ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಹುನ್ನಾರ ಎಂಬ ಕಾರಣಕ್ಕೆ ದಕ್ಷಿಣ ರಾಜ್ಯಗಳ ತೀವ್ರ ವಿರೋಧಕ್ಕೆ ಈಡಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಇದೀಗ ಎಲ್ಲರ ಗಮನ ಸೆಳೆದಿದೆ. ಈ ನಡುವೆ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೂತನ ನೀತಿಯ ಮೂಲಕ ಪ್ರಮುಖವಾಗಿ ದಕ್ಷಿಣ ಭಾರತದ ದ್ರಾವಿಡ ಮೂಲ ಭಾಷೆಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂಬ ಆಕ್ರೋಶ ಭುಗಿಲೇಳುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಡಾ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಮತ್ತು ಕೇಂದ್ರ ಸರ್ಕಾರಗಳು ಸ್ಪಷ್ಟನೆ ನೀಡಿ, ಹಿಂದಿ ಹೇರಿಕೆಯ ಉದ್ದೇಶವಿಲ್ಲ ಎಂದು ಹೇಳಿವೆ. ಜೊತೆಗೆ ಹಿಂದಿ ಕಡ್ಡಾಯ ಎಂಬ ಯಾವುದೇ ಷರತ್ತು ನೀತಿಯಲ್ಲಿ ಇಲ್ಲ ಎಂಬ ಸ್ಪಷ್ಟನೆ ಕೂಡ ಹೊರಬಿದ್ದಿದೆ.
ಆದರೆ, ವಾಸ್ತವವಾಗಿ ಕರಡು ನೀತಿಯಲ್ಲಿ ಏನಿದೆ? ಹಿಂದಿ ಭಾಷೆ ಮತ್ತು ತ್ರಿಭಾಷಾ ಸೂತ್ರದ ಬಗ್ಗೆ ಆ ಹೊಸ ನೀತಿ ಏನು ಹೇಳುತ್ತದೆ? ಹೊಸ ನೀತಿಯಿಂದ ಪ್ರಾದೇಶಿಕ ಭಾಷೆಗಳಿಗೆ ಇರುವ ಅಪಾಯವೇನು? ನಿಜವಾಗಿಯೂ ಭಾಷಾ ಕಲಿಕೆಯ ವಿಷಯದಲ್ಲಿ ಮಕ್ಕಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಈ ಹೊಸ ನೀತಿ ಉದ್ದೇಶಿಸಿದೆಯೇ ಅಥವಾ ಏಕ ಭಾಷೆ, ಈ ಧರ್ಮ ಮತ್ತು ಏಕರಾಷ್ಟ್ರ ಎಂಬ ಹಿಂದುತ್ವದ ಅಜೆಂಡಾವನ್ನು ಹೇರುವ ಹುನ್ನಾರವೇ ಎಂಬ ಪ್ರಶ್ನೆಗಳೂ ಎದ್ದಿವೆ.
ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಲಭ್ಯವಿದ್ದು, ಜನಸಾಮಾನ್ಯರ ಭಾಷೆಯಲ್ಲಿ ಅದಿನ್ನೂ ಕೈಗೆಟುವ ಸ್ಥಿತಿ ಇಲ್ಲ. ಕನ್ನಡವೂ ಸೇರಿದಂತೆ ದೇಶದ ಎಲ್ಲಾ ಅಧಿಕೃತ ಭಾಷೆಯಲ್ಲಿ ಹೊಸ ಶಿಕ್ಷಣ ನೀತಿಯ ಕರಡನ್ನು ಒದಗಿಸಬೇಕು ಮತ್ತು ಮುಂದಿನ ತಲೆಮಾರಿನ ಭವಿಷ್ಯದ ಪ್ರಶ್ನೆ ಅಡಗಿರುವುದರಿಂದ, ಕೇವಲ ನಾಲ್ಕು ಮಂದಿ ಶಿಕ್ಷಣ ತಜ್ಞರು, ಮಂತ್ರಿಮಹೋದಯರು ಕೂತು ಇಂತಹ ಸೂಕ್ಷ್ಮ ವಿಷಯವನ್ನು ನಿರ್ಧರಿಸುವುದಲ್ಲ. ಹಾಗಾಗಿ ಕರಡು ಪ್ರತಿ ಅದು ಆಸಕ್ತ ಎಲ್ಲರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಲಭ್ಯವಾಗುವುದು ಜರೂರು. ಜೊತೆಗೆ ಅದರ ಪ್ರಮುಖ ಅಂಶಗಳ ಬಗ್ಗೆ ವ್ಯಾಪಕ ಚರ್ಚೆಯೂ ಆಗಬೇಕಿದೆ. ಆ ಬಳಿಕವಷ್ಟೇ ಸರ್ಕಾರ ಹೊಸ ನೀತಿಗೆ ಅಗತ್ಯ ಬದಲಾವಣೆ ಮತ್ತು ತಿದ್ದುಪಡಿಗಳನ್ನು ಮಾಡಿ ಜನಾಭಿಪ್ರಾಯದ ಮೇಲೆ ಅಂತಿಮಗೊಳಿಸಬೇಕಿದೆ ಎಂಬುದು ಬಹುತೇಕ ಕನ್ನಡದ ಲೇಖಕರು, ಶಿಕ್ಷಣ ತಜ್ಞರುಗಳಲ್ಲಿ ಅಭಿಪ್ರಾಯ.
ಅದರಲ್ಲೂ ಹೊಸ ಶಿಕ್ಷಣ ನೀತಿ ರಚನೆ ಸಮಿತಿ ಮತ್ತು ಕೇಂದ್ರ ಸಚಿವರ ಸ್ಪಷ್ಟನೆಯ ಬಳಿಕವೂ ಕೆಲವು ಗೊಂದಲಗಳು ಉಳಿದಿದ್ದು, ಭಾಷಾ ಆಯ್ಕೆಯಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ. ಹಿಂದಿಯನ್ನು ಹಿಂದಿಯೇತರ ರಾಜ್ಯಗಳಿಗೆ ಕಡ್ಡಾಯ ಮಾಡಿಲ್ಲ ಎಂದು ಹೇಳಿದ್ದರೂ, ವಾಸ್ತವವಾಗಿ ಭಾಷೆಯನ್ನು ಬದಲಾಯಿಸುವ ಅವಕಾಶವನ್ನು 6ನೇ ಗ್ರೇಡ್(ಈಗಿನ 6ನೇ ತರಗತಿ) ಹಂತದಲ್ಲಿ ನೀಡಲಾಗಿದ್ದು, ಅಲ್ಲಿಯವರೆಗೆ, ಅಂದರೆ; ಮೂರನೇ ವಯಸ್ಸಿನಿಂದ ಮಗುವಿಗೆ ಎರಡು ಭಾಷೆಗಳನ್ನು ಕಲಿಯುವುದು ಕಡ್ಡಾಯವಾಗಿದ್ದು, ಒಂದನೇ ತರಗತಿಯಿಂದ ತ್ರಿಭಾಷಾ ಸೂತ್ರ ಜಾರಿಮಾಡಬೇಕು. ಆ ಮೂಲಕ ಒಂದನೇ ತರಗತಿಯಿಂದಲೇ ಕನ್ನಡ ಮತ್ತು ಇಂಗ್ಲಿಷಿನ ಜೊತೆ ಹಿಂದಿಯನ್ನೂ ಕಲಿಯಬೇಕಿದೆ. ಮಗು ಅಥವಾ ಪೋಷಕರು ಹಿಂದಿ ಅಥವಾ ಯಾವುದೇ ಮೂರನೇ ಭಾಷೆ ಕಲಿಕೆ ಅಗತ್ಯವಿಲ್ಲ ಎನಿಸಿದರೆ, 6ನೇ ತರಗತಿಯಲ್ಲಿ ಆ ಭಾಷೆಯನ್ನು ಬಿಟ್ಟು ಮತ್ತೊಂದನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದು ಕರಡು ನೀತಿಯಲ್ಲಿ ಉಲ್ಲೇಖಿಸಿರುವ ಅಂಶ.
