ರಾಜ್ಯ ಸಮ್ಮಿಶ್ರ ಸರ್ಕಾರದ ಪರಿಸ್ಥಿತಿ ದಿನದಿಂದ ದಿನಕ್ಕೆ ಡೋಲಾಯಮಾನ ಎಂಬಂತಾಗಿರುವ ನಡುವೆ, ಇದೀಗ ದೋಸ್ತಿ ಪಕ್ಷಗಳ ನಡುವಿನ ಪರಸ್ಪರ ಕೆಸರೆರಚಾಟವನ್ನೂ ಮೀರಿ, ಕಾಂಗ್ರೆಸ್ ಪಕ್ಷದ ನಾಯಕರ ನಡುವಿನ ಬಹಿರಂಗ ಸಮರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ಪ್ರಮುಖವಾಗಿ, ಪಕ್ಷದಲ್ಲಿ ದಶಕಗಳ ಕಾಲ ಅಧಿಕಾರ ವಹಿಸಿರುವ, ಪಕ್ಷದ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ನಾಯಕರುಗಳೇ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಸಾರಿದ್ದಾರೆ. ಅದರಲ್ಲೂ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ ಎಂಬಂತೆ ಕಾಣುತ್ತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧವೇ ಹಿರಿಯ ನಾಯಕರು ಬಹಿರಂಗ ಟೀಕೆಗೆ ಇಳಿದಿದ್ದಾರೆ. ಅದರಲ್ಲೂ, ಮಾಜಿ ಸಚಿವರಾದ ರೋಷನ್ ಬೇಗ್ ಅವರ ಬಂಡಾಯದ ದನಿಗೆ ಈಗ ಬಲಬಂದಿದ್ದು, ಅವರೊಂದಿಗೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕೂಡ ದನಿಗೂಡಿಸಿದ್ದಾರೆ.
ಬೆಂಗಳೂರು ಮೂಲದ ಈ ಇಬ್ಬರೂ ನಾಯಕರು ನೇರವಾಗಿ ಸಿದ್ದರಾಮಯ್ಯ ವಿರುದ್ಧವೇ ಟೀಕಾಸ್ತ್ರ ಪ್ರಯೋಗಿಸಿದ್ದು, ವಲಸಿಗರು ಮೂಲ ಕಾಂಗ್ರೆಸ್ಸಿಗರ ಮೇಲೆ ಸವಾರಿ ಮಾಡುತ್ತಿದ್ದಾರೆ. ದುರಹಂಕಾರದ ವರ್ತನೆಯಿಂದಲೇ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಲೋಕಸಭಾ ಮತ್ತು ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಸೋಲಿಗೂ ಪಕ್ಷದ ನಾಯಕತ್ವ ವಹಿಸಿರುವ ವ್ಯಕ್ತಿಯ ತಾನು ಹೇಳಿದ್ದೇ ನಡೆಯಬೇಕು ಎಂಬ ವರಸೆಯೇ ನೇರ ಕಾರಣ ಎಂದು ಹೇಳಿದ್ದಾರೆ. ಸೋಲಿನ ಹೊಣೆಹೊತ್ತು ಅವರು ಸಮನ್ವಯ ಸಮಿತಿಗೆ ರಾಜೀನಾಮೆ ನೀಡಬೇಕು. ಪಕ್ಷದ ಹಿರಿಯ ನಾಯಕರನ್ನು ಬದಿಗೊತ್ತಿ ತನ್ನ ಬಾಲಬಡುಕರನ್ನು ಮೆರೆಸುತ್ತಿದ್ದಾರೆ. ಇಡೀ ಸಮನ್ವಯ ಸಮಿತಿ ಮತ್ತು ಸರ್ಕಾರದಲ್ಲಿ ತಮ್ಮ ಮಾತೇ ನಡೆಯಬೇಕು ಎಂಬ ಹಠಮಾರಿತನವೇ ಸರ್ಕಾರದ ಬಿಕ್ಕಟ್ಟಿಗೆ ಕಾರಣ ಎಂದೂ ಆ ನಾಯಕರು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನಾಯಕರ ಈ ಬಂಡಾಯಕ್ಕೆ ಸಮಾನಾಂತರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ಎಚ್ ವಿಶ್ವನಾಥ್ ಕೂಡ ಸರ್ಕಾರದ ಬಿಕ್ಕಟ್ಟಿಗೆ ಸಿದ್ದರಾಮಯ್ಯ ಅವರೇ ಕಾರಣ. ಸಮನ್ವಯ ಸಮಿತಿಯಲ್ಲಿ ಜಡಿಎಸ್ ಅಧ್ಯಕ್ಷರಿಗಾಗಲೀ ಕಾಂಗ್ರೆಸ್ ಅಧ್ಯಕ್ಷರಿಗಾಗಲೀ ಸ್ಥಾನ ನೀಡಿಲ್ಲ. ಆ ಮೂಲಕ ಸಿದ್ದರಾಮಯ್ಯ ಸಮಿತಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ನೋಡಿಕೊಂಡಿದ್ದಾರೆ. ಅಲ್ಲದೆ, ಸರ್ಕಾರದ ಆಡಳಿತದ ವಿಷಯದಲ್ಲಿಯೂ ಮುಕ್ತವಾಗಿ ಕೆಲಸ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆ. ಇದೇ ಕಾರಣದಿಂದ ಇಂದು ಮೈತ್ರಿ ಪಕ್ಷಗಳ ನಾಯಕರು ಬಂಡಾಯದ ದನಿ ಮೊಳಗಿಸುತ್ತಿದ್ದಾರೆ ಎಂದಿದ್ದಾರೆ.
