ಕೆಟಲೋನಿಯಾ ಎಂಬ ಸ್ಪೇನ್ ಉಪ ಪ್ರಾಂತದಲ್ಲಿ ಎರಡು ವರ್ಷಗಳ ಹಿಂದೆ ಅಲ್ಲಿನ ಆಡಳಿತದ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಜನ, ತಮ್ಮದೇ ಪ್ರತ್ಯೇಕ ರಾಷ್ಟ್ರ ಘೋಷಿಸಿಕೊಂಡು, ಸ್ಪೇನ್ ದೇಶದ ಆಡಳಿತವನ್ನು ಧಿಕ್ಕರಿಸಿದರು. ತಮ್ಮದೇ ಅಧ್ಯಕ್ಷನನ್ನೂ ಆರಿಸಿಕೊಳ್ಳುವ ಮೂಲಕ ಸ್ಪೇನಿನ ಬಲಪಂಥೀಯ, ಯಥಾಸ್ಥಿತಿವಾದಿ ಆಡಳಿತದ ಮುಸುಡಿಗೆ ತಿವಿದರು.
ಪ್ಯಾಂತವಾರು ಸಾಂಸ್ಕೃತಿಕ ಮತ್ತು ಭಾಷಾವಾರು ಅಸ್ಮಿತೆ ಮತ್ತು ಅಸ್ತಿತ್ವವನ್ನು ಗೌರವಿಸದೇ, ಆ ಸಮುದಾಯಗಳ ಅಧಿಕಾರಯುತ ಜನರು, ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸಿದರೆ, ಸಣ್ಣ ಸಮುದಾಯಗಳ ಪ್ರತಿರೋಧದ ಹೊರತಾಗಿಯೂ ಬಹುಸಂಖ್ಯಾತರ ಸಂಸ್ಕೃತಿ ಮತ್ತು ಭಾಷೆಯನ್ನು ದಬ್ಬಾಳಿಕೆ ಮೂಲಕ ಹೇರತೊಡಗಿದರೆ ಏನಾಗುತ್ತದೆ ಎಂಬುದಕ್ಕೆ ಕೆಟಲೋನಿಯಾದ ಈ ತತಕ್ಷಣದ ಇತಿಹಾಸದಲ್ಲಿ ನಾವು ಕಲಿಯಲೇಬೇಕಿರುವ ಪಾಠವಿದೆ. ಅದರಲ್ಲೂ ಸರ್ವಾಧಿಕಾರಿ ಎಂಬ ಅನ್ವರ್ಥ ನಾಮವನ್ನು ಲಾಗಾಯ್ತಿನಿಂದ ಹೊತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಭಾರೀ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬರುತ್ತಲೇ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ, ಮಾಂಸಹಾರಿಗಳ ಆಹಾರದ ಹಕ್ಕನ್ನು ನಿರಾಕರಿಸುವ ನೀತಿಗಳ ಜಾರಿಗೆ ಸರ್ಕಾರ ಮುಂದಾಗಿದೆ. ಆದರೆ ‘ಹಿಂದಿ, ಹಿಂದು, ಹಿಂದುತ್ವ’ ಎಂಬ ಏಕ ಭಾಷೆ, ಏಕ ಧರ್ಮ ಮತ್ತು ಏಕ ಧಾರ್ಮಿಕ ಅಸ್ಮಿತೆಯ ಮೂಲಕವೇ ದೇಶದ ಅಧಿಕಾರವನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಳ್ಳುವ ಮತ್ತು ಆ ಮೂಲಕ ಹಿಂದಿ ಮಾತನಾಡುವ ವಲಯ ಭಾಷೆ, ಸಂಸ್ಕೃತಿ, ಆಹಾರ-ಉಡುಗೆ, ರಾಜಕೀಯ ಸಿದ್ಧಾಂತವನ್ನು ದಕ್ಷಿಣ ಭಾರತದ ಮೇಲೆ ಹೇರುವ ಪ್ರಯತ್ನ ನಡೆದಿದೆ. ಅದನ್ನು ವಿರೋಧಿಸಿ ಈಗ ದಕ್ಷಿಣದ ದ್ರಾವಿಡ ಭಾಷಾ ವಲಯದಿಂದ ಪ್ರಬಲ ಪ್ರತಿರೋಧದ ದನಿ ಎದ್ದಿರುವ ಹಿನ್ನೆಲೆಯಲ್ಲಿ ಕೆಟಲೋನಿಯಾದಿಂದ ಕಲಿಯಬೇಕಾದ ಪಾಠದ ಬಗ್ಗೆ ಯೋಚಿಸಬೇಕಾಗಿದೆ.
ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಕರಡು) ಪ್ರಕಾರ ಹಿಂದಿಯೇತರ ರಾಜ್ಯಗಳ ಮಕ್ಕಳೂ ತ್ರಿಭಾಷಾ ಸೂತ್ರದಡಿ ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯವುದು ಕಡ್ಡಾಯ. ಹಿಂದಿಯನ್ನು ಕಲಿಯದೆ ಮಗು ಮೂರನೇ ತರಗತಿಯ ನಂತರ ಶಿಕ್ಷಣ ಪಡೆಯುವುದೇ ಸಾಧ್ಯವಿಲ್ಲ. ಪ್ರಾಥಮಿಕ ಹಂತದಿಂದಲೇ ಹಿಂದಿಯನ್ನು ಕಡ್ಡಾಯಗೊಳಿಸುವ ಬಿಜೆಪಿ ಸರ್ಕಾರದ ಹೊಸ ಶಿಕ್ಷಣ ನೀತಿಯ ವಿವರಗಳು, ಹೊಸ ಸರ್ಕಾರ ಅಧಿಕಾರ ಸ್ವೀಕರಿಸುತ್ತಲೇ ಹೊರಬಿದ್ದಿವೆ. ಡಾ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಕರಡು ನೀತಿಯ ವರದಿ ಸಲ್ಲಿಸುತ್ತಲೇ, ಪ್ರಮುಖ ತಮಿಳುನಾಡು ಸೇರಿದಂತೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಪ್ರತಿರೋಧದ ಆಕ್ರೋಶ ಭುಗಿಲೆದ್ದಿದೆ. ಅದಲರಲ್ಲೂ ಭಾಷಾಭಿಮಾನದ ವಿಷಯದಲ್ಲಿ ಯಾವಾಗಲೂ ಕಟಿಬದ್ಧರಾಗಿರುವ ದ್ರಾವಿಡ ಅಸ್ಮಿತೆಯ ನೆಲ ತಮಿಳುನಾಡಿನಲ್ಲಿ ಅಲ್ಲಿನ ಪ್ರಮುಖ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ನೇತೃತ್ವದಲ್ಲಿ ಭಾರೀ ಪ್ರತಿಭಟನೆಗಳು ಆರಂಭವಾಗಿದೆ.
ಕರ್ನಾಟಕದಲ್ಲಿ ಆ ಮಟ್ಟಿಗಿನ ಪ್ರತಿರೋಧ ಕಾಣದೇ ಹೋದರೂ, ಸಾಂಸ್ಕೃತಿಕ ಮತ್ತು ರಾಜಕೀಯ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಈ ಬೆಳವಣಿಗೆ ನಾಂದಿ ಹಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ವಿರುದ್ಧ ಆಂದೋಲನಗಳು ಆರಂಭವಾಗಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ ಮತ್ತು ದೇಶದ ಭದ್ರತೆಯ ವಿಷಯಗಳನ್ನೇ ಮುಂದೆ ಮಾಡಿ, ಜನಸಾಮಾನ್ಯರಲ್ಲಿ ಪಾಕಿಸ್ತಾನ ಮತ್ತು ಮುಸ್ಲಿಮರ ವಿರುದ್ಧದ ದ್ವೇಷ ಬಿತ್ತುವ ಮೂಲಕ ಇಸ್ಲಮೋಫೋಬಿಯಾದ ಅಲೆಯಲ್ಲಿ ಭಾರೀ ಬಹುಮತ ಪಡೆದಿರುವ ಬಿಜೆಪಿ, ದಶಕಗಳಿಂದ ದೇಶದ ರಾಜಕೀಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಬಹುತೇಕ ಜಾತಿ ಭಾವನೆಯನ್ನು ಮೀರಿ, ಜನ ತನಗೆ ಮತ ಹಾಕುವಂತೆ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸಂಪೂರ್ಣ ಜಾತಿಯ ಲೆಕ್ಕಾಚಾರದ ಮೇಲೆಯೇ ಅಭ್ಯರ್ಥಿಯ ಸೋಲು-ಗೆಲುವಿನ ಭವಿಷ್ಯ ನಿಂತಿದ್ದ ಕ್ಷೇತ್ರಗಳಲ್ಲೂ ಈ ಬಾರಿ ಮೋದಿ ಮತ್ತು ಹಿಂದುತ್ವ ಮೇಲುಗೈ ಪಡೆದಿದ್ದು, ಜಾತಿ ಮೀರಿ ಹಿಂದುತ್ವ ಮೇಲುಗೈ ಸಾಧಿಸಿದೆ. ಆ ಹಿನ್ನೆಲೆಯಲ್ಲಿ, ಇದೀಗ ಬಿಜೆಪಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ತನ್ನ ಮಾತೃಸಂಘಟನೆ ಆರ್ ಎಸ್ ಎಸ್ನ ಏಕ ಭಾಷೆ ಸಿದ್ಧಾಂತವನ್ನು ಜಾರಿಗೊಳಿಸಲು ಹೊರಟಿದೆ.
