ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ 25 ಅಂಶಗಳಷ್ಟು (ಶೇ.0.25) ಬಡ್ಡಿದರವನ್ನು (ರೆಪೊದರ) ಕಡಿತ ಮಾಡಿದೆ. ಕಳೆದ ಆರು ತಿಂಗಳಲ್ಲಿ RBI ಸತತ ಮೂರನೇ ಬಾರಿಗೆ ಬಡ್ಡಿದರ ಕಡಿತ ಮಾಡಿದಂತಾಗಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಎರಡನೇ ಬಾರಿಗೆ ಕಡಿತ ಮಾಡಲಾಗಿದೆ. ಶೇ.6ರಷ್ಟಿದ್ದ ರೆಪೊ ದರವು ಈಗ ಶೇ.5.75ಕ್ಕೆ ತಗ್ಗಿದೆ. ಹಾಗೆಯೇ ರಿವರ್ಸ್ ರೆಪೊದರವೂ ಶೇ.0.25ರಷ್ಟು ಕಡಿತವಾಗಿದ್ದು ಶೇ.5.50ಕ್ಕೆ ಇಳಿದಿದೆ. ಬ್ಯಾಂಕುಗಳು ತುರ್ತಾಗಿ ಪಡೆಯುವ ಸಾಲ ಸೌಲಭ್ಯದ (ಎಂಎಸ್ಎಫ್) ದರವನ್ನು ಶೇ.6ಕ್ಕೆ ತಗ್ಗಿಸಲಾಗಿದೆ. ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆ ನಂತರ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯ ಪ್ರಕಟಿಸಿದ್ದಾರೆ.
ಸಮಿತಿ ಸಭೆಯಲ್ಲಿ ಪಾಲ್ಗೊಂಡ ಎಲ್ಲಾ ಆರು ಸದಸ್ಯರೂ ಶೇ.0.25 ಅಂಶ ಬಡ್ಡಿ ಕಡಿತ ಮಾಡಲು ಅನುಮೋದಿಸಿದ್ದಾರೆ. ಹೀಗಾಗಿ ಇದು ಸರ್ವಾನುಮತದ ನಿರ್ಣಯವಾಗಿದೆ. ಸಾಮಾನ್ಯವಾಗಿ ಆರು ಸದಸ್ಯರ ಪೈಕಿ ಒಬ್ಬರು ಅಥವಾ ಇಬ್ಬರು ಬಡ್ಡಿದರ ಕಡಿತ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಅಪರೂಪಕ್ಕೊಮ್ಮೆ ಹೀಗೆ ಸರ್ವಾನುಮತ ವ್ಯಕ್ತವಾಗುತ್ತದೆ.
ಬಡ್ಡಿದರ ನಿಗದಿ ಮಾಡುವ ವಿಷಯದಲ್ಲಿ ತನ್ನ ತಟಸ್ಥ ನಿಲುವನ್ನು ಬದಲಾಯಿಸಿಕೊಂಡಿರುವ RBI ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುವ ನಿಲವನ್ನು ತೆಗೆದುಕೊಂಡಿದೆ. ಅಂದರೆ, ಮುಂಬರುವ ದಿನಗಳಲ್ಲಿ ಬಡ್ಡಿದರ ಏರಿಸುವ ಅಥವಾ ಇಳಿಸುವ ಮುಕ್ತ ಅವಕಾಶವನ್ನಿಟ್ಟುಕೊಂಡಿದೆ RBI.
ದೇಶದಲ್ಲಿ ತಲೆದೋರಿರುವ ನಿರುದ್ಯೋಗ, ಜನರ ಕೊಳ್ಳುವ ಶಕ್ತಿಯಲ್ಲಿನ ಕುಸಿತ, ನಾಲ್ಕನೇ ತ್ರೈಮಾಸಿಕದಲ್ಲಿ ಕನಿಷ್ಠ ಮಟ್ಟದ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರತೆ ಮುಂತಾದವುಗಳ ಹಿನ್ನಲೆಯಲ್ಲಿ 2019-20ನೇ ಸಾಲಿನ ಜಿಡಿಪಿ ಮುನ್ನಂದಾಜನ್ನು ಶೇ.7ಕ್ಕೆ ತಗ್ಗಿಸಿದೆ. ಈ ಹಿಂದಿನ RBI ಜಿಡಿಪಿ ಮುನ್ನಂದಾಜು ಶೇ.7.2ರಷ್ಟಿತ್ತು. ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿನ ಚಿಲ್ಲರೆ ಹಣದುಬ್ಬರ ಮುನ್ನಂದಾಜನ್ನು ಶೇ.3- 3.1ಕ್ಕೆ ಮತ್ತು ಅಕ್ಟೋಬರ್- ಮಾರ್ಚ್ ಅವಧಿಯ ಮುನ್ನಂದಾಜನ್ನು ಶೇ.3.4-3.7ಕ್ಕೆ ಏರಿಸಿದೆ. ಆಹಾರ ಪದಾರ್ಥಗಳ ದರ ಏರುವ ನಿರೀಕ್ಷೆ ಇರುವುದರಿಂದ ಹಣದುಬ್ಬರ ಏರುದಾರಿಯಲ್ಲಿ ಸಾಗುವ ನಿರೀಕ್ಷೆಯಿದೆ. ಮುಂಗಾರು ಮಳೆಯ ಅನಿಶ್ಚಿತತೆ, ಅಕಾಲದಲ್ಲಿ ತರಾಕಾರಿಗಳ ದರ ಏರಿಕೆ, ಕಚ್ಚಾ ತೈಲ ದರದ ಅನಿಶ್ಚಿತತೆ, ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪ್ರಸ್ತುತ ವಿತ್ತೀಯ ಪರಿಸ್ಥಿತಿಯಿಂದಾಗಿ ಹಣದುಬ್ಬರದ ಪಥವು ಮೇಲ್ಮುಖವಾಗಿರಲಿದೆ ಎಂದು RBI ಹೇಳಿದೆ.
ಡಿಜಿಟಲ್ ವಹಿವಾಟು ಉತ್ತೇಜಿಸಲು ಆರ್ಟಿಜಿಎಸ್(RTGS) ಮತ್ತು ನೆಫ್ಟ್(NEFT) ಶುಲ್ಕವನ್ನು ಮನ್ನಾ ಮಾಡಲು RBI ನಿರ್ಧರಿಸಿದೆ. ಎಟಿಎಂ ಬಳಕೆದಾರರಿಗೆ ಅತಿಯಾದ ಶುಲ್ಕ ವಿಧಿಸುತ್ತಿರುವ ಬಗ್ಗೆ ವ್ಯಾಪಕವಾಗಿ ಕೇಳಿಬರುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸಿದೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಿಗೆ ಲೈಸೆನ್ಸ್ ನೀಡುವ ಸಂಬಂಧ ಕರಡು ಮಾರ್ಗಸೂಚಿಗಳನ್ನು ಆಗಸ್ಟ್ ನಲ್ಲಿ ಪ್ರಕಟಿಸಲಿದೆ.
ಖಾಸಗಿ ವಲಯದಲ್ಲಿನ ಹೂಡಿಕೆ ಗಣನೀಯವಾಗಿ ತಗ್ಗಿರುವುದು ಮತ್ತು ಖಾಸಗಿ ವಲಯದ ಅನುಭೋಗವು ಕುಸಿದಿರುವುದರ ಬಗ್ಗೆ RBI ತನ್ನ ಕಾಳಜಿ ವ್ಯಕ್ತಪಡಿಸಿದೆ.
ಇಡೀ ಹಣಕಾಸು ಮಾರುಕಟ್ಟೆಯನ್ನು ಕಾಡುತ್ತಿರುವ ನಗದು ಕೊರತೆ ಬಿಕ್ಕಟ್ಟು ಬಹುತೇಕ ನಿವಾರಣೆ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ RBI ದೇಶದ ಆರ್ಥಿಕ ವ್ಯವಸ್ಥೆಯಲ್ಲೀಗ 66,000 ಕೋಟಿ ಹೆಚ್ಚುವರಿ ನಗದು ಇದೆ ಎಂದು ತಿಳಿಸಿದೆ. ದೇಶದ ವಿದೇಶಿ ಮೀಸಲು ನಿಧಿಯು ಮೇ 31ರಂದು ಇದ್ದಂತೆ 421.9 ಬಿಲಿಯನ್ ಡಾಲರ್ ಗಳಷ್ಟಿದೆ.
ಸತತ ಮೂರನೇ ಬಾರಿಗೆ RBI ರೆಪೊದರ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳು ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಕಡಿತವಾಗುವ ನಿರೀಕ್ಷೆ ಇದ್ದು ಗ್ರಾಹಕರು ಪಾವತಿಸುವ ಸಮಾನ ಮಾಸಿಕ ಕಂತಿನ (ಇಎಂಐ) ಪ್ರಮಾಣ ಕೊಂಚ ತಗ್ಗುವ ನಿರೀಕ್ಷೆ ಇದೆ. ಇದುವರೆಗೆ RBI 50 ಮೂಲ ಅಂಶಗಳಷ್ಟು ಬಡ್ಡಿದರ ಕಡಿತ ಮಾಡಿದ್ದರೂ ಅದರ ಪೂರ್ಣಲಾಭ ಗ್ರಾಹಕರಿಗೆ ತಲುಪದೇ ಇರುವುದನ್ನು ಆರ್ಬಿಐ ಗಂಭೀರವಾಗಿ ಪರಿಗಣಿಸಿದೆ. ಕೇವಲ 20 ಮೂಲಅಂಶಗಳಷ್ಟು ಮಾತ್ರ ಬಡ್ಡಿದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸಲಾಗಿದೆ. ಬಡ್ಡಿದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸುವಂತೆ ಬ್ಯಾಂಕುಗಳಿಗೆ ತಾಕೀತು ಮಾಡಿರುವ RBI ಈ ಬಗ್ಗೆ ನಿಗಾ ಇಡುವುದಾಗಿ ಹೇಳಿದೆ.
RBI ಬಡ್ಡಿದರ ಕಡಿತ ಮಾಡಿದ್ದರೂ ಷೇರು ಮಾರುಕಟ್ಟೆ ಮತ್ತು ಹಣಕಾಸು ಮಾರುಕಟ್ಟೆ ವ್ಯತಿರಿಕ್ತವಾಗಿ ಸ್ಪಂದಿಸಿವೆ. ಷೇರುಪೇಟೆಯಲ್ಲಿ ಸೆನ್ಸೆಕ್ಸ್, 550 ಅಂಶ, ನಿಫ್ಟಿ 178 ಅಂಶ ಕುಸಿದಿದ್ದರೆ, ಬ್ಯಾಂಕೆಕ್ಸ್ 731 ಅಂಶಗಳಷ್ಟು ಕುಸಿತ ದಾಖಲಿಸಿದೆ. ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳು ಗರಿಷ್ಠ ಮಟ್ಟದಲ್ಲಿ ಕುಸಿತ ದಾಖಲಿಸಿದವು. 2019ರಲ್ಲಿ ಒಂದೇ ದಿನದ ಅತಿ ಗರಿಷ್ಠ ಕುಸಿತ ಇದಾಗಿದೆ.
