ಎಲ್ಲರಿಗೂ ಒಂದೇ ಅಚ್ಚರಿ! ದೇಶದಲ್ಲಿ ನಿರುದ್ಯೋಗ ಪ್ರಮಾಣ ಸರ್ವಕಾಲಿಕ ಗರಿಷ್ಟ ಮಟ್ಟಕ್ಕೆ ಏರಿದೆ, ಇಡೀ ಆರ್ಥಿಕತೆ ಹಿಂಜರಿತದ ಹಿಡಿತಕ್ಕೆ ಸಿಕ್ಕಿದೆ, ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜನರ ಕೊಳ್ಳವ ಶಕ್ತಿ ತಗ್ಗಿದೆ. ಗ್ರಾಮೀಣ ಪ್ರದೇಶದಲ್ಲಿನ ಸಂಕಷ್ಟಗಳಂತೂ ಹೇಳತೀರದು. ದೇಶದಲ್ಲಿ ಇಷ್ಟೆಲ್ಲ ಸಂಕಷ್ಟಗಳಿದ್ದರೂ ನರೇಂದ್ರ ಮೋದಿ ಹೇಗೆ ಗೆದ್ದರು ಎಂಬುದೇ ದೊಡ್ಡ ಅಚ್ಚರಿ.
ಐದು ವರ್ಷ ಮೋದಿ ಆಡಳಿತದಲ್ಲಿ ದೇಶದ ಆರ್ಥಿಕ ಸ್ಥಿತಿ ಸುಧಾರಿಸುವ ಬದಲು ಸಂಕಷ್ಟಕ್ಕೆ ಸಿಲುಕಿದೆ. ಮೋದಿ ಜಾರಿಗೆ ತಂದ ಅಪನಗದೀಕರಣ, ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆಯಿಂದ ಶುರುವಾದ ಜನರ ಸಂಕಷ್ಟಗಳು ಇನ್ನೂ ಹಾಗೇ ಇವೆ, ಮತ್ತಷ್ಟು ಉದ್ದೀಪಿಸಿವೆ. ಆದರೂ ಮೋದಿ ಗೆದ್ದಿದ್ದಾರೆ. ಮತ್ತೆ ಅಧಿಕಾರ ಹಿಡಿದಿದ್ದಾರೆ. ಮತ್ತೆ ಐದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಏನಾಗುತ್ತದೋ ಎಂಬ ಆತಂಕವೂ ಇದೆ.
ಈ ಆತಂಕಗಳ ನಡುವೆಯೇ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮಾಡಲಿದೆ. ಗುರುವಾರ ಬಡ್ಡಿದರ ಪ್ರಕಟಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿರುವ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ ದಾಸ್ RBI ಚುಕ್ಕಾಣಿ ಹಿಡಿದ ನಂತರ ನಡೆಯುತ್ತಿರುವ ಎರಡನೇ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆ ಇದು. ಶಕ್ತಿಕಾಂತ ದಾಸ್ ಮೊದಲ ಹಣಕಾಸು ನೀತಿ ಪರಾಮರ್ಶೆವೇಳೆ ಶೇ.0.25ರಷ್ಟು ಬಡ್ಡಿದರ ಕಡಿತ ಮಾಡಿದ್ದರು.
