ಹಣಕಾಸು ಮಾರುಕಟ್ಟೆ ಮತ್ತು ಷೇರುಪೇಟೆಯ ನಿರೀಕ್ಷೆಯನ್ನು ತಳೆಕೆಳಗು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಣಕಾಸು ಖಾತೆಯನ್ನು ನಿರ್ಮಲಾ ಸೀತಾರಾನ್ ಅವರಿಗೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಮೋದಿ ಸಂಪುಟ ಸೇರಿರುವ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಹಣಕಾಸು ಖಾತೆ ನೀಡಲಾಗುತ್ತದೆ ಎಂಬ ಕಾರಣಕ್ಕೆ ಷೇರುಪೇಟೆಯಲ್ಲಿ ಗೂಳಿ ಓಟ ಮಿಂಚಿನ ವೇಗದಲ್ಲಿ ಸಾಗಿತ್ತು. ಆದರೆ, ಅಮಿತ್ ಷಾ ಅವರಿಗೆ ಹಣಕಾಸು ಖಾತೆ ನೀಡುತ್ತಿಲ್ಲ ಎಂಬ ಸುದ್ದಿ ಹೊರಬಿದ್ದ ಕೂಡಲೇ ಷೇರುಪೇಟೆ ಅಷ್ಟೇ ಮಿಂಚಿನ ವೇಗದಲ್ಲಿ ಕುಸಿದಿದೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಮುಂದಿನ ಯೋಜನೆಗಳನ್ನು ಪ್ರಕಟಿಸಿದ ನಂತರ ಮಾರುಕಟ್ಟೆ ಸ್ಥಿರತೆ ಕಂಡುಕೊಳ್ಳುತ್ತದೆ.
ಅರ್ಥಶಾಸ್ತ್ರ ಅತಿ ಹೆಚ್ಚಿನ ಅಧ್ಯಯನ ಮಾಡಿರುವ ನಿರ್ಮಲಾ ಸೀತಾರಾಮನ್ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ. ಮೋದಿ ಯುಗದಲ್ಲಿ ತ್ವರಿತವಾಗಿ ಮೇರುಮಟ್ಟಕ್ಕೆ ಏರಿದ್ದಾರೆ.
ಪಕ್ಷದ ವಕ್ತಾರೆ ಸ್ಥಾನದಿಂದ ಮೋದಿ ಸಂಪುಟದಲ್ಲಿ ವಾಣಿಜ್ಯ ಖಾತೆಯನ್ನು ಸ್ವತಂತ್ರವಾಗಿ ನಿರ್ವಹಿಸಿ ನಂತರ ಕ್ಯಾಬಿನೆಟ್ ದರ್ಜೆಗೇರಿ ಯಶಸ್ವಿಯಾಗಿ ನಿರ್ವಹಿಸಿದ್ದರು. ಮೋದಿ ಆಪ್ತ ಅರುಣ್ ಜೇಟ್ಲಿ ಅವರಿಗೆ ಹಣಕಾಸು ಖಾತೆ ಜತೆಗೆ ರಕ್ಷಣಾ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ರಕ್ಷಣಾ ಖಾತೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ವಹಿಸಲಾಗಿತ್ತು. ನಿರ್ಮಲಾ ಯಶಸ್ವಿಯಾಗಿ ನಿರ್ವಹಿಸಿದರು. ಆ ಯಶಸ್ವಿ ನಿರ್ವಹಣೆಯಿಂದಾಗಿಯೇ ಈಗ ಹಣಕಾಸು ಖಾತೆಯನ್ನು ಪಡೆದಿದ್ದಾರೆ. ಆ ಲೆಕ್ಕದಲ್ಲಿ ಮೋದಿ ಸಚಿವ ಸಂಪುಟದಲ್ಲಿ ಅತಿ ಕಡಮೆ ಅವಧಿಯಲ್ಲಿ ತ್ವರಿತವಾಗಿ ಉನ್ನತಸ್ಥಾನಕ್ಕೇರಿದ ಹೆಗ್ಗಳಿಕೆ.
