ಸ್ತ್ರೀರೋಗ ತಜ್ಞೆಯಾಗಬೇಕು, ತನ್ನ ಸಮುದಾಯದ ಹಲವಾರು ಬಡ ಕುಟುಂಬಗಳಿಗೆ ಚಿಕಿತ್ಸೆ ನೀಡಬೇಕು, ಸಮಾಜದಲ್ಲಿ ತನ್ನ ಕುಟುಂಬ, ತನ್ನ ಸಮುದಾಯ ತಲೆ ಎತ್ತುವಂಥ ಸಾಧನೆ ಮಾಡಬೇಕು, ಮಾದರಿಯಾಗಿ ಸಮಾಜಕ್ಕೆ ಸೇವೆ ನೀಡಬೇಕು, ಹೀಗೆ ನೂರಾರು ಕನಸುಗಳನ್ನು ಹೊತ್ತ ಬುಡಕಟ್ಟು ಮುಸ್ಲಿಂ ಕುಟುಂಬದ ಯುವತಿ ಡಾ. ಪಾಯಲ್ ಸಲ್ಮಾನ್ ತಡ್ವಿ ಸ್ತ್ರೀರೋಗಶಾಸ್ತ್ರ ಅಧ್ಯಯನಕ್ಕೆ ಸೇರಿದ್ದಳು.
ಬಹುಶಃ ಆಕೆಗೆ ತಿಳಿದಿರಲಿಲ್ಲ ಎನಿಸುತ್ತದೆ ಅಲ್ಲೊಂದು ಕೊಳಕು ಸಮಾಜವಿದೆ, ಅದು ಜಾತಿ ಸಂಘರ್ಷದ ಕೊಳಕನ್ನು ಮೈಗೆಲ್ಲಾ ಮೆತ್ತುಕೊಂಡಿದೆ, ಸಮಾಜವನ್ನು ಕೊಳಕು ಮನಸ್ಸಿನಿಂದ ನೋಡುತ್ತಿದೆ. ಮುಂದೊಂದು ದಿನ ತನ್ನ ಕೊಲೆಗೆ ಇದೇ ಸಮಾಜ ನಾಂದಿ ಹಾಡುತ್ತದೆ ಎಂಬ ಕಲ್ಪನೆಯೂ ಪಾಯಲ್ ಗೆ ಇದ್ದ ಹಾಗಿಲ್ಲ. ಆದರೆ ಈ ಜಾತಿಯ ಹುಳು ಅಂಟಿಕೊಂಡ ಸಮಾಜ ಮುಗ್ಧ ಪಾಯಲ್ ಳನ್ನು ಬಲಿ ಪಡೆಯುವಲ್ಲಿ ಅಂತಿಮವಾಗಿ ಯಶಸ್ವಿಯಾಗಿದೆ. ಇಡೀ ದೇಶವೇ ತಲೆ ತಗ್ಗಿಸುವಂಥ ಘಟನೆ ನಡೆದಿದೆ.
ಇಂಥ ಅಮಾನವೀಯ ಘಟನೆ ಇಲ್ಲೆ ನಮ್ಮ ಸಮೀಪದ ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಘಟಿಸಿದೆ. ಎಂಥೆಂಥಾ ಕ್ರಾಂತಿಗಳು ನಡೆದು ಸಮಾಜದಲ್ಲಿ ಏನೆಲ್ಲಾ ಬದಲಾದರೂ ಈ ಹಾಳು ಜಾತಿ ವ್ಯವಸ್ಥೆ ಮಾತ್ರ ಇನ್ನೂ ಬದಲಾಗಿಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಡಾ. ಪಾಯಲ್ ಸಲ್ಮಾನ್ ತಡ್ವಿ ಹತ್ಯೆ.