ಹಣಕಾಸು ನೀತಿ ಸಮಿತಿಯ ಎರಡನೇ ದ್ವೈಮಾಸಿಕ ಸಭೆಯಲ್ಲಿ ಮತ್ತೆ ಬಡ್ಡಿದರ ಕಡಿತ ಮಾಡುವುದು ಖಚಿತ ಎಂಬ ನಂಬಿಕೆ ಇಡೀ ಹಣಕಾಸು ಪೇಟೆಯಲ್ಲಿದೆ. ಬಡ್ಡಿದರ ಕಡಿತ ಮಾಡುವುದು ಅನಿವಾರ್ಯ ಕೂಡಾ ಎಂಬ ಪರಿಸ್ಥಿತಿ ತಲೆದೋರಿದೆ. ನಾಲ್ಕನೇ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳು ಆರ್ಥಿಕತೆ ಕುಸಿತದತ್ತ ಸಾಗಿರುವುದನ್ನು ಪ್ರತಿಬಿಂಬಿಸಿವೆ. ಅಲ್ಲದೇ ಹಣದುಬ್ಬರ ಪ್ರಮಾಣ ಸಹ ಬಡ್ಡಿದರ ಕಡಿತಕ್ಕೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಶಕ್ತಿಕಾಂತ ದಾಸ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಬಡ್ಡಿದರ ಕಡಿತ ಮಾಡವುದು ಖಚಿತ. ಆದರೆ, ಬಡ್ಡಿದರ ಎಷ್ಟು ಕಡಿತವಾಗಲಿದೆ ಎಂಬ ಲೆಕ್ಕಾಚಾರ ಈಗ ಹಣಕಾಸು ಪೇಟೆಯಲ್ಲಿ ನಡೆದಿದೆ. ಶೇ.0.25ರಷ್ಟು ಬಡ್ಡಿದರ ಕಡಿತವನ್ನು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಆರ್ಥಿಕತೆಗೆ ತ್ವರಿತ ಚೇತರಿಕೆ ನೀಡಬೇಕಾದರೆ ಶೇ.0.50ರಷ್ಟು ಬಡ್ಡಿದರ ಕಡಿತ ಮಾಡಬೇಕು ಎಂಬುದು ಹಲವು ಆರ್ಥಿಕ ತಜ್ಞರ ನಿರೀಕ್ಷೆ.
ಇಡೀ ಹಣಕಾಸು ಮಾರುಕಟ್ಟೆ ನಗದು ಕೊರತೆಯ ಬಿಕ್ಕಟ್ಟು ಎದುರಿಸುತ್ತಿದೆ. ಈ ಬಿಕ್ಕಟ್ಟು ನಿವಾರಣೆಗೂ RBI ಕ್ರಮಕೈಗೊಳ್ಳಬೇಕಿದೆ. ಅಂದರೆ, ಮಾರುಕಟ್ಟೆಯಲ್ಲಿ ನಗದು ಹರಿವು ಸಲೀಸಾಗುವಂತೆ ನೋಡಿಕೊಳ್ಳಬೇಕಿದೆ. ಇದಕ್ಕಾಗಿ RBI ನಗದು ಮೀಸಲು ಪ್ರಮಾಣವನ್ನು (CRR) ಶೇ.1ರಷ್ಟು ತಗ್ಗಿಸಬೇಕು. ಶೇ.1ರಷ್ಟು ನಗದು ಮೀಸಲು ಪ್ರಮಾಣ ತಗ್ಗಿಸುವುದರಿಂದ ಸುಮಾರು 1.50 ಲಕ್ಷ ಕೋಟಿ ರೂಪಾಯಿ ಬ್ಯಾಂಕುಗಳ ಬಳಕೆಗೆ ಸಿಗುತ್ತದೆ. CRR ಪ್ರಮಾಣವನ್ನು ಶೇ.1ರಷ್ಟು ತಗ್ಗಿಸುವ ನಿರೀಕ್ಷೆಯನ್ನು ಹಣಕಾಸು ಮಾರುಕಟ್ಟೆ ಇಟ್ಟುಕೊಂಡಿದೆ.
