ಲ.
ಈಗ ಪರಿಸ್ಥಿತಿ ಬದಲಾಗಿದೆ.
ಉದಾಹರಣೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಲಜ್ಜೆಗೆಟ್ಟು ಸ್ವಹಿತಾಸಕ್ತಿಯ ಸ್ವಾರ್ಥದಿಂದ ಮತಗಳಿಕೆಗೋಸ್ಕರ ಸೇನಾಪಡೆಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸಿದೆ. ಸೆಪ್ಟೆಂಬರ್ 2016ರಲ್ಲಿ ಗಡಿ ನಿಯಂತ್ರಣಾ ರೇಖೆಯಾಚೆ ಸರ್ಜಿಕಲ್ ದಾಳಿ ನಡೆಸುವ ಮೂಲಕ ಈ ಪ್ರಯತ್ನಕ್ಕೆ ಕೈಹಾಕಿತು. ಕೆಲತಿಂಗಳ ನಂತರ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ಈ ದಾಳಿಗಳನ್ನು ದಾಳವನ್ನಾಗಿಸಿಕೊಂಡು ಭಾರೀ ಗೆಲುವು ಸಾಧಿಸಿತು. 2019ರ ಮಹಾಚುನಾವಣೆಗಳ ಮೇಲೆ ಕಣ್ಣಿಟ್ಟ ಬಿಜೆಪಿ ತೀರಾ ಇತ್ತೀಚೆಗೆ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟಿನಲ್ಲಿ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿಗಳನ್ನು ರಾಜಕೀಕರಣಗೊಳಿಸಿತು.
ನಿರಾಕರಣೆಯ ಅವಕಾಶ ಉಳಿಸಿಕೊಳ್ಳಲು ಸಾಮಾನ್ಯವಾಗಿ ಯಾವುದೇ ರಾಷ್ಟ್ರವೂ ಅಂತಹ ಕಾರ್ಯಾಚಾರಣೆಯ ಬಗ್ಗೆ ಸಾರ್ವಜನಿಕವಾಗಿ ಪ್ರಚಾರ ಮಾಡುವುದಿಲ್ಲ. ಭಾರತದ ಹಿಂದಿನ ಸರ್ಕಾರಗಳೂ ಹಾಗೆಯೇ ಮಾಡಿದ್ದು.
ಆದರೆ ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಭಾರತ ಭಿನ್ನವಾಗಿ ವರ್ತಿಸಿದೆ.
ಕಳೆದ ಕೆಲವು ತಿಂಗಳುಗಳಿಂದಲೂ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪ್ರಚಾರ ಭಾಷಣಗಳಲ್ಲಿ ಆಗಾಗ್ಗೆ ಸೇನಾಪಡೆಗಳ ನಡೆಸಿದ ಕೃತ್ಯಗಳ ಮೇಲೆ “ಕೂಸುಮರಿ ಕೂತು” ತನ್ನನ್ನು ತಾನೇ ಪ್ರಬಲ ನಾಯಕನೆಂದು ಬಿಂಬಿಸಲು ಯತ್ನಿಸಿದ್ದಾರೆ. ಉದಾಹರಣೆಗೆ, ಮೋದಿಯವರು ಕೆಲವೆಡೆ ಚುನಾವಣಾ ಭಾಷಣ ಮಾಡಿದಾಗ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಳದ ಬಾಂಬ್ ಸ್ಫೋಟದಲ್ಲಿ ಹತರಾದ ಭದ್ರತಾ ಪಡೆಗಳ ಸಿಬ್ಬಂದಿಯ ಭಾವಚಿತ್ರಗಳನ್ನು ತೋರಿಸಲಾಗುತ್ತಿತ್ತು.