ಘಟನೆ ಹಿನ್ನೆಲೆ
ಜಲಗಾಂವ್ ನ ಬುಡಕಟ್ಟು ಮುಸ್ಲಿಂ ಕುಟುಂಬದ ಪಾತಲ್ ಸಲ್ಮಾನ್ ತಡ್ವಿ ಸ್ತ್ರೀರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮೇ 1, 2018ರಂದು ಮುಂಬೈನ ಬಿವೈಎಲ್ ನಾಯರ್ ಆಸ್ಪತ್ರೆಯ ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿಗೆ ಸೇರಿದ್ದಳು. ಸಾಕಷ್ಟು ಕನಸು ಹೊತ್ತು ಕಾಲೇಜಿಗೆ ಸೇರಿದ್ದ ಪಾಯಲ್ ಆದಿವಾಸಿ ದಲಿತ ಕುಟುಂಬದವಳಾಗಿದ್ದರಿಂದ ಅವಳಿಗೆ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಕಿರುಕುಳ ಆರಂಭವಾಗಿತ್ತು. ಇದೇ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಡಾ. ಹೇಮಾ ಅಹುಜಾ, ಡಾ. ಭಕ್ತಿ ಮೆಹರ್ ಮತ್ತು ಡಾ. ಅಂಕಿತಾ ಖಂಡೇಲ್ ವಾಲ್ ಪಾಯಲ್ ಎಂಬುವರು ಪಾಯಲ್ ಗೆ ನಿತ್ಯ ಜಾತಿಯ ಹೆಸರಿನಲ್ಲಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದರು.
ಜಾತಿ ನಿಂದನೆಯ ಅತಿರೇಕ ಯಾವ ಮಟ್ಟದಲ್ಲಿತ್ತೆಂದರೆ ಪಾಯಲ್ ಬುಡಕಟ್ಟು ಸಮುದಾಯಕ್ಕೆ ಸೇರಿದ ಯುವತಿ ಆದ್ದರಿಂದ ಆಕೆ ಶಸ್ತ್ರಚಿಕಿತ್ಸೆ ಕೊಠಡಿಗೆ ಪ್ರವೇಶಿಸುವಂತಿರಲಿಲ್ಲ, ಹೆರಿಗೆ ಮಾಡಿಸಲು ಬಿಡುತ್ತಿರಲಿಲ್ಲ. ಅಷ್ಟೇ ಅಲ್ಲದೇ ವಾಟ್ಸಪ್ ಗ್ರೂಪ್ ನಲ್ಲಿ ಇರುವುದಕ್ಕೂ ಒಪ್ಪದೇ, ಅಲ್ಲೂ ಹಂಗಿಸಿ, ಅವಹೇಳನಕಾರಿಯಾಗಿ ನಿಂದಿಸಿದ್ದರು.
ಈ ಬಗ್ಗೆ ಪಾಯಲ್ ಆರಂಭದಿಂದಲೂ ತನ್ನ ತಾಯಿಯ ಬಳಿ ಸಮಸ್ಯೆ ಹಂಚಿಕೊಳ್ಳುತ್ತಿದ್ದಳು. ಜಾತಿಯ ಹೆಸರಿನಲ್ಲಿ ತನ್ನನ್ನು ಹೀನಾಯವಾಗಿ ನಿಂದಿಸುತ್ತಿದ್ದಾರೆ ಎಂದಿದ್ದಳು. ಮೇ 10ರಂದು ಸಹ ಪಾಯಲ್ ತಾಯಿಗೆ ಕರೆ ಮಾಡಿ ತನಗಾಗುತ್ತಿರುವ ಹಿಂಸೆಯ ಬಗ್ಗೆ ಸಾಕಷ್ಟು ನೊಂದು ನುಡಿದಿದ್ದಳು.
ಮರುದಿನ ಪಾಯಲ್ ತಾಯಿ ಆಬಿದಾ ತಡ್ವಿ ಕಾಲೇಜಿಗೆ ಭೇಟಿ ನೀಡಿ ಡೀನ್ ಗೆ ದೂರು ನೀಡಲು ಮುಂದಾದಾಗ ಅವರನ್ನು ಭೇಟಿ ಮಾಡಲು ಸಹ ಅವಕಾಶ ಮಾಡಿಕೊಟ್ಟಿರಲಿಲ್ಲ. ಬದಲಾಗಿ ವಿಭಾಗದ ಮುಖ್ಯಸ್ಥ ಡಾ. ಯಿ ಚಿಂಗ್ ಲಿಂಗ್ ಅವರನ್ನು ಭೇಟಿ ಮಾಡಲು ಸೂಚಿಸಿದ್ದರು, ಅವರ ಇಂಗ್ಲಿಷ್ ಭಾಷೆಯ ಜೋರು ಧ್ವನಿ ನನ್ನ ಧ್ವನಿಯನ್ನು ಅಡಗಿಸಿತ್ತು, ಅವರ ಯಾವೊಂದು ಮಾತು ನನಗೆ ಅರ್ಥವಾಗಲಿಲ್ಲ ಎಂದು ಪಾಯಲ್ ತಾಯಿ ನೋವಿನ ನುಡಿಗಳನ್ನಾಡಿದ್ದಾರೆ.
ನಂತರ ಮ್ಯಾನೇಜ್ ಮೆಂಟ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗಳ ಅಸಹನೀಯ ಸ್ಥಿತಿಗೆ ತಾಯಿಯ ಬಳಿ ಮರುಕ ಬಿಟ್ಟರೆ ಬೇರೆ ಯಾವುದೇ ಆಯ್ಕೆಯೇ ಇರಲಿಲ್ಲ. ಅಂತಿಮವಾಗಿ ಜಾತಿಯ ವಿಷಬೀಜಕ್ಕೆ ಎರಡನೇ ವರ್ಷದ ಸ್ತ್ರೀರೋಗ ಅಧ್ಯಯನ ಮಾಡುತ್ತಿದ್ದ ಪಾಯಲ್ ಎಂಬ ವೈದ್ಯೆಯ ಕನಸು ಚಿವುಟಲಾಗಿತ್ತು. ಮೇ 22ರಂದು ಪಾಯಲ್ ನಾಯರ್ ಆಸ್ಪತ್ರೆಯ ಕೊಠಡಿಯೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು.
ಪಾಯಲ್ ಸಾವಿಗೆ ನ್ಯಾಯ ಕೋರುವುದಷ್ಟೇ ತಾಯಿ ಆಬಿಡಾ ತಡ್ವಿ ಹಾಗೂ ಪತಿ ಸಲ್ಮಾನ್ ಗೆ ಇರುವ ಆಯ್ಕೆ. ಮೂವರೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಯಿ ಪತಿ ಇಬ್ಬರೂ ಒಕ್ಕೊರಲಿನಲ್ಲಿ ಆಗ್ರಹಿಸಿದ್ದರು.
ಇತ್ತ ಪಾಯಲ್ ಕೊಲೆಯ ನಂತರ ಹೇಮಾ ಅಹುಜಾ, ಭಕ್ತಿ ಮೆಹಾರ್ ಮತ್ತು ಅಂಕಿತಾ ಖಂಡಿಲ್ ವಾಲ್ ಮೂವರೂ ಆರೋಪಿಗಳು ತಲೆಮರೆಸಿಕೊಂಡಿದ್ದರು. ನಂತರ ಇವರಲ್ಲಿ ಓರ್ವ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಮೂವರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇವರಿಗೆ ಜಾಮೀನು ಸಹ ಸಿಗುವುದಿಲ್ಲ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ದೀಪಕ್ ಕುಂದಲ್ ಹೇಳಿದ್ದಾರೆ. ಮಹಾರಾಷ್ಟ್ರ ವೈದ್ಯರ ಒಕ್ಕೂಟ ಮೂರು ಜನರ ವೈದ್ಯಕೀಯ ಸದಸ್ಯತ್ವವನ್ನು ರದ್ದುಪಡಿಸಿತು.
