ಕೇರಳದಲ್ಲಿ ಮತ್ತೆ ಮಾರಾಣಾಂತಿಕ ನಿಫಾ ಭೀತಿ ಕಾಣಿಸಿಕೊಂಡಿದೆ. ನಿಫಾ ಸೋಂಕಿನ ಲಕ್ಷಣಗಳು ಕೊಚ್ಚಿಯ ಕಾಲೇಜು ವಿದ್ಯಾರ್ಥಿಯಲ್ಲಿ ಕಾಣಿಸಿಕೊಂಡಿದೆ ಎಂದು ಸರ್ಕಾರ ದೃಢಪಡಿಸಿದೆ.
ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
23 ವರ್ಷದ ಯುವಕನಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದ್ದು, ಯುವಕನ ರಕ್ತದ ಮಾದರಿಯನ್ನು ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಪರೀಕ್ಷೆ ನಡೆಸಲಾಗಿತ್ತು, ಈ ವೇಳೆ ಆತನ ರಕ್ತದಲ್ಲಿ ವೈರಸ್ ಇರುವುದು ಖಚಿತವಾಗಿದೆ. ಸೋಂಕು ತಗುಲಿದ ಯುವಕನಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ನರ್ಸ್ ಗಳು ಸಹ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಅಲ್ಲದೇ ಯುವಕನೊಂದಿಗೆ ಸಂಪರ್ಕದಲ್ಲಿದ್ದ 86 ಮಂದಿಯ ಪಟ್ಟಿ ತಯಾರಿಸಲಾಗಿದ್ದು, ಅವರ ಮೇಲೂ ನಿಗಾ ಇಡಲಾಗುವುದು. ಜನತೆ ಹೆದರುವ ಅಗತ್ಯವಿಲ್ಲ. ವೈರಸ್ ಖಚಿತವಾಗುವ ಮೊದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವೆ ಕೆ. ಕೆ ಶೈಲಜಾ ತಿಳಿಸಿದ್ದಾರೆ.
ಕಳೆದ ವರ್ಷ ನಿಫಾ ಸೋಂಕಿನ ಪರಿಣಾಮ 17 ಮಂದಿ ಬಲಿಯಾಗಿದ್ದರು, ಮತ್ತೆ ಇಂತಹ ಅನಾಹುತ ಮರುಕಳಿಸದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕ್ಕೆ ಕೇರಳ ಆರೋಗ್ಯ ಸಚಿವಾಲಯ ಸಿದ್ಧತೆ ನಡೆಸಿದ್ದು, ಆಸ್ಟ್ರೇಲಿಯಾದಿಂದ ಮೊನೊಕ್ಲೋನಲ್ ಆಂಟಿಬಾಡಿ ಗಳನ್ನು ತರಿಸಿಕೊಳ್ಳಲು ವ್ಯವಸ್ಥೆ ಮಾಡಿದೆ ಎಂದು ಮೂಲಗಳು ತಿಳಿಸಿದೆ.