ಅದೇ ರೀತಿ ಮೋದಿ ಪಕ್ಷದ ಸಹೋದ್ಯೋಗಿಗಳು ಪ್ರಚಾರ ಮಾಡುವಾಗ ಸೇನೆ ಮತ್ತು ವಾಯುಸೇನೆಯನ್ನು ಕ್ರಮವಾಗಿ “ಮೋದಿಯ ಸೇನೆ” ಮತ್ತು “ಮೋದಿಯ ವಾಯುಸೇನೆ” ಎಂದು ಉಲ್ಲೇಖಿಸಿದ್ದರು. ರಕ್ಷಣಾಪಡೆಗಳನ್ನು ರಾಜಕೀಕರಣಗೊಳಿಸಲು ಹಾಗೂ ಯೋಧರ ಗೆಲುವು ಮತ್ತು ಸಾವುಗಳಿಂದಲೂ ಸಹ ರಾಜಕೀಯ ಲಾಭ ಪಡೆಯಲು ಬಿಜೆಪಿ ನಡೆಸಿರುವ ಸ್ಪಷ್ಟ ಯತ್ನಗಳಿವು.
ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್ ನಿವೃತ್ತಿ ಹೊಂದಿದ ನಂತರ ಬಿಜೆಪಿ ಸೇರಿದ್ದು, ಮೋದಿ ಸರ್ಕಾರ ಅವರನ್ನು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವರನ್ನಾಗಿ ನೇಮಕ ಮಾಡಿತು.
ಸೇನೆಯೊಳಗಿನ ವಿವಾದಾತ್ಮಕ ನೇಮಕಾತಿಗಳು
ಕೇಂದ್ರ ಸರ್ಕಾರ ತಾನೇ ಆಯ್ಕೆ ಮಾಡಿದ ಅಧಿಕಾರಿಗಳಿಗೋಸ್ಕರ ಸಮರ್ಥ ರಕ್ಷಣಾ ಅಧಿಕಾರಿಗಳನ್ನು ಕಡೆಗಣಿಸಿದ್ದೂ ಸೇನಾಪಡೆಗಳ ರಾಜಕೀಕರಣದತ್ತ ಮತ್ತೊಂದು ಹೆಜ್ಜೆಯಾಗಿದೆ.
2016ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಪಿನ್ ರಾವತ್ ಅವರನ್ನು ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ್ದು ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ. ಅವರ ನೇಮಕಾತಿಯಿಂದ ಇಬ್ಬರು ಸಮರ್ಥ ಜನರಲ್ ಗಳನ್ನು ಹಿಂದಕ್ಕೆ ದಬ್ಬಲಾಯಿತು. ‘ದಂಗೆಕೋರರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಅವರು ಹೆಚ್ಚು ಅನುಭವ ಹೊಂದಿದ್ದರೆಂಬುದು’ ರಾವತ್ ಅವರ ಮುಂಬಡ್ತಿಗೆ ಸರ್ಕಾರ ನೀಡಿದ ಸಮರ್ಥನೆಯಾಗಿತ್ತು. ಆದರೆ ಅದು ಸೇನಾಪಡೆಗಳ ಮೂಲ ಕಸುಬಲ್ಲವೇ ಅಲ್ಲ. ಹಾಗಾಗಿ ಈ ವಿವರಣೆ ಅಷ್ಟೇನೂ ಸಮಂಜಸ ಎನಿಸದು.
