16 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವೊಂದರಲ್ಲಿ ಸಿಬಿಐನಿಂದ ಬಂಧಿತನಾಗಿ ಜೈಲು ಕಂಬಿ ಎಣಿಸುತ್ತಿರುವ ಬಿಜೆಪಿ ಶಾಸಕನನ್ನು ಭೇಟಿ ಮಾಡಿ ಬಂದಿರುವ ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್, “ಚುನಾವಣೆ ನಂತರ ಅವರಿಗೆ ಥ್ಯಾಂಕ್ಸ್ ಹೇಳಲು ಬಂದಿದ್ದೆ” ಎಂದಿದ್ದಾರೆ.
ಸಾಕ್ಷಿ ಮಹಾರಾಜ್ ಜೈಲಿನಲ್ಲಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿ ಬಂದಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನಗರ್ ನನ್ನು ಕಳೆದ ಏಪ್ರಿಲ್ ತಿಂಗಳಿನಲ್ಲಿ ಸಿಬಿಐ ಬಂಧಿಸಿತ್ತು.
ಉತ್ತರ ಪ್ರದೇಶದ ಸಿತಾಪುರ ಜೈಲಿನಲ್ಲಿರುವ ಅತ್ಯಾಚಾರ ಆರೋಪಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನಗರ್ನನ್ನು ಇಂದು ಭೇಟಿ ಮಾಡಿರುವ ಕುರಿತು ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಉನ್ನಾವೋ ಕ್ಷೇತ್ರದ ಸಂಸದನಾಗಿರುವ ಸಾಕ್ಷಿ ಮಹಾರಾಜ್, “ಅವರನ್ನು ಬಹಳ ಕಾಲದಿಂದ ಇಲ್ಲಿ ಕೂಡಿಹಾಕಲಾಗಿದೆ, ನಾನು ಅವರನ್ನು ಭೇಟಿ ಮಾಡಿ ಚುನಾವಣೆ ನಂತರ ಥ್ಯಾಂಕ್ಸ್ ಹೇಳಲು ಬಂದಿದ್ದೆ” ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ ಸಾಕ್ಷಿ ಮಹಾರಾಜ್ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉನ್ನಾವೋ ಅತ್ಯಾಚಾರಿ ಶಾಸಕ ಮನೆಗೂ ಭೇಟಿ ನೀಡಿದ್ದರು.
ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ತನಿಖಾ ದಳವು (ಸಿಬಿಐ) ಉನ್ನಾವೋ ಬಿಜೆಪಿ ಶಾಸಕ ನೆನಗರ್ ನನ್ನು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪದಲ್ಲಿ ಬಂಧಿಸಿ, ಪೋಸ್ಟೋ ಕಾಯ್ದೆಯ ಅಡಿ ಜೈಲಿಗೆ ಕಳಿಸಿತ್ತು. ಅತ್ಯಾಚಾರ ಸಂತ್ರಸ್ಥೆಯ ತಂದೆಯನ್ನು ಕೊಲೆ ಮಾಡಿದ ಕೇಸಿನಲ್ಲಿ ಸೆನೆಗರ್ ನ ಸಹೋದರ ಜೈ ದೀಪ್ ಸಿಂಗ್ ಮೇಲೆ ಸಹ ಪ್ರಕರಣ ದಾಖಲಾಗಿತ್ತು.
ಅತ್ಯಾಚಾರ ಸಂತ್ರಸ್ಥೆಯ ತಂದೆಯು ಆರೋಪಿ ಶಾಸಕನನ್ನು ಅಪಮಾನಿಸಿದ ಎಂದು ಅವನ ಮೇಲೆ ಶಾಸಕನ ಸಹೋದರ ಇನ್ನಿತರ ಐದು ಜನರೊಂದಿಗೆ ಸೇರಿ ಹಲ್ಲೆ ನಡೆಸಿ ಬಾಲಕಿಯ ತಂದೆಯ ಸಾವಿಗೆ ಕಾರಣನಾಗಿದ್ದ ಎಂದು ಸಿಬಿಐ ಆರೋಪಿಸಿತ್ತು.