ಹೆಸರಾಂತ ವಿಚಾರವಾದಿ, ಬರೆಹಗಾರ, ಬಾಂಬೇ ಐಐಟಿಯ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮ್ ಪುನಿಯಾನಿ ಅವರಿಗೆ ಅನಾಮಧೇಯ ಗೂಂಡಾಗಳು ಜೀವ ಬೆದರಿಕೆ ಕರೆಗಳನ್ನು ಮಾಡಿದ್ದು, ಹಿಂದೂ ವಿರೋಧಿ ಎಂದು ಆರೋಪಿಸಿ, ಅವಾಚ್ಯವಾಗಿ ನಿಂದಿಸಿ ಹೆದರಿಸಿರುವ ಘಟನೆ ಜೂನ್ 6ರಂದು ನಡೆದಿದೆ. ಈ ಸಂಬಂಧ ಪ್ರೊ.ರಾಮ್ ಪುನಿಯಾನಿ ಮುಂಬೈ ಪೊಲೀಸರ ಬಳಿ ದೂರು ಸಲ್ಲಿಸಿದ್ದು ಎಫ್ ಐ ಆರ್ ದಾಖಲಾಗಿದೆ.
ಭಾರತ ಬಹುತ್ವ ಸಂಸ್ಕೃತಿಯ ಪ್ರಬಲ ಪ್ರತಿಪಾದಕರೂ, ಧಾರ್ಮಿಕ ಮೂಲಭೂತವಾದದ ಪ್ರಖರ ಟೀಕಾಕಾರರೂ ಆಗಿರುವ ಪ್ರೊ.ಪುನಿಯಾನಿ ಭಾರತದ ಚರಿತ್ರೆಯನ್ನು ಆಳವಾಗಿ ಅಧ್ಯಯನ ನಡೆಸಿ ವೈಚಾರಿಕ ವಾಗ್ವಾದಗಳನ್ನು ನಡೆಸುತ್ತಿರುವ ದೇಶದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದಾರೆ.
ಭಾರತದ ಸಮಾಜದಲ್ಲಿ ಸೌಹಾರ್ದ, ಸಹಬಾಳ್ವೆಯ ಬದುಕಿನ ಉಳಿವಿಗಾಗಿ ತಮ್ಮ ಧ್ವನಿ ಎತ್ತುತ್ತಾ ಬಂದಿರುವ ಪ್ರೊ.ಪುನಿಯಾನಿ ಈ ನಿಟ್ಟಿನಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಶುಕ್ರವಾರ ರಾತ್ರಿ 8.30ಕ್ಕೆ ಅವರಿಗೆ ಮೊದಲ ಬೆದರಿಕೆ ಕರೆ ಬಂದಿದ್ದು ಅದನ್ನು ಪುನಿಯಾನಿ ಅವರ ಬಾವ ಸ್ವೀಕರಿಸಿದ್ದು, ಕೆಟ್ಟ ಕೊಳಕ ಭಾಷೆಯಲ್ಲಿ ರಾಮ್ ಪುನಿಯಾನಿ ಅವರನ್ನು ನಿಂದಿಸಲಾಗಿದೆ. ತಕ್ಷಣ ನಿಮ್ಮ ಚಟುವಟಿಕೆಗಳನ್ನು ನಿಲ್ಲಿಸದೇ ಹೋದರೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಬೆದರಿಸಿರುವುದಲ್ಲದೇ 15 ದಿನಗಳಲ್ಲಿ ಜಾಗ ಖಾಲಿ ಮಾಡಬೇಕು ಎಂದು ತಾಕೀತು ಮಾಡಲಾಗಿದೆ. 5ನಿಮಿಷಗಳ ನಂತರ ಬಂದ ಮತ್ತೊಂದು ಕರೆಯನ್ನು ಸ್ವತಃ ರಾಮ್ ಪುನಿಯಾನಿ ಸ್ವೀಕರಿಸಿದ್ದಾರೆ. ಆಗಲೂ ಆಕ್ರಮಣಕಾರಿಯಾಗಿ ಮಾತಾಡಿರುವ ವ್ಯಕ್ತಿ ಜೀವ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾನೆ.
ತಮಗೆ ಜೀವ ಬೆದರಿಕೆ ಕರೆ ಬಂದ ಕುರಿತು ಕೂಡಲೇ ದೂರು ದಾಖಲಿಸಿರುವ ಪ್ರೊ.ರಾಮ್ ಪುನಿಯಾನಿ ಕರೆಯ ವಿವರಗಳನ್ನು ನೀಡಿದ್ದಾರೆ.
ಇದೇ ದೂರಿನಲ್ಲಿ ಪ್ರೊ ಪುನಿಯಾನಿ ಅವರು ಕಳೆದ ಮಾರ್ಚ್ 9ರಂದು ಮೂವರು ಅಪರಿಚಿತರು ಪಾಸ್ ಪೋರ್ಟ್ ವಿಚಾರಣೆಯ ನೆಪದಲ್ಲಿ ತಮ್ಮ ಮನೆಗೆ ಬಂದು ತಮ್ಮ ಕುಟುಂಬ ಮತ್ತಿತರ ಮಾಹಿತಿ ಕೊಂಡೊಯ್ದಿರುತ್ತಾರೆ ಎಂದೂ ತಿಳಿಸಿದ್ದಾರೆ.
ಮುಂಬೈ ಪೊಲೀಸ್ ಕಮಿಶನರ್ ಸಂಜಯ್ ಬಾರ್ವೆ ಅವರಿಗೂ ದೂರಿನ ಪ್ರತಿಯನ್ನು ಪ್ರೊ ಪುನಿಯಾನಿ ಕಳಿಸಿ ಕೊಟ್ಟಿದ್ದಾರೆ.