ನೌಕಾಪಡೆಯ ಮುಖ್ಯಸ್ಥರನ್ನು ನೇಮಕಗೊಳಿಸುವಾಗಲೂ ಸರ್ಕಾರ ಇದೇ ರೀತಿ ನಡೆದುಕೊಂಡಿತ್ತು. ಮಾರ್ಚ್ ತಿಂಗಳಿನಲ್ಲಿ ಹಿರಿತನದ ತತ್ವವನ್ನು ಬದಿಗೊತ್ತಿ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಅವರನ್ನು ಮುಂದಿನ ನೌಕಾಪಡೆಯ ಮುಖ್ಯಸ್ಥ ಎಂದು ಘೋಷಿಸಿತು. ಇದೇ ಮೇ 31ರಂದು ನಿವೃತ್ತಿ ಹೊಂದಲಿರುವ ಅಡ್ಮಿರಲ್ ಸುನೀಲ್ ಲಂಬಾ ಅವರಿಂದ ಸಿಂಗ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಡ್ತಿಯಲ್ಲಿ ಕಡೆಗಣಿಸಲ್ಪಟ್ಟಿದ್ದ ಅಧಿಕಾರಿ ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಸೇನಾಪಡೆಗಳ ನ್ಯಾಯಾಧಿಕರಣದ ಮೆಟ್ಟಿಲೇರುವಂತಾಯಿತು.
ರಕ್ಷಣಾಪಡೆಗಳಿಗೆ ಸರಿಹೊಂದದ ವರ್ತನೆಗಳು
ರಕ್ಷಣಾಪಡೆಗಳ ಪ್ರತಿಷ್ಠೆಗೆ ಇಂತಹ ವರ್ತನೆಗಳು ಸರಿಹೊಂದುವುದಿಲ್ಲ. ಅಲ್ಲದೆ ಎಲ್ಲಿ ಸರ್ಕಾರಕ್ಕೆ ಅಸಮಾಧಾನ ಉಂಟಾಗಿ ತಮ್ಮ ಮುಂಬಡ್ತಿಯ ಅವಕಾಶಕ್ಕೆ ತೊಂದರೆಯಾಗುತ್ತದೋ ಎಂಬ ಭಯದಲ್ಲಿ ಈಗ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ತಮ್ಮ ಪ್ರಾಮಾಣಿಕ ವೃತ್ತಿಪರ ಸಲಹೆ ನೀಡಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ಸೇನಾಪಡೆಗಳ ವೃತ್ತಿಪರತೆಗೆ ಧಕ್ಕೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದುವರಿದರೆ, ತನ್ನ ರಾಜಕೀಯ ನಾಯಕರ ಬಳಿ ಮನಬಿಚ್ಚಿ ಮಾತನಾಡುತ್ತಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಷಾ ಅವರಂತಹ ಇನ್ನೊಬ್ಬರನ್ನು ಸೇನೆಯು ಹುಟ್ಟುಹಾಕಲು ಸಾಧ್ಯವಿಲ್ಲ.
ಮೇಲೆ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಕಡೆಗಣಿಸಲ್ಪಟ್ಟ ಅಧಿಕಾರಿಗಳು ಸೇನಾ ಕಮಾಂಡರ್ ಅಥವಾ ತತ್ಸಮಾನ ಸ್ಥಾನಕ್ಕೆ ಏರಿದ್ದಾರೆಂಬ ಸಂಗತಿಯೇ ಅವರ ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಮುಖ್ಯಸ್ಥರ ಹುದ್ದೆಯಲ್ಲಿ ಕೂರುವ ಸಾಮರ್ಥ್ಯ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಅಂತಹ ಅತ್ಯಂತ ದಕ್ಷ ಅಧಿಕಾರಿಗಳ ಕಡೆಗಣನೆ ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನ ಮೂಡಿಸುತ್ತದೆ.
ಪ್ರತಿಪಕ್ಷಗಳು ಈ ನೇಮಕಾತಿಗಳನ್ನು ಪ್ರಶ್ನಿಸಿದಾಗ ಮತ್ತು ಈ ನೇಮಕಾತಿಗಳಿಗೆ ರಾಜಕೀಯ ಉದ್ದೇಶಗಳನ್ನು ಲೇಪಿಸಿದಾಗ ವಿಷಯ ಇನ್ನಷ್ಟು ರಾಜಕೀಕರಣಗೊಳ್ಳುತ್ತದೆ.
ಸೇನೆಯಲ್ಲಿ ದುಷ್ಟ ಅಧಿಕಾರಿಗಳು?