ನಗದು ಕೊರತೆಯ ಬಿಕ್ಕಟ್ಟನ್ನು ಆದ್ಯತೆ ಮೇಲೆ ನಿವಾರಿಸಿದರೆ ಬರುವ ತ್ರೈಮಾಸಿಕಗಳಲ್ಲಿ ಆರ್ಥಿಕತೆಗೆ ಚೇತರಿಕೆ ಬರುತ್ತದೆ. ನಗದು ಕೊರತೆಯಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹೆಚ್ಚಿನ ಸಾಲ ವಿತರಣೆ ಮಾಡುತ್ತಿಲ್ಲ. ಸಾಲ ಇಲ್ಲದೇ ವ್ಯಾಪಾರ ವಹಿವಾಟು ವಿಸ್ತರಿಸಲು ಸಾಧ್ಯವಿಲ್ಲ. ವ್ಯಾಪಾರ ವಹಿವಾಟು ವಿಸ್ತರಿಸದೆ ಆರ್ಥಿಕ ಚಟುವಟಿಕೆಗೆ ಚೇತರಿಕೆ ಸಿಗದು. ಹೀಗಾಗಿ ತ್ವರಿತವಾಗಿ ನಗದು ಕೊರತೆ ಬಿಕ್ಕಟ್ಟು ನಿವಾರಿಸಲು RBI ಕ್ರಮ ಕೈಗೊಳ್ಳಬೇಕಿದೆ.
ಎರಡನೇ ಅವಧಿಗೆ ಆಯ್ಕೆಯಾಗಿರುವ ನರೇಂದ್ರ ಮೋದಿ ಸರ್ಕಾರಕ್ಕೂ ಇದು ದೊಡ್ಡ ಸವಾಲು. ಈಗಾಗಲೇ ಜಿಡಿಪಿ ಕುಸಿತ, ನಿರುದ್ಯೋಗ ಸರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿರುವುುದಕ್ಕೆ ಮೋದಿ ಸರ್ಕಾರದ ವೈಫಲ್ಯಗಳೇ ಕಾರಣ ಎಂಬ ಟೀಕೆಗಳಿವೆ. ಅರುಣ್ ಜೈಟ್ಲಿ ಅವರ ಸ್ಥಾನಕ್ಕೆ ಈಗ ನಿರ್ಮಲಾ ಸೀತಾರಾಮನ್ ಬಂದಿದ್ದಾರೆ. RBI ಹಣಕಾಸು ನೀತಿ ಪ್ರಕಟಿಸಿದರಷ್ಟೇ ಆರ್ಥಿಕತೆಗೆ ಚೇತರಿಕೆ ಬರುವುದಿಲ್ಲ. ಸರ್ಕಾರ ಅದಕ್ಕೆ ಪೂರಕ ನೀತಿಗಳನ್ನು ಪ್ರಕಟಿಸಬೇಕು. ನಿರುದ್ಯೋಗ ಸಮಸ್ಯೆ ಹೆಚ್ಚಿರುವುದು, ಜನರ ಖರೀದಿಸುವ ಶಕ್ತಿ ಕುಂದಿರುವುದು ಕೇಂದ್ರ ಸರ್ಕಾರದ ನೀತಿಗಳಿಂದಾಗಿ. ಹೀಗಾಗಿ ಸರ್ಕಾರ ಉದ್ಯೋಗ ಸೃಷ್ಟಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜನರ ಖರೀದಿ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿಸಬೇಕಿದೆ.
ಗುರುವಾರ ಮಧ್ಯಾಹ್ನ RBI ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಮಧ್ಯಾಹ್ನ ಬಡ್ಡಿದರ ಪ್ರಕಟಿಸಲಿದ್ದಾರೆ. ಶೇ.0.25 ಅಥವಾ ಶೇ.0.50ರಷ್ಟು ಬಡ್ಡಿ ದರ ಕಡಿತ ಮಾಡುತ್ತಾರೋ ಎಂಬುದಷ್ಟೇ ಈಗ ಉಳಿದಿರುವ ಕುತೂಹಲ.
ಪ್ರಸ್ತುತ ರೆಪೊದರ ಶೇ.6ರಷ್ಟು, ರಿವರ್ಸ್ ರೆಪೋದರ ಶೇ.5.75ರಷ್ಟು, ಎಂಎಸ್ಎಫ್ (ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ) ಮತ್ತು ಬ್ಯಾಂಕ್ ರೇಟ್ ಶೇ.6.25ರಷ್ಟಿದೆ. ನಗದು ಮೀಸಲು ಪ್ರಮಾಣ ಶೇ.4ರಷ್ಟಿದೆ.