ಈಗಿನ ಪೂರ್ವಪ್ರಾಥಮಿಕ ಅಥವಾ ಬಾಲವಾಡಿ ಹಂತ, ಬಳಿಕ 1ರಿಂದ 5, ಬಳಿಕ 6-8, ನಂತರ 9-10 ಮತ್ತು 11-12 ಹಂತಗಳ ಮಾದರಿಯ ಪದ್ಧತಿಯನ್ನು ಕೈಬಿಟ್ಟು, ಮೂರು ವರ್ಷದಿಂದಲೇ ಪ್ರಾಥಮಿಕ ಶಿಕ್ಷಣವನ್ನು ಆರಂಭಿಸಿ, ಮೂರು ವರ್ಷಗಳ ಪೂರ್ವಪ್ರಾಥಮಿಕ, ಮತ್ತು ಗ್ರೇಡ್ 1 ಮತ್ತು 2ನ್ನು ಸೇರಿ ಒಟ್ಟು ಐದು ವರ್ಷಗಳ(ಮಗುವಿಗೆ ಎಂಟು ವರ್ಷ)ವರೆಗೆ ಫೌಂಡೇಷನ್ ಹಂತ, ಬಳಿಕ ಗ್ರೇಡ್ 3, 4 ಮತ್ತು 5ನ್ನು ಸೇರಿ ಮೂರು ವರ್ಷದ ಪ್ರಿಪರೇಟರಿ ಹಂತ(ಮಗುವಿಗೆ ಹನ್ನೊಂದು ವರ್ಷ), ಬಳಿಕ ಗ್ರೇಡ್ 6, 7 ಮತ್ತು 8 ಸೇರಿ ಮೂರು ವರ್ಷದ ಮಿಡಲ್ ಹಂತ(ಮಗುವಿಗೆ 14 ವರ್ಷ) ಹಾಗೂ ಗ್ರೇಡ್ 9, 10, 11 ಮತ್ತು 12 ಸೇರಿ ನಾಲ್ಕು ವರ್ಷಗಳ ಹೈ ಅಥವಾ ಸೆಕೆಂಡರಿ ಹಂತ(ಮಗುವಿಗೆ 18 ವರ್ಷ)ದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಪುನರ್ ರಚಿಸುವ ಪ್ರಸ್ತಾಪವಿದೆ.
ಆ ಹಿನ್ನೆಲೆಯಲ್ಲಿ, ಮಕ್ಕಳ ಭಾಷಾ ಕಲಿಕೆಯ ಸಾಮರ್ಥ್ಯ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಪೂರ್ವಪ್ರಾಥಮಿಕ ಹಂತ ಸೇರಿ ಫೌಂಡೇಷನ್ ಹಂತದಲ್ಲಿಯೇ ತ್ರಿಭಾಷಾ ಸೂತ್ರದಂತೆ ಮಾತೃಭಾಷೆ, ಮಾಧ್ಯಮ ಭಾಷೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಭಾಷೆಯನ್ನು ಕಲಿಸುವ ಯೋಜನೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ.
ಆ ಹಿನ್ನೆಲೆಯಲ್ಲಿ, “ನಾವು ಹಿಂದಿ ಹೇರಿಕೆಯ ವಿಷಯವನ್ನೇ ಮುಂದಿಟ್ಟುಕೊಂಡು ಸಾರಾಸಗಟಾಗಿ ಹೊಸ ಶಿಕ್ಷಣ ನೀತಿಯನ್ನು ತಳ್ಳಿಹಾಕಲಾಗದು. ಜಾಗತೀಕರಣ ಇಂದಿನ ಸಂದರ್ಭದಲ್ಲಿ ಅದು ಭಾರತ ಕೇಂದ್ರಿತ ಶಿಕ್ಷಣದ ಪರವಾಗಿ ವಾದ ಮಂಡಿಸುತ್ತಿದೆ. ಇಂತಹ ಹಲವು ಒಳ್ಳೆಯ ಸಂಗತಿಗಳೂ ಇವೆ. ಸಂಸ್ಕೃತ ಮತ್ತು ಜಾನಪದ, ಬುಡಕಟ್ಟು ಸಂಸ್ಕೃತಿ ಹಾಗೂ ಪ್ರಾಚೀನ ಭಾರತದ ಜ್ಞಾನ ಸಂಹಿತೆಗಳ ಬಗ್ಗೆಯೂ ನೀತಿಯಲ್ಲಿ ಚರ್ಚಿಸಲಾಗಿದೆ. ಹಾಗಾಗಿ ಇಡಿಯಾಗಿ ಅದನ್ನು ಕನ್ನಡವೂ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಓದಿ ಅರ್ಥಮಾಡಿಕೊಂಡೇ ನಾವು ಆ ಬಗ್ಗೆ ಸ್ಪಷ್ಟ ನಿಲುವು ತಳೆಯುವುದು ಸರಿಯಾದ ಕ್ರಮ” ಎಂದು ಚಿಂತಕ ಪುರುಷೋತ್ತಮ ಬಿಳಿಮಲೆ ಅವರು ಫೇಸ್ಬುಕ್ ಪುಟದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿಯೂ ಹೊಸ ಶಿಕ್ಷಣ ನೀತಿಯ ಕುರಿತು ಪರ ವಿರೋಧದ ಚರ್ಚೆಗಳು ಆರಂಭವಾಗಿದ್ದು, ಪ್ರಮುಖವಾಗಿ ಕರಡು ಪ್ರತಿಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಚುರಪಡಿಸಬೇಕು. ಎಲ್ಲಾ ವಲಯದ ತಜ್ಞರು ಮತ್ತು ಜನಪ್ರತಿನಿಧಿಗಳ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪರಿಗಣಿಸಿದ ಬಳಿಕ ಸೂಕ್ತ ತಿದ್ದುಪಡಿ ತಂದು ಜಾರಿಗೊಳಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ, ಕನ್ನಡಪರ ಯುವ ಸಮುದಾಯ ಹಿಂದಿ ಹೇರಿಕೆಯ ಹುನ್ನಾರವೇ ಈ ಶಿಕ್ಷಣ ನೀತಿ ಎಂದು ಆಕ್ರೋಶವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಯುವ ಬರಹಗಾರರು, ಕಲಾವಿದರು, ಕನ್ನಡ ಹೋರಾಟಗಾರರು ನೀತಿಯ ವಿರುದ್ಧ ಈಗಾಗಲೇ ಆನ್ ಲೈನ್ ಅಭಿಯಾನ ಆರಂಭಿಸಿದ್ದು, #StopHindiImposition, #KarnatakaAgainstHindiImposition ಮತ್ತಿತರ ಹ್ಯಾಶ್ ಟ್ಯಾಗ್ಗಳು ಟ್ರೆಂಡ್ ಆಗಿವೆ.
