ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ಆ ಬಳಿಕ ರಾಹುಲ್ ಗಾಂಧಿ ರಾಜೀನಾಮೆ ಪ್ರಸ್ತಾಪಗಳ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಆಘಾತಗಳಿಗೆ ಒಳಗಾಗಿರುವ ಕಾಂಗ್ರೆಸ್ ಪಕ್ಷದ ಪಾಲಿಗೆ, ದುರ್ದಿನಗಳು ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಕೇರಳ ಹೊರತುಪಡಿಸಿ ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಭಾರೀ ಚುನಾವಣಾ ಪೆಟ್ಟು ತಿಂದಿರುವ ಪಕ್ಷಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದ್ದು, ತೆಲಂಗಾಣದಲ್ಲಿ ಪಕ್ಷದ ಬಹುತೇಕ ಶಾಸಕರು ಆಡಳಿತಾರೂಢ ಟಿಆರ್ ಎಸ್ ನೊಂದಿಗೆ ವಿಲೀನಕ್ಕೆ ತೀರ್ಮಾನಿಸಿದ್ದಾರೆ!
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಆರ್ ಎಸ್ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. 119 ಸ್ಥಾನಬಲದ ವಿಧಾನಸಭೆಗೆ ನಡೆದ ಆ ಚುನಾವಣೆಯಲ್ಲಿ ಕಾಂಗ್ರೆಸ್ 19 ಸ್ಥಾನ ಪಡೆದಿತ್ತು. ಶಾಸಕರೂ ಆಗಿದ್ದ ಪಕ್ಷದ ರಾಜ್ಯ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಅವರು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಗೆಲವು ಪಡೆದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಸದ್ಯ ಕಾಂಗ್ರೆಸ್ ಸ್ಥಾನಬಲ 18ಕ್ಕೆ ಕುಸಿದಿದೆ. ಈ ನಡುವೆ, 18 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಶಾಸಕರು, ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷದ ತಮ್ಮ ಬಣವನ್ನು ಟಿಆರ್ ಎಸ್ ನಲ್ಲಿ ವಿಲೀನ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಬೆಳವಣಿಗೆ ತೆಲಂಗಾಣವಷ್ಟೇ ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ಇದೊಂದು ಆಘಾತಕಾರಿ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ನಡುವೆ, ಕಾಂಗ್ರೆಸ್ ಶಾಸಕರು ತೆಲಂಗಾಣ ಸ್ಪೀಕರ್ ಪಿ. ಶ್ರೀನಿವಾಸ್ ರೆಡ್ಡಿ ಅವರನ್ನು ಭೇಟಿಯಾಗಿ ಸಿಎಲ್ ಪಿ(ಕಾಂಗ್ರೆಸ್ ಶಾಸಕಾಂಗ ಪಕ್ಷ)ಯಿಂದ ಆಡಳಿತಾರೂಢ ಟಿಆರ್ ಎಸ್ ಜೊತೆ ವಿಲೀನವಾಗುವ ಬಗ್ಗೆ ನಿವೇದನಾ ಪತ್ರ ಸಲ್ಲಿಸಿದ್ದರು. ಆ ಬಳಿಕ ಇದೀಗ ಆ ಶಾಸಕರ ಬಣ ರಾಜ್ಯಪಾಲರನ್ನು ಭೇಟಿ ಮಾಡಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್)ಯಲ್ಲಿ ತಮ್ಮ ಬಣವನ್ನು ವಿಲೀನ ಮಾಡುವಂತೆ ಕೋರಿದ್ದಾರೆ.
ಈಗಾಗಲೇ ಕಾಂಗ್ರೆಸ್ ನ 12 ಶಾಸಕರು ಪಕ್ಷ ತೊರೆದು ಟಿಆರ್ ಎಸ್ ಸೇರುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ಸ್ಪೀಕರ್ ಕಾಂಗ್ರೆಸ್ ಶಾಸಕರ ಮನವಿಯನ್ನು ಒಪ್ಪಿಕೊಂಡರೆ, ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನವನ್ನೂ ಕಳೆದುಕೊಳ್ಳಲಿದೆ. ಏತನ್ಮಧ್ಯೆ ಟಿಆರ್ ಎಸ್ ಗೆ ಸೇರ್ಪಡೆಗೊಳ್ಳುವ ಕಾಂಗ್ರೆಸ್ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರ ಈ ಬಂಡಾಯ ಕಳೆದ ಆರು ತಿಂಗಳಿಂದಲೇ ನಿರಂತರವಾಗಿದ್ದು, ಹನ್ನೊಂದು ಮಂದಿ ಶಾಸಕರು ಟಿಆರ್ ಎಸ್ ಜೊತೆ ವಿಲೀನವಾಗಿರುವುದಾಗಿ ಘೋಷಿಸಿದ್ದರು. ಆದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅದು ಮಾನ್ಯವಲ್ಲ. ಹಾಗಾಗಿ ಆ ಶಾಸಕರನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಸ್ಪೀಕರ್ ಅವರಿಗೆ ಮನವಿ ಮಾಡಿದ್ದರು ಮತ್ತು ಆ ವಿವಾದ ನ್ಯಾಯಾಲಯದ ಮೆಟ್ಟಿಲೇರಿ, ವಿಚಾರಣೆ ನಡೆಯುತ್ತಿದೆ.
