ರಾಷ್ಟ್ರೀಯ ಶಿಕ್ಷಣ ನೀತಿ – 2019ರ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಲಿವೆ. ಪ್ರಮುಖವಾಗಿ ಈ ನೀತಿಯಲ್ಲಿನ ಕೆಲವು ಅಂಶಗಳು ತ್ರಿಭಾಷಾಸೂತ್ರದ ಮೂಲಕ ಹಿಂದೀ ಹೇರಿಕೆಯನ್ನು ಮಾಡುವಂತಿದೆ ಎನ್ನುವುದು ದೇಶದ ಹಲವು ಕಡೆ ಇದರ ವಿರುದ್ಧವಾದ ಪ್ರತಿಭಟನೆಗೆ ಕಾರಣವಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಅನೇಕ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳು ದನಿ ಎತ್ತಿದ್ದಾರೆ. ಇಲ್ಲಿನ ಬಿಜೆಪಿಯ ಹಲವು ಸಂಸದರು ತ್ರಿಭಾಷಾಸೂತ್ರವನ್ನು ಬೆಂಬಲಿಸಿದ್ದರೆ ಕಾಂಗ್ರೆಸ್ ಪಕ್ಷ, ನಾಡಿನ ಮುಖ್ಯಮಂತ್ರಿಗಳು, ಹಲವಾರು ಕನ್ನಡ ಪರ ಸಂಘ ಸಂಸ್ಥೆಗಳು, ಸಂಘಟನೆಗಳು ಉದ್ದೇಶಿತ ಶಿಕ್ಷಣ ನೀತಿಗೆ, ಆ ಮೂಲಕ ಹಿಂದೀ ಹೇರಿಕೆಗೆ ತಮ್ಮ ವಿರೋಧ ತೋರಿಸಿವೆ.
ಒಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಹುಳುಕುಗಳನ್ನು ಜನರ ಮುಂದಿಡಲು ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿದ್ದರೆ, ಕೇಂದ್ರಸರ್ಕಾರದ ಈ ನೀತಿಯನ್ನು ಬೆಂಬಲಿಸಲು ನಾಡಿನ ಹಲವಾರು ಪ್ರಖ್ಯಾತ ಪತ್ರಕರ್ತರು ಟೊಂಕಕಟ್ಟಿ ನಿಂತಿದ್ದನ್ನು ನಾವು ನೋಡಬಹುದಾಗಿದೆ. ಇದರಲ್ಲಿ ಪ್ರಮುಖವಾಗಿ ವಿಶ್ವವಾಣಿ ಪತ್ರಿಕೆಯ ಶ್ರೀ.ವಿಶ್ವೇಶ್ವರಭಟ್ ಅವರು ಒಬ್ಬರು. ಇವರ ಪತ್ರಿಕೆಯಲ್ಲಿ ಹಿಂದೀ ಹೇರಿಕೆ ವಿರೋಧಿ ಹೋರಾಟವನ್ನು ಖಂಡಿಸುವಂತೆ, ಅವಹೇಳನ ಮಾಡುತ್ತಾ ತ್ರಿಭಾಷಾಸೂತ್ರವನ್ನು ಬೆಂಬಲಿಸುವಂತೆ ಒಂದು ಬರಹವು ನಿನ್ನೆ ತಾನೇ ಮೂಡಿಬಂದಿದೆ. ಸದರಿ ಬರಹದಲ್ಲಿನ ತಪ್ಪು ಮಾಹಿತಿಗಳನ್ನು, ತಪ್ಪುಗ್ರಹಿಕೆಗಳನ್ನು ಮತ್ತು ನಿಜಕ್ಕೂ ರಾಷ್ಟ್ರೀಯ ಶಿಕ್ಷಣ ನೀತಿಯ ಹುಳುಕು ಹುನ್ನಾರಗಳನ್ನು ಅರಿಯಬೇಕಾಗಿದೆ. ಮೊದಲಿಗೆ ವಿಶ್ವವಾಣಿಯ ಬರಹದ ಬಗ್ಗೆ ನೋಡೋಣ.
