ರಂಜಾನ್ ಪ್ರಯುಕ್ತ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಧಾರ್ಮಿಕ ಸಹಬಾಳ್ವೆಯ ಸಂದೇಶ ನೀಡಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕುರಿತು ಲೇವಡಿ ಮಾಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮೇಲೆ ನಿತೀಶ್ ಕುಮಾರ್ ಮಾತಿನ ಚಾಟಿ ಬೀಸಿದ್ದಾರೆ. “ಅನವಶ್ಯಕ ಹೇಳಿಕೆ ನೀಡಿ ತಮ್ಮ ಮೇಲೆ ಗಮನ ಕೇಂದ್ರೀಕರಿಸಿಕೊಳ್ಳುವ ಅಂತಹವರಿಗೆ ಧರ್ಮವೇ ಇಲ್ಲ” ಎಂದು ಗಿರಿರಾಜ್ ಸಿಂಗ್ ಕುರಿತು ನಿತೀಶ್ ಕುಮಾರ್ ಕಿಡಿ ಕಾರಿದ್ದಾರೆ.
ತಮ್ಮ ತಲೆಗೆ ಬಿಳಿ ಟೋಪಿ ಹಾಕಿಕೊಂಡಿದ್ದ ನಿತೀಶ್ ಕುಮಾರ್ ಪಾಟ್ನಾದಲ್ಲಿ ಮಸೀದಿಯೊಂದರಲ್ಲಿ ಈದ್ –ಉಲ್-ಫಿತ್ರ್ ಪ್ರಯುಕ್ತ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬಿಜೆಪಿ ಮಿತ್ರಪಕ್ಷದ ರಾಮ್ ವಿಲಾಸ್ ಪಾಸ್ವಾನ್, ಬಿಜೆಪಿ ಸುಶೀಲ್ ಮೋದಿ ಹಾಗೂ ನಿತೀಶ್ ಕುಮಾರ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದನ್ನು ಟೀಕಿಸಿದ್ದ ಬಿಹಾರದ ಬೇಗುಸರಾಯ್ ಸಂಸದ ಗಿರಿರಾಜ್ ಸಿಂಗ್, “ಇದೇ ಉತ್ಸಾಹವನ್ನು ನವರಾತ್ರಿಯಲ್ಲಿ ತೋರುವುದಿಲ್ಲ” ಎಂದು ತಮ್ಮ ಟ್ವಿಟರ್ ಖಾತೆಯಿಂದ ಟ್ವೀಕಿಸಿದ್ದರು.
“ಗಿರಿರಾಜ್ ಹೇಳಿದ್ದಕ್ಕೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕೆಲವು ಜನ ತಾವು ಸದಾ ಪ್ರಚಾರದಲ್ಲಿರಲು ಏನಾದರೂ ಅನಗತ್ಯವಾದುದನ್ನು ಹೇಳುತ್ತಿರುತ್ತಾರೆ. ಇದರ ಮೂಲಕ ಮೀಡಿಯಾ ಗಮನ ಸೆಳೆಯುತ್ತಾರೆ. ಅಂತಹ ಜನಕ್ಕೆ ಧರ್ಮವಿಲ್ಲ. ಯಾಕೆಂದರೆ ಪ್ರತಿಯೊಂದು ಧರ್ಮವೂ ಪರಸ್ಪರರನ್ನು ಗೌರವಿಸಲು ಪ್ರೀತಿಸಲು ಹೇಳಿಕೊಡುತ್ತದೆ” ಎಂದು ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ.
ಕೇಂದ್ರ ಸಚಿವರಾಗಿರುವ ಗಿರಿರಾಜ್ ಸಿಂಗ್ ಮಾಡಿದ್ದ ಟ್ವೀಟ್ ಕುರಿತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹ ಗರಂ ಆಗಿ ಇಂತಹ ಹೇಳಿಕೆ ನೀಡದಿರುವಂತೆ ತಿಳಿಸಿದ್ದರು
ಕೇಂದ್ರ ಸರ್ಕಾರದಲ್ಲಿ ಕೇವಲ ಒಂದು ಸಚಿವ ಸ್ಥಾನ ನೀಡಿದ್ದಕ್ಕೆ ನಿತೀಶ್ ಕುಮಾರ್ ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.