ರಾಜ್ಯ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಅವಧಿಯ ನಿರಂತರ ಆಪರೇಷನ್ ಕಮಲದ ಭೀತಿ, ಕಾಂಗ್ರೆಸ್ ಶಾಸಕರ ಹಿಡಿದಿಟ್ಟುಕೊಳ್ಳುವ ಹರಸಾಹಸ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದೋಸ್ತಿ ಪಕ್ಷಗಳ ನಾಯಕರ ನಡುವಿನ ರಾಜಕೀಯ ಕೆಸರೆರಚಾಟಗಳನ್ನು ನೋಡಿ ರೋಸಿ ಹೋಗಿರುವ ಜನತೆಗೆ ಇದೀಗ ಆ ಏಕತಾನತೆಯಿಂದ ಭಿನ್ನವಾದ ಹೊಸ ರಾಜಕೀಯ ವಿದ್ಯಮಾನದ ಭರವಸೆ ಹುಟ್ಟಿದೆ!
ಹೌದು, ಸಿಎಂ ಕುಮಾರಸ್ವಾಮಿ ಅವರು ಇದೀಗ ತಮ್ಮ ದಶಕಗಳ ಹಳೆಯ ಗ್ರಾಮ ವಾಸ್ತವ್ಯದ ಮೊರೆ ಹೋಗಿದ್ದು, ಇದೇ ಜೂನ್ 21ರಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ರಾಜ್ಯದ ಗ್ರಾಮೀಣ ಭಾಗದ ಜನರ ಸಮಸ್ಯೆ, ಸಂಕಷ್ಟಗಳನ್ನು ಆಲಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ರಾಜ್ಯದ ಜನತೆಗೆ ಒಂದು ವರ್ಷದ ಸಮ್ಮಿಶ್ರ ಸರ್ಕಾರದ ಅದೇ ರಗಳೆಗಳಿಂದ ಒಂದಿಷ್ಟು ಬಿಡುಗಡೆ ನೀಡುವ ಭರವಸೆ ನೀಡಿದ್ದಾರೆ. ಅದೇ ಹೊತ್ತಿಗೆ, ಕೇವಲ ಜನರಿಗೆ ರಾಜಕೀಯ ರಂಪಾಟದಿಂದ ಸಿಗಲಿರುವ ಬಿಡುಗಡೆ ಮಾತ್ರವಲ್ಲ; ಬದಲಾಗಿ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಾಲಿಗೂ ಇದು ಹೊಸ ಬಿಡುಗಡೆ ನೀಡಲಿದೆಯೇ ಎಂಬುದು ಈ ಬಾರಿಯ ಗ್ರಾಮ ವಾಸ್ತವ್ಯದ ಕುತೂಹಲ.
ಬಿಜೆಪಿ ಜೊತೆಗಿನ ತಮ್ಮ ಮೈತ್ರಿ ಸರ್ಕಾರದ ಮೊದಲ ಪ್ರಯೋಗದ ವೇಳೆ ಕೂಡ ಮಿತ್ರಪಕ್ಷದ ರಾಜಕೀಯ ಒತ್ತಡ ಮತ್ತು ನಾಯಕರ ಅಸಹಕಾರದ ನಡುವೆ ಕುಮಾರಸ್ವಾಮಿ ಅವರು ತಮ್ಮದೇ ವೈಯಕ್ತಿಕ ವರ್ಚಸ್ಸು ಮತ್ತು ಪಕ್ಷದ ಸಂಘಟನೆಯ ಬಲವರ್ಧನೆಗೆ ಆಯ್ಕೆ ಮಾಡಿಕೊಂಡಿದ್ದು ಇದೇ ಗ್ರಾಮ ವಾಸ್ತವ್ಯವನ್ನು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿ ಕೆ ನಾಗನೂರಿನಿಂದ ಆರಂಭವಾಗಿದ್ದ ಅವರ ಸರಣಿ ಗ್ರಾಮ ವಾಸ್ತವ್ಯಗಳು ಸರ್ಕಾರವನ್ನು ಹಳ್ಳಿಗಾಡಿನ ಜನರ ಮನೆಬಾಗಿಲಿಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿತ್ತು. ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಕುಗ್ರಾಮಗಳಲ್ಲಿ ಹೋಗಿ ವಾಸ್ತವ್ಯ ಹೂಡುತ್ತಿದ್ದುದರಿಂದ ಸಹಜವಾಗೇ ರಾಜ್ಯಮಟ್ಟದಿಂದ ಸ್ಥಳೀಯ ಪಂಚಾಯ್ತಿಮಟ್ಟದವರೆಗೆ ವಿವಿಧ ಹಂತಗಳ ಅಧಿಕಾರಶಾಹಿ ಆ ಗ್ರಾಮದತ್ತ ದೌಡಾಯಿಸುತ್ತಿತ್ತು. ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಾಲೆ ಮುಂತಾದ ನಾಗರಿಕ ಸೌಲಭ್ಯಗಳಿಗೆ ಹೊಸ ಜೀವ ಬರುತ್ತಿತ್ತು. ಅಲ್ಲದೆ, ಗ್ರಾಮದ ಜನರ ವೃದ್ಧಾಪ್ಯ ವೇತನ, ವಿಧನಾವೇತನದಂತಹ ವೈಯಕ್ತಿಕ ಸಂಗತಿಗಳೂ ಅಧಿಕಾರಶಾಹಿಯ ಅವಗಾಹನೆಗೆ ಒಳಗಾಗುತ್ತಿದ್ದವು.