ವಿಶ್ವವಾಣಿಯ ಬರಹದಲ್ಲಿ ಪ್ರಮುಖವಾಗಿ ಹಿಂದೀ ಕಲಿಯದಿದ್ದರೆ ಭಾರತದಲ್ಲಿ ಅವಕಾಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿವರಿಸಲಾಗಿದೆ. ಈ ದೇಶದ ಪ್ರಧಾನಮಂತ್ರಿಗಳಾಗಿ ಯಶಸ್ವಿಯಾಗಲು ಹಿಂದೀ ಬರಲೇಬೇಕು. ಹಿಂದೀ ವಿರೋಧಿಸಿ ತಮಿಳರು ಈ ದೇಶದಲ್ಲಿ ಕೆಲಸದ ಅವಕಾಶಗಳನ್ನು, ಉತ್ತರದವರಿಂದ ಗೌರವವನ್ನು ಕಳೆದುಕೊಂಡಿದ್ದಾರಲ್ಲದೆ ಏಳಿಗೆಯಾಗದೆ ಹಿಂದುಳಿದು ತೊಂದರೆಪಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಬರೆಯಲಾಗಿದೆ. ಇದರಲ್ಲಿನ ಸತ್ಯಾಂಶ ನೋಡಬೇಕೆಂದರೆ ಕೇಂದ್ರಸರ್ಕಾರಿ ನೌಕರಿಗಳಲ್ಲಿ (ಉದಾ: ಭಾರತೀಯ ರೈಲ್ವೆ, IAS, IPS) ಅಧಿಕಾರಿಗಳ ಲೆಕ್ಕ ನೋಡಿದರೆ ಹಿಂದೀ ಒಪ್ಪದ ತಮಿಳರ ಪ್ರಮಾಣ ಹೆಚ್ಚಿದೆಯೋ, ಹಿಂದೀ ಅಪ್ಪಿದ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆಯೋ ತಿಳಿಯುತ್ತದೆ. ಕೇಂದ್ರಸರ್ಕಾರದಿಂದ ರಾಜ್ಯವೊಂದು ಗಿಟ್ಟಿಸಿಕೊಂಡಿರುವ ರೈಲು, ಹೆದ್ದಾರಿ, ಇಲಾಖೆಗಳು ಮೊದಲಾದವುಗಳನ್ನು ಕರ್ನಾಟಕ ಹೆಚ್ಚು ಪಡೆದುಕೊಂಡಿದೆಯೋ ತಮಿಳುನಾಡೊ ಹೋಲಿಕೆ ಮಾಡಿದರೆ ಸಾಕು. ಇನ್ನು ದೆಹಲಿ, ಕೊಲ್ಕತ್ತಾ ಮುಂಬೈ ಮೊದಲಾದ ನಗರಗಳ ವಲಸಿಗರಲ್ಲಿ ತಮಿಳರ ಸಂಖ್ಯೆ ಹೆಚ್ಚೋ ಕನ್ನಡಿಗರ ಸಂಖ್ಯೆ ಹೆಚ್ಚೋ ನೋಡಿದರೆ ಸಾಕು. ಭಟ್ಟರ ಈ ಮಾತು ಎಷ್ಟು ಪೊಳ್ಳಿನದ್ದು ಎಂಬುದು ಅರಿವಾಗುತ್ತದೆ. ಸದರಿ ಬರಹದಲ್ಲಿ ಶ್ರೀಯುತ ಭಟ್ಟರು ಹಿಂದೀ ಭಾರತದ ರಾಷ್ಟ್ರಭಾಷೆ ಎನ್ನುವ ಸುಳ್ಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿರುವುದು ಸೋಜಿಗದ ವಿಷಯವಾಗಿದೆ. ದೇಶಕ್ಕೊಂದೇ ಭಾಷೆಯಿರಬೇಕು ಎನ್ನುವುದನ್ನು ಪ್ರತಿಪಾದಿಸುವಂತೆ ಹೀಬ್ರೂ ಬಾರದೆ ಇಸ್ರೇಲಿಗೆ ಪ್ರಭಾನಿಯಾಗುವುದು, ಇಂಗ್ಲೀಷ್ ಬಾರದೆ ಇಂಗ್ಲೇಂಡಿಗೆ ಪ್ರಧಾನಿಯಾಗುವುದು ಹೇಗೆ ಅಸಾಧ್ಯವೋ ಹಾಗೇ ಹಿಂದೀ ಬಾರದೆ ಭಾರತಕ್ಕೆ ಪ್ರಧಾನಿಯಾಗುವುದು ಅಸಾಧ್ಯ ಎಂದಿದ್ದಾರೆ. ಇಂತಹ ಗುಲಾಮಗಿರಿಯ ದುಃಸ್ಥಿತಿಯಿಂದ ಹೊರಬರುವುದು ಭಾರತದ ಒಗ್ಗಟ್ಟಿಗೆ ಬಹಳ ಮುಖ್ಯವಾದುದಾಗಿದೆ. ಹಿಂದೀ ಭಾಷೆ ತಿಳಿಯದ ವ್ಯಕ್ತಿ ಈ ದೇಶದ ಪ್ರಧಾನಿಯಾಗುವುದು ಅಸಾಧ್ಯ ಎನ್ನುವ ಪರಿಸ್ಥಿತಿ ಇದ್ದರೆ ಅದು ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗಳಿಗೆ ಮಾರಕವಾದ ಸನ್ನಿವೇಶವಾದುದಾಗಿದೆ, ಹೀಗಾದರೆ ಮುಂದೆಂದೂ ಒಬ್ಬ ಕನ್ನಡಿಗ, ತಮಿಳ, ಮಲಯಾಳಿ, ಬೆಂಗಾಲಿ ಭಾಷಿಕ ಈ ದೇಶದ ಪ್ರಧಾನಮಂತ್ರಿ ಪಟ್ಟಕ್ಕೇ ಏರುವುದು ಅಸಾಧ್ಯವಾಗುತ್ತದೆ. ಇಂಥಾ ಪರಿಸ್ಥಿತಿ ಬಾರದಂತೆ ಪ್ರಜಾಪ್ರಭುತ್ವವಾದಿಗಳು ಎಚ್ಚರ ವಹಿಸಿ, ನಾಡಿನ ವ್ಯವಸ್ಥೆಯನ್ನು ಮರುರೂಪಿಸಿಕೊಳ್ಳಬೇಕಾಗಿದೆ. ದೇಶದ ಬೇರೆ ಬೇರೆ ಭಾಗದ ಬೇರೆ ಬೇರೆ ನುಡಿಯಾಡುಗರಿಗೆ ಸರದಿಯ ಮೇಲೆ ಪ್ರಧಾನಮಂತ್ರಿ ಹುದ್ದೆ ನೀಡುವ ವ್ಯವಸ್ಥೆ ಈ ಹುಳುಕಿಗೆ ಪರಿಹಾರವಾಗಬಹುದು!
ಒಂದು ದೇಶ ಒಂದು ಭಾಷೆಯ ಭ್ರಮೆಯಲ್ಲಿ ಚೀನಾ ದೇಶದ ಉದಾಹರಣೆ ನೀಡುತ್ತಾ ಮಂದಾರಿನ್ ನುಡಿಯ ಸಾರ್ವಭೌಮತ್ವ ಹೊಗಳುವ ಬರಹಗಾರರು ಚೀನಾದಲ್ಲಿ ಅದೆಷ್ಟು ನುಡಿಗಳನ್ನು ಹತ್ತಿಕ್ಕಲಾಗಿದೆ ಎನ್ನುವುದನ್ನು ಮರೆತಿದ್ದಾರೆ. ಭಾರತ ಸ್ವಾತಂತ್ರ ಬಂದಾಗಿನಿಂದ ಮಾದರಿಯಾಗಿ ಅನುಸರಿಸಿದ ಸೋವಿಯತ್ ಒಕ್ಕೂಟದಲ್ಲಿ ರೂಸಿಫಿಕೇಶನ್ ಮೂಲಕ ರಷಿಯನ್ ನುಡಿಯನ್ನು ಇಡೀ ಒಕ್ಕೂಟದ ತುಂಬಾ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹೇರಿಕೆ ಮಾಡಿದ್ದರ ಪರಿಣಾಮ ಏನಾಗಿದೆ ಎನ್ನುವುದನ್ನು ಗುರುತಿಸಲು ವಿಫಲರಾಗಿದ್ದಾರೆ. ಒಡೆದು ಚೂರು ಚೂರಾದ ಸೋವಿಯತ್ ಒಕ್ಕೂಟದಲ್ಲಿ ಹೊಸ ದೇಶಗಳು ಹುಟ್ಟಿಕೊಂಡಿದ್ದೇ ನುಡಿಗಳ ಆಧಾರದ ಮೇಲೆ ಎನ್ನುವ ಪಾಠವನ್ನು ಭಾರತ ಕಲಿಯಬೇಕಾಗಿದೆ. ಭಾಷಾವಾರು ರಾಜ್ಯಗಳ ಒಕ್ಕೂಟದಲ್ಲಿ ಒಂದು ಭಾಷೆಯನ್ನು ಮೆರೆಸಿದರೆ ಅದರ ಪರಿಣಾಮ ಒಕ್ಕೂಟದ ಏಕತೆಯ ಮೇಲೆ ಕೆಟ್ಟದಾಗಿರಲಿದೆ ಎನ್ನುವ ಆತಂಕ ಎಲ್ಲಾ ದೇಶಪ್ರೇಮಿಗಳಿಗೆ ಇರಬೇಕಾಗಿದೆ.
