ಒಂದು ಕಡೆ ಮಾಧ್ಯಮಗಳು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭವನ್ನು “ಮೋದಿ ಪಟ್ಟಾಭಿಷೇಕ” ಎಂದೆಲ್ಲಾ ಕರೆದು ಪ್ರಜಾಪ್ರಭುತ್ವಕ್ಕೆ ಅವಮಾನಿಸುತ್ತಿದ್ದಾಗಲೇ ಮತ್ತೊಂದು ಕಡೆ ಹ್ಯಾಕರುಗಳು ಬಿಜೆಪಿಯದ್ದೇ ತಟ್ಟೆಯಲ್ಲಿ (ವೆಬ್ ಸೈಟ್) ವೈವಿಧ್ಯಮಯ ‘ಬೀಫ್ ಭೋಜನ’ ಉಣಬಡಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೇ 30ರ ಸಂಜೆ ಎರಡನೇ ಬಾರಿಗೆ ನವದೆಹಲಿಯ ರಾಷ್ಟ್ರಪತಿ ಭವನದ ಮೊಗಸಾಲೆಯಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಿತು. ಇನ್ನೂ ಪ್ರಮಾಣವಚನ ಸ್ವೀಕಾರದ ಸಡಗರ ಸಮಾರಂಭಗಳು ಮುಗಿದೇ ಇರಲಿಲ್ಲ, ಅಷ್ಟೊತ್ತಿಗಾಗಲೇ ಭಾರತೀಯ ಜನತಾ ಪಕ್ಷದ ದೆಹಲಿ ಘಟಕದ ಅಧಿಕೃತ ವೆಬ್ ಸೈಟನ್ನು ಹ್ಯಾಕ್ ಮಾಡಲಾದ ಸುದ್ದಿ ಹೊರಬಿದ್ದಿದೆ.
ಬಿಜೆಪಿಯ ದೆಹಲಿ ಘಟಕದ ಅಧಿಕೃತ ಅಂತರ್ಜಾಲತಾಣದ ಹಲವು ಪೇಜ್ ಗಳಲ್ಲಿ ಅನೇಕ ಮೂಲ ವಿಷಯಗಳನ್ನು ತೆಗೆದುಹಾಕಿ ಅವುಗಳ ಬದಲಿಗೆ ಬೀಫ್ (ದನದ ಮಾಂಸ) ಖಾದ್ಯಗಳ ಹೆಸರುಗಳನ್ನು ಹಾಕಿರುವ ಹ್ಯಾಕರ್ ಗಳು, Shadow_V1P3R ಇಂದ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ ಎಂಬ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ. ಬಿಜೆಪಿಯ ನಾಯಕತ್ವ, ಇತಿಹಾಸ ಮತ್ತು ಸಂವಿಧಾನದ ಪುಟಗಳಲ್ಲಿ ಬಿಜೆಪಿ ಬದಲಿಗೆ ಬೀಫ್ ಪದ ಸೇರಿಸಲಾಗಿದೆ.
ಬೀಫ್ ಬಿಜೆಪಿ…
ವೆಬ್ ಸೈಟ್ ಅಥವಾ ಅಂತರ್ಜಾಲತಾಣದ ಮುಖಪುಟದಲ್ಲಿ ವೀಕ್ಷಕರಿಗೆ ಪ್ರಮುಖ ಮಾಹಿತಿಗಳನ್ನು ನೀಡುವ ಪಟ್ಟಿಯನ್ನು ‘ನ್ಯಾವಿಗೇಶನ್ ಬಾರ್’ ಎನ್ನಲಾಗುತ್ತದೆ. ಬಿಜೆಪಿ ವೆಬ್ ಸೈಟಿನ ಈ ನ್ಯಾವಿಗೇಶನ್ ಬಾರ್ ಗೆ ತಿದ್ದುಪಡಿ ಮಾಡಿರುವ ಹ್ಯಾಕರ್ ಗಳು ಹಲವು ಕಡೆಗಳಲ್ಲಿ BJP ಎಂಬ ಪದದ ಬದಲಿಗೆ BEEF ಎಂದು ಸೇರಿಸಿದ್ದಾರೆ. ಉದಾಹರಣೆಗೆ, ಬಿಜೆಪಿ ವೆಬ್ ಸೈಟ್ ನಲ್ಲಿದ್ದ ‘About BJP’ ಎಂಬ ಪದಗಳನ್ನು ಹ್ಯಾಕರ್ ಗಳು ‘About BEEF’ ಎಂದೂ ಬದಲಿಸಿದ್ದಾರೆ ಎನ್ನಲಾಗಿದೆ. ಅಂದರೆ ಭಾರತೀಯ ಜನತಾ ಪಕ್ಷದ ಕುರಿತು ವಿವಿಧ ಮಾಹಿತಿಗಳನ್ನು ಹಂಚಿಕೊಂಡಿರುವ ಬಗ್ಗೆ ವೀಕ್ಷಕರಿಗೆ ತಿಳಿಸುವ ‘ಬಿಜೆಪಿಯ ಬಗ್ಗೆ’ ಎಂದಿದ್ದ ಸ್ಥಳದಲ್ಲಿ ‘ದನದ ಮಾಂಸದ ಬಗ್ಗೆ’ಎಂದು ಬದಲಿಸಿ, ಬಿಜೆಪಿಯ ಗೋ-ರಾಜಕಾರಣವನ್ನು ತೀಕ್ಷ್ಣವಾಗಿ ಅಣಕಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಹಾಗೆಯೇ BJP HISTORY ಯ ಜಾಗದಲ್ಲಿ BEEF HISTORY ಎಂದು ಬದಲಿಸಲಾಗಿದೆ. ಬಿಜೆಪಿ -ಸಂಘ ಪರಿವಾರ ಹುಟ್ಟಿದಾಗಿನಿಂದಲೂ ಮಾಡಿಕೊಂಡು ಬಂದಿರುವಂತಹ ಗೋಮಾಂಸ ಸಂಬಂಧಿತ ರಾಜಕಾರಣಕ್ಕೆ ಬಿಜೆಪಿಯ ಇತಿಹಾಸವನ್ನು ಸಮೀಕರಿಸಲಾಗಿದೆ ಎಂದೂ ಅರ್ಥೈಸಲಾಗುತ್ತಿದೆ. ಮುಖಪುಟದ ಬೇರೆ ಯಾವುದೇ ವಿಷಯದ ಮೇಲೂ ಹ್ಯಾಕರ್ ಗಳು ದಾಳಿ ಮಾಡಿಲ್ಲವೆಂದೂ ಅವು ಯಥಾಸ್ಥಿತಿಯಲ್ಲಿರುವುದಾಗಿ ವರದಿಯಾಗಿದೆ.
ಬಿಜೆಪಿ ವೆಬ್ ಸೈಟ್ ನಲ್ಲಿ ಬೀಫ್ ಖಾದ್ಯಗಳ ದರ್ಬಾರ್!
ಅಷ್ಟೇ ಅಲ್ಲ, Beef Items ಎಂದು ಸೃಷ್ಟಿಸಿ ಅದರಲ್ಲಿ ಬೀಫ್ ನ (ದನದ ಮಾಂಸ) ವಿವಿಧ ಖಾದ್ಯಗಳನ್ನು ಹೆಸರಿಸಲಾಗಿದೆ. ಅವುಗಳ ಚಿತ್ರಗಳನ್ನೂ ಬಿಜೆಪಿಯ ವೆಬ್ ಸೈಟ್ ಮೇಲೆ ಬಿತ್ತರಿಸಲಾಗಿದೆ. ಬೀಫ್ ಫ್ರೈ, ಬೀಫ್ ಖೀಮಾ, ಬೀಫ್ ಚಿಲ್ಲಿ ಕರಿ, ಸೌತ್ ಇಂಡಿಯನ್ ಬೀಫ್ ಕರಿ, ಇತ್ಯಾದಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ.
ಬೀಫ್ ನಾಯಕರು…!
“BJP Leadership” ಪುಟವನ್ನು “BEEF Leadership” ಎಂದು ಕರೆಯಲಾಗಿದೆ. ಇದಕ್ಕೆ ಮಾಂಸದ ತುಂಡಿನ ಚಿತ್ರವನ್ನು ಜೋಡಿಸಲಾಗಿದೆ. ಬಿಜೆಪಿ ನಾಯಕತ್ವವನ್ನು “ಗೋಮಾಂಸದ ನಾಯಕತ್ವ”ಕ್ಕೆ ಹೋಲಿಸಲಾಗಿದ್ದು, ಬಿಜೆಪಿ ಮುಖಂಡರು ಬಡವರ ಮತ್ತು ಬಹುಜನರ ಆಹಾರವಾಗಿರುವ ದನದ ಮಾಂಸವನ್ನು ತಮ್ಮ ಮತೀಯವಾದಿ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಇದು ಸೂಚಿಸುವಂತೆ ಕಾಣುತ್ತದೆ.
ರಾಜಕೀಯ ಸಂದೇಶವೇ ಈ ಹ್ಯಾಕಿಂಗ್??
