ಬೆಂಗಳೂರು: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಆರು ತಿಂಗಳಾದರೂ ಇನ್ನೂ ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಕೂಡಲೇ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಇಂದು ವಿಧಾನಸೌಧದ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುತ್ತಿದೆ.
2018-19ನೇ ಸಾಲಿನಲ್ಲಿ ರಾಜ್ಯದ ಒಟ್ಟು 67 ಸಕ್ಕರೆ ಕಾರ್ಖಾನೆಗಳು ಅಂದಾಜು 4 ಕೋಟಿ ಟನ್ ಕಬ್ಬನ್ನು ನುರಿಸಿದೆ. ಆದರೆ ಕಬ್ಬು ಪೂರೈಸಿದ ರೈತರಿಗೆ ಮಾತ್ರ ನಿಗದಿಯಾದ ದರದ ಅನ್ವಯ ಬರೋಬ್ಬರಿ 3 ಸಾವಿರ ಕೋಟಿ ಪಾವತಿ ಮಾಡಿಲ್ಲ,ಇದರಿಂದ ಹಲವು ರೈತರು ಕಂಗಾಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಕಬ್ಬು ಬಾಕಿ ಹಣ ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಬಾಕಿ ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಆರು ತಿಂಗಳಾಗಿದೆ ಇನ್ನೂ ಬಿಲ್ ಪಾವತಿಯಾಗಿಲ್ಲ. ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ 14 ದಿನಗಳ ಒಳಗೆ ಹಣ ಪಾವತಿ ಮಾಡಬೇಕು ಎಂಬ ನಿಯಮವಿದೆ. ಹೀಗಿದ್ದರೂ ಕಾರ್ಖಾನೆ ಮಾಲೀಕರು ಈ ನಿಯಮವನ್ನು ನಿರ್ಲಕ್ಷಿಸುವ ಮೂಲಕ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.