ಬರಹದಲ್ಲಿ ಪ್ರಮುಖವಾಗಿ ಕಾಣುವ ತಪ್ಪುಗ್ರಹಿಕೆಯೆಂದರೆ ಹಿಂದೀ ಭಾಷೆಯನ್ನು ಕಲಿಯಬಾರದು ಎನ್ನುವ ನಿಲುವನ್ನು ಹಿಂದೀಹೇರಿಕೆ ವಿರೋಧಿಗಳು ಹೊಂದಿದ್ದಾರೆ ಎನ್ನುವುದು. ವಾಸ್ತವವಾಗಿ ಇಂತಹ ಯಾವ ನಿಲುವೂ ನಮದಲ್ಲ. ಆಸಕ್ತಿ ಇರುವವರು ಹಿಂದೀ ಕಲಿಯಲು ಖಂಡಿತಾ ಅವಕಾಶ ಇರಬೇಕು. ಹಿಂದೀ ಅಷ್ಟೇ ಏಕೆ, ತಮಿಳು, ಮಲಯಾಳಮ್, ಬೆಂಗಾಲಿ, ತುಳು, ಕೊಡವ, ಜಪಾನೀಸ್, ಫ್ರೆಂಚ್, ಜರ್ಮನ್… ಹೀಗೆ ಯಾವುದೇ ಭಾಷೆಯನ್ನಾದರೂ ಕಲಿಯುವ ಅವಕಾಶ ಇರಬೇಕು. ನಮ್ಮ ನಿಲುವು, ಆಯ್ಕೆಯ ಅವಕಾಶವೇ ಇರದಂತೆ ಒಂದೇ ನುಡಿಯನ್ನು ಕಡ್ಡಾಯ ಮಾಡಬಾರದು ಮತ್ತು ವಿಶೇಷವಾಗಿ ತನ್ನ ನಾಡಿನ ಕೆಲವು ಜನರಿಗೆ ಮಾತ್ರಾ ಕಡ್ಡಾಯ ಮಾಡಿ, ಕೆಲವರಿಗೆ ಆಯ್ಕೆಯ ಅವಕಾಶ ಕೊಡುವ ತಾರತಮ್ಯ ಮಾಡಬಾರದು ಎನ್ನುವುದು. ಹೌದೇ? ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂತಹ ತಾರತಮ್ಯ ಇದೆಯೇ? ಅದರಲ್ಲಿರುವ ತ್ರಿಭಾಷಾ ಸೂತ್ರವು ಬಹಳ ಹಿಂದಿನಿಂದಲೇ ಇದೆಯಲ್ಲವೇ? ಇದೇನು ಹೊಸದಾಗಿ ಸೇರಿರುವುದಲ್ಲವಲ್ಲ? ಈಗ್ಯಾಕೆ ಪ್ರತಿರೋಧ? ಎನ್ನುವುದನ್ನು ತಿಳಿಯಲು ಸದರಿ ಶಿಕ್ಷಣ ನೀತಿಯಲ್ಲಿ ಏನಿದೆ ಎನ್ನುವುದನ್ನು ಮೊದಲಿಗೆ ತಿಳಿಯಬೇಕಾಗುತ್ತದೆ.
ಕಲಿಕೆಯಲ್ಲಿನ ತ್ರಿಭಾಷಾ ಸೂತ್ರ ಎನ್ನುವುದು 1967ರಲ್ಲಿ, ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯೊಂದರಲ್ಲಿ ಆಡಳಿತ ಭಾಷಾ ನಿರ್ಣಯ ಎಂಬುದಾಗಿ ರೂಪುಗೊಂಡಿದ್ದು ಇದಕ್ಕೆ ಸಾಂವಿಧಾನಿಕವಾಗಿ ಯಾವ ಕಟ್ಟುಪಾಡು ಇಲ್ಲ. ಇದರಲ್ಲಿ ಹಿಂದೀಯೇತರ ರಾಜ್ಯಗಳಲ್ಲಿ ಹಿಂದೀಯನ್ನು, ಹಿಂದೀ ನಾಡುಗಳಲ್ಲಿ ಭಾರತದ ಯಾವುದಾದರೂ ಒಂದು ಭಾಷೆಯನ್ನು ವಿಶೇಷವಾಗಿ ದಕ್ಷಿಣದ ಒಂದು ಭಾಷೆಯನ್ನು ಕಲಿಸಬೇಕು ಎನ್ನಲಾಗಿದೆ. ಇದುವರೆಗೆ ತ್ರಿಭಾಷಾಸೂತ್ರ ಜಾರಿಯಾಗಿರುವುದು ದಕ್ಷಿಣದ ಕರ್ನಾಟಕ, ಆಂಧ್ರದಂತಹ ನಾಡುಗಳಲ್ಲಿ ಮಾತ್ರಾ. ಇಂದಿಗೂ ಉತ್ತರ ಪ್ರದೇಶದಲ್ಲಿ ಇರುವುದು ಹಿಂದೀ ಮತ್ತು ಇಂಗ್ಲೀಷುಗಳ ದ್ವಿಭಾಷಾ ಸೂತ್ರವೇ! ಆಗಿನ ನೀತಿಯಲ್ಲಿನ ತಾರತಮ್ಯವನ್ನೇ ನೋಡಿ. ನಮಗೆ ಮೂರನೇ ಭಾಷೆಯ ಆಯ್ಕೆಯ ಅವಕಾಶವೇ ಇಲ್ಲ. ಕಡ್ಡಾಯವಾಗಿ ಹಿಂದೀ ಕಲಿಯಬೇಕು. ಆದರೆ ಉತ್ತರದವರಿಗೆ ತಮ್ಮಿಷ್ಟದ ಮೂರನೇ ಭಾಷೆ, ಅದೂ ಬೇಕಿದ್ದರೆ ಕಲಿಯಬಹುದು ಎನ್ನುವ ತಾರತಮ್ಯ. ಸಮಾನತೆಯೇ ಜೀವಾಳವಾದ ದೇಶದಲ್ಲಿ ಇಂಥಾ ತಾರತಮ್ಯದ ನೀತಿಯು ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಿದ ಹಾಗೆ ಅಲ್ಲವೇನು?
1967ರಲ್ಲಿ ತ್ರಿಭಾಷಾಸೂತ್ರ ಜಾರಿ ಮಾಡಿದಾಗ ರಾಜ್ಯದಲ್ಲೂ, ಕೇಂದ್ರದಲ್ಲೂ ರಾಷ್ಟ್ರೀಯವಾದಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದುದ್ದರಿಂದ ಪ್ರಶ್ನೆಗೆ ಅವಕಾಶ ಇಲ್ಲದಂತೆ, ಕುವೆಂಪು ಅವರಂತಹ ಹಿರಿಯ ದಾರ್ಶನಿಕರ ಪ್ರತಿರೋಧ ಮತ್ತು ಕಟುಟೀಕೆಯ ನಡುವೆಯೂ ತ್ರಿಭಾಷಾಸೂತ್ರ ಜಾರಿಯಾಯಿತು. 1975ರವರೆಗೆ ಶಿಕ್ಷಣ ಎನ್ನುವುದು ಸಂವಿಧಾನದ ರೀತ್ಯಾ ರಾಜ್ಯಪಟ್ಟಿಯಲ್ಲಿತ್ತು. ಹಾಗಾಗಿ ಎಂದಾದರೂ ನಾವು ಈ ಸೂತ್ರವನ್ನು ಕೈಬಿಡುವ ಅವಕಾಶವಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಶ್ರೀಮತಿ ಇಂದಿರಾಗಾಂಧಿಯವರ ಕೃಪೆಯಿಂದ ಶಿಕ್ಷಣ ಎನ್ನುವುದು ಜಂಟಿಪಟ್ಟಿಯಲ್ಲಿ ಸೇರಿತು. ಅಂದರೆ ಕೇಂದ್ರಸರ್ಕಾರ ಮಾಡುವ ನಿಯಮವೇ ಅಂತಿಮ! ಇದೀಗ ರಾಜ್ಯಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯೇನಾದರೂ ಜಾರಿಯದರೆ ತ್ರಿಭಾಷಾಸೂತ್ರವನ್ನು ತಿರಸ್ಕರಿಸುವ, ಕೈಬಿಡುವ ಅವಕಾಶವೇ ಇಲ್ಲ. ಹಾಗಾಗಿ ರಾಷ್ಟ್ರೀಯ ನೀತಿಯಿಂದಲೇ ಈ ನಿಯಮವನ್ನು ಕೈಬಿಡುವಂತೆ ಒತ್ತಾಯಿಸಬೇಕಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಪುಟ್ಟಮಕ್ಕಳಿಗೆ ಅನೇಕ ಭಾಷೆಗಳನ್ನು ಕಲಿಯುವ ಸಾಮರ್ಥ್ಯವಿದ್ದು, ಮೂರನೆಯ ವಯಸ್ಸಿನಿಂದಲೇ ಮೂರುಭಾಷೆಗಳನ್ನು ಕಲಿಸಬೇಕು ಎನ್ನುತ್ತದೆ ಹಿಂದೀಯೇತರ ರಾಜ್ಯಗಳಲ್ಲಿ ರಾಜ್ಯದ ಭಾಷೆಯ ಜೊತೆಯಲ್ಲಿ ಹಿಂದೀ ಮತ್ತು ಇಂಗ್ಲೀಶ್ ನುಡಿಗಳನ್ನು ಕಲಿಸಬೇಕು ಎನ್ನುವ ಈ ನೀತಿ ಹಿಂದೀ ನಾಡುಗಳಲ್ಲಿ ರಾಜ್ಯಭಾಷೆ ಮತ್ತು ಇಂಗ್ಲೀಷುಗಳ ಜೊತೆಯಲ್ಲಿ ಮೂರನೆಯ ನುಡಿಯಾಗಿ ಯಾವುದಾದರೂ ಒಂದು ಭಾರತೀಯ ನುಡಿಯನ್ನು ಕಲಿಸಬೇಕು ಎನ್ನುತ್ತದೆ. ಹೀಗೆ ಕಲಿಸಲು ಆಯಾ ಹಿಂದೀ ರಾಜ್ಯಗಳು ಬೇರೆ ಬೇರೆ ರಾಜ್ಯಗಳ ಜೊತೆ ಒಪ್ಪಂದಕ್ಕೆ ಬರತಕ್ಕದ್ದು ಎನ್ನುತ್ತದೆ. ನಮ್ಮ ವಿರೋಧ ಇರುವುದು ತ್ರಿಭಾಷಾ ಸೂತ್ರವೆನ್ನುವ ಹುಳುಕಿನ ನೀತಿಯ ಬಗ್ಗೆಯೇ! ಮೊದಲಿಗೆ ಕಲಿಕೆಯನ್ನು ಜಂಟಿ ಪಟ್ಟಿಯಿಂದ ರಾಜ್ಯಪಟ್ಟಿಗೆ ವರ್ಗಾಯಿಸಬೇಕು. ರಾಜ್ಯಗಳಲ್ಲಿನ ಕಲಿಕೆಯ ನೀತಿಯನ್ನು ರಾಜ್ಯಸರ್ಕಾರಗಳು ತೀರ್ಮಾನಿಸಬೇಕು. ಕರ್ನಾಟಕದಲ್ಲಿ ಕನ್ನಡ ಮತ್ತು ಬೇರೊಂದು ನುಡಿ ಎನ್ನುವ ದ್ವಿಭಾಷಾ ಸೂತ್ರ ಜಾರಿಯಾಗಬೇಕು. ಆಗ ಮಕ್ಕಳು ಮತ್ತು ಪೋಷಕರು ತಮಗೆ ಬೇಕಾದ ಹಾಗೆ, ಇಂಗ್ಲೀಶನ್ನೊ, ಹಿಂದೀಯನ್ನೋ, ತಮಿಳು, ತೆಲುಗು, ಫ್ರೆಂಚ್, ಜಪಾನೀಸ್, ಜರ್ಮನ್, ಕೊಡವ, ತುಳು.. ಯಾವುದಾದರೋ ನುಡಿಯನ್ನು ಆರಿಸಿಕೊಳ್ಳುವ ಹಾಗಾಗಬೇಕು. ಹೀಗೆ ಆರಿಸಿಕೊಳ್ಳುವ ನುಡಿಯನ್ನು ಒಂದು ಹಂತದ ನಂತರ ತಮಗೆ ಬೇಕಾದಾಗ ಬದಲಿಸಿಕೊಳ್ಳುವ ಅವಕಾಶ ಇರಬೇಕು. ಇದು ನಮ್ಮ ಬೇಡಿಕೆಯಾಗಿದೆ. ಇಷ್ಟಕ್ಕೂ ಹಿಂದೀ ಭಾಷೆಯನ್ನು ಕಡ್ಡಾಯ ಮಾಡುವುದಕ್ಕೆ ಏಕೆ ವಿರೋಧ? ಭಾರತದ ಸಂಪರ್ಕ ಭಾಷೆಯಾಗಿ ನಮ್ಮದೇ ನಾಡಿನ ಹಿಂದೀ ಒಪ್ಪುವುದು ಒಳ್ಳೆಯದಲ್ಲವೇ? ನಮ್ಮನ್ನು ಗುಲಾಮರನ್ನಾಗಿಸಿದ ಇಂಗ್ಲೀಶ್ ಭಾಷೆಯನ್ನು ಒಪ್ಪುವುದಕ್ಕಿಂತಾ ಹಿಂದೀ ಭಾಷೆ ಮೇಲಲ್ಲವೇ? ಎನ್ನುವ ಪ್ರಶ್ನೆ ಎದುರಾಗುತ್ತದೆ.