ಈ ಬಾರಿ ಹ್ಯಾಕ್ ಮಾಡಿರುವವರು ಕೇವಲ ಮೋದಿ ಸರ್ಕಾರಕ್ಕೆ ಮಾತ್ರವಲ್ಲ, ಭಾರತೀಯ ಜನತಾ ಪಕ್ಷಕ್ಕೂ ಒಂದು ರಾಜಕೀಯ ಸಂದೇಶ ನೀಡಿದಂತೆ ತೋರುತ್ತದೆ. 2014ರಲ್ಲಿ ಮೋದಿ ನೇತೃತ್ವದ ಸರ್ಕಾರ 16ನೇ ಲೋಕಸಭೆಯಲ್ಲಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಸ್ವಯಂಘೋಷಿತ ಗೋರಕ್ಷಕ ಪಡೆಗಳ ಹಿಂಸಾಚಾರ ಆರಂಭವಾಯಿತು. ಬಿಜೆಪಿ – ಸಂಘ ಪರಿವಾರದ ಗೋರಾಜಕಾರಣಕ್ಕೆ ಸಾಕಷ್ಟು ಅಮಾಯಕ ಹೆಣಗಳು ಉರುಳಿದವು, ಭಾರತ ನೆತ್ತರಲ್ಲಿ ನೆಂದುಹೋಯಿತು. ಅದೇ ದುಷ್ಕೃತ್ಯಗಳನ್ನೇ ಮುಂದುವರಿಸಿದ ಬಿಜೆಪಿ ಇದೀಗ 17ನೇ ಲೋಕಸಭಾ ಚುನಾವಣೆಗಳಲ್ಲೂ ಗೆಲುವು ಸಾಧಿಸಿದೆ. ಫಲಿತಾಂಶ ಹೊರಬಿದ್ದ ದಿನವೇ, ಅಂದರೆ ಮೇ 23ರಂದೇ ಮತ್ತೆ ಗೋರಾಜಕಾರಣ ರಕ್ತಪಾತಕ್ಕೆ ಕಾರಣವಾಗಿ, ಪ್ರತಿದಿನವೂ ಗೋವಿನ ಹೆಸರಿನಲ್ಲಿ ಒಂದಲ್ಲಾ ಒಂದು ಕೊಲೆ ನಮ್ಮ ದೇಶದಲ್ಲಿ ನಡೆಯುತ್ತಲೇ ಇದೆ, ಅದೂ ಅತಿ ಸಹಜವೆನಿಸಿಬಿಡುವಷ್ಟು ಮಟ್ಟಿಗೆ.
ಮೋದಿ ನಿರ್ಮಿಸಿದ ಬೀಫ್ ಭಾರತ?
ಆದರೆ ಈ ನಡುವೆ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ, ಅಲ್ಲಿಂದಲೇ ಅತಿಹೆಚ್ಚು ದನದ ಮಾಂಸ ರಫ್ತಾಗುತ್ತಿದ್ದುದು ಹಾಗೂ ಕೇರಳ, ಗೋವಾ ಮತ್ತು ಈಶಾನ್ಯ ರಾಜ್ಯಗಳ ಬಿಜೆಪಿ ನಾಯಕರು ಸಾರ್ವಜನಿಕವಾಗಿಯೇ ದನದ ಮಾಂಸದ ಪರವಾಗಿ ಮಾತನಾಡುವವರು. ಮೋದಿ ಸರ್ಕಾರದಲ್ಲಿ ಭಾರತ ಬೀಫ್ ರಫ್ತಿನಲ್ಲಿ ಮುಂಚೂಣಿ ಸ್ಥಾನ ಪಡೆದು ಬೀಫ್ ಭಾರತ ಎಂಬ ಹೆಗ್ಗಳಿಕೆಯನ್ನೂ ಗಳಿಸಿತ್ತು!
ಆದ್ದರಿಂದಲೇ ಆಕಳೆಂಬ ಮುಗ್ಧ ಪ್ರಾಣಿಯ ಹೆಸರಿನಲ್ಲಿ, ಒಂದು ವಿಭಾಗದ ಜನರ ಭಾವನೆಗಳನ್ನು ಪ್ರಚೋದಿಸಿ ಸಮಾಜದ ಇನ್ನೊಂದು ವಿಭಾಗದ ವಿರುದ್ಧ ಎತ್ತಿಕಟ್ಟಿ ಬಿಜೆಪಿ ಹಿಂಸೆಯ, ದ್ವೇಷದ ರಾಜಕಾರಣ ಮಾಡುತ್ತಿರುವುದರ ವಿರುದ್ಧ ಈ ದಿನ ಒಂದು ಸ್ಪಷ್ಟ ಸಂದೇಶ ನೀಡಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೋದಿಯವರು ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲೇ ವ್ಯಂಗ್ಯದ ರೂಪದಲ್ಲಿ ನಡೆಸಲಾಗಿರುವ ಹ್ಯಾಕಿಂಗ್ ನ ಮೂಲಕವೇ, ಅವರ ಪಕ್ಷದ ಸಮಾಜ ವಿಭಜಕ ರಾಜಕೀಯ ನೀತಿಯ ವಿರುದ್ಧ ಅವರನ್ನು ಪುನಃ ಎಚ್ಚರಿಸಿದಂತೆ ಕಾಣುತ್ತಿದೆ.
