2014ರಿಂದ 2018ರ ವರೆಗಿನ 5 ವರ್ಷಗಳ ಬಿಜೆಪಿ ಅಧಿಕಾರದ ಅವಧಿಯಲ್ಲಿ ಭಾರತ ಒಟ್ಟು 1,20,000 ಹೆಕ್ಟೇರ್ ಪ್ರಾಥಮಿಕ ಅರಣ್ಯವನ್ನು ಕಳೆದುಕೊಂಡಿದ್ದು ಇದು 2009ರಿಂದ 2013ರ ವರೆಗೆ ನಷ್ಟವಾಗಿದ್ದಕ್ಕಿಂತ ಶೇಕಡಾ 30ರಷ್ಟು ಹೆಚ್ಚಾಗಿದೆ.
ನಾಸಾ ಸೆಟಲೈಟುಗಳು ಪ್ರಪಂಚದಾದ್ಯಂತ ತೆಗೆದ ಅರಣ್ಯಗಳ ಚಿತ್ರಗಳನ್ನು ಬಳಸಿಕೊಂಡು ಅರಣ್ಯ ನಷ್ಟದ ಕುರಿತು ಮೇರಿಲ್ಯಾಂಡ್ ಯೂನಿವರ್ಸಿಟಿ ಸಿದ್ಧಪಡಿಸಿರುವ ಈ ಮಾಹಿತಿಯನ್ನು ಗ್ಲೋಬಲ್ ಫಾರೆಸ್ಟ್ ವಾಚ್ ಸಂಸ್ಥೆ ಬಿಡುಗಡೆಗೊಳಿಸಿದೆ. ಇದು ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆಯಾದ ವರ್ಲ್ಡ್ ರಿಸೋರ್ಸಸ್ ಇನ್ಸ್ಟೊಟ್ಯೂಟ್ (WRI) ನ ಅಂಗಸಂಸ್ಥೆಯಾಗಿದೆ.
2016ರಲ್ಲಿ 30,936 ಹೆಕ್ಟೇರ್ ಹಾಗೂ 2017ರಲ್ಲಿ 29,563ಹೆಕ್ಟೇರ್ಗಳ ಅತ್ಯಧಿಕ ದಾಖಲೆಯ ಅರಣ್ಯ ನಷ್ಟದೊಂದಿಗೆ 2014ರಿಂದ 2018ರ ನಡುವೆ ಒಟ್ಟು 1,22,748 ಹೆಕ್ಟೇರ್ ಕಾಡು ನಷ್ಟವಾಗಿರುವುದು ದಾಖಲಾಗಿದೆ. 2009 ಹಾಗೂ 2013ರ ನಡುವೆ ಯುಪಿಎ-2ರ ಅವಧಿಯಲ್ಲಿ ನಷ್ಟವಾಗಿದ್ದ ಕಾಡಿನ ಪ್ರಮಾಣ 77,963ಹೆಕ್ಟೇರ್. ಅದಕ್ಕೂ ಮುಂಚಿನ ಯುಪಿಎ-1ರ ಅವಧಿಯಲ್ಲಿ 2004ರಿಂದ 2008ರ ನಡುವೆ ಒಟ್ಟು 87,350 ಹೆಕ್ಟೇರ್ ಕಾಡು ನಷ್ಟವಾಗಿರುವುದು ದಾಖಲಾಗಿದೆ.
ಈ ಪ್ರಮಾಣದಲ್ಲಿ ಅರಣ್ಯ ನಾಶಕ್ಕೆ ಕಾರಣ ಏನೆಂದು ನಿರ್ದಿಷ್ಟವಾಗಿ ಸಂಸ್ಥೆ ತಿಳಿಸಿಲ್ಲವಾದರೂ 2015ರ ವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಗಣಿಗಾರಿಕೆಗಾಗಿ, ಮರದ ದಿಮ್ಮಿಗಳಿಗಾಗಿ ಕಾಡುನಾಶ ಹಾಗೂ ಕುಮರಿ ಬೇಸಾಯಕ್ಕಾಗಿ ಕಾಡನ್ನು ನಾಶ ಮಾಡಲಾಗಿದೆ.
ಭಾರತ ಮಾತ್ರವಲ್ಲದೇ ಬೆಲ್ಜಿಯಂ, ಬ್ರೆಜಿಲ್, ಇಂಡೊನೇಶಿಯಾ, ಕಾಂಗೋ. ಕೊಲಂಬಿಯಾ ಹಾಗೂ ಬೊಲಿವಿಯಾ ದೇಶಗಳಲ್ಲೂ ಸಹ ವ್ಯಾಪಕ ಪ್ರಮಾಣದ ಕಾಡುಗಳು ನಾಶವಾಗಿವೆ ಎಂದು ವರದಿ ಹೇಳಿದೆ. 2018ರ ಒಂದೇ ವರ್ಷದಲ್ಲಿ 12 ದಶಲಕ್ಷ ಹೆಕ್ಟೇರ್ ಕಾಡು ನಾಶವಾಗಿದ್ದು, ಆ ವರ್ಷ ಪ್ರತಿ ನಿಮಿಷಕ್ಕೆ 30 ಫುಟ್ಬಾಲ್ ಮೈದಾನಗಳಷ್ಟು ಕಾಡು ನಾಶವಾಗಿದೆ ಎಂದು ವರದಿ ಹೇಳಿದೆ.
2001ರ ನಂತರ ಜಾಗತಿಕ ಮಟ್ಟದಲ್ಲಿ ದಾಖಲಾಗಿರುವ ಅರಣ್ಯ ನಷ್ಟದಲ್ಲಿ 2018ರಲ್ಲಿ ಆಗಿರುವ ನಷ್ಟವೇ ಅತಿ ಹೆಚ್ಚಿನದು ಎಂದು ವರದಿ ತಿಳಿಸಿದೆ.
If this continue in another five years India will face drastic change of environment and carbon dioxide fill in the air and devastating india