ರಾಜಕಾರಣಿಗಳನ್ನೇ ತೆಗಳಬೇಕೇಕೆ? ಹಲವು ಹಿರಿಯ ಅಧಿಕಾರಿಗಳು ನಿವೃತ್ತಿಯ ನಂತರದ ತಮ್ಮ ನಡವಳಿಕೆಯಿಂದ ಸೇನಾಪಡೆಗಳ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ.
ಈ ಅಧಿಕಾರಿಗಳನ್ನು ಎರಡು ರೀತಿ ವರ್ಗೀಕರಣ ಮಾಡಬಹುದು. ಒಂದು, ಟಿವಿ ಚಾನೆಲ್ ಗಳಿಗೆ ಅಥವಾ ಸಾಮಾಜಿಕ ಮಾಧ್ಯಮಗಳಿಗೆ ಆರಾಮ ಕುರ್ಚಿ ವಿಶ್ಲೇಷಕರಾಗಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ವಿಷ ಕಕ್ಕುವವರು. ಎರಡನೆಯ ಬಗೆ, ನಿವೃತ್ತಿಯ ನಂತರ ರಾಜಕೀಯ ಕ್ಷೇತ್ರ ಸೇರಿ ತಮ್ಮ ನಡವಳಿಕೆಯಿಂದ ತಾವು ಬಂದಂತಹ ಸಂಸ್ಥೆಯ ಬುಡವನ್ನೇ ಅಲುಗಾಡಿಸುವವರು.
ಇತ್ತೀಚಿನ ದಿನಗಳಲ್ಲಿ ಅನೇಕ ನಿವೃತ್ತ ಹಿರಿಯ ಸೇನಾ ಅಧಿಕಾರಿಗಳು ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದನ್ನು ಕಾಣಬಹುದು. ಅವರ ಕೆಲವು ಅಭಿಪ್ರಾಯಗಳು ಹಿಂಸೆಯನ್ನು ಪ್ರಚೋದಿಸುವಂತಿರುತ್ತವೆ. ಮತಧರ್ಮ, ದೇಶಪ್ರೇಮ ಮತ್ತು ರಾಷ್ಟ್ರವಾದಗಳ ಕುರಿತು ಅವರು ಬಿಸಿಬಿಸಿ ಚರ್ಚೆಗಳಲ್ಲಿ ತೊಡಗುತ್ತಾರೆ. ಅವರು ಅಲ್ಪಸಂಖ್ಯಾತ ಸಮುದಾಯದ ಜನತೆಯ ದೇಶಪ್ರೇಮದ ಬಗ್ಗೆ ಸಂಶಯಗಳ ದಾಳಿ ನಡೆಸಿ, ಭಾರತದ ಸ್ವಾತಂತ್ರ್ಯ ಚಳವಳಿಯ ನಾಯಕರ ವಿರುದ್ಧ ಸುಳ್ಳುಸುದ್ದಿ ಹಬ್ಬಿಸುತ್ತಾರೆ.
ರಕ್ಷಣಾ ಪಡೆಗಳ ಇತರ ಹಿರಿಯ ನಿವೃತ್ತ ಅಧಿಕಾರಿಗಳು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ವಿಷ ಕಾರುತ್ತಾರೆ.
ಒಂದು ಕಾಲದಲ್ಲಿ ವೈವಿಧ್ಯಮಯ ಪಡೆಗಳ ದೊಡ್ಡ ವಿಭಾಗವನ್ನು ನಿಯಂತ್ರಿಸಿದ್ದ ಹಿರಿಯ ಅಧಿಕಾರಿಗಳಾಗಿದ್ದವರು ಇವರು ಎಂಬ ಸಂಗತಿಯೇ ವಿಷಾದನೀಯ. ಸೇನಾಪಡೆಗಳಲ್ಲಿ ಅಂತಹ ದುಷ್ಟ (ಇದಕ್ಕಿಂತ ಹೆಚ್ಚು ಸೂಕ್ತ ಪದವಿದ್ದರೆ ಹೇಳಬಹುದು) ಅಧಿಕಾರಿಗಳನ್ನು ಉನ್ನತ ಸ್ಥಾನಗಳಿಗೆ ತಲುಪಲು ಅವಕಾಶ ನೀಡುವ ವ್ಯವಸ್ಥೆಯ ಪ್ರತಿಬಿಂಬವಿದು.
2016ರಲ್ಲಿ ಬಿಪಿನ್ ರಾವತ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿದ ಪ್ರಕ್ರಿಯೆಯೇ ವಿವಾದದಲ್ಲಿ ಸಿಲುಕಿತ್ತು.
ಸೇನಾಧಿಕಾರಿಗಳು ಮತ್ತು ರಾಜಕಾರಣ
ಸೇನಾಪಡೆಗಳ ಹಲವು ಹಿರಿಯ ಅಧಿಕಾರಿಗಳೂ ಸಹ ನಿವೃತ್ತಿಯ ನಂತರ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ಇದು ಹೊಸ ಪ್ರವೃತ್ತಿಯೇನಲ್ಲ. ಆದರೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜೆ ಜೆ ಸಿಂಗ್ ಅವರ ಪ್ರಕರಣ ಮಾತ್ರ ಅಸಾಧಾರಣವಾದುದು.
2008ರಲ್ಲಿ ಸಿಂಗ್ ಅವರು ನಿವೃತ್ತಿ ಹೊಂದಿದ ಮೇಲೆ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿದರು. ಅದರ ಹೊರತಾಗಿ 2017ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದರು. ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ಭಾಗವಾಗಿದ್ದ ಶಿರೋಮಣಿ ಅಕಾಲಿ ದಳದ ಅಭ್ಯರ್ಥಿಯಾಗಿದ್ದ ಅವರು, ಹಾಲಿ ಪಂಜಾಬದ ಮುಖ್ಯಮಂತ್ರಿಯಾಗಿರುವ ಕಾಂಗ್ರೆಸ್ ನೇತಾರ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ವಿರುದ್ಧ ಅಸಹ್ಯ ಪದ ಬಳಕೆ ಮಾಡಿ ನಿಂದಿಸಿದ್ದನ್ನು ನೋಡಿ ನಿರಾಶೆಯಾಯಿತು. ಈ ವಿಡೀಯೊ 2017ರಲ್ಲಿ ವೈರಲ್ ಆಗಿತ್ತು.
ಮತ್ತೊಂದು ವಿಡೀಯೊದಲ್ಲಿ, ಜೆ ಜೆ ಸಿಂಗ್ ಎದೆಯ ಮೇಲೆ ತನ್ನೆಲ್ಲಾ ಸೇವಾ ಪದಕಗಳನ್ನೂ ಚುಚ್ಚಿಕೊಂಡು ಪಂಜಾಬ್ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ನಂತರ ಚುನಾವಣಾ ಆಯೋಗವು ಪ್ರಚಾರ ನಡೆಸುವಾಗ ಪದಕ ಹಾಕಿಕೊಳ್ಳದಂತೆ ಅವರ ಮೇಲೆ ನಿಷೇಧ ಹೇರಿತ್ತು. ಇದರಿಂದ ಸಿಂಗ್ ನಗೆಪಾಟಲಿಗೀಡಾಗಿದ್ದು ಮಾತ್ರವಲ್ಲ, ಅವರ ಕೃತ್ಯಗಳು ಒಬ್ಬ ಸಾಮಾನ್ಯ ಸೇನಾ ಅಧಿಕಾರಿಯ ಚಿತ್ರದ ಮೇಲೆ ಮಸಿ ಬಳಿದಿತ್ತು.