ಹ್ಯಾಕ್ ಮಾಡಿದ್ದು ಯಾರು?
ಈ ಹಿಂದೆಯೂ ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿರುವ ಹ್ಯಾಕರ್ ಫ್ರೆಂಚ್ ಮೂಲದ ಎಲಿಯಟ್ ಅಲ್ಡರ್ ಸನ್ ಎಂಬ ಟ್ವಿಟರ್ ಅಕೌಂಟ್ ಹೊಂದಿರುವ ಹ್ಯಾಕರ್ ಎನ್ನಲಾಗಿದೆ. ಈ ಹ್ಯಾಕರ್ ತಮ್ಮ ಟ್ವಿಟರ್ ನಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ.
Dear @BJP4India,
Your website has been hacked. How long will you take to restore the site this time?
Yours faithfully 😘 pic.twitter.com/xDSwIwWL39
— Elliot Alderson (@fs0c131y) May 30, 2019
ಬೇರೊಬ್ಬರ ಕಂಪ್ಯೂಟರ್ ಅಥವಾ ಅಂತರ್ಜಾಲತಾಣದಲ್ಲಿ ಅವರ ಅನುಮತಿಯಿಲ್ಲದೆ ಒಳ ಪ್ರವೇಶಿಸುವುದನ್ನು ಹ್ಯಾಕಿಂಗ್ ಎನ್ನಲಾಗುತ್ತದೆ. ಇದನ್ನು ಮಾಡುವವರನ್ನು ಹ್ಯಾಕರ್ ಗಳೆಂದು ಕರೆಯಲಾಗುತ್ತದೆ. ಇಂದು ಸರ್ಕಾರದ ದಾಖಲೆಗಳು, ಕಡತಗಳು, ರಾಷ್ಟ್ರದ ಆಂತರಿಕ ಭದ್ರತೆಗೆ ಸಂಬಂಧಪಟ್ಟ ಅನೇಕ ಗೌಪ್ಯ ಮಾಹಿತಿಗಳೆಲ್ಲವೂ ಕಂಪ್ಯೂಟರ್ ಗಳಲ್ಲಿ ಸಂಗ್ರಹವಾಗಿರುವುದರಿಂದ ಹ್ಯಾಕ್ ಮಾಡಿದರೆ ಅಂತಹವುಗಳ ಗೌಪ್ಯತೆ ಮತ್ತು ಸುರಕ್ಷತೆಗೆ ತೊಂದರೆಯುಂಟಾಗುತ್ತದೆ. ಹ್ಯಾಕಿಂಗ್ ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ಅತ್ಯಂತ ಆತಂಕಕಾರಿ.
ಇದೆಂತ ಡಿಜಿಟಲ್ ಇಂಡಿಯಾ? ಇವರೆಂತ ಚೌಕೀದಾರ್?
ಬಿಜೆಪಿ ಜಾಲತಾಣವು ಹ್ಯಾಕಿಂಗ್ ಗೆ ಒಳಗಾಗುತ್ತಿರುವುದು ಇದೇನೂ ಮೊದಲಲ್ಲ. ಚುನಾವಣೆಗೆ ಮುನ್ನ ಬಿಜೆಪಿಯ ಮುಖ್ಯ ಜಾಲತಾಣವನ್ನೇ ಹ್ಯಾಕಿಂಗ್ ಮಾಡಲಾಗಿತ್ತು. ಅದನ್ನು ಪುನರಚಿಸಿಕೊಳ್ಳಲು ಬಿಜೆಪಿಗೆ ನಾಲ್ಕು ತಿಂಗಳೇ ಬೇಕಾಯಿತು. ಈ ಹ್ಯಾಕಿಂಗ್ ಮೋದಿಯವರ ಜನಪ್ರಿಯ ಘೋಷಣೆ ಡಿಜಿಟಲ್ ಇಂಡಿಯಾವನ್ನೂ ಅಣಕಿಸುವ ಜೊತೆಗೆ ಅವರ ಹೆಸರಿನೊಂದಿಗೆ ತಗುಲಿಸಿಕೊಂಡಿದ್ದ “ಚೌಕಿದಾರ್” ಹೆಸರನ್ನೂ ಅಣಕಿಸುತ್ತದೆ. ತಮ್ಮ ಪಕ್ಷದ ವೆಬ್ ಸೈಟನ್ನೇ ಸುರಕ್ಷಿತವಾಗಿರಿಸಿಕೊಳ್ಳದೇ ಇಡೀ ದೇಶದ ಜನರ ಮಾಹಿತಿಗಳನ್ನು ಹೇಗೆ ರಕ್ಷಿಸಲು ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ.