ಭೋಪಾಲ್: ಮಾಲೇಗಾವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಇಂದೂ ಸಹ ಅನಾರೋಗ್ಯದ ನೆಪ ಹೇಳಿದ್ದರಿಂದ ಮುಂಬೈ ಕೋರ್ಟ್ ವಿಚಾರಣೆಗೆ ಹಾಜರಾಗಲು ಒಂದು ದಿನದ ವಿನಾಯಿತಿ ನೀಡಿದೆ.
ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಪ್ರಜ್ಞಾ ಸಿಂಗ್ ತಾವು ರಕ್ತದೊತ್ತಡದಿಂದ ಬಳಲುತ್ತಿದ್ದುರುವುದಾಗಿ ತಿಳಿಸಿದ್ದು, ಅನಾರೋಗ್ಯದ ಸಂಬಂಧ ಯಾವುದೇ ದಾಖಲೆಗಳನ್ನು ನೀಡಿಲ್ಲ. ನಾಳೆ (ಜೂನ್ 7ರಂದು) ಕೋರ್ಟ್ ವಿಚಾರಣೆಗೆ ಗೆ ಕಡ್ಡಾಯವಾಗಿ ಹಾಜರಾಗಬೇಕು ಇಲ್ಲವಾದಲ್ಲಿ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಇಂದು ಎಚ್ಚರಿಕೆ ನೀಡಿದೆ.
ಸಂಸತ್ ಗೆ ಸಂಬಂಧಿಸಿದ ಕೆಲವು ಕಾರ್ಯಗಳನ್ನು ಮುಗಿಸಬೇಕಿದ್ದು, ವಿಚಾರಣೆಗೆ ವಿನಾಯಿತಿ ಕೋರಿ ಪ್ರಗ್ಯಾ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ವಿಶೇಷ ಕೋರ್ಟ್ ನ್ಯಾಯಾಧೀಶ ವಿ. ಎಸ್ ಪಡಲ್ಕರ್ ಅವರು ವಜಾಗೊಳಿಸಿದ್ದರು. ಅಲ್ಲದೆ ಪ್ರಕರಣ ಈ ಹಂತದಲ್ಲಿರುವ ವೇಳೆ ಪ್ರಜ್ಞಾ ಅವರು ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದೂ ಹೇಳಿದ್ದರು.
ಭೋಪಾಲ್ ನ ನೂತನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ವಿಚಾರಣೆ ತಪ್ಪಿಸಿಕೊಳ್ಳುವ ಸಲುವಾಗಿ ಹೊಟ್ಟೆ ನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿ ಗುರುವಾರ ಬೆಳಗಿನ ಜಾವ ಡಿಸ್ಚಾರ್ಜ್ ಆಗಿದ್ದಾರೆ. ಭೋಪಾಲ್ ನಲ್ಲಿ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿದ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗುವುದಾಗಿ ಪ್ರಜ್ಞಾ ಸಹಾಯಕಿ ಉಪ್ಮಾ ತಿಳಿಸಿದ್ದಾರೆ.
ಸ್ಫೋಟ ಪ್ರಕರಣ ಸಂಬಂಧ ಈ ವರ್ಷದ ಮೇ ನಲ್ಲಿ ಕೋರ್ಟ್ ನಲ್ಲಿ ಏಳೂ ಆರೋಪಿಗಳ ವಿರುದ್ಧ ವಿಚಾರಣೆ ನಡೆಸಿದ್ದು, ವಾರಕ್ಕೊಂದು ಬಾರಿ ಕೋರ್ಟ್ ಗೆ ಹಾಜರಾಗಬೇಕೆಂದು ಸೂಚಿಸಿತ್ತು.
2008ರ ಸೆಪ್ಟೆಂಬರ್ ನಲ್ಲಿ ನಡೆದ ಮಾಲೆಗಾಂವ್ ಭಯೋತ್ಪಾದಕ ಬಾಂಬ್ ಸ್ಪೋಟದಲ್ಲಿ 10 ಜನರು ಪ್ರಾಣ ಕಳೆದುಕೊಂಡು 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣ ಭೇಧಿಸಿದ್ದ ನಿಷ್ಠಾವಂತ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಪಾತ್ರ ಇರುವುದನ್ನು ಪತ್ತೆ ಹಚ್ಚಿದ್ದರು.