ಇದು ಬರೀ ನಿವೃತ್ತ ಸೇನಾ ಅಧಿಕಾರಿಗಳ ಕತೆಯಲ್ಲ.
ಮೇ ತಿಂಗಳಲ್ಲಿ, ಎಲೆಕ್ಟ್ರಾನಿಕ್ ಅಂಚೆ ಮತದಾನ ವ್ಯವಸ್ಥೆಯಲ್ಲಿ ಕಮಾಂಡಿಂಗ್ ಅಧಿಕಾರಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಅಭ್ಯರ್ಥಿಯೊಬ್ಬರು ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಲೇಹ್ ಜಿಲ್ಲಾ ಚುನಾವಣಾಧಿಕಾರಿ ಭಾರತೀಯ ಸೇನೆಗೆ ಪತ್ರ ಬರೆದರು. ಆ ಅಧಿಕಾರಿ ತನ್ನ ನಿಯಂತ್ರಣದಲ್ಲಿರುವ ಪಡೆಗಳಿಗೆ ತಾವೇ ಮತಚಲಾವಣೆ ಮಾಡಲು ಅನುವಾಗುವಂತೆ ಮತಪತ್ರಗಳನ್ನು ಒದಗಿಸುವ ಬದಲಿಗೆ ಅವರ ಮತದಾನದ ಆದ್ಯತೆಗಳನ್ನು ಕೇಳುತ್ತಿದ್ದನೆಂದು ಹೇಳಲಾಗಿದೆ.
ಈ ಪ್ರಕರಣದಲ್ಲಿ ಯಾವುದೇ ಪ್ರಮಾದ ನಡೆದಿಲ್ಲವೆಂದು ಸೇನೆ ಹೇಳಿದೆ. ಆದರೆ ನಾಣ್ಣುಡಿ ಹೇಳುವಂತೆ, “ಬೆಂಕಿಯಿಲ್ಲದೆ ಹೊಗೆಯಾಡದು.”
ಕೂಲಿಂಗ್ ಆಫ್ ಅವಧಿ ಕಡ್ಡಾಯವಾಗಬೇಕು
ಯಾವುದೇ ಸರ್ಕಾರಿ ನೌಕರ, ಅದರಲ್ಲೂ ವಿಶೇಷವಾಗಿ ಸೇನಾ ಸಿಬ್ಬಂದಿ ನಿವೃತ್ತಿ ಪಡೆದು ಕನಿಷ್ಠ 5 ವರ್ಷಗಳಾದ (ಕೂಲಿಂಗ್ ಆಫ್ ಅವಧಿ) ನಂತರವಷ್ಟೇ ರಾಜಕೀಯ ಕ್ಷೇತ್ರವನ್ನು ಸೇರಲು ಅನುಮತಿ ನೀಡುವಂತಾಗಬೇಕು.
ಅಧಿಕಾರಶಾಹಿ ಮತ್ತು ಸೇನಾಪಡೆಗಳು ರಾಷ್ಟ್ರಕ್ಕೆ ಉಕ್ಕಿನ ಚೌಕಟ್ಟಿದ್ದಂತೆ. ತಟಸ್ಥವಾಗಿದ್ದುಕೊಂಡು, ತಾವು ನಂಬಿದ ರಾಜಕೀಯ ಸಿದ್ಧಾಂತಗಳು ತಮ್ಮ ಕೆಲಸಕಾರ್ಯದಲ್ಲಿ ಹಸ್ತಕ್ಷೇಪ ಮಾಡಲು ಬಿಡದಂತೆ ಸರ್ಕಾರದ ನೀತಿಗಳನ್ನು ಅನುಷ್ಠಾನಗೊಳಿಸುವವರು ಅವರು. ಅವರು ತಟಸ್ಥರಾಗಿಯೇ ಇರತಕ್ಕದ್ದು.
