ನಿರೀಕ್ಷೆಯಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಹೇಳಿದರು. ಮುಖ್ಯವಾಗಿ ಲೋಕಸಭಾ ಚುನಾವಣಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಇಲ್ಲಿಯವರೆಗೂ, ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನಿರೀಕ್ಷಿತವಾಗಿ ಭಾರೀ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂಬ ಹಿನ್ನೆಲೆಯಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಕಳೆದ ವರ್ಷದ ಆಗಸ್ಟ್ ನಲ್ಲಿ ಎಚ್ ವಿಶ್ವನಾಥ್ ಅವರು ಜೆಡಿಎಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಸರಿಸುಮಾರು ಒಂದು ವರ್ಷದಲ್ಲಿ ಇದೀಗ ಪಕ್ಷದ ಉನ್ನತ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಲೋಕಸಭಾ ಚುನಾವಣೆಯ ಹೊತ್ತಲ್ಲಿಯೇ ಎಚ್ ವಿಶ್ವನಾಥ್ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವಿನ ರಾಜಕೀಯ ಜಿದ್ದಾಜಿದ್ದಿ ಕಾವೇರಿತ್ತು. ಅಲ್ಲದೆ, ಒಂದು ಹಂತದಲ್ಲಿ ಅದು ಚುನಾವಣಾ ಕಣದಲ್ಲಿ ಉಭಯ ಪಕ್ಷಗಳಿಗೆ ಮುಜುಗರ ತರುವ ಮಟ್ಟಕ್ಕೆ ಬೆಳೆದಿತ್ತು. ಆ ಹಿನ್ನೆಲೆಯಲ್ಲಿ, ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವತಃ ಮಧ್ಯಪ್ರವೇಶಿಸಿ, ಒಂದು ಕಾಲದ ಪರಮಾಪ್ತ ಮಿತ್ರರ ಈ ಜಿದ್ದಾಜಿದ್ದಿಗೆ ವಿರಾಮ ಹಾಕಿದ್ದರು. ಜೊತೆಗೆ, ಮೈತ್ರಿಕೂಟದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ದೂರಮಾಡಿ, ಆ ಸ್ಥಾನಕ್ಕೆ ತಾವು ಕೂರಬೇಕು ಎಂಬ ಲೆಕ್ಕಾಚಾರ ಕೂಡ ವಿಶ್ವನಾಥ್ ಅವರದ್ದಾಗಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.
ಒಟ್ಟಾರೆ ಕಳೆದ ಮೂರು ತಿಂಗಳಿಂದ ಒಂದಿಲ್ಲೊಂದು ಹೇಳಿಕೆ, ಆರೋಪ, ಪ್ರತಿ ಆರೋಪಗಳ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದ ಎಚ್ ವಿಶ್ವನಾಥ್ ಅವರು ಇದೀಗ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಹಂತವಾಗಿ ಅವರು ಪಕ್ಷವನ್ನೇ ತೊರೆದು, ಬಿಜೆಪಿ ಸೇರಬಹುದು ಎಂಬ ವದಂತಿಗಳೂ ಇವೆ. ಸದ್ಯಕ್ಕಂತೂ ಅವರ ರಾಜೀನಾಮೆಯ ಮುಂದಿನ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ.