ನವದೆಹಲಿ: ಭಾರತೀಯ ಬಹುರಾಷ್ಟ್ರೀಯ ಕಂಪನಿ, ಐಟಿ ದಿಗ್ಗಜ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅಜೀಂ ಪ್ರೇಂಜಿ ತಮ್ಮ ಹುದ್ದೆಯಿಂದ ನಿವೃತ್ತಿ ಪಡೆದಿದ್ದಾರೆ. ಇನ್ನು ಮುಂದೆ ಅವರು ಕಂಪನಿಯ ಕಾರ್ಯನಿರ್ವಾಹಕೇತರ (non-executive) ನಿರ್ದೇಶಕ ಹಾಗೂ ಸಂಸ್ಥಾಪಕ ಅಧ್ಯಕ್ಷರಾಗಿಯಷ್ಟೇ ತಮ್ಮ ಸೇವೆ ಮುಂದುವರಿಸಲಿದ್ದಾರೆ.
53 ವರ್ಷಗಳ ಕಾಲ ಕಂಪನಿಯ ನೇತೃತ್ವ ವಹಿಸಿ ಉನ್ನತ ಮಟ್ಟಕ್ಕೆ ಏರಿಸಿದ ಅಜೀಂ ಅವರು ಜುಲೈ ಅಂತ್ಯಕ್ಕೆ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಲಿದ್ದಾರೆ ಎಂದು ಕಂಪನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಜೀಂ ಪ್ರೇಮ್ ಜಿ ಅವರ ಪುತ್ರ ರಿಷದ್ ಪ್ರೇಮ್ ಜಿ ಅವರು ಕಾರ್ಯನಿರ್ವಾಹಕ ಅಧ್ಯಕ್ಷ ಹುದ್ದೆಯನ್ನು ಮತ್ತು ಅಬಿದಲಿ ಜೆಡ್ ನೀಮುಚ್ವಾಲಾ ಅವರು ವಿಪ್ರೋದ ಸಿಇಒ ಹಾಗೂ ಸಹ ಕಾರ್ಯನಿರ್ವಾಹಕ ನಿರ್ದೇಶಕರ ಸ್ಥಾನವನ್ನು ಅಲಂಕರಿಸಲಿದ್ದಾರೆ. 2019ರ ಜುಲೈ 31ರಿಂದ ಬದಲಾವಾಣೆ ಅನ್ವಯಿಸಲಿದೆ ಎಂದು ಪ್ರಕಟಣೆ ಹೇಳಿದೆ.
“ಇದು ಬಹಳ ಸುದೀರ್ಘ ಪಯಣ ಮತ್ತು ಬಹಳ ತೃಪ್ತಿಕರ ಪಯಣ ಇದಾಗಿದೆ. ಇನ್ನು ಮುಂದೆ ಮುಂದಿನ ಜೀವನದ ಬಗ್ಗೆ ಗಮನಹರಿಸಬೇಕಿದೆ. ಮುಂದೆ ನನ್ನ ಹೆಚ್ಚಿನ ಸಮಯವನ್ನು ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಚ್ಚಿಸುತ್ತೇನೆ. ಕಂಪನಿಯ ಮುಂದಿನ ಬೆಳವಣಿಗೆ ಬಗ್ಗೆ ಪುತ್ರ ರಿಷದ್ ನೋಡಿಕೊಳ್ಳಲಿದ್ದು, ಅವನ ನಾಯಕತ್ವದಲ್ಲಿ ಕಂಪನಿ ಎತ್ತರಕ್ಕೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ ನನಗಿದೆ,” ಎಂದು ಅಜೀಂ ಪ್ರೇಮ್ ಜಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.