ಆಗ್ರಾ: ಕಳೆದ ಜನವರಿಯಲ್ಲಿ ಮಹಾತ್ಮಾ ಗಾಂಧಿಯ ಭಾವಚಿತ್ರಕ್ಕೆ ಗುಂಡು ಹೊಡೆದು ರಾಷ್ಟ್ರಪಿತನನ್ನು ಅಪಮಾನಿಸಿ ಕುಖ್ಯಾತಿ ಪಡೆದಿದ್ದ ಅಖಿಲ ಭಾರತ ಹಿಂದೂ ಮಹಾಸಭಾದ ಪೂಜಾ ಶಕುನ್ ಪಾಂಡೆ ಈಗ 10ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಚಾಕುಗಳನ್ನು ವಿತರಿಸಿ ಸಾವರ್ಕರ್ ದಿನಾಚರಣೆ ಆಚರಿಸುವ ಮೂಲಕ ಮತ್ತೆ ವಿವಾದ ಸೃಷ್ಟಿಸಿದ್ದಾರೆ.
“ರಾಜಕೀಯದ ಹಿಂದೂಕರಣ ಮತ್ತು ಹಿಂದೂಗಳ ಸೈನಿಕೀಕರಣ ಸಾವರ್ಕರ್ ಅವರ ಕನಸಾಗಿತ್ತು, ಈಗ ಮೋದಿಯವರು ಲೋಕಸಭೆಯಲ್ಲಿ ಬಹುಮತ ಪಡೆಯುವುದರ ಮೂಲಕ ಮೊದಲನೆಯದನ್ನು ನೆರವೇರಿಸಿದ್ದಾರೆ, ನಾವು ಎರಡನೇ ಕನಸನ್ನು ನನಸು ಮಾಡಲು ಹೊರಟಿದ್ದೇವೆ. ಚಾಕುಗಳನ್ನು ವಿತರಿಸುವ ಮೂಲಕ ಹಿಂದೂ ಸೈನಿಕರನ್ನು ತಯಾರು ಮಾಡುತ್ತಿದ್ದೇವೆ,’’ ಎಂದು ಹಿಂದೂ ಮಹಾಸಭಾ ವಕ್ತಾರ ಅಶೋಕ್ ಪಾಂಡೆ ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ.
“ಹಿಂದೂಗಳು ತಮ್ಮ ದೇಶವನ್ನು ಹಾಗೂ ಸ್ವತಃ ತಮ್ಮನ್ನು ರಕ್ಷಿಸಿಕೊಳ್ಳಲು ಅಸ್ತ್ರವನ್ನು ಬಳಸುವ ಕಲೆಯನ್ನು ತಿಳಿಯಬೇಕಿದೆ,’’ ಎಂದೂ ಅಶೋಕ್ ಪಾಂಡೆ ಹೇಳಿದ್ದಾರೆ.
ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ, “ಹಿಂದೂಗಳನ್ನು ಪ್ರೇರೇಪಿಸುವುದು ಮತ್ತು ಅವರನ್ನು ಸಬಲಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಜೊತೆಗೆ ಚಾಕುಗಳನ್ನು ನೀಡಿದ್ದೇವೆ. ವಿದ್ಯಾರ್ಥಿಗಳು ಯಾವಾಗ ಹಾಗೂ ಹೇಗೆ ಕತ್ತಿಯನ್ನು ಬಳಸಬೇಕು ಎಂಬುದನ್ನು ತಿಳಿದಿರಬೇಕು, ಅದರಲ್ಲೂ ಯುವ ಸಮುದಾಯ ಕತ್ತಿಯ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳಬೇಕಿದೆ,’’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ಮಹಿಳೆಯರ ವಿರುದ್ಧ ಸಾಕಷ್ಟು ಅಪರಾಧ ಕೃತ್ಯಗಳು ನಡೆಯುತ್ತಿದೆ ಮತ್ತು ತಮ್ಮ ರಕ್ಷಣೆಗಾಗಿ ಯುವತಿಯರು ಚಾಕುಗಳನ್ನು ಬಳಸುವ ಕಲೆಯನ್ನು ಕಲಿಯಬೇಕಿದೆ. ವಿದ್ಯಾರ್ಥಿಗಳು ತಾವೂ ಸಬಲರು ಎಂದು ಆತ್ಮ,ಸ್ಥೈರ್ಯ ತುಂಬಿಕೊಳ್ಳಬೇಕು ಮತ್ತು ತನ್ನ ಕುಟುಂಬ, ಸಹೋದರಿ/ಮಕ್ಕಳನ್ನು ರಕ್ಷಿಸಿಕೊಳ್ಳುವಷ್ಟು ಸಬಲಳಾಗಿರಬೇಕು,’’ ಎಂದೂ ಪೂಜಾ ಶಕುನ್ ಪಾಂಡೆ ಹೇಳಿದ್ದಾರೆ.
ದೇಶ ಅಭಿವೃದ್ಧಿ ಹೊಂದಲು ವಿದ್ಯಾರ್ಥಿಗಳನ್ನು ವೈದ್ಯರಾಗಲು, ಇಂಜಿನಿಯರ್ ಗಳಾಗಲು, ವಿಜ್ಞಾನಿಗಳಾಗಲು ಉನ್ನತ ಶಿಕ್ಷಣಕ್ಕೆ, ಪ್ರೇರೇಪಿಸಬೇಕಾದ ಕಾಲದಲ್ಲಿ ಚಾಕುಗಳನ್ನು ಹಿಡಿದು ಗಲಭೆಕೋರರಾಗಲು, ಹಿಂಸೆಯೆಸಗಲು ಪ್ರಚೋದಿಸುವ ಹಿಂದು ಮಹಾಸಭಾದ ಆಚರಣೆಗೆ ಖಂಡನೆ ವ್ಯಕ್ತವಾಗಿದೆ.
Ugra hindugalu