ಸಂವಿಧಾನದ ಪ್ರಕಾರ ಧರ್ಮ ನಿರಪೇಕ್ಷತೆ ಕಾಪಾಡಬೇಕಾದ ಸರ್ಕಾರ ತಾನೇ ಮುಂದೆ ನಿಂತು ಒಂದು ಜನವರ್ಗದ ನಂಬಿಕೆಯ ಪ್ರಕಾರ ಜಪ ತಪ ಮಾಡಲು ಹೊರಟಿದೆ!
ಈ ಸಂಬಂಧ ಸರ್ಕಾರಿ ಆದೇಶವನ್ನು ಸಹ ಹೊರಡಿಸಿದೆ.
ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಬೇಕು ಎಂದು ದಿನಂಕ 31.05.2019ರಂದು ಸರ್ಕಾರದ ಅಧೀನ ಕಾರ್ಯದರ್ಶಿಎಂ ತಿಪ್ಪೀರಮ್ಮ ಅವರು ಆದೇಶ ಹೊರಡಿರುತ್ತಾರೆ.
ಅದರಲ್ಲಿ, ರಾಜ್ಯದಲ್ಲಿ ಮಳೆ ಬೆಳೆಯಾಗದೇ ನೀರಿನ ಅಭಾವ ಉಂಟಾಗಿರುವುದರಿಂದ ಸುವೃಷ್ಟಿ ಮತ್ತು ಸುಭಿಕ್ಷತೆಗೆ ಈ ಪರ್ಜನ್ಯ ಜಪ ನಡೆಸಬೇಕು ಎಂದು ಆದೇಶ ನೀಡಲಾಗಿದೆ.
ಹಾಗೆಯೇ “ವರುಣ ದೇವನ ಪ್ರಾರ್ಥನೆ” ನಡೆಸಿ ಪರ್ಜನ್ಯ ಜಪ, ಹೋಮಗಳನ್ನು 06.06. 2019 ರಂದು ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಬ್ರಾಹ್ಮೀ ಮಹೂರ್ತದಿಂದ ಆರಂಭಿಸಿ ವಿಶೇಷ ಪೂಜೆ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದಕ್ಕಾಗಿ ಆಯಾ ದೇವಲಾಯಗಳ ನಿಧಿಯಿಂದ 10.001 ರೂಪಾಯಿ ಮೀರದಂತೆ ವೆಚ್ಚ ಮಾಡಬೇಕು ಎಂದೂ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಇಂತಹ ಒಂದು ಅವೈಜ್ಞಾನಿಕ ಕ್ರಮದ ಕುರಿತು ಪರಿಸರ ತಜ್ಞ ಮತ್ತು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಟ್ರೂಥ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿ,
“ಮಳೆ ನೀರಿಗಾಗಿ ಪರ್ಜನ್ಯ, ಜಪ ಮಾಡುವಂಥ ಸಂಪ್ರದಾಯ ನಮ್ಮ ರಾಜ್ಯದಲ್ಲಿ ಎಸ್. ಎಂ. ಕೃಷ್ಣ ಕಾಲದಲ್ಲೇ ಇತ್ತು. ಅಂದೇ ಕೆರೆ ಅಂಗಳದಲ್ಲಿ ಐದು ಪರ್ಜನ್ಯ ಜಪ ಮಾಡಿದ್ದರು, ಆದರೆ ಒಂದು ಹನಿ ಮಳೇನೂ ಬಿದ್ದಿರಲಿಲ್ಲ. ಇದೆಲ್ಲಾ ಕೆಲಸಕ್ಕೆ ಬಾರದ ಕೃತ್ಯಗಳು” ಎಂದರು.
“ಇಂತಹ ಜಪದಿಂದ ಮಳೆ ಸಾಧ್ಯವೆ ಎಂಬುದನ್ನು ತಿಳಿಯಲು ಮೊದಲು ಪ್ರಯೋಗಾರ್ಥವಾಗಿ ಒಂದು ಕಡೆ ಮಾಡಬೇಕಿತ್ತು, ಅದು ಮಾಡಿದ್ದರೆ ಸಾಕಿತ್ತು. ಅಕಸ್ಮಾತ್ ಮಳೆ ಆದರೆ ಎಷ್ಟು ಮಳೆ ಬಿದ್ದರೆ ಒಳ್ಳೆಯದು ಎಂದು ಈ ಪರ್ಜನ್ಯ ಲೆಕ್ಕ ಹೇಳುತ್ತದೆಯೇ. ಅತಿ ಹೆಚ್ಚು ಮಳೆ ಬಿದ್ದರೆ, ಪ್ರವಾಹ ಪರಿಸ್ಥಿತಿ ಉಂಟಾದರೆ. ಅದನ್ನೂ ಮೀರಿ ನೆರೆ ರಾಜ್ಯದವರು ನಮ್ಮ ಮಳೆಯನ್ನು ನೀವೆ ಬೀಳಿಸಿಕೊಂಡಿದ್ದೀರಿ ಎಂದು ಆರೋಪಿಸಿದರೆ, ನೆಲ ಮಟ್ಟದಲ್ಲಿ ನಡೆಯುವ ಜಗಳ ಆಕಾಶದವರೆಗೆ ಹೋಗುತ್ತದೆ” ಎಂದು ಅವರು ಛೇಡಿಸಿದರು.
“ಮೌಢ್ಯತೆ ಬಿತ್ತುವ ಕೆಲಸ ಮೊದಲಿಗಿಂತ ಈಗ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮಾಧ್ಯಮಗಳು ಸೇರಿದಂತೆ ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತುತ್ತಿರುವುದು ವಿಷಾದನೀಯ. ಮಹಾರಾಷ್ಟ್ರದಂಥ ರಾಜ್ಯದಲ್ಲಿ ಮಳೆ ನೀರು ಬಿದ್ದಷ್ಟು ಸಂಗ್ರಹಿಸುವಂಥ ಅದ್ಭುತ ಯೋಜನೆಗಳನ್ನು ಮಾಡುತ್ತಿದೆ, ಮಳೆ ನೀರಿನ ಸಂಗ್ರಹಣೆಗೆ ಅವರು ಕೋಡಿಗಳನ್ನು ಕಟ್ಟುತ್ತಿದ್ದರೆ, ನಮ್ಮ ರಾಜ್ಯದಲ್ಲಿ ಯಜ್ಞ ಕುಂಡಕ್ಕೆ ಗುಂಡಿ ತೋಡುತ್ತಿದ್ದಾರೆ. ಅದೇ ಯಜ್ಞ ಕುಂಡಗಳಲ್ಲಿ ನೀರು ಬೀಳುವಂತೆ ಮಾಡಿದರೆ ರಾಜ್ಯ ಸುಭಿಕ್ಷವಾಗಿರಬಹುದು” ಎಂದು ಪರಿಸರ ತಜ್ಞ ನಾಗೇಶ್ ಹೆಗಡೆ ಸಲಹೆ ನೀಡಿದ್ದಾರೆ.
ಮೌಢ್ಯ ನಿಷೇಧವಾಗಬೇಕು ಎಂದು ಕಾಯ್ದೆಯನ್ನು ತಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿ ನಡೆಸುತ್ತಿರುವ ಸರ್ಕಾರ ಸಹ ಇಂತಹ ಮಳೆಗಾಗಿ ಜಪ, ಹೋಮದಂತಹ ಅವೈಜ್ಞಾನಿಕ ಕ್ರಿಯೆಗೆ ಇಳಿಯುತ್ತದೆ ಎಂದರೆ ನಾಚಿಕೆಗೇಡು.