ಆದರೆ, ಧರ್ಮದ ವಿಷಯದಲ್ಲಿ ಆದಂತೆ, ಭಾಷೆಯ ವಿಷಯದಲ್ಲಿಯೂ ದ್ರಾವಿಡ ವಲಯದಲ್ಲಿ ಜನರಿಗೆ ಕಣ್ಕಟ್ಟು ಮಾಡಲಾಗದು ಎಂಬುದು ಈ ಎರಡು- ಮೂರು ದಿನದಲ್ಲಿ ಮನದಟ್ಟಾಗುತ್ತಿದ್ದಂತೆ ತನ್ನ ವರಸೆಯಲ್ಲಿ ಬದಲಾವಣೆ ಮಾಡಿಕೊಂಡಿದೆ. ತಮಿಳುನಾಡಿನ ತೀವ್ರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ, ಇದೀಗ ಸ್ಪಷ್ಟನೆ ನೀಡಿದ್ದು, “ಅದೊಂದು ಕರಡು ನೀತಿ, ಜನರು ಮತ್ತು ಆಯಾ ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆದ ಬಳಿವೂ ನೀತಿ ಅಂತಿಮವಾಗಲಿದೆ. ತ್ರಿಭಾಷಾ ಸೂತ್ರದಲ್ಲಿ ಹಿಂದಿಯನ್ನಾಗಲೀ, ಯಾವುದೇ ಭಾಷೆಯನ್ನಾಗಲೀ ಮಕ್ಕಳು ತಮಗೆ ಕಲಿಯುವ ಆಸಕ್ತಿ ಇಲ್ಲ ಎಂದಾದರೆ 6 ಅಥವಾ 7ನೇ ತರಗತಿಯಲ್ಲಿ ಆ ಭಾಷೆಯನ್ನು ಬಿಡಬಹುದು. ಕಡ್ಡಾಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದರೆ, 6-7ನೇ ತರಗತಿಯವರೆಗೂ ಮಕ್ಕಳು ಮೂರು ಭಾಷೆ ಕಲಿಯಲೇಬೇಕಿದೆಯೇ? ಎಂಬ ಅನುಮಾನ ಹಾಗೆಯೇ ಉಳಿದಿದೆ.
ಈ ನಡುವೆ, ಸರ್ಕಾರದ ಸ್ಪಷ್ಟನೆ, ಮುಗುಮ್ಮಾದ ತೆರೆಮರೆಯ ಪ್ರಯತ್ನಗಳ ಹೊರತಾಗಿಯೂ, ಈ ಬಾರಿಯ ಮತ್ತೊಂದು ವಿಶೇಷವೆಂದರೆ; ಹಿಂದಿ ವಿರೋಧಿ ಹೋರಾಟ ಬಹಳ ವಿಸ್ತಾರವಾದ ಸ್ವರೂಪವನ್ನೇ ಪಡೆದುಕೊಂಡಿದ್ದು, ಕರ್ನಾಟಕವೂ ಸೇರಿದಂತೆ ಐದು ಪ್ರಮುಖ ದಕ್ಷಿಣ ಭಾರತೀಯ ರಾಜ್ಯಗಳ ಪ್ರತ್ಯೇಕ ಒಕ್ಕೂಟ ರಚನೆಯ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಭಾಷಾವಾರು ಪ್ರಾಂತಗಳ ಪುನರ್ ರಚನೆಗೂ ಮುನ್ನವೇ ಬಾಬಾ ಸಾಹೇಬ ಅಂಬೇಡ್ಕರರೊಂದಿಗೆ ಸಂವಿಧಾನ ರಚನೆ ಹಂತದಲ್ಲಿ ಸಿ ರಾಜಗೋಪಾಲಾಚಾರಿ(ರಾಜಾಜಿ) ಅವರು ಪ್ರಸ್ತಾಪಿಸಿದ್ದ ‘ದಕ್ಷಿಣ ರಾಜ್ಯಗಳ ಪ್ರತ್ಯೇಕ ಒಕ್ಕೂಟ’ದ ಬಗ್ಗೆ ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.
