“2015 ರಿಂದಲೂ ನನಗೆ ಜೀವ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಲೇ ಇವೆ, ಆದರೆ ಕಳೆದ ಒಂದು ತಿಂಗಳಿನಿಂದ ನಾನಾ ರೀತಿಯ ಬೆದರಿಕೆಗಳು ಇನ್ನಷ್ಟು ಹೆಚ್ಚಾಗಿವೆ” ಎಂದು ಎನ್ಡಿಟಿವಿ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಇಂದು ಹೇಳಿಕೊಂಡಿದ್ದಾರೆ.
ಹಲವು ವಿಧಗಳಲ್ಲಿ ಜೀವ ಬೆದರಿಕೆಗಳನ್ನು ಎದುರಿಸಿದ್ದ ರವೀಶ್ ಕುಮಾರ್ ಅವರಿಗೆ ಇತ್ತೀಚಿನ ಘಟನೆಯೊಂದರಲ್ಲಿ ಮಾಜಿ-CISF ಯೋಧನೊಬ್ಬ ವಿಡಿಯೋ ಸಂದೇಶ ಕಳುಹಿಸಿ ಅವರ ಕಚೇರಿಯಲ್ಲೇ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ. ಮತ್ತೊಬ್ಬ, ಉತ್ತರ ಪ್ರದೇಶದ ಜೌನಪುರ ನಿವಾಸಿ, ತಾನು ಭಜರಂಗ ದಳಕ್ಕೆ ಸೇರಿದವನೆಂದು ಹೇಳಿಕೊಳ್ಳುವ ವ್ಯಕ್ತಿ, ತನ್ನ ಮನೆ ಹಾಗೂ ಕಚೇರಿಯ ಸಂಪೂರ್ಣ ವಿಳಾಸವನ್ನು ಕಳುಹಿಸಿ, ‘ನನ್ನನ್ನು ಕೊಲೆ ಮಾಡುವುದಾಗಿ ಮಾತ್ರವಲ್ಲದೇ ನನ್ನ ಕುಟುಂಬದ ಮಹಿಳೆಯ ಮೇಲೆ ಅತ್ಯಾಚಾರ ಮಾಡುವುದಾಗಿಯೂ ಬೆದರಿಸುತ್ತಲೇ ಇದ್ದಾನೆ’ ಎಂದು ರವೀಶ್ ಕುಮಾರ್ ಹೇಳುತ್ತಾರೆ.
“ಇವೆಲ್ಲವೂ ಸುಸಜ್ಜಿತವಾಗಿಯೇ ಆಯೋಜಿತವಾಗಿವೆ ಹಾಗೂ ಈ ಬೆದರಿಕೆಗಳು ರಾಜಕೀಯ ಪ್ರೇರಿತವಾಗಿವೆ”, ಎಂದು ಅಭಿಪ್ರಾಯಪಟ್ಟಿರುವ ರವೀಶ್, ಗ್ರೇಟರ್ ಕೈಲಾಶ್ ನ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅನೇಕ ದೂರುಗಳ ಬಗ್ಗೆ ಪೊಲೀಸರು ಯಾವುದೇ ಕ್ರಮವನ್ನೂ ಸಹ ತೆಗೆದುಕೊಂಡಿಲ್ಲ ಎಂದು ಆರೋಪಿಸುತ್ತಾರೆ.
“ಇಂತಹ ಬೆದರಿಕೆ ಕರೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳೆದ ವರ್ಷವೇ ಬಹಿರಂಗ ಪತ್ರ ಬರೆದಿದ್ದೆ, ಆದರೆ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯವನ್ನು ಪ್ರಧಾನ ಮಂತ್ರಿಯವರಿಗೆ ತಿಳಿಸಿರುವುದರಿಂದ ಏನಾದರೂ ಬದಲಾವಣೆ ಕಾಣಬಹುದು ಎಂದು ನನಗನಿಸಿರಲಿಲ್ಲ. ನಿಜ ಹೇಳಬೇಕೆಂದರೆ, ನನ್ನನ್ನು ನಿಂದಿಸಿದ ಮತ್ತು ಟ್ರೋಲ್ ಮಾಡಿದ ಪ್ರತಿಯೊಬ್ಬ ವ್ಯಕ್ತಿಯನ್ನೂ ಆನಂತರವಷ್ಟೇ ನಾನು ಹಿಂಬಾಲಿಸಲು (ಫಾಲೋ) ಆರಂಭಿಸಿದೆ,” ಎಂದಿದ್ದಾರೆ ರವೀಶ್.
ಪತ್ರಕರ್ತೆ ರಾಣಾ ಅಯೂಬ್ ರನ್ನೂ ಬಿಡದ ಜೀವಬೆದರಿಕೆ ಕರೆಗಳು…
ಸ್ವತಂತ್ರ ಪತ್ರಕರ್ತೆ ರಾಣಾ ಅಯೂಬ್ ವಿರುದ್ಧ ಕೂಡ ಇದೇ ರೀತಿ ನಿಂದನೆ ಹಾಗೂ ಆನ್ ಲೈನ್ ಟ್ರೋಲಿಂಗ್ ಮಾಡಿ ಭಯಂಕರವಾದ ಕಿರುಕುಳ ನೀಡಿದ ಪ್ರಕರಣದ ಸಂಬಂಧ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ತಜ್ಞರು “ರಾಣಾ ಅಯೂಬ್ ಳ ಸುರಕ್ಷತೆಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು” ಭಾರತ ಸರ್ಕಾರವನ್ನು ಆಗ್ರಹಿಸಿ, ಗುರುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು.
ಭಾರತದ ಹಿರಿಯ ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರನ್ನು ಅವರ ಕೊಲೆಯ ಮುನ್ನಾವರ್ಷಗಳಲ್ಲಿ ಬೆದರಿಕೆ ಕರೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲಿಂಗ್ ಮೂಲಕ ಹಿಂಸೆಗೊಳಪಡಿಸಲಾಗಿತ್ತು. ಆನಂತರ ಸೆಪ್ಟೆಂಬರ್ 2017ರಲ್ಲಿ ಅವರನ್ನು ಅವರ ಮನೆ ಎದುರೇ ಕಗ್ಗೊಲೆ ಮಾಡಲಾಯಿತು.
“ರಾಣಾ ಆಯೂಬ್ ಅವರೂ ಜೀವ ಬೆದರಿಕೆ ಎದುರಿಸುತ್ತಿದ್ದಾರೆ, ಅವರ ವಿರುದ್ಧ ಅಸಹ್ಯ ಮತ್ತು ಅಸಭ್ಯವಾದ ಗ್ರಾಫಿಕ್ಸ್ ಸೃಷ್ಟಿಸಿ ಪ್ರಚಾರ ಮಾಡಲಾಗುತ್ತಿದೆ, ಸುಳ್ಳುಸುದ್ದಿಗಳನ್ನೂ ಹರಿಬಿಡಲಾಗುತ್ತಿದೆ. ಅಲ್ಲದೆ ಅವರಿಗೆ ಸಾಕಷ್ಟು ಬೆದರಿಕೆಯ ಕರೆಗಳೂ ಬರುತ್ತಿವೆ. ಅವರ ಜೀವದ ಬಗ್ಗೆ ನಮಗೆ ಅತಿಹೆಚ್ಚು ಕಾಳಜಿ ಇದೆ” ಎಂದು ಗೌರಿ ಲಂಕೇಶ್ ಅವರ ಕೊಲೆಯನ್ನು ನೆನಪಿಸಿಕೊಳ್ಳುತ್ತಾ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಭಾರತ ಸರ್ಕಾರದ ಕಿವಿ ಹಿಂಡುವ ಪ್ರಯತ್ನ ಮಾಡಿದ್ಧಾರೆ.
ದೂರು ದಾಖಲಾದರೂ ರಕ್ಷಣೆ ನೀಡದ ಪೊಲೀಸರು!
ರಾಣಾ ಅಯೂಬ್ ದೂರು ದಾಖಲಿಸಿದ 10 ದಿನಗಳ ನಂತರದಲ್ಲಿ ಪೊಲೀಸರು ಅಂತಿಮವಾಗಿ ತನಿಖೆ ಆರಂಭಿಸಿದ್ದಾರಾದರೂ, ಈವರೆಗೂ ಕೊಲೆ ಬೆದರಿಕೆ ಎದುರಿಸುತ್ತಿರುವ ಪತ್ರಕರ್ತೆಗೆ ಅವರು ಯಾವುದೇ ರೀತಿಯಲ್ಲೂ ರಕ್ಷಣೆ ನೀಡಲು ಮುಂದಾಗಿಲ್ಲ.
“ರಾಣಾ ಅಯೂಬ್ ಅವರಿಗೆ ಕೂಡಲೇ ರಕ್ಷಣೆ ಒದಗಿಸುವಲ್ಲಿ ಭಾರತ ಸರ್ಕಾರ ಕೂಡಲೇ ದಿಟ್ಟ ಕ್ರಮ ಕೈಗೊಳ್ಳಬೇಕಿದೆ ಮತ್ತು ಅವರಿಗೆ ಬಂದಿರುವ ಬೆದರಿಕೆ ಕರೆಯ ಬಗ್ಗೆ ನ್ಯಾಯಯುತವಾಗಿ ತನಿಖೆ ಕೈಗೊಳ್ಳಬೇಕು. ಜೀವ ಬೆದರಿಕೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಯಾವುದೇ ತರನಾದ ದೈಹಿಕ ತೊಂದರೆಯೂ ಉಂಟಾಗದಂತೆ ಮತ್ತು ಅವರ ಜೀವಕ್ಕೆ ಅಪಾಯ ಒದಗಿಬರದಂತೆ ಪರಿಣಾಮಕಾರಿಯಾಗಿ ರಕ್ಷಣೆ ಕಲ್ಪಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ” ಎಂದು ತಜ್ಞರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತೆಯಾಗಿರುವ ಮುಂಬಯಿ ಮೂಲದ ಯುವತಿ ರಾಣಾ ಅಯೂಬ್, ಗುಜರಾತ್ ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2002ರಲ್ಲಿ ನಡೆದ ಮುಸ್ಲಿಮರ ಹತ್ಯಾಕಾಂಡದ ಕುರಿತು Gujarat files ಎಂಬ ಕೃತಿ ರಚಿಸಿದ್ದರು. ಇದೊಂದು ಸತ್ಯಾನ್ವೇಷಣೆಯ ಸಾಕ್ಷ್ಯಾಧಾರಿತ ತನಿಖಾ ವರದಿಯಾಗಿ ದಾಖಲಾಗಿದ್ದು, ಇದೇ ಕಾರಣಕ್ಕಾಗಿ ಮತ್ತು ತನ್ನ ನೇರ, ನಿಷ್ಠುರ ಬರವಣಿಗೆ ಮತ್ತು ರಾಜಕೀಯ ವಿಶ್ಲೇಷಣೆಯಿಂದಾಗಿ ಬಿಜೆಪಿ/ಸಂಘ ಪರಿವಾರದ ಕೆಂಗಣ್ಣಿಗೆ ರಾಣಾ ಅಯೂಬ್ ಗುರಿಯಾಗಿದ್ದಾರೆ.
ರವೀಶ್ ಕುಮಾರ್ ಎನ್ಡಿಟಿವಿ ಯ ಹಿರಿಯ ಪತ್ರಕರ್ತರಾಗಿದ್ದು ಪ್ರಜಾತಂತ್ರ ಮತ್ತು ಸಮಕಾಲೀನ ರಾಜಕೀಯ ವ್ಯವಸ್ಥೆಯ ಕಠೋರ, ವಸ್ತುನಿಷ್ಠ ವಿಶ್ಲೇಷಣೆ ನಡೆಸುತ್ತಾ ಬಂದಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ರಚಿಸಿರುವ The Free Voice ಎಂಬ ಕೃತಿ ಕನ್ನಡದಲ್ಲೂ ‘ಮಾತಿಗೇನು ಕಡಿಮೆ’ ಎಂಬ ಹೆಸರಿನಲ್ಲಿ ಅನುವಾದಗೊಂಡಿದೆ. ಇವರಾಡುವ ಪ್ರಜಾತಂತ್ರದ ಪರವಾದ, ಸತ್ಯದ ಕುರಿತ ದಿಟ್ಟ ಮಾತುಗಳು ಸುಳ್ಳುಬುರುಕರ ಎದೆ ಕಂಪಿಸುವುದರಿಂದ ರವೀಶ್ ಕುಮಾರ್ ಅವರು ಟ್ರೋಲಿಂಗ್ ಮತ್ತು ಭಾವೋನ್ಮತ್ತ ಗುಂಪುಗಳಿಗೆ ಆಹಾರವಾಗಿದ್ದಾರೆ, ನಿರಂತರವಾಗಿ ಜೀವ ಬೆದರಿಕೆ ಕರೆಗಳಿಂದ ಅವರನ್ನು ಹಿಂಸಿಸಲಾಗುತ್ತಿದೆ.