ಒಟ್ಟಾರೆ, ಈಗಿನ ಈ ಉಭಯ ಪಕ್ಷಗಳ ಕಡೆಯಿಂದ ಕಾವೇರುತ್ತಿರುವ ಬಂಡಾಯದ ಏಕೈಕ ಗುರಿ ಸಿದ್ದರಾಮಯ್ಯ ಅವರೇ ಆಗಿದ್ದು, ಸಿದ್ದರಾಮಯ್ಯ ಸಮನ್ವಯ ಸಮಿತಿಯಿಂದ ಹೊರಹೋಗಬೇಕು ಮತ್ತು ಆ ಮೂಲಕ ಮೈತ್ರಿ ಸರ್ಕಾರದ ಜುಟ್ಟು ಅವರಿಗೆ ಸಿಗಬಾರದು ಎಂಬ ಉದ್ದೇಶವೇ ಈ ಬಂಡಾಯದ ಮೂಲ ಆಶಯ ಎಂಬುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ, ನಿಜಕ್ಕೂ ಈ ನಾಯಕರ ಬಂಡಾಯದ ಗುರಿ ಸಿದ್ದರಾಮಯ್ಯ ಅವರಷ್ಟೆಯೇ ಅಥವಾ ಇಡೀ ಮೈತ್ರಿ ಸರ್ಕಾರವೇ? ಎಂಬುದು ಸದ್ಯದ ಒಗಟು.
ರೋಷನ್ ಬೇಗ್ ಮತ್ತು ರಾಮಲಿಂಗಾ ರೆಡ್ಡಿ ಇಬ್ಬರೂ ಸಚಿವ ಸ್ಥಾನ ವಂಚಿತರು. ಆ ಹಿನ್ನೆಲೆಯಲ್ಲಿ ತಮ್ಮ ಹಿರಿತನವನ್ನೂ ಬದಿಗೊತ್ತಿ ತಮ್ಮನ್ನು ಸಂಪುಟದಿಂದ ಹೊರಗಿಟ್ಟು, ಈ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಎಂ ಬಿ ಪಾಟೀಲ್, ಜಾರ್ಜ್ ಮತ್ತಿತರ ಸಿದ್ದರಾಮಯ್ಯ ಆಪ್ತರಿಗೆ ಮಣೆ ಹಾಕಲಾಗಿದೆ. ಅವರಿಗೊಂದು ನೀತಿ, ನಮಗೊಂದು ನೀತಿ ಯಾಕೆ? ಎಂಬ ಹಿನ್ನೆಲೆಯಲ್ಲಿ ಆ ಇಬ್ಬರೂ ಬೆಂಗಳೂರಿನ ಹಿರಿಯ ನಾಯಕರು ಇದೀಗ ಲೋಕಸಭಾ ಚುನಾವಣೆ ಮುಗಿಯುತ್ತಲೇ ಬಂಡೆದ್ದಿದ್ದಾರೆ. ಆ ಇಬ್ಬರೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಇಂತಹ ಹೇಳಿಕೆ ನೀಡಿದ್ದಾರೆ ಎಂಬ ವಿಶ್ಲೇಷಣೆಗಳೂ ಇವೆ.
