ಬೆಂಗಳೂರು: ಕನ್ನಡದ ಪ್ರಜಾ ಸುದ್ದಿವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪತ್ರಕರ್ತರೊಬ್ಬರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚಿಂತಾಮಣಿ ಮೂಲದ ನಯಾಜ್ ಖಾನ್ (36) ಬೆಂಗಳೂರಿನ ಕೆ.ಆರ್. ಪುರದ ದೇವಸಂದ್ರದಲ್ಲಿ ನೆಲೆಸಿದ್ದರು. ಪ್ರಜಾ ಸುದ್ದಿವಾಹಿನಿಯ ಅಪರಾಧ ಸುದ್ದಿ ವರದಿಗಾರರಾಗಿ ಕಳೆದ 8-10ವರ್ಷದಿಂದ ಸ್ಥಳೀಯ ವರದಿಗಾರರಾಗಿ ನಯಾಜ್ ಕೆಲಸ ಮಾಡುತ್ತಿದ್ದರು.
ಕೆಲಸ ಮುಗಿಸಿ ಮಂಗಳವಾರ ತಡರಾತ್ರಿ (ಈದ್ ಗೂ ಮುನ್ನಾ ದಿನ) ಮನೆಗೆ ಬಂದ ನಯಾಜ್ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 12.30ಕ್ಕೆ ಮನೆಗೆ ಬಂದಿದ್ದ ನಯಾಜ್, ಮನೆಯ ಹಾಲ್ನಲ್ಲಿ ಮಲಗಿದ್ದರು. ಕೊಠಡಿಯಲ್ಲಿ ಮಕ್ಕಳ ಜೊತೆ ಮಲಗಿದ್ದ ಪತ್ನಿ, ಬುಧವಾರ ನಸುಕಿನ 6.30ಕ್ಕೆ ಎದ್ದು ನೋಡಿದಾಗ ಪತಿ ಆತ್ಮಹತ್ಯೆ ಮಾಡಿರುವುದು ತಿಳಿದಿದೆ. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಅಂತ್ಯ ಕ್ರಿಯೆಗಾಗಿ ನಯಾಜ್ ಅವರ ಸ್ವಂತ ಊರು ಚಿಂತಾಮಣಿಗೆ ಕೊಂಡೊಯ್ಯಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.