ಬಿಜೆಪಿಯ ‘ಹಿಂದಿ, ಹಿಂದು ಮತ್ತು ಹಿಂದುತ್ವ’ ನೀತಿಯ ವಿರುದ್ಧವೇ ಸದಾ ರಾಜಕೀಯ ನಿಲವು ಪ್ರಕಟಿಸುತ್ತಲೇ ಬಂದಿರುವ(ಚುನಾವಣೆಗಳೂ ಸೇರಿ) ದಕ್ಷಿಣ ರಾಜ್ಯಗಳಲ್ಲಿ, ಇಂತಹ ಪ್ರತ್ಯೇಕತೆಯ ಮಾತುಗಳು ಸದಾ ಬಿಜೆಪಿ ಕೇಂದ್ರದಲ್ಲಿ ಆಡಳಿತ ಹಿಡಿದಾಗಲೇ ಬರುತ್ತವೆ ಎಂಬುದು ಗಮನಾರ್ಹ. ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿರುವ, ಹಿಂದಿಯನ್ನು ಹಿಂದಿಯೇತರ ಮಕ್ಕಳ ಮೇಲೆ ಹೇರುವುದು, ಬಹಳ ಅಪಾಯಕಾರಿ ಪರಿಣಾಮಗಳಿಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ನೀಡಿದ್ದರ ಹಿಂದೆಯೂ ಈ ಸುಳಿವು ಇದೆ. ತಮಿಳುನಾಡಿನಲ್ಲಂತೂ ಪ್ರತ್ಯೇಕತೆಯ ಮಾತು ಬಹಿರಂಗವಾಗಿಯೇ ಕೇಳಿಬರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪ್ರತ್ಯೇಕತೆಯ ಕೂಗು ಸದ್ದು ಮಾಡತೊಡಗಿದೆ. ‘ದ ನ್ಯೂಸ್ ಮಿನಿಟ್’ ಎಂಬ ಸುದ್ದಿಜಾಲತಾಣ ಮೂರು ವರ್ಷಗಳ ಹಿಂದೆ ಪ್ರಕಟಿಸಿದ್ದ ‘ಯುನೈಟೆಡ್ ಸ್ಟೇಟ್ಸ್ ಆಫ್ ಸೌತ್ ಇಂಡಿಯಾ’ ಎಂಬ ತಲೆಬರಹದ ವರದಿ ಕೂಡ ಇದೀಗ ದಿಢೀರ್ ವೈರಲ್ ಆಗಿದ್ದು, ನೆಟ್ಟಿಗರು ದಕ್ಷಿಣ ಭಾರತಕ್ಕೆ ಹಿಂದಿ ಹೇರಿಕೆ, ಹಣಕಾಸು ಅನುದಾನ ಹಂಚಿಕೆ, ಆಹಾರ ಪದ್ಧತಿ ಹೇರಿಕೆ, ತಾರತಮ್ಯ ನೀತಿ, ರಾಜಕೀಯ ಅವಕಾಶ ವಂಚನೆ ಸೇರಿದಂತೆ ಎಲ್ಲಾ ಬಗೆಯಲ್ಲೂ ಉತ್ತರಭಾರತೀಯರು ದಕ್ಷಿಣದವರನ್ನು ತುಳಿಯುತ್ತಿದ್ದಾರೆ. ದೇಶದ ಒಟ್ಟು ತೆರಿಗೆ ಸಂಗ್ರಹ, ಕೇಂದ್ರಕ್ಕೆ ತೆರಿಗೆ ಪಾಲು ಪಾವತಿ, ಜಿಡಿಪಿಗೆ ಒಟ್ಟಾರೆ ಕೊಡುಗೆ, ಕೃಷಿ, ಶಿಕ್ಷಣ, ಉದ್ಯಮ ಸೇರಿದಂತೆ ವಿವಿಧ ವಲಯಗಳ ಸಾಧನೆ ಸೇರಿದಂತೆ ಎಲ್ಲಾ ರಂಗದಲ್ಲಿಯೂ ದಕ್ಷಿಣ ರಾಜ್ಯಗಳು ಉತ್ತರ ರಾಜ್ಯಗಳಿಗಿಂತ ಎರಡು ಮೂರು ಪಟ್ಟು ಮುಂದಿವೆ. ಆದಾಗ್ಯೂ ನ್ಯಾಯಯುತವಾಗಿ ದಕ್ಷಿಣ ರಾಜ್ಯಗಳಿಗೆ ಸಲ್ಲಬೇಕಾದ ತೆರಿಗೆ ಪಾಲು, ಅನುದಾನದ ಹಂಚಿಕೆಯಲ್ಲಿನ ಪಾಲು, ರಾಜಕೀಯ ಪ್ರಾತಿನಿಧ್ಯಗಳು ಸಿಗುತ್ತಿಲ್ಲ ಎಂಬ ಅಂಶಗಳನ್ನು ಅಂಕಿಅಂಶ ಸಹಿತ ಪ್ರಸ್ತಾಪಿಸಿ ಕೇಂದ್ರ ಬಿಜೆಪಿ ಸರ್ಕಾರದ ದಬ್ಬಾಳಿಕೆಯ ವಿರುದ್ಧ ದನಿ ಎತ್ತಿದ್ದಾರೆ.