ಆದರೆ, ಅದಕ್ಕಿಂತ ಮುಖ್ಯವಾಗಿ, ಲೋಕಸಭಾ ಚುನಾವಣೆಯ ಬಳಿಕ ನಿರೀಕ್ಷೆಯಂತೆ ಸಂಪುಟ ಪುನಾರಚನೆಯ ಮೂಲಕ ಅವಕಾಶವಂಚಿತರು ಮತ್ತು ಬಂಡಾಯಗಾರರಿಗೆ ಅವಕಾಶ ನೀಡುವ ಬದಲು, ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ, ಸದ್ಯ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ತುಂಬುವ ಮೂಲಕ ಸಂಪುಟ ವಿಸ್ತರಣೆಗೆ ನಿರ್ಧಾರ ಕೈಗೊಂಡಿರುವುದೇ ಈ ದಿಢೀರ್ ಬಂಡಾಯಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಪುಟ ಪುನಾರಚನೆಯಾಗಲಿದೆ. ಆಗ ಈಗಿರುವ ಬಹುತೇಕ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಪ್ರಮುಖವಾಗಿ ಆಪರೇಷನ್ ಕಮಲದ ಹೊಸ್ತಿಲಲ್ಲಿರುವ ಶಾಸಕರು ಹಾಗೂ ಪಕ್ಷದ ಹಿರಿಯ ನಾಯಕರನ್ನು ಆದ್ಯತೆ ಮೇಲೆ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಈ ಹಿರಿಯ ನಾಯಕರಿಗಿತ್ತು. ಆದರೆ, ಇದೀಗ ದಿಢೀರನೆ ಪುನಾರಚನೆಯನ್ನೇ ಕೈಬಿಟ್ಟು ಕೇವಲ ಖಾಲಿ ಇರುವ ಮೂರು ಸ್ಥಾನಕ್ಕೆ ಆಪರೇಷನ್ ಕಮಲದ ಕಡೆ ಮುಖಮಾಡಿರುವವರಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಮತ್ತೆ ಕೈತಪ್ಪಿದ ಹಿನ್ನೆಲೆಯಲ್ಲಿ ರೋಷನ್ ಮತ್ತು ರೆಡ್ಡಿ ಅವರು ಈ ಅಸಮಾಧಾನ ಹೊರಹಾಕಿದ್ದಾರೆ ಎಂಬುದು ರಾಜಕೀಯ ವಲಯದ ಮಾತು.
ಈ ನಡುವೆ, ಬುಧವಾರ ಹಿರಿಯ ನಾಯಕ ಎಚ್ ಕೆ ಪಾಟೀಲ್ ಕೂಡ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ನಾಯಕತ್ವದ ವಿರುದ್ಧವೇ ಇದೀಗ ಬಹಿರಂಗ ಟೀಕೆ, ಅಸಮಾಧಾನ ಹೊರಬಿದ್ದಿದೆ. ಸಿದ್ದರಾಮಯ್ಯ ನಮ್ಮೆಲ್ಲರ ನಾಯಕರು. ಅವರ ವಿರುದ್ಧ ಹೀಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುವುದು ಸಲ್ಲದು. ಈಗಿನ ಬೆಳವಣಿಗೆಗಳು ಪಕ್ಷಕ್ಕೆ ಇನ್ನಷ್ಟು ಹಾನಿ ಮಾಡಲಿವೆ. ಆ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ಆ ಮೂಲಕ ಪಕ್ಷದ ಹಿರಿಯ ನಾಯಕರ ಆಕ್ರೋಶಕ್ಕೆ ಸಕಾರಣವಿಲ್ಲದೇ ಇಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದಂತಾಗಿದೆ.
ಒಟ್ಟಾರೆ, ದಶಕಗಳ ಬಳಿಕ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಮೂಲ ಕಾಂಗ್ರೆಸ್ಸಿಗರ ಗುಂಪಿನ ಬೂದಿಮುಚ್ಚಿದ ಅಸಮಾಧಾನ ಹೀಗೆ ಭುಗಿಲೆದ್ದಿದೆ. ಆ ಬೂದಿಮುಚ್ಚಿದ ಕೆಂಡವನ್ನು ಕೆದಕಿದ್ದು ಯಾರು? ಕೇವಲ ಸಿದ್ದರಾಮಯ್ಯ ಅವರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಹೋಗಲಾರದ ‘ಅಹಂಕಾರ’ವೇ? ಅಥವಾ ತುಮಕೂರು, ಮಂಡ್ಯದ ಲೋಕಸಭಾ ಚುಣಾವಣಾ ಸೋಲಿನ ಕಿಡಿ, ಇದೀಗ ಜೆಡಿಎಸ್ ಕಡೆಯಿಂದ ಸಿಡಿದು ಕಾಂಗ್ರೆಸ್ ನಡುಮನೆಯಲ್ಲಿ ಕೆನ್ನಾಲಿಗೆಯಾಗಿದೆಯೇ? ಅಥವಾ ಕೋಲಾರ, ಚಿಕ್ಕಬಳ್ಳಾಪುರದ ಸೋಲಿನ ಅಡ್ಡಪರಿಣಾಮವೇ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿದೆಯೇ? ಎಂಬ ಹಲವು ಸಾಧ್ಯತೆಗಳನ್ನೂ ರಾಜಕೀಯ ಪಂಡಿತರು ಲೆಕ್ಕಹಾಕತೊಡಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಚಾಮುಂಡೇಶ್ವರಿ ಕ್ಷೇತ್ರದ ತಮ್ಮ ಸೋಲಿನ ಸೇಡು ಇದೀಗ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ತೀರಿಸಿಕೊಂಡಿದ್ದಾರೆ. ಅವರ ಆ ಸೇಡಿನ ಸುಳಿವರಿತೇ ಮೈಸೂರಿನಲ್ಲಿ ಅವರ ಆಪ್ತ ವಿಜಯಶಂಕರ ಅವರನ್ನು ಬುಡಮೇಲು ಮಾಡಲಾಗಿದೆ. ಅದಕ್ಕೆ ಸಾಕ್ಷಿ ಇದೀಗ, ಮೈಸೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ನಾಯಕರು ಮತ್ತು ಬಿಜೆಪಿ ಸಂಸದ ಪ್ರತಾಪ ಸಿಂಹ ನಡುವಿನ ಕುಚುಕುಕುಚುಕು ಗೆಳೆತನ. ಜಿ ಟಿ ದೇವೇಗೌಡ ಮತ್ತು ಪ್ರತಾಪ ಸಿಂಹ ಒಂದೇ ಕಾರಿನಲ್ಲಿ ಕೂತು ಮೈಸೂರಿನಲ್ಲಿ ಓಡಾಡಿರುವುದು ಇದಕ್ಕೆ ಸಾಕ್ಷಿ ಎಂಬ ಮಾತುಗಳೂ ಇವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಂಡಿರುವುದು ಹಲವು ಕ್ಷೇತ್ರಗಳ ಫಲಿತಾಂಶದಲ್ಲಿ ಸಾಬೀತಾಗಿದೆ. ಇದೀಗ, ಆ ‘ಆತ್ಮಹತ್ಯಾ’ ರಾಜಕಾರಣದ ಮುಂದಿನ ಭಾಗ ಹಿರಿಯ ನಾಯಕರ ಬಹಿರಂಗ ಬಂಡಾಯದ ಮೂಲಕ ಮುಂದುವರಿದಿದೆ.
ಈ ನಡುವೆ, ಮಾಜಿ ಕಾಂಗ್ರೆಸ್ಸಿಗ ಹಾಗೂ ಹಾಲಿ ಬಿಜೆಪಿ ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರೇ ಈ ಕಾಂಗ್ರೆಸ್ ಬಂಡಾಯದ ಹಿಂದೆ ಇದ್ದಾರೆ. ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಮೇಲಿರುವ ಸೇಡಿನ ಹಿನ್ನೆಲೆಯಲ್ಲಿ ಕೃಷ್ಣ ಅವರು ತೆರೆಮರೆಯಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಎತ್ತಿಕಟ್ಟುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಹೇಗಾದರೂ ಮಾಡಿ ತುರ್ತಾಗಿ ಅಧಿಕಾರ ಹಿಡಿಯುವ ಜಿದ್ದಿಗೆ ಬಿದ್ದಿರುವ ಬಿಜೆಪಿಯ ಬಿ ಎಸ್ ಯಡಿಯೂರಪ್ಪ ಅವರ ಕಾರ್ಯತಂತ್ರಕ್ಕೆ ಸ್ವತಃ ಕೃಷ್ಣ ಅವರೇ ಚಾಲನೆ ನೀಡಿದ್ದಾರೆ. ಆಪರೇಷನ್ ಕಮಲದ ದಾರಿಗಿಂತ, ಕಾಂಗ್ರೆಸ್ ಹಿರಿಯ ನಾಯಕರನ್ನೇ ಸಿದ್ದರಾಮಯ್ಯ ವಿರುದ್ಧ ಎತ್ತಿಕಟ್ಟುವ ಮೂಲಕ ಸರ್ಕಾರ ಪತನವಾಗುವಂತೆ ಮಾಡಿದರೆ, ಕಳಂಕರಹಿತವಾಗಿ ಅಧಿಕಾರ ಹಿಡಿಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಜೊತೆಗೆ ಬಿಜೆಪಿಗೆ ರಾಜ್ಯದಲ್ಲಿ ದೊಡ್ಡ ಸವಾಲಾಗಿರುವ ಸಿದ್ದರಾಮಯ್ಯ ಅವರನ್ನೂ ಮಟ್ಟಹಾಕಬಹುದು. ಆಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ ಎಂಬ ವಾದವೂ ಇದೆ.