ಅದೇ ಹೊತ್ತಿಗೆ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಬೆಳಕಿಗೆ ಬರುತ್ತಲೇ, ಹಿಂದಿ ಭಾಷೆಯ ಸ್ಥಾನಮಾನ, ತ್ರಿಭಾಷಾ ಸೂತ್ರ, ಕನ್ನಡದ ಭವಿಷ್ಯ, ಭಾಷೆ ಮತ್ತು ಉದ್ಯೋಗದ ನಂಟಿನ ಕುರಿತ ಚರ್ಚೆಗಳೂ ಮತ್ತೆ ಮುನ್ನೆಲೆಗೆ ಬಂದಿವೆ. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆಯುವ ಮೂಲಕ ಹಿಂದಿಯೇತರ ಭಾಷಿಗರನ್ನು ದಿಕ್ಕುತಪ್ಪಿಸುತ್ತಿರುವವರ ಹುನ್ನಾರದ ಬಗ್ಗೆಯೂ ತೀವ್ರ ಚರ್ಚೆಗಳು ನಡೆಯುತ್ತಿವೆ. ಸಂವಿಧಾನದ ಪ್ರಕಾರ ಯಾವುದೇ ಒಂದು ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನವನ್ನು ನೀಡಲಾಗಿಲ್ಲ.
ಹಾಗೇ ರಾಜ್ಯದ ಸಂಸದರು, ಕನ್ನಡದ ಪರ ನಿಲ್ಲುವ ಬದಲು, ಪಕ್ಷಕ್ಕೆ ಜೋತುಬಿದ್ದು ತಮ್ಮ ಸರ್ಕಾರದ ಹಿಂದಿ ಹೇರಿಕೆಯನ್ನೇ ಸಮರ್ಥಿಸಿಕೊಂಡು ಹೇಳಿಕೆ ನೀಡುತ್ತಿರುವುದರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ ಕೇಂದ್ರ ಸಚಿವ ಸುರೇಶ್ ಅಂಗಡಿ, ಸಂಸದೆ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಮುಂತಾದ ಬಿಜೆಪಿ ಸಂಸದರು ಕನ್ನಡ ನಾಡು- ನುಡಿಯ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುದು ಅವರ ಹೇಳಿಕೆಗಳಿಂದ ವ್ಯಕ್ತವಾಗುತ್ತಿದೆ.
ಇಡೀ ತಮಿಳುನಾಡಿನಲ್ಲಿ ಈ ವಿಷಯದಲ್ಲಿ ಅಲ್ಲಿನ ರಾಜಕಾರಣಿಗಳು ಯಾವ ಪಕ್ಷಬೇಧವಿಲ್ಲದೆ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಪ್ರಬಲ ಪ್ರತಿರೋಧ ಒಡ್ಡಿದ್ದಾರೆ. ದ್ವಿಭಾಷಾ ಸೂತ್ರ ಅನುಸರಿಸುತ್ತಿರುವ ತಮ್ಮ ಮೇಲೆ ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆಗೆ ಮುಂದಾದರೆ ಅದರ ಪರಿಣಾಮ ಭೀಕರವಾಗಿರಲಿದೆ ಎಂಬ ಕಠಿಣ ಸಂದೇಶ ಯಶಸ್ವಿಯಾಗಿ ರವಾನಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಹಿಂದಿ ಕಡ್ಡಾಯ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದೆ. ಆದರೆ, ಅತಿಹೆಚ್ಚು ಮಂದಿ ಬಿಜೆಪಿ ಸಂಸದರನ್ನೇ ಆರಿಸಿ ಕಳಿಸಿರುವ ಕನ್ನಡಿಗರು, ಇಂತಹ ಹೊತ್ತಲ್ಲಿ ಸಂಸದರ ಬೆಂಬಲ ನಿರೀಕ್ಷಿಸುವ ಸ್ಥಿತಿ ಇಲ್ಲ. ಬಿಜೆಪಿಯ ಯಾವೊಬ್ಬ ಸಂಸದರೂ ಹಿಂದಿ ಹೇರಿಕೆಯನ್ನು ಪ್ರಶ್ನಿಸಿಲ್ಲ. ಬದಲಾಗಿ, ಹಿಂದಿ ಕಲಿಯುವುದರಿಂದ ಅನುಕೂಲವೇ ಹೆಚ್ಚು. ಹಾಗಾಗಿ ಯಾಕೆ ವಿರೋಧಿಸುತ್ತಿದ್ದೀರಿ ಎಂದು ಕನ್ನಡಿಗರಿಗೆ ಪಾಠ ಹೇಳುತ್ತಿದ್ದಾರೆ. ಆ ಮೂಲಕ ತಾವು ಬಿಜೆಪಿ ಮತ್ತು ಹಿಂದುತ್ವ ಏಕ ಭಾಷೆ, ಏಕ ರಾಷ್ಟ್ರ, ಏಕ ಧರ್ಮದ ಸಿದ್ಧಾಂತಕ್ಕೆ ಬದ್ಧರೇ ವಿನಃ, ಕನ್ನಡ ನಾಡು-ನುಡಿಯ ವಿಷಯಕ್ಕಲ್ಲ ಎಂಬುದನ್ನು ಪರೋಕ್ಷವಾಗಿ ಸಾರಿದ್ದಾರೆ.