ಹಿಂದಿ ಮಾತನಾಡುವ ಜನರ ಪ್ರಾತಿನಿಧಿಕ ಪಕ್ಷವಾಗಿರುವ ಬಿಜೆಪಿ, ಹಿಂದಿ ಹೇರಿಕೆ, ಆಹಾರ ಪದ್ಧತಿ ಹೇರಿಕೆ, ಸಾಂಸ್ಕೃತಿಕ ನೀತಿ ಹೇರಿಕೆಯ ಮೂಲಕ ತಾನು ಈವರೆಗೆ ಸಂಪೂರ್ಣವಾಗಿ ರಾಜಕೀಯ ರೀತಿಯಲ್ಲಿ ಪ್ರವೇಶಿಸಲಾಗದ, ಹಿಡಿತಕ್ಕೆ ಪಡೆದುಕೊಳ್ಳಲಾರದ ಹಿಂದಿಯೇತರ ದ್ರಾವಿಡ ರಾಜ್ಯಗಳ ಮೇಲೆ ಅಧಿಪತ್ಯ ಸ್ಥಾಪಿಸಲು ವೇದಿಕೆ ಸಜ್ಜುಗೊಳಿಸುತ್ತಿದೆ. ಏಕ ಭಾಷೆ, ಏಕ ರುಚಿ, ಏಕ ಸಂಸ್ಕೃತಿ, ಏಕ ಧರ್ಮದ ತನ್ನ ಅಸಲೀ ಅಜೆಂಡಾವನ್ನು ನೂತನ ರಾಷ್ಟ್ರೀಯ ಶಿಕ್ಷಣ ಕರಡು ನೀತಿಯ ಮೂಲಕ ಜಾರಿಗೆ ಮುಂದಾಗಿದೆ ಎಂಬುದು ಎಲ್ಲ ದಕ್ಷಿಣ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಆ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳ ಭಾಷಾ, ಸಾಂಸ್ಕೃತಿಕ ಅನನ್ಯತೆಯನ್ನು, ತನ್ನತನವನ್ನು ಉಳಿಸಿಕೊಳ್ಳಲು ಮತ್ತು ಆರ್ಥಿಕ ಮತ್ತು ರಾಜಕೀಯವಾಗಿ ಸಲ್ಲಬೇಕಾದ ಪಾಲು ಪಡೆಯಲು ದ್ರಾವಿಡ ರಾಜ್ಯಗಳು ಏಕಾಂಗಿಯಾಗಿ ಅಥವಾ ಬಿಡಿಬಿಡಿಯಾಗಿ ಹೋರಾಟ, ಪ್ರತಿರೋಧ ಒಡ್ಡಿದರೆ ಬಲಿಷ್ಠ ಜನಾದೇಶದಿಂದ ಕೊಬ್ಬಿರುವ ಬಿಜೆಪಿಯ ನಾಯಕತ್ವನ್ನು ಮಣಿಸಲಾಗದು. ಆ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳ ಪ್ರತ್ಯೇಕ ಒಕ್ಕೂಟವನ್ನು ಕಟ್ಟಿಕೊಂಡು ಹಕ್ಕುಗಳಿಗಾಗಿ, ತನ್ನ ಅನನ್ಯತೆಯ ಉಳಿವಿಗಾಗಿ ದನಿ ಎತ್ತಬೇಕಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ನ್ಯಾಯ ದಕ್ಕಿಸಿಕೊಳ್ಳುವುದು ಮತ್ತು ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸುವುದು ಕೂಡ ಅಂತಹ ಒಕ್ಕೂಟದಿಂದ ಸಾಧ್ಯ ಎಂಬ ವಾದಗಳೂ ಇವೆ.