ಆರ್ಥಿಕವಾಗಿ ಕರ್ನಾಟಕವು ಭಾರತದ ಅತ್ಯಂತ ಮುಂದುವರೆದ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಜನಸಂಖ್ಯೆ ಒಂದು ಚದರ ಕಿಲೋಮೀಟರ್ ವಿಸ್ತೀರ್ಣಕ್ಕೆ ಸುಮಾರು 313ರಷ್ಟಿದೆ. ಇಲ್ಲಿನ ಹೆರುವೆಣಿಕೆ 1.8ರಷ್ಟಿದೆ. ಅಂದರೆ ಅರುಕೋಟಿ ಜನಸಂಖ್ಯೆಯ ಕರ್ನಾಟಕವು ಇನ್ನೊಂದು ಐವತ್ತು ವರ್ಷಗಳಲ್ಲಿ ಐದುವರೆಕೋಟಿಗೆ ಇಳಿಯಲಿದೆ. ಹಾಗೇ ಮುಂದುವರೆಯುತ್ತಾ ಮತ್ತಷ್ಟು ಕಡಿಮೆಯಾಗಲಿದೆ. ಹೀಗೆ ಇಳಿಕೆಯಾಗುತ್ತಿರುವುದು ನೈಸರ್ಗಿಕವಾಗಲ್ಲದೆ ಭಾರತ ಸರ್ಕಾರದ ಕುಟುಂಬ ನಿಯಂತ್ರಣಾ ಯೋಜನೆಯು ಗುರಿಕೊಟ್ಟು ಇಳಿಸಿರುವಂಥದ್ದಾಗಿದೆ. ಇದು ಉತ್ತರದ ರಾಜ್ಯಗಳಲ್ಲಿ ವ್ಯತಿರಿಕ್ತವಾಗಿದೆ. ಅಲ್ಲಿನ ರಾಜ್ಯಗಳು ಆರ್ಥಿಕವಾಗಿ ಹಿಂದುಳಿದಿವೆ. ಜನದಟ್ಟಣೆ 800-1000ದ ಆಸುಪಾಸಿನಲ್ಲಿದೆ. ಹೆರುವೆಣಿಕೆ 3.0ಕ್ಕಿಂತಾ ಹೆಚ್ಚಿದೆ. ಅಂದರೆ ಹತ್ತುಕೋಟಿ ಜನಸಂಖ್ಯೆಯ ಉತ್ತರ ಪ್ರದೇಶ ಇನ್ನೊಂದೈವತ್ತು ವರ್ಷದಲ್ಲಿ 12 ಕೋಟಿ ಮುಟ್ಟುತ್ತದೆ. ಅಂದರೆ ನಿಜವಾಗಿ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಉತ್ತರ ಭಾರತೀಯರು ನಮ್ಮ ನಾಡಿಗೆ ಎಗ್ಗುಸಿಗ್ಗಿಲ್ಲದೆ ವಲಸೆ ಬರುವುದು ಹೆಚ್ಚಲಿದೆ. ಹೀಗೆ ನಮ್ಮ ನಾಡಿನ ಜನಲಕ್ಷಣವನ್ನು ಕದಲಿಸಿಬಿಡುವ ಕರಾಳ ದಿನಗಳು ಮುಂದೆ ಬರಲಿವೆ. ಇದು ಸಹಜವಾದ ಬೆಳವಣಿಕೆಯಾಗಿರದೆ ಭಾರತ ಸರ್ಕಾರ ನಡೆಸಿರುವ ಹುನ್ನಾರ ಎನ್ನುವ ಅನುಮಾನಕ್ಕೆ ಕಾರಣವಾಗುವ ಹಲವು ಅಂಶಗಳಿವೆ. ಗಮನಿಸಿ, ಕರ್ನಾಟಕದಲ್ಲೇ ಇರುವ ಕೇಂದ್ರಸರ್ಕಾರದ ಎಲ್ಲಾ ಕಚೇರಿಗಳ ಆಡಳಿತ ಭಾಷೆ ಹಿಂದೀ/ ಇಂಗ್ಲೀಷ್. ಇಲ್ಲಿನ ಪಾಸ್ಪೊರ್ಟ್ ಕಚೇರಿ, ರೈಲ್ವೇ, ವಿಮಾನ ನಿಲ್ದಾಣಗಳಿಂದ ಹಿಡಿದು ಎಲ್ಲೆಡೆ ಹಿಂದೀ ಭಾಷೆಯಲ್ಲಿ ಸೇವೆ ಸಿಗುತ್ತದೆ. ಅಷ್ಟೇಕೆ ಆಕಾಶವಾಣಿಯಲ್ಲಿ ಮನರಂಜನೆಯೂ ಹಿಂದೀಯಲ್ಲಿ ಸಿಗುತ್ತದೆ. ನಗರ ಸಾರಿಗೆ, ನಗರ ಪಾಲಿಕೆ, ಪೊಲೀಸ್, ತೋಟಗಾರಿಕೆ, ಮೆಟ್ರೋ ಮೊದಲಾದ ನಮ್ಮ ನಗರಕ್ಕೆ ಸೀಮಿತವಾದ ವ್ಯವಸ್ಥೆಗಳಲ್ಲೂ ಹಿಂದೀ ನುಡಿಯನ್ನು ತ್ರಿಭಾಷಾಸೂತ್ರದ ಹೆಸರಲ್ಲಿ ಸೇರಿಸುವುದನ್ನು ಸಮರ್ಥಿಸುತ್ತಿರುವ ಇಂತಹ ವಿಷಮ ಸನ್ನಿವೇಶದಲ್ಲಿ ಕನ್ನಡದ ಮಕ್ಕಳಿಗೆ ಶಾಲಾಹಂತದಿಂದಲೇ ಹಿಂದೀ ಕಲಿಸಿದರೆ, ವಲಸಿಗನಿಗೆ ಇದಕ್ಕಿಂತಾ ಸ್ವರ್ಗಸುಖ ಮತ್ತೊಂದುಂಟೆ? ಇಡೀ ಭಾರತವನ್ನು, ಕರ್ನಾಟಕವನ್ನು ಹಿಂದೀ ವಸಾಹತು ಮಾಡುವ ಇಂಥಾ ಹುನ್ನಾರವನ್ನು ಇಂದು ನಾವು ಎದುರಿಸಿ ವಿಫಲಗೊಳಿಸದೇ ಇದ್ದರೆ ಕನ್ನಡದ ಗತಿ ಏನು? ಕನ್ನಡಿಗನ ಭವಿಷ್ಯವೇನು? ಹಿಂದೀ ಕಲಿಯದೆ ರೈಲು, ಬ್ಯಾಂಕು ಮತ್ತಿತರ ಕೇಂದ್ರಸರ್ಕಾರಿ ನೌಕರಿ ಇಲ್ಲ ಎನ್ನುವ ಕಾಲವು ಬದಲಾಗಿ ಹಿಂದೀ ಕಲಿಯದೆ ಕಿರಾಣಿ ಅಂಗಡಿಯಲ್ಲೂ ಕೆಲಸವಿಲ್ಲ ಎನ್ನುವ ದಿನ ಬಾರದೇ ಇರುವುದೇ?
ಈ ಎಲ್ಲಾ ಹಿನ್ನೆಲೆಯಲ್ಲಿ, ಹಿಂದೀ ಹೇರಿಕೆಯನ್ನೂ… ಅದಕ್ಕೆ ಗಟ್ಟಿಯಾದ ಅಡಿಪಾಯದ ಭೂಮಿಕೆಯನ್ನು ಕಟ್ಟಿಕೊಡುವುದಕ್ಕಾಗೇ ರೂಪಿಸಲಾಗಿರುವ “ರಾಷ್ಟ್ರೀಯ ಶಿಕ್ಷಣ ನೀತಿ – 2019”ನ್ನೂ ಎಲ್ಲಾ ಕನ್ನಡಿಗರು ವಿರೋಧಿಸಬೇಕಾಗಿದೆ.
This article written y by Mr. Anand G has thrown some new lights on DRaft NEP. Even Hindi if facing threats form minor languages of North India such as Bhojpuri, Mythili etc. India should evolve a National Language policy immediately, otherwise will face many problems shortly
Thanks to Mr. Anand for his very balanced article