ಷೇರುಪೇಟೆ ವ್ಯತಿರಿಕ್ತವಾಗಿ ಸ್ಪಂದಿಸಲು ಮುಖ್ಯ ಕಾರಣ, ಪೇಟೆಯು 50 ಮೂಲ ಅಂಶಗಳಷ್ಟು ಅಂದರೆ ಶೇ.0.50ರಷ್ಟು ಬಡ್ಡಿದರ ಕಡಿತ ನಿರೀಕ್ಷೆ ಮಾಡಿತ್ತು. ಆದರೆ, ಕಡಿತ ಮಾಡಿದ್ದು ಶೇ.0.25ರಷ್ಟು ಮಾತ್ರ. ನಗದು ಮೀಸಲು ಪ್ರಮಾಣ (ಸಿಆರ್ಆರ್) ವನ್ನು ಶೇ.1ರಷ್ಟು ತಗ್ಗಿಸುವ ನಿರೀಕ್ಷೆ ಪೇಟೆಯಲ್ಲಿತ್ತು. ನಗದು ಬಿಕ್ಕಟ್ಟು ಎದುರಿಸುತ್ತಿರುವ ಹಣಕಾಸು ಮಾರುಕಟ್ಟೆಗೆ ತ್ವರಿತವಾಗಿ ಬೇಕಾಗಿರುವುದು ನಗದಿನ ಹರಿವು. ಆದರೆ, RBI ವ್ಯವಸ್ಥೆಯಲ್ಲಿ 66,000 ಕೋಟಿ ನಗದು ಹೆಚ್ಚುವರಿಯಾಗಿದೆ ಎಂಬ ನೆಪ ಹೇಳಿ ನಗದು ಮೀಸಲು ಪ್ರಮಾಣ ತಗ್ಗಿಸಲು ಮುಂದಾಗಿಲ್ಲ. ಶೇ.1ರಷ್ಟು ನಗದು ಮೀಸಲು ಪ್ರಮಾಣವನ್ನು ತಗ್ಗಿಸಿದ್ದರೆ 1.50 ಲಕ್ಷ ಕೋಟಿ ರುಪಾಯಿಗಳು ಹರಿದು ಬಂದು ನಗದು ಕೊರತೆ ಬಿಕ್ಕಟ್ಟು ನಿವಾರಣೆ ಆಗುತ್ತಿತ್ತು. ಆದರೆ, RBI ಬೇರೆಯದೇ ದೃಷ್ಟಿಯಲ್ಲಿ ಯೋಚಿಸಿದೆ. ಈ ನಡುವೆ ನಗದು ಕೊರತೆ ಬಿಕ್ಕಟ್ಟಿನ ಪರಿಣಾಮ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸುಸ್ತಿಯಾಗುತ್ತಿರುವುದು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ. ಗುರುವಾರದ ಷೇರುಪೇಟೆ ಕುಸಿತಕ್ಕೆ ಇದೂ ಒಂದು ಕಾರಣ.
RBI ಬಡ್ಡಿದರ ಕಡಿತ ಮಾಡಿದ್ದರಿಂದ ಸಾಲಗಳ ಮೇಲಿನ ಬಡ್ಡಿದರವೇನೋ ಕಡಮೆ ಆಗಬಹುದು. ಮತ್ತೊಂದು ಅಪಾಯ ಏನೆಂದರೆ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿಗಳ ಮೇಲಿನ ಬಡ್ಡಿದರವೂ ಕಡಿತವಾಗುತ್ತದೆ. ಬಡ್ಡಿಯನ್ನೇ ನಂಬಿ ಬದುಕುತ್ತಿರುವ ನಿವೃತ್ತರಿಗೆ ಇದರಿಂದ ಅನನುಕೂಲವೇ ಹೆಚ್ಚು. ಬ್ಯಾಂಕುಗಳು ಎಷ್ಟು ಚಾಲಾಕಿಗಳೆಂದರೆ ಸಾಲದ ಮೇಲಿನ ಬಡ್ಡಿದರ ಏರಿಸುವುದಕ್ಕಿತ ಮುಂಚಿತವಾಗಿ ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿಬಿಡುತ್ತವೆ!