ಘಟನೆ ಸಂಬಂಧ ವಿಭಾಗದ ಮುಖ್ಯಸ್ಥ ಡಾ. ಯಿ ಚಿಂಗ್ ಲಿಂಗ್ ಮತ್ತು ಸ್ತ್ರೀರೋಗಶಾಸ್ತ್ರ ಘಟಕದ ಮುಖ್ಯಸ್ಥ ಡಾ. ಎಸ್ ಡಿ ಶಿರೋಡ್ಕರ್ ಗೆ ನೋಟಿಸ್ ನೀಡಲಾಗಿದೆ. “ಕೆಲಸಕ್ಕೆ ಸಂಬಂಧಿತ ಕಿರುಕುಳ ನೀಡಲಾಗಿದೆ ಎಂದು ಆಂತರಿಕ ತನಿಖೆ ತಿಳಿಸುತ್ತದೆ. ಪಾಯಲ್ ಗೆ ಜಾತಿ ನಿಂದನೆ ಮಾಡಲಾಗಿದೆ ಎಂಬ ಪೋಷಕರು ಆರೋಪದ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ,” ಎಂದು ಮೂರು ಆರೋಪಿ ವೈದ್ಯರು ಮತ್ತು ಸ್ತ್ರೀರೋಗತಜ್ಞ ಯಿ ಚಿಂಗ್ ಲಿಂಗ್, ಭರ್ಮಲ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಗೆ ವರದಿ ನೀಡಲಾಗಿದೆ ಎಂದು ಆಸ್ಪತ್ರೆಯ ಡೀನ್ ಡಾ. ರಮೇಶ್ ಭರ್ಮಲ್ ತಿಳಿಸಿದ್ದಾರೆ. ಪಾಯಲ್ ಗೆ ಮೂವರೂ ಹಿರಿಯ ವಿದ್ಯಾರ್ಥಿಗಳು ಜಾತಿ ಹೆಸರಿನಲ್ಲಿ ನಿಂದಿಸಿದ್ದಾರೆ ಎನ್ನಲು ಹಲವು ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಮಹಾರಾಷ್ಟ್ರ ವೈದ್ಯ ವಿದ್ಯಾರ್ಥಿಗಳ ಸಂಘದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮುನಿಪಲ್ ನ ಉಪ ಆಯುಕ್ತರನ್ನು ಅಮಾನತುಗೊಳಿಸಲಾಗಿದೆ.
ರ್ಯಾಗಿಂಗ್ ವಿರೋಧಿ ಕಮಿಟಿಯಿಂದ ತನಿಖೆ
21 ಸದಸ್ಯರುಳ್ಳ ರ್ಯಾಗಿಂಗ್ ವಿರೋಧಿ ಕಮಿಟಿಯು ಪಾಯಲ್ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಬಿವೈಎಲ್ ನಾಯರ್ ಆಸ್ಪತ್ರೆ ಮತ್ತು ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ವೈದ್ಯರು, ಪ್ರೊಫೆಸರ್, ನರ್ಸ್ ಮತ್ತು ಇತರ ಸಿಬ್ಬಂದಿ ಸೇರಿದಂತೆ ಕನಿಷ್ಠ 30 ಜನರ ಹೇಳಿಕೆ ಪಡೆಯಲಾಗಿದೆ.
ಕಮಿಟಿಯು ಮೇ 25ರಂದು 30 ಜನರನ್ನು ಕನಿಷ್ಠ 8 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಿದೆ. ಆದರೆ ಮೂವರು ಆರೋಪಿಗಳು ನಾಪತ್ತೆಯಾಗಿರುವ ಹಿನ್ನೆಲೆ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಬದಲಾಗಿ ಹಾಸ್ಟಲ್ ಕೊಠಡಿಗಳ ಬಳಿ ನೋಟಿಸ್ ಅನ್ನು ಪೋಸ್ಟ್ ಮಾಡಿದ್ದೇವೆ. ಅವರ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದ್ದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಕಮಿಟಿ ತಿಳಿಸಿದೆ. ಕಮಿಟಿಯು ರ್ಯಾಗಿಂಗ್ ಸಂಬಂಧ ತನಿಖೆ ನಡೆಸಲಿದ್ದು, ಪೊಲೀಸರು ಜಾತಿ ನಿಂದನೆ ಕುರಿತು ತನಿಖೆ ನಡೆಸಲಿದ್ದಾರೆ ಎನ್ನಲಾಗಿದೆ.
ಸಾಂಸ್ಥಿಕ ಕಗ್ಗೊಲೆ
ಜನ ಸ್ವಾಸ್ಥ್ಯ ಅಭಿಯಾನ ಮತ್ತು ಮೆಡಿಕೋ ಫ್ರೆಂಡ್ ಸರ್ಕಲ್ ಎಂಬ ರಾಷ್ಟ್ರ ಮಟ್ಟದ ಆರೋಗ್ಯ ಸಂಬಂಧಿತ ನೆಟ್ ವರ್ಕ್ ಸಹ ಪಾಯಲ್ ಕೊಲೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಪಾಯಲ್ ಕೊಲೆಯನ್ನು ‘ಸಾಂಸ್ಥಿಕ ಕೊಲೆ’ ಎಂದು ಟೀಕಿಸಿದೆ.
‘ಸಾರ್ವಜನಿಕ ವಲಯದಲ್ಲಿ ಆರೋಗ್ಯ ಸಂಬಂಧಿತ ಸೇವೆ ನೀಡುವ ‘ಜನ ಸ್ವಾಸ್ಥ್ಯ ಅಭಿಯಾನ ಮತ್ತು ಮೆಡಿಕೋ ಫ್ರೆಂಡ್ ಸರ್ಕಲ್’ ನ ಸದಸ್ಯರು ಪಾಯಲ್ ಕೊಲೆಯನ್ನು ಖಂಡಿಸುತ್ತೇವೆ. ಆದಿವಾಸಿ ಕುಟುಂಬದಿಂದ ಬಂದ ಯುವತಿ ಪಾಯಲ್ ಸಮಾಜದ ಎಲ್ಲ ಕಟ್ಟುಪಾಡುಗಳನ್ನು ದಾಟಿ ತಮ್ಮ ಕುಟುಂಬದ ಮೊದಲ ವೈದ್ಯೆಯಾಗಬೇಕು, ತನ್ನ ಸಮುದಾಯದ ಮೊದಲ ಮಹಿಳಾ ಸ್ತ್ರೀರೋಗ ತಜ್ಞೆಯಾಗಬೇಕು ಎಂಬ ಕನಸಿನೊಂದಿಗೆ ಕಾಲೇಜಿಗೆ ಸೇರಿದ್ದಳು. ಆದರೆ ಇಂದು ಅವಳ ಸಾಂಸ್ಥಿಕ ಕಗ್ಗೊಲೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಜಾತಿ ಹೆಸರಿನಲ್ಲಿ ಮೇಲ್ಜಾತಿಯವರಿಂದ ದಲಿತ ಕುಟುಂಬದ ಪಾಯಲ್ ಗೆ ನೀಡಿರುವ ಕಿರುಕುಳ, ಚಿತ್ರಹಿಂಸೆಯಿಂದ ಪಾಯಲ್ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಂಬಂಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಹೇಳಿದೆ.
ಕಾಲೇಜಿನ ಆಡಳಿತ ಮಂಡಳಿ ಪೋಷಕರ ಯಾವುದೇ ದೂರುಗಳಿಗೂ ಸ್ಪಂದಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಇದು ಪಾಯಲ್ ಆತ್ಮಹತ್ಯೆಯಂಥ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ. ಇದೀಗ ಆಡಳಿತ ಮಂಡಳಿ ರ್ಯಾಗಿಂಗ್ ನಿಂದ ಆದ ಕೊಲೆ ಎಂದು ಬಿಂಬಿಸಲು ಯತ್ನಿಸುತ್ತಿದೆ.
ಅನಿಲ್ ಕುಮಾರ್, ಮೀನಾ, ರೋಹಿತ್ ವೇಮುಲಾ, ಪಾಯಲ್ ತಡ್ವಿ ರಂಥ ದಲಿತ, ಆದಿವಾಸಿ ಸಮುದಾಯದ ವಿದ್ಯಾರ್ಥಿಗಳದ್ದು ಸಾಂಸ್ಥಿಕ ಕೊಲೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಅದಕ್ಕೆ ಅಗತ್ಯ ಪುರಾವೆಗಳು ಸಹ ಇದೆ. ಇಂಥ ಕಾರಣಗಳೇ ಹಲವು ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರೆಸುವಲ್ಲಿ ಹಿಂದೇಟು ಹಾಕಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಪಾಯಲ್ ಕೊಲೆ ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ನಡೆಸಿ, ಶೀಘ್ರವೇ ನ್ಯಾಯ ದೊರಕಿಸಿಕೊಡಬೇಕು. ದೇಶದ ವಿವಿಧ ವೈದ್ಯಕೀಯ ಕಾಲೇಜು ಮತ್ತು ಆರೋಗ್ಯ ಸಂಬಂಧಿತ ಸಂಸ್ಥೆಗಳಲ್ಲಿ ಜಾತಿ ಸಂಬಂಧಿತ ಕಿರುಕುಳ ನಡೆಯುತ್ತಿದೆಯೇ ಎಂಬ ಬಗ್ಗೆ ಬೃಹತ್ ಮಟ್ಟದಲ್ಲಿ ಸಾರ್ವಜನಿಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಜಸ್ಟೀಸ್ ಫಾರ್ ಪಾಯಲ್
ನೊಂದು ಆತ್ಮಹತ್ಯೆಗೆ ಶರಣಾದ ಪಾಯಲ್ ಗೆ ನ್ಯಾಯ ಸಿಗಬೇಕು ಎಂದು ದೇಶಾದ್ಯಂತ ಆನ್ ಲೈನ್ ಅಭಿಯಾನ ಆರಂಭವಾಗಿದೆ. ಅಭಿಯಾನಕ್ಕೆ ಭಾರಿ ಬೆಂಬಲ ಸಹ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದೆ.
ಮಹಾರಾಷ್ಟ್ರ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಬಿವೈಎಲ್ ನಾಯರ್ ಆಸ್ಪತ್ರೆಗೆ ನೋಟಿಸ್ ನೀಡಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕಾಲೇಜಿಗೆ ಮಹಿಳಾ ಆಯೋಗ ಸೂಚನೆ ನೀಡಿದೆ.
ಒಟ್ಟಾರೆ ಹೂ ಅರಳುವ ಮುನ್ನವೇ ಬಾಡಿದೆ. ಕನಸು ನನಸಾಗುವ ಹಾದಿಯಲ್ಲೇ ಮಾರಣಹೋಮವಾಗಿದೆ, ಪಾಯಲ್ ಇನ್ನು ಜೀವಂತವಿಲ್ಲ. “ನನ್ನ ಮಗಳ ಸಾವು ವ್ಯರ್ಥವಾಗಬಾರದು, ನಮಗೆ ನ್ಯಾಯ ಬೇಕು. ನನ್ನ ಮಗಳಿಗೆ ಆದ ಗತಿ ಇನ್ನ್ಯಾರಿಗೂ ಆಗಬಾರದು,” ಎಂಬ ಪಾಯಲ್ ತಾಯಿ ಅಬಿದಾ ನೋವಿನ ಮಾತು ಮುಂದೆ ಇನ್ಯಾವ ತಾಯಿಯೂ ಆಡದಿರಲಿ. ನಮ್ಮ ಸಮಾಜ ಸ್ವಾಸ್ಥ್ಯ ಇಷ್ಟು ಹದಗೆಟ್ಟ ಪರಿಸ್ಥಿತಿಗೆ ಹೋಗದಿರಲಿ.
ಬರಹ: ಮೇಘಶ್ರೀ ದೇವರಾಜು