ದೊಡ್ಡಬಳ್ಳಾಪುರ: ಮೀಟರ್ ಬಡ್ಡಿ ದಂದೆಯ ಹಿಂಸೆ ತಾಳಲಾರದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಭಾಶ್ಚಂದ್ರ (42) ಎಂಬ ರೈತ ಸಾಲದ ಶೂಲಕ್ಕೆ ಸಿಲುಕಿ ತಮ್ಮ ಹೊಲದಲ್ಲಿರುವ ಮರಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ರೈತ ಸುಭಾಶ್ ವಾರಕ್ಕೆ ಶೇಕಡಾ 10ರಷ್ಟು ಬಡ್ಡಿಯಂತೆ 2ಲಕ್ಷದ 20 ಸಾವಿರ ಸಾಲ ಮಾಡಿಕೊಂಡಿದ್ದ. ನಿಗದಿತ ಸಮಯಕ್ಕೆ ಹಣ ಪಾವತಿಸದ ಸುಭಾಶ್ಗೆ ಸಾಲಗಾರರು ನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.
ಶನಿವಾರ ನವೀನ್ ಮತ್ತು ಸಂತೋಷ ಎಂಬುವರು ಸುಭಾಶ್ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಡ್ಡಿ ಸಮೇತ ಹಣ ಹಿಂದಿರುಗಿಸುವಂತೆ ಗಲಾಟೆ ಮಾಡಿದ್ದರು ಎಂದು ಮಗಳು ತನುಶ್ರೀ ಆರೋಪಿಸಿದ್ದಾಳೆ.
ಮತ್ತೆ ಸೋಮವಾರ ಸುಭಾಶ್ ಗೆ ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಹಣ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಹತ್ತು ದಿನಗಳ ಕಾಲಾವಕಾಶ ನೀಡುವಂತೆ ಸುಭಾಷ್ ಗೆಳೆಯರು ಮನವಿ ಮಾಡಿದರೂ ಸಾಲಗಾರರು ಅದಕ್ಕೆ ಒಪ್ಪಲಿಲ್ಲ. ಅಲ್ಲದೇ 2,20,000 ಕ್ಕೆ 4,00,000 ಬಡ್ಡಿ ಸೇರಿ 6,20,000 ಹಣ ಕೊಡಬೇಕು ಎಂದು ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಾಲಗಾರರ ಹಿಂಸೆ ತಾಳಲಾರದೆ ತನ್ನ ಹೊಲದಲ್ಲೇ ಇದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಾಗಿದ್ದಾನೆ. ಮಗ ನಿಖಿಲ್ ಹೊಲದ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ತನ್ನ ಪತಿ ನಾಲ್ಕು ತಿಂಗಳ ಹಿಂದೆ ಸಾಲ ಮಾಡಿಕೊಂಡಿದ್ದಾರೆ, ಆದರೆ, ಈ ವಿಚಾರವೇ ನಮಗೆ ತಿಳಿದಿರಲಿಲ್ಲ. ಸಾಲಗಾರರು ಮನೆಯ ಬಳಿ ಬಂದು ಗಲಾಟೆ ಮಾಡಿದಾಗಲೇ ನಮಗೆ ತಿಳಿಯಿತೆಂದು ಪತ್ನಿ ನೇತ್ರಾವತಿ ಹೇಳಿಕೆ ನೀಡಿದ್ದಾರೆ.
ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿ: ರಾಜು ಸಣ್ಣಕ್ಕಿ, ದೊಡ್ಡಬಳ್ಳಾಪುರ