ಈ ಹಿಂದೆ ಇಂದಿರಾಗಾಂಧಿ ಅವರು ಹಣಕಾಸು ಖಾತೆಯನ್ನು ಹೊಂದಿದ್ದರು. ಆದರೆ, ಅವರು ಪ್ರಧಾನಿಯಾಗಿದ್ದುಕೊಂಡು ಹಣಕಾಸು ಖಾತೆಯನ್ನು ಹೊಂದಿದ್ದರು. ನಿರ್ಮಲಾ ಸೀತರಾಮನ್ ಅವರು ಪೂರ್ಣವಾಗಿ ಹಣಕಾಸು ಖಾತೆ ನಿರ್ವಹಿಸುತ್ತಿರುವ ಮೊದಲ ಮಹಿಳೆಯಾಗಿದ್ದಾರೆ. ನಿರ್ಮಲಾ ಅವರಿಗೆ ಹಣಕಾಸು ಖಾತೆ ನೀಡಿರುವುದು ಹಣಕಾಸು ಮಾರುಕಟ್ಟೆ, ಷೇರುಪೇಟೆ ಅಷ್ಟೇ ಅಲ್ಲಾ ರಾಜಕೀಯ ವಲಯದಲ್ಲೂ ಅಚ್ಚರಿ ಮೂಡಿಸಿದೆ. ಅವರನ್ನು ರಕ್ಷಣಾ ಸಚಿವರನ್ನಾಗಿಯೇ ಮುಂದುವರೆಸುವ ಸಾಧ್ಯತೆ ಬಗ್ಗೆ ಬಹುತೇಕ ವಿಶ್ಲೇಷಕರು, ಮಾಧ್ಯಮಗಳು ಅಂದಾಜಿಸಿದ್ದವು.
ಹಣಕಾಸು ಖಾತೆಯ ಹೊಣೆ ಹೊತ್ತಿರುವ ನಿರ್ಮಲಾ ಸೀತಾರಾಮನ್ ಎದುರಿಗೆ ಹಲವು ಸವಾಲುಗಳಿವೆ. ನಿರುದ್ಯೋಗ ಸಮಸ್ಯೆ, ಉತ್ಪಾದಕ ವಲಯ, ನಿರ್ಮಾಣ ವಲಯ, ಸೇವಾ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿನ ಹಿನ್ನಡೆಯಿಂದಾಗಿ ಇಡೀ ಬೃಹದಾರ್ಥಿಕತೆಯು ಹಿಂಜರಿತದತ್ತ ಸಾಗಿದೆ. 2019ನೇ ಸಾಲಿನ ಜಿಡಿಪಿಯು ಕಳೆದ ಐದು ವರ್ಷಗಳಲ್ಲೇ ಅತಿ ಕೆಳಮಟ್ಟಕ್ಕೆ ಅಂದರೆ ಶೇ.6- 6.2ರ ಮಟ್ಟಕ್ಕೆ ಕುಸಿಯುವ ಮುನ್ನಂದಾಜು ಮಾಡಲಾಗಿದೆ. ವಿತ್ತೀಯ ಕೊರತೆ ಗುರಿ ಸಾಧಿಸಲಾಗಿಲ್ಲ. ಅಲ್ಲದೇ ಚಾಲ್ತಿ ಖಾತೆ ಕೊರತೆಯೂ ಹಿಗ್ಗಿದೆ. ಈ ನಡುವೆ ನಮ್ಮ ರಫ್ತು ತಗ್ಗಿ ಆಮದು ಹಿಗ್ಗಿ, ವಿದೇಶಿ ವ್ಯಾಪಾರದಲ್ಲಿನ ಅಸಮತೋಲನ ಹೆಚ್ಚಿದೆ.
ಬ್ಯಾಂಕಿಂಗ್ ವಲಯದಲ್ಲಿ ನಿಷ್ಕ್ರಿಯ ಸಾಲದ ಸಮಸ್ಯೆ ಇದೆ. ಐಎಲ್ಅಂಡ್ಎಫ್ಎಸ್ ಹಗರಣ ಹೊರ ಬಿದ್ದ ನಂತರ ಹಣಕಾಸು ಮಾರುಕಟ್ಟೆ ಎದುರಿಸುತ್ತಿರುವ ನಗದು ಕೊರತೆ ಮತ್ತು ಅದರಿಂದಾಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಸಮಸ್ಯೆ ಉಲ್ಬಣವಾಗಿರುವುದರಿಂದ ಸಾಲ ವಿತರಣೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಸಹ ಸಾಲ ನೀಡಿಕೆ ಪ್ರಮಾಣ ಗಣನೀಯವಾಗಿ ತಗ್ಗಿಸಿವೆ. ನಗದು ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಬ್ಯಾಂಕಿಂಗ್ ವಲಯಕ್ಕೆ ಬಂಡವಾಳ ಮರುಪೂರಣ ಮಾಡಬೇಕಿದೆ.
ಈ ನಡುವೆ ಜಿಎಸ್ಟಿ ಜಾರಿಗೆ ತಂದ ನಂತರ ತೆರಿಗೆ ಸಂಗ್ರಹದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ತೆರಿಗೆ ವ್ಯಾಪ್ತಿ ವಿಸ್ತಾರವಾಗಿದ್ದರೂ ತೆರಿಗೆ ಸಂಗ್ರಹದಲ್ಲಿನ ಕೊರತೆ ಮತ್ತು ಜಿಎಸ್ಟಿ ಜಾರಿಯಲ್ಲಿನ ಲೋಪ ಇದಕ್ಕೆ ಕಾರಣ. ಈ ಸಮಸ್ಯೆಗಳು ತಕ್ಷಣಕ್ಕೆ ನಿವಾರಣೆ ಆಗುವಂತಹವಲ್ಲ.
ನಿರ್ಮಲಾ ಸೀತಾರಾಮನ್ ಎದುರಿಗೆ ಇರುವ ಮತ್ತೊಂದು ಅತಿ ದೊಡ್ಡ ಸವಾಲು ಎಂದರೆ ಭಾರತದ ಅಂಕಿ ಅಂಶಗಳ ಬಗ್ಗೆ ಎದ್ದಿರುವ ಅನುಮಾನಗಳು. ದೇಶೀಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲ ವಿದೇಶಿ ಬಂಡವಾಳ ಪೇಟೆಯಲ್ಲೂ ಭಾರತದ ಅಂಕಿ ಅಂಶಗಳನ್ನು ಅನುಮಾನದಿಂದ ನೋಡಲಾಗುತ್ತಿದೆ. ಅಂಕಿ ಅಂಶಗಳ ಬಗ್ಗೆ ಎದ್ದಿರುವ ಅನುಮಾನಗಳನ್ನು ನಿವಾರಿಸುವುದು ತುರ್ತಾಗಿ ಮಾಡಬೇಕಾದ ಕೆಲಸ. ಆದರೆ, ದೇಶದ ಆರ್ಥಿಕತೆ ಹದಗೆಟ್ಟಿರುವುದನ್ನು ಮುಕ್ತವಾಗಿ ಒಪ್ಪಿಕೊಂಡು ಅದನ್ನು ಸರಿದಾರಿಗೆ ತರುವ ಕಾರ್ಯಸೂಚಿಗಳನ್ನು ಜಾರಿಗೊಳಿಸುವುದರಿಂದ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ.
ನಾವು ಮಾಡಿದ್ದೆಲ್ಲವೂ ಸರಿ ಎಂಬುದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಅಂಕಿ ಅಂಶಗಳನ್ನೇ ತಿರುಚುವ ಕೆಲವವನ್ನು ಮೋದಿ ಸರ್ಕಾರ ಮಾಡಿತ್ತು. ಹಾಗಂತ ಎನ್ಡಿಎ-1 ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರಿ ಅವರು ಮತ್ತೆ ಹೇಳಿದ್ದಾರೆ. ಅಂಕಿ ಅಂಶಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರುಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿದರೆ, ದೀರ್ಘಕಾಲದಲ್ಲಿ ಭಾರತದ ಆರ್ಥಿಕತೆ ಮೇಲೆ ತೀರ್ವ ದುಷ್ಪರಿಣಾಮ ಬೀರಲಿದೆ.
