ಬಹುನಿರೀಕ್ಷಿತ ನರೇಂದ್ರ ಮೋದಿಯವರ ಎರಡನೇ ಅವಧಿಯ ಸಂಪುಟದಲ್ಲಿ ರಾಜ್ಯದ ಮೂವರು ಹಿರಿಯ ಸಂಸದರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಒಲಿದಿದೆ.
ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಿರುವ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಎರಡನೇ ಅವಧಿಯ ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಸಂಜೆ ಪ್ರಮಾಣವಚನ ಸ್ವೀಕರಿಸಿದ್ದು, ಅವರೊಂದಿಗೆ ಸಂಪುಟ ಸಹೋದ್ಯೋಗಿ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ಆ ಪೈಕಿ ರಾಜ್ಯದ ಮೂವರು ಹಿರಿಯ ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಮತ್ತೊಮ್ಮೆ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರಲ್ಲದೆ, ಇದೇ ಮೊದಲ ಬಾರಿಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಹಾಗೂ ಬೆಳಗಾವಿ ಸಂಸದ ಸುರೇಶ್ ಅಂಗಡಿ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೋಷಿ ಅವರು ಕ್ಯಾಬಿನೆಟ್ ದರ್ಜೆ ಮತ್ತು ಅಂಗಡಿ ಅವರಿಗೆ ರಾಜ್ಯ ಸಚಿವ ದರ್ಜೆ ನೀಡಲಾಗಿದೆ. ಜೊತೆಗೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರು ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಅವರನ್ನೂ ಸೇರಿ ಒಟ್ಟು ನಾಲ್ವರು ಮೋದಿ ಸಂಪುಟದಲ್ಲಿ ಹಿರಿಯ ಸಚಿವರಾಗಿ ಸ್ಥಾನ ಪಡೆದಂತಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ವಿಜೃಂಭಣೆಯ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಧಾನಿ ಹಾಗೂ ಅವರ ಸಂಪುಟ ಸದಸ್ಯರಿಗೆ ಗೌಪ್ಯತಾ ಪ್ರತಿಜ್ಞಾ ವಿಧಿ ಮತ್ತು ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ರಾಷ್ಟ್ರಗಳ ಗಣ್ಯರು ಹಾಜರಿದ್ದರು.
ಇದೇ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ನಿರೀಕ್ಷೆಯಂತೆ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ಪಿಯೂಶ್ ಗೋಯಲ್, ರವಿಶಂಕರ್ ಪ್ರಸಾದ್, ಅರ್ಜುನ್ ಮುಂಡಾ, ಡಾ ಹರ್ಷವರ್ಧನ್, ಪ್ರಕಾಶ್ ಜಾವ್ಡೇಕರ್, ಧರ್ಮೇಂದ್ರ ಪ್ರಧಾನ್ ಮತ್ತಿತರರು ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟು 24 ಮಂದಿ ಕ್ಯಾಬಿನೆಟ್ ಸಚಿವರಾಗಿ, 9 ಮಂದಿ ರಾಜ್ಯ ಸಚಿವರಾಗಿ ಸ್ವತಂತ್ರ ಖಾತೆಯನ್ನು ಹೊಂದಲಿದ್ದಾರೆ.
ಆ ಪೈಕಿ, ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದು ಅಚ್ಚರಿಯ ಬೆಳವಣಿಗೆಯಾಗಿದ್ದು, ಅವರನ್ನು ವಿದೇಶಾಂಗ ವ್ಯವಹಾರ ಸಚಿವರನ್ನಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಅದೇ ವೇಳೆ, ಅನಾರೋಗ್ಯದ ಕಾರಣದಿಂದ ಲೋಕಸಭಾ ಚುನಾವಣೆ ಕಣದಿಂದ ಹಿಂದೆ ಸರಿದಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪ್ರಮಾಣ ವಚನ ಸ್ವೀಕರಿಸಿಲ್ಲ ಮತ್ತು ಅವರು ವಿಐಪಿ ಪ್ರೇಕ್ಷಕರ ಸಾಲಿನಲ್ಲಿ ಆಸೀನರಾಗಿದ್ದರು ಎಂಬುದು ಗಮನಾರ್ಹ.
ಕಳೆದ ಬಾರಿಯ ಸಂಪುಟದಲ್ಲಿ ಕೂಡ ರಾಜ್ಯದಿಂದ ದಿವಂಗತ ಅನಂತಕುಮಾರ್, ಡಿ ವಿ ಸದಾನಂದ ಗೌಡ, ಅನಂತ ಕುಮಾರ ಹೆಗಡೆ ಸಚಿವರಾಗಿದ್ದರು. ಕಳೆದ ಬಾರಿ ರಾಜ್ಯದಿಂದ 17 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೆ, ಈ ಬಾರಿ 25 ಸಂಸದರು ಆಯ್ಕೆಯಾಗಿದ್ದಾರೆ. ಆದಾಗ್ಯೂ ರಾಜ್ಯದ ಸಂಪುಟ ಪ್ರಾತಿನಿಧ್ಯದಲ್ಲಿ ಸದ್ಯ ಯಾವುದೇ ಬದಲಾವಣೆ ಆಗಿಲ್ಲ. ಮುಖ್ಯವಾಗಿ ಕಳೆದ ಬಾರಿ ಕೌಶಲಾಭಿವೃದ್ಧಿ ಸಚಿವರಾಗಿದ್ದ ಬಿಜೆಪಿಯ ಫೈರ್ ಬ್ರಾಂಡ್ ಸಂಸದ ಅನಂತಕುಮಾರ ಹೆಗಡೆಗೆ ಈ ಬಾರಿ ಸಂಪುಟ ಸ್ಥಾನದ ನಿರೀಕ್ಷೆ ಇತ್ತು. ಆದರೆ, ಅದು ನಿಜವಾಗಿಲ್ಲ ಎಂಬುದು ಹೊಸ ಬೆಳವಣಿಗೆ.