ಶಿವಮೊಗ್ಗ: ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರಾಗಿರುವ ರಾಜ್ಯದ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಆಗುಂಬೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪಶ್ಚಿಮ ಘಟ್ಟದಲ್ಲಿರುವ ಸುಂದರ ಪ್ರವಾಸಿ ತಾಣವೂ ಹೌದು.
ವರ್ಷಪೂರ್ತಿ ಮಳೆ ಬೀಳುವ ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ. ಸಾಯಂಕಾಲದಲ್ಲಿ ಸೂರ್ಯಾಸ್ತದ ದೃಶ್ಯವನ್ನು ವೀಕ್ಷಿಸಲು ದೇಶ-ವಿದೇಶದಿಂದಲೂ ಸಾವಿರಾರು ಜನರು ಬರುತ್ತಾರೆ.
ಹೀಗೆ ವರ್ಣಿಸಲಸಾಧ್ಯವಾದ ಇಂತಹ ರಮಣೀಯ ಆಗುಂಬೆಗೆ ಮಳೆಯೇ ಜೀವಾಳ, ಆದರೆ ಇದೀಗ ಇಲ್ಲೂ ಮಳೆಯ ಕೊರತೆ ಆರಂಭವಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಆಗುಂಬೆಯಲ್ಲಿ ಮಳೆ ಪ್ರಮಾಣ ತೀವ್ರ ಪ್ರಮಾಣದಲ್ಲಿ ಕುಸಿದಿದೆ. 2019ರ ಜನವರಿಯಿಂದ ಈವರೆಗೂ ಆಗುಂಬೆಯಲ್ಲಿ ಕೇವಲ 5 ಸೆಂಟಿ ಮೀಟರ್ ಮಳೆಯಾಗಿದೆ, 2018ರಲ್ಲಿ ಈ ಹೊತ್ತಿಗೆ 27 ಸೆಂಟಿ ಮೀಟರ್ ಮಳೆಯಾಗಿತ್ತು. ಅರಣ್ಯ ನಾಶವೇ ಮಳೆ ಕೊರತೆಗೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಮಳೆಯ ಕುಸಿತದ ಪರಿಣಾಮ ಎಷ್ಟಿದೆ ಎಂದರೆ ಸದಾ ಮಳೆ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ, ಪಶ್ಚಿಮಘಟ್ಟದಲ್ಲಿ ಇದೀಗ ನೀರಿಗೂ ಬರಗಾಲ ಉಂಟಾಗಿದೆ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೂ ತತ್ವಾರ ಎದುರಿಸುತ್ತಿದ್ದಾರೆ.
ಹವಾಮಾನ ಇಲಾಖೆಯ ದತ್ತಾಂಶಗಳ ಪ್ರಕಾರ, ಆಗುಂಬೆಯಲ್ಲಿನ ಮಳೆ ಕಾಡುಗಳಲ್ಲಿ 5 ಪಟ್ಟಿಗಿಂತ ಕಡಿಮೆ ಮಳೆಯಾಗಿದೆ. ಕಳೆದ ವರ್ಷ ಮೇ ತಿಂಗಳ ಹೊತ್ತಿಗೆ 20 ಸೆಂಮೀ ಮಳೆಯಾಗಿತ್ತು. 2016ರಲ್ಲಿ 6,151.7 ಮಿಲಿ ಮೀಟರ್, 2017ರಲ್ಲಿ 6,276.4 ಮಿಲಿ ಮೀಟರ್ ಮತ್ತು 2018ರಲ್ಲಿ 8,208.9 ಮಿಲಿ ಮೀಟರ್ ಮಳೆಯಾಗಿತ್ತು. ವಾರ್ಷಿಕವಾಗಿ ಇಲ್ಲಿ ಅಂದಾಜು 7,624.2 ಮಿಲಿ ಮೀಟರ್ ಮಳೆಯಾಗುತ್ತದೆ ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿನ ಮಳೆ ಕೊರತೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪರಿಸರ ತಜ್ಞ ಕಲ್ಕುಳಿ ವಿಠ್ಠಲ್ ಹೆಗಡೆ, ಜಾಗತಿಕ ತಾಪಮಾನ ಮತ್ತು ನಗರೀಕರಣ ಮಳೆ ಅಭಾವಕ್ಕೆ ಪ್ರಮುಖ ಕಾರಣಗಳಾಗಿದೆ. ವಿಶೇಷವಾಗಿ ಈ ಬಾರಿ ಎಲ್ನಿನೊ ಚಂಡಮಾರುತದ ಪರಿಣಾಮವೂ ಮಳೆ ಕೊರತೆಗೆ ಕಾರಣವಾಗಿದೆ.
ಅಷ್ಟೇ ಅಲ್ಲದೇ, ಶಿವಮೊಗ್ಗದಲ್ಲಿ ಹಲವು ಸಿಮೆಂಟ್ ಕಾರ್ಖಾನೆಗಳಿವೆ, ವರ್ಷದಿಂದ ವರ್ಷಕ್ಕೆ ಇನ್ನಷ್ಟು ಕಾರ್ಖಾನೆಗಳು ಹೆಚ್ಚುತ್ತಲೇ ಇದೆ. ಒಂದು ಟನ್ ಸಿಮೆಂಟ್ ಉತ್ಪಾದನೆಗೆ ಒಂದು ಟನ್ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಸಹ ಪರಿಸರ ಮೇಲೆ ಅಗಾಧ ಪ್ರಮಾಣ ಬೀರುತ್ತಿದೆ.
ಎಲ್ಲಿ ಮಳೆ ಬೀಳಬೇಕೊ ಅಲ್ಲಿ ಬೀಳುವುದಿಲ್ಲ, ಮಳೆಯೇ ಬೀಳದಂಥ ಪ್ರದೇಶದಲ್ಲಿ ಪ್ರವಾಹದಂಥ ಮಳೆಯಾಗುತ್ತಿದೆ. ಮಳೆ ಬೀಳುವ ದಿನಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಮಳೆಯ ಪ್ರಮಾಣ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನದ ಪರಿಣಾಮದಿಂದ ವಾತಾವರಣವು ಬದಲಾಗುತ್ತಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.