ಒಟ್ಟಾರೆ, ತಮಿಳುನಾಡಿನ ರಾಜಕೀಯ ಪಕ್ಷಗಳ ಬೆಂಬಲಿತ ಹೋರಾಟ ಒಂದೇ ದಿನದಲ್ಲಿ ಕೇಂದ್ರ ಸರ್ಕಾರವನ್ನು ಮಣಿಸಿ ಕನಿಷ್ಠ ಸ್ಪಷ್ಟನೆ ಪಡೆಯುವಲ್ಲಿ ಯಶಸ್ವಿಯಾಗಿದ್ದರೆ, ಕನ್ನಡಿಗರು ಇನ್ನೂ ಸಂಘಟನೆಯ ವಿಷಯದಲ್ಲೇ ಒಮ್ಮತ ಮೂಡದ ಅತಂತ್ರ ಸ್ಥಿತಿಯಲ್ಲಿದ್ದಾರೆ. ರಾಜಕೀಯ ಪಕ್ಷಗಳ ಪೈಕಿ, ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೆಲವು ನಾಯಕರು ಹಿಂದಿ ಹೇರಿಕೆಗೆ ತಮ್ಮ ವಿರೋಧವಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ರಾಷ್ಟ್ರೀಯತೆಯ ಜಪ ಮಾಡುವ ಬಿಜೆಪಿಯ ಯಾವ ನಾಯಕರೂ ಹಿಂದಿ ಹೇರಿಕೆಯ ವಿರುದ್ಧವಾಗಲೀ, ಕನ್ನಡದ ಪರವಾಗಲೀ ಹೇಳಿಕೆ ನೀಡಿಲ್ಲ. ಬದಲಾಗಿ ಹಿಂದಿಯ ಪರ ವಕಾಲತ್ತು ವಹಿಸಿದ್ದಾರೆ. ಅದರಲ್ಲೂ ತೇಜಸ್ವಿ ಸೂರ್ಯರಂಥವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಂಸ್ಕೃತವೂ ಸೇರಿದಂತೆ ಐದಾರು ಭಾಷೆಯನ್ನು ಕಲಿಸಬೇಕು ಎಂದಿದ್ದಾರೆ!
ಒಟ್ಟಾರೆ, ನುಡಿ ಮತ್ತು ನಾಡಿನ ವಿಷಯದಲ್ಲಿ ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುವ ರಾಷ್ಟ್ರೀಯ ಪಕ್ಷಗಳ ಕನ್ನಡ ವಿರೋಧಿ ನಿಲುವು ಇದೀಗ ಬಿಜೆಪಿ ಸಂಸದರ ವಿಷಯದಲ್ಲಿ ಇನ್ನಷ್ಟು ನಿಚ್ಛಳವಾಗಿದೆ. ಜೊತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯ ಗೊಂದಲಗಳು ಕೂಡ!