ಬೆಂಗಳೂರು: ರಾಜ್ಯಾದ್ಯಂತ ಈದ್ ಉಲ್ ಫಿತ್ರ್ ಅನ್ನು ಬುಧವಾರ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ವೌಲಾನ ಮುಹಮ್ಮದ್ ಮಖ್ಸೂದ್ ಇಮ್ರಾನ್ ರಶಾದಿ ತಿಳಿಸಿದರು.
ಮಂಗಳವಾರ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ನಡೆದ ರಾಜ್ಯ ಚಂದ್ರ ದರ್ಶನ ಸಮಿತಿಯ ಸಭೆಯ ಬಳಿಕ ಅವರು ಮಾತನಾಡಿದರು.
ದೇಶದ ವಿವಿಧ ಭಾಗಗಳಲ್ಲಿ ಚಂದ್ರ ದರ್ಶನವಾಗಿರುವ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರು ಬುಧವಾರ ಹಬ್ಬ ಆಚರಿಸಲು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಮಖ್ಸೂದ್ ಇಮ್ರಾನ್ ರಶಾದಿ ಹೇಳಿದರು.
ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಧಾರ್ಮಿಕ ಮುಖಂಡರಾದ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ವೌಲಾನ ಎಜಾಝ್ ಅಹ್ಮದ್ ನದ್ವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.