ಪಾಕಿಸ್ತಾನದಂತಾಗುವುದು ಬೇಡ ಭಾರತ…
ನನ್ನ ಅಭಿಪ್ರಾಯದಲ್ಲಿ ರಕ್ಷಣಾ ಪಡೆಗಳಲ್ಲಿನ ಸಿಬ್ಬಂದಿಯ ರಾಜಕೀಕರಣವು ಅಧಿಕಾರಶಾಹಿಯ ರಾಜಕೀಕರಣಕ್ಕಿಂತ ಹೆಚ್ಚು ಅಪಾಯಕಾರಿ. ಏಕೆಂದರೆ ಹಿರಿಯ ಸೇನಾ ಅಧಿಕಾರಿಗಳು ತಮ್ಮ ನಿಯಂತ್ರಣದಲ್ಲಿರುವ ಎಲ್ಲಾ ಪಡೆಗಳನ್ನೂ ರಾಜಕೀಯವಾಗಿ ಪ್ರಚೋದಿಸುವಷ್ಟು ಪ್ರಭಾವಶಾಲಿಗಳಾಗಿರುತ್ತಾರೆ. ಇದು ಪಾಕಿಸ್ತಾನದಲ್ಲಿರುವಂತಹ ದುಃಸ್ಥಿತಿಗೆ ನಮ್ಮನ್ನು ತಳ್ಳಿಬಿಡಬಹುದು. ಪಾಕಿಸ್ತಾನದಲ್ಲಿ ಒಂದು ಚುನಾಯಿತ ನಾಗರಿಕ ಸರ್ಕಾರ ಇದ್ದಾಗ್ಯೂ ಸೇನೆ ಮತ್ತೆಮತ್ತೆ ಅಧಿಕಾರ ಗಳಿಸಿ ಇಂದಿಗೂ ಆಳ್ವಿಕೆ ನಡೆಸುತ್ತಿದೆ.
ಭಾರತದ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಯೋಧರು ವೈವಿಧ್ಯಮಯ ಪ್ರದೇಶಗಳಿಂದ ಬಂದಿರುತ್ತಾರೆ. ಆದರೆ ಪಾಕಿಸ್ತಾನಿ ಸೇನೆ ಪ್ರಧಾನವಾಗಿ ಪಂಜಾಬಿನ ಸಿಬ್ಬಂದಿಯನ್ನು ಹೊಂದಿದೆ. ಭಾರತೀಯ ಪಡೆಗಳಲ್ಲಿ ಕಾಣುವ ಬಹುತ್ವ ಸೈನಿಕರು ದಂಗೆ ಏಳುವ ಅಪಾಯವನ್ನು ಸಾಕಷ್ಟು ಕಡಿಮೆಗೊಳಿಸುತ್ತದೆ. ಆದರೆ ರಾಜಕೀಯ ಸಿದ್ಧಾಂತ ಮತ್ತು ಮತೀಯವಾದದ ಭಾವೋದ್ವೇಗ ಕೂಡಿದರೆ ಇಂತಹ ಘಟನೆ ಸಂಭವಿಸಲು ಸಾಧ್ಯವಿದೆ.
ಪಾಕಿಸ್ತಾನಿ ಸೇನೆಯಂತಲ್ಲ ನಮ್ಮ ಪಡೆಗಳು. ಭಾರತೀಯ ರಕ್ಷಣಾ ಪಡೆಗಳು ಈ ವರೆಗೂ ರಾಜಕೀಯ ತಟಸ್ಥತೆಯನ್ನು ಕಾಪಾಡಿಕೊಂಡು ಬಂದಿವೆ.
ಭಾರತವೆಂಬ ಸರ್ವಧರ್ಮ ಸ್ಥಳದ ಸೌಹಾರ್ದತೆ ಉಳಿಯಲಿ…
ಭಾರತ ಸ್ವಾತಂತ್ರ್ಯ ಗಳಿಸಿದ ದಿನದಿಂದಲೂ ನಮ್ಮ ರಕ್ಷಣಾಪಡೆಗಳು ಧರ್ಮನಿರಪೇಕ್ಷ ಆಚರಣೆಗಳನ್ನು ಅಳವಡಿಸಿಕೊಂಡ ಹೆಮ್ಮೆ ಇದೆ. ಇದಕ್ಕೊಂದು ಉದಾಹರಣೆ ಪ್ರತಿಯೊಂದು ಮಿಲಿಟರಿ ನಿಲ್ದಾಣದಲ್ಲೂ “ಸರ್ವಧರ್ಮ ಸ್ಥಳ”ವನ್ನು (ಎಲ್ಲಾ ಮತಧರ್ಮಗಳ ತಾಣ) ಸ್ಥಾಪಿಸಿದ್ದು. ಈ ಪ್ರಾರ್ಥನಾ ಸ್ಥಳಗಳಲ್ಲಿ ನಡೆಯುವ ಪ್ರಾರ್ಥನೆಗಳು ಮತ್ತು ಹಬ್ಬಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಾವುದೇ ಹಿಂಜರಿಕೆಯಿಲ್ಲದೆ ಪಾಲ್ಗೊಳ್ಳುತ್ತಾರೆ. ಇಲ್ಲಿ ಮುಸ್ಲಿಮ್ ಅಧಿಕಾರಿಗಳು ಪೂಜೆಯಲ್ಲಿ ಮುಂದಿರುವುದು ಮತ್ತು ಹಿಂದು ಅಧಿಕಾರಿ ನಮಾಜ್ ನಲ್ಲಿ ಮುಂಚೂಣಿ ವಹಿಸಿರುವುದು ಅಸಹಜವೇನಲ್ಲ.
ಆದರೆ ಈ ಸೌಹಾರ್ದತೆಗೆ ಈಗ ಆಪತ್ತು ಬಂದಿದೆ. “ಸರ್ವಧರ್ಮ ಸ್ಥಳ”ಗಳು ಕೇವಲ ಪ್ರದರ್ಶನಕ್ಕಿಟ್ಟ ಜಾಗಗಳಾಗಿ ಬಿಡುವ ಅಪಾಯಕಾರಿ ಹಂತವನ್ನು ನಾವು ಇನ್ನೇನು ತಲುಪುತ್ತಿದ್ದೇವೆ. ಈ ಪರಿಸ್ಥಿತಿ ರಕ್ಷಣಾ ಪಡೆಗಳಿಗೂ ಒಳ್ಳೆಯದಲ್ಲ, ಭಾರತಕ್ಕೂ ಒಳಿತು ಉಂಟು ಮಾಡುವುದಿಲ್ಲ.
ಸಶಸ್ತ್ರ ಪಡೆಗಳು ತಮ್ಮ ಯೋಧರು ರಾಜಕೀಯ ತಟಸ್ಥತೆ ಕಳೆದುಕೊಳ್ಳುವುದನ್ನು ತಡೆಗಟ್ಟಲು ಅವುಗಳ ಮುಖ್ಯಸ್ಥರು ತುರ್ತು ಕ್ರಮ ಕೈಗೊಳ್ಳುವುದು ಅವಶ್ಯಕ. ರಾಜಕಾರಣಿಗಳೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು, ಈ ಆಯಕಟ್ಟಿನ ಸಂಸ್ಥೆ ಪ್ರಪಾತಕ್ಕೆ ಬೀಳಲು ಅವಕಾಶ ನೀಡಬಾರದು.
ಇದರ ಮೂಲ ಲೇಖನ scroll.in ನಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಕಟಗೊಂಡಿತ್ತು. ಲೇಖಕ ಸಂಜೀವ್ ಕೃಷನ್ ಸೂದ್ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಹೆಚ್ಚುವರಿ ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಅವರ ಟ್ವಿಟರ್ ಹ್ಯಾಂಡಲ್: @sood_2