ಇಷ್ಟಾಗಿಯೂ, ಸದ್ಯಕ್ಕೆ ಇನ್ನೂ ಆರು ತಿಂಗಳು ಈ ಎಲ್ಲಾ ಕಚ್ಚಾಟ- ರಂಪಾಟಗಳ ಹೊರತಾಗಿಯೂ ಸಮ್ಮಿಶ್ರ ಸರ್ಕಾರ ಮುಂದುವರಿಯಬಹುದು.
ಏಕೆಂದರೆ, ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗುವುದು ಮೈತ್ರಿಯ ಉಭಯ ಪಕ್ಷಗಳಿಗೂ ಬೇಕಿಲ್ಲ ಮತ್ತು ಅದೇ ಹೊತ್ತಿಗೆ, ಈಗ, ಸ್ಥಳೀಯ ಸಂಸ್ಥೆಗಳ ವ್ಯತಿರಿಕ್ತ ಫಲಿತಾಂಶದ ಬಳಿಕ, ಹಿಂದಿನ ಬಾಗಿಲಿನ ತಂತ್ರಗಾರಿಕೆಯ ಮೂಲಕ ಸರ್ಕಾರ ಕೆಡವಿ ಚುನಾವಣೆಗೆ ಹೋಗಿ ಬಹುಮತ ಪಡೆಯುವ ವಿಶ್ವಾಸ ಕೂಡ ಬಿಜೆಪಿಯಲ್ಲಿ ಕಾಣುತ್ತಿಲ್ಲ. ಹಾಗಾಗಿ, ಸದ್ಯಕ್ಕೆ ಸಂಪುಟ ವಿಸ್ತರಣೆಯ ಬದಲಿಗೆ ಸಂಪುಟ ಪುನಾರಚನೆಯನ್ನು ಖಾತ್ರಿಪಡಿಸಿಕೊಳ್ಳುವುದಷ್ಟೇ ಈಗಿನ ಕಾಂಗ್ರೆಸ್ ನಾಯಕರ ಬಂಡಾಯದ ಗುರಿ ಎಂಬ ಮತ್ತೊಂದು ವಾದವೂ ಇದೆ.
ಹಾಗಾದಲ್ಲಿ ಇನ್ನು ಒಂದೆರಡು ವಾರದಲ್ಲಿ ಪರಿಸ್ಥಿತಿ ತಿಳಿಯಾಗಬಹುದು. ಅದಕ್ಕೂ ಮೀರಿ ರಾಜಕೀಯ ರಂಪಾಟ ಮುಂದುವರಿದರೆ, ಸಮನ್ವಯ ಸಮಿತಿಯ ನೇತೃತ್ವದ ಬದಲಾಗಬಹುದು, ಜೆಡಿಎಸ್ ನಾಯಕ ವಿಶ್ವನಾಥ್ ಆಯಕಟ್ಟಿನ ಸಚಿವ ಸ್ಥಾನ ಪಡೆಯಬಹುದು ಮತ್ತು ಕಾಂಗ್ರೆಸ್ ಬಂಡಾಯ ನಾಯಕರ ಕೈಮೇಲಾಗಬಹುದು. ಆಗ ಸರ್ಕಾರದ ಭವಿಷ್ಯದ ಬಗ್ಗೆ ಬಹುಶಃ ಯಾರೂ ಖಚಿತವಾಗಿ ಹೇಳಲಾರದ ಪರಿಸ್ಥಿತಿ ಉದ್ಭವಿಸಬಹುದು!