ನಿರ್ಮಲಾ ಸೀತಾರಾಮನ್ ಈಗ ಮತ್ತೆ ಪೂರ್ಣ ಪ್ರಮಾಣದ ಬಜೆಟ್ ಗೆ ಸಿದ್ದತೆ ನಡೆಸಬೇಕು. ಚುನಾವಣೆ ಮುನ್ನ ಘೋಷಿಸಿದ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಮೀಸಲಿಡಬೇಕು. ಮೋದಿ ಸರ್ಕಾರ ಈ ಹಿಂದೆ ಭರವಸೆ ನೀಡಿದಂತೆ ಕಾರ್ಪೊರೆಟ್ ತೆರಿಗೆಯನ್ನು ಶೇ.25ಕ್ಕೆ ತಗ್ಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಬಜೆಟ್ ನಂತರ ಬಂಡವಾಳ ಹಿಂತೆಗೆತ ಯೋಜನೆಯಡಿ ಐರ್ ಇಂಡಿಯಾ ಸೇರಿದಂತೆ ನಷ್ಟದಲ್ಲಿರುವ ಸಾರ್ವಜನಿಕ ಉದ್ಯಮ ಘಟಕಗಳನ್ನು ಮಾರಾಟ ಮಾಡಬೇಕಿದೆ. ಸರಕು ಮತ್ತು ಸೇವಾ ತೆರಿಗೆಯನ್ನು ಸರಳೀಕರಿಸಿ ಎರಡು ಹಂತದ ತೆರಿಗೆ ಜಾರಿಗೆ ತರಬೇಕಿದೆ. ಬ್ಯಾಂಕುಗಳ ವಿಲೀನ, ಬಂಡವಾಳ ಮರುಪೂರಣ ಮತ್ತು ನಿಷ್ಕ್ರಿಯ ಸಾಲಗಳ ಶುದ್ಧೀಕರಣವನ್ನು ಮಾಡಬೇಕಿದೆ.
ರಕ್ಷಣಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರು ರಫೈಲ್ ಹಗರಣದಲ್ಲಿ ಮೋದಿ ಸರ್ಕಾರದ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ರಕ್ಷಣಾ ಇಲಾಖೆಯ ಮುಖ್ಯಸ್ಥರನ್ನು ನಿರ್ಲಕ್ಷಿಸಿ ಪ್ರಧಾನ ಮಂತ್ರಿ ಕಾರ್ಯಲಯವು ವ್ಯವಹಾರ ಕುದುರಿಸಲು ಮುಂದಾಗಿದ್ದನ್ನು ವಾಯುಸೇನೆ ಅಷ್ಟೇ ಅಲ್ಲ, ನೌಕಾಪಡೆ ಮತ್ತು ಭೂಸೇನೆ ಮುಖ್ಯಸ್ಥರು ಆಕ್ಷೇಪಿಸಿದ್ದರು. ಆ ಹಂತದಲ್ಲಿ ನಿರ್ಮಲಾ ಸೀತಾರಾಮನ್ ಪ್ರಧಾನಿ ಕಾರ್ಯಾಲಯದ ಪರವಾಗಿ ನಿಂತು ಮೋದಿಗೆ ತಗುಲಬೇಕಾದ ಕಳಂಕವನ್ನು ತಪ್ಪಿಸಿದ್ದರು. ಸಂಪುಟದಲ್ಲಿ ಹಣಕಾಸು ಖಾತೆಗೆ ಮೂರನೇ ಅತಿ ಮುಖ್ಯ ಸ್ಥಾನ ಇದ್ದರೂ ಪ್ರಸಕ್ತ ಸ್ಥಿತಿಯಲ್ಲಿ ಹಣಕಾಸು ಖಾತೆಯೇ ಮೊದಲ ಅತಿ ಮುಖ್ಯ ಖಾತೆಯಾಗಿದೆ.
ನಿರ್ಮಲಾ ಸೀತಾರಾಮನ್ ಅವರಿಗೆ ಶುಭಹಾರೈಕೆಗಳು! ಅವರ ಅವಧಿಯಲ್ಲಿ ಭಾರತದ ಆರ್ಥಿಕತೆ ‘ವಾಸ್ತವಿಕ’ವಾಗಿ ಅಭಿವೃದ್ಧಿಯಾಗಲಿ!