ಕಳೆದ ವರ್ಷ ಕೇಂದ್ರ ತೆರಿಗೆ ಅನುದಾನ ಹಂಚಿಕೆಯಲ್ಲಿ ಕರ್ನಾಟಕವನೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾದಾಗ ಕೂಡ ಇಂತಹದ್ದೊಂದು ಒಕ್ಕೂಟದ ಮೂಲಕ ಒಮ್ಮತದ ಹೋರಾಟದ ಅಗತ್ಯದ ಬಗ್ಗೆ ಸ್ವತಃ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಮಾತನಾಡಿದ್ದರು. ಸದಾ ಕನ್ನಡಪರ ನಿಲುವಿಗೆ ಹೆಸರಾಗಿರುವ ಸಿದ್ದರಾಮಯ್ಯ ಹೆಸರು ಈಗಲೂ ಮತ್ತೆ ಚರ್ಚೆಗೆ ಬಂದಿದ್ದು, ಮೋದಿಯವರ ಹಿಂದಿ ಹೇರಿಕೆಯ ಜಂಭದ ವರಸೆಗೆ ಸರಿಯಾದ ಪ್ರತ್ಯುತ್ತರ ಕೊಡುವುದು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಅವರ ನೇತೃತ್ವದಲ್ಲಿಯೇ ದಕ್ಷಿಣ ಭಾರತ ರಾಜ್ಯಗಳ ಐಕ್ಯ ಹೋರಾಟ ಆರಂಭವಾಗಲಿ ಎಂಬ ಸಲಹೆಗಳೂ ವ್ಯಕ್ತವಾಗುತ್ತಿವೆ.
ಒಟ್ಟಾರೆ, ಇಂತಹದ್ದೊಂದು ಒಕ್ಕೂಟದ ವಿಷಯ ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿರುವುದು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅತ್ಯಂತ ಅಪೇಕ್ಷಣೀಯ ಬೆಳವಣಿಗೆ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಮಾತು. ಒಂದು ಪಕ್ಷ, ಒಂದು ಸಿದ್ಧಾಂತ ಮತ್ತು ಒಬ್ಬ ವ್ಯಕ್ತಿ ಅಪಾರ ಜನಬೆಂಬಲ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದರೆ, ಆತ ಸರ್ವಾಧಿಕಾರಿಯಾಗಿ ಬದಲಾಗುವ ಅಪಾಯವಿದೆ ಎಂಬುದಕ್ಕೆ ಜಗತ್ತಿನ ಇತಿಹಾಸದ ಉದ್ದಕ್ಕೂ ಹತ್ತಾರು ಉದಾಹರಣೆಗಳು ನಮ್ಮ ಮುಂದಿವೆ. ಅಂತಹ ಅಪಾಯ ಇದೀಗ ನಮ್ಮ ಸಮೀಪಕ್ಕೆ ಬಂದಿದೆ ಎಂಬುದಕ್ಕೆ ಈ ರಾಷ್ಟ್ರೀಯ ಕರಡು ಶಿಕ್ಷಣ ನೀತಿಯೇ ಒಂದು ಕಣ್ಣೆದುರಿನ ನಿದರ್ಶನ. ಹಾಗಾಗಿ, ಅಂತಹ ರಾಜಕೀಯ ಧಾಡಸೀತನದ ಮುಸುಡಿಗೆ ಸರಿಯಾಗಿ ತಿವಿಯುವ ಅವಕಾಶವೆಂದರೆ, ಅದು ದಕ್ಷಿಣ ಭಾರತ ರಾಜ್ಯಗಳ ಒಕ್ಕೂಟವೇ ಎಂಬುದು ಬಹುತೇಕರ ಅನಿಸಿಕೆ. ಅದು ರಾಜಕೀಯವಾಗಿಯೂ ಈ ವಲಯದ ಅನನ್ಯತೆ ಉಳಿಸಿಕೊಳ್ಳಲು ಒಂದು ಪರಿಣಾಮಕಾರಿ ಆಯ್ಕೆ ಕೂಡ!