ಇದೀಗ, ಮತ್ತೊಂದು ದಿಢೀರ್ ಬೆಳವಣಿಗೆಯಲ್ಲಿ ಅದೇ ಶಾಸಕರು, ತಮ್ಮೊಂದಿಗೆ ಮತ್ತೊಬ್ಬರನ್ನು ಹೆಚ್ಚುವರಿಯಾಗಿ ಸೇರಿಸಿಕೊಂಡು, ಪಕ್ಷಾಂತರ ನಿಷೇಧ ಕಾಯ್ದೆಯ ತಾಂತ್ರಿಕ ತೊಡಕಿನಿಂದ ಪಾರಾಗುವ ಯತ್ನ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಟಿಆರ್ ಎಸ್ ನಾಯಕ ಹಾಗೂ ಸಿಎಂ ಕೆ ಚಂದ್ರಶೇಖರ ರಾವ್ ಅವರ ಬೆಂಬಲಕ್ಕೆ ನಿಂತಿದ್ದೇವೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವಿಶೇಷ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಪಕ್ಷದ ವಿಲೀನಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಈ ಬಣದ ಶಾಸಕರು ಹೇಳಿದ್ದಾರೆ.
ಅಂದರೆ, ಪಕ್ಷಾಂತರ ನಿಷೇಧ ಕಾಯ್ದೆಯ ಷರತ್ತುಗಳನ್ನು ಪೂರೈಸಲು ಏನೆಲ್ಲಾ ಅಗತ್ಯ ಮತ್ತು ಪ್ರಕ್ರಿಯೆಗಳನ್ನು ಮಾಡುವುದು ಅಗತ್ಯವೋ ಅದನ್ನೆಲ್ಲಾ ಮಾಡಿಕೊಂಡೇ ಈ ಬಾರಿ ಕಾಂಗ್ರೆಸ್ ಶಾಸಕರ ಬಣ ತಮ್ಮ ಬಂಡಾಯ ಮತ್ತು ಆ ಬಳಿಕದ ಟಿಆರ್ ಎಸ್ ನೊಂದಿಗಿನ ವಿಲೀನಕ್ಕೆ ಯಾವುದೇ ಅಡ್ಡಿ ಇರದೆ, ಮಾನ್ಯತೆ ದೊರಕಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಇದು ಕಾಂಗ್ರೆಸ್ ಪಾಲಿಗೆ ಆಘಾತಕಾರಿ ಎಂದು ಬಣ್ಣಿಸಲಾಗುತ್ತಿದೆ.
ಪಕ್ಷಾಂತರ ನಿಷೇಧ ಕಾಯ್ದೆಯ ಪ್ರಕಾರ ಯಾವುದೇ ಪಕ್ಷದ ಮೂರನೇ ಒಂದು ಭಾಗದಷ್ಟು ಶಾಸಕರು ಮತ್ತೊಂದು ಪಕ್ಷಕ್ಕೆ ಸೇರಿದರೆ, ಆಗ ಆ ಶಾಸಕರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಪ್ರಯೋಗಿಸಲಾಗದು. ಆ ಹಿನ್ನೆಲೆಯಲ್ಲಿ ಇದೀಗ ತೆಲಂಗಾಣದ ಕಾಂಗ್ರೆಸ್ಸಿನ ಒಟ್ಟು 18 ಮಂದಿ ಶಾಸಕರ ಪೈಕಿ 12 ಮಂದಿ (ಅಂದರೆ ಮೂರನೇ ಎರಡಷ್ಟು ಮಂದಿ) ಟಿಆರ್ ಎಸ್ ನೊಂದಿಗೆ ವಿಲೀನಕ್ಕೆ ಸ್ಪೀಕರ್ ಮತ್ತು ರಾಜ್ಯಪಾಲರಿಗೆ ಲಿಖಿತ ಕೋರಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಬಹುಶಃ ಅವರನ್ನು ಯಾವ ಕಾಯ್ದೆಯಡಿಯೂ ತಡೆಯಲಾಗದು. ಹಾಗಾಗಿ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನವನ್ನು ಕಳೆದುಕೊಳ್ಳುವುದು ಇದೀಗ ಶತಸಿದ್ಧ.
ಆದರೆ, ತೆಲಂಗಾಣ ಕಾಂಗ್ರೆಸ್ ಪಾಲಿಗೆ ಸದನದ ಹೊರಗೆ ಒಟ್ಟಾರೆಯಾಗಿ ಪಕ್ಷದ ಸಂಘಟನೆ ಮತ್ತು ಶಕ್ತಿಯ ಮೇಲೆ ಈ ಬೆಳವಣಿಗೆ ಬೀರುವ ಪರಿಣಾಮ ಭೀಕರ ಎಂಬುದು ದಿಟ. ಕೇರಳ ಹೊರತುಪಡಿಸಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಅಧಃಪತನದ ಹಾದಿಯಲ್ಲಿದೆ ಎಂಬುದಕ್ಕೆ ತೆಲಂಗಾಣದ ಈ ಬೆಳವಣಿಗೆ ಮತ್ತಷ್ಟು ಇಂಬು ನೀಡಿದೆ ಎಂಬುದಂತೂ ನಿಜ.