ಪ್ರವಾಹ ಸಂತ್ರಸ್ತರ ಸಮಸ್ಯೆಯ ಆಲಿಸುವುದರಿಂದ ಆರಂಭವಾಗಿದ್ದ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ, ಉತ್ತರಕರ್ನಾಟಕದ ಬರ, ಗುಳೇ ಸಮಸ್ಯೆ, ರೈತ ಆತ್ಮಹತ್ಯೆ, ಅಸ್ಪೃಶ್ಯತೆ(ದಲಿತ ಕಾಲೊನಿ) ಸಮಸ್ಯೆ, ಹಂದಿಗೋಡು ಕಾಯಿಲೆಪೀಡಿತರ ಗೋಳು, ಮಲೆನಾಡಿನ ಕುಗ್ರಾಮಗಳ ಸಮಸ್ಯೆ ಸೇರಿದಂತೆ ರಾಜ್ಯದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಮಾಧ್ಯಮ ಮತ್ತು ಅಧಿಕಾರಶಾಹಿಯ ಗಮನ ಸೆಳೆಯುವಲ್ಲಿ ಕೂಡ ಯಶಸ್ವಿಯಾಗಿದ್ದವು. ಶಾಶ್ವತವಾಗಿಯಲ್ಲದಿದ್ದರೂ, ತಾತ್ಕಾಲಿಕವಾಗಿಯಾದರೂ ಒಂದಿಷ್ಟು ಕೆಲಸಗಳಾಗುತ್ತಿದ್ದವು. ಜನರಲ್ಲಿ ಅಪಾರ ಭರವಸೆ ಹುಟ್ಟಿಸುತ್ತಿದ್ದವು. ಆ ಕಾರಣದಿಂದಾಗಿಯೇ, ಆವರೆಗೆ ಕೇವಲ ಹಳೇ ಮೈಸೂರು ಭಾಗದ ಪ್ರಾದೇಶಿಕ ಪಕ್ಷವಾಗಿ ಉಳಿದಿದ್ದ ಜೆಡಿಎಸ್ ಪಕ್ಷಕ್ಕೆ ಉತ್ತರಕರ್ನಾಟಕದ ಭಾಗದಲ್ಲಿಯೂ ಜನ ಬೆಂಬಲ ಪಡೆಯಲು ಸಾಧ್ಯವಾಗಿತ್ತು.
ಆ ಕಾರಣದಿಂದ ವಿಶೇಷವಾಗಿ ಉತ್ತರಕರ್ನಾಟಕದ ಭಾಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದ ಗ್ರಾಮ ವಾಸ್ತವ್ಯ ಹಾಗೂ ಕುಮಾರಸ್ವಾಮಿ ಅವರ ವರ್ಚಸ್ಸು, ತತಕ್ಷಣಕ್ಕೆ (2008ರ ವಿಧಾನಸಭಾ ಚುನಾವಣೆಯಲ್ಲಿ) ಜೆಡಿಎಸ್ಗೆ ರಾಜಕೀಯ ಲಾಭ ತಂದುಕೊಡುವಲ್ಲಿ ಸಫಲವಾಗಿರಲಿಲ್ಲ. ಅದಕ್ಕೆ ಆಗಿನ ಬಿ ಎಸ್ ಯಡಿಯೂರಪ್ಪ ಅವರ ವಚನಭಷ್ಟ ಕುಮಾರಸ್ವಾಮಿ ಎಂಬ ಅಭಿಯಾನ ಮತ್ತು ಲಿಂಗಾಯತ ನಾಯಕನಿಗೆ ಅನ್ಯಾಯ ಎಂಬ ಭಾವನೆಗಳು ಕಾರಣವಾಗಿದ್ದವು. ಆದರೆ, 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 40 ಸ್ಥಾನ ಗೆಲ್ಲುವಲ್ಲಿ ಗ್ರಾಮ ವಾಸ್ತವ್ಯದ ಗಣನೀಯ ಕೊಡುಗೆಯನ್ನು ತಳ್ಳಿಹಾಕಲಾಗದು. ತಳಮಟ್ಟದಲ್ಲಿ ಪಕ್ಷದ ನೆಲೆ ವಿಸ್ತರಣೆ ಮೂಲಕ ಸಂಘಟನೆಗೆ ಬಲ ಮತ್ತು ಕುಮಾರಸ್ವಾಮಿ ಅವರಿಗೆ ಜನಪರ ಮುಖ್ಯಮಂತ್ರಿ ಎಂಬ ವರ್ಚಸ್ಸು ತಂದುಕೊಟ್ಟ ‘ಗ್ರಾಮ ವಾಸ್ತವ್ಯ’ ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವ ಮುಗಿದೇ ಹೋಯಿತು ಎಂಬ ಪಂಡಿತರ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿತ್ತು.
ಗ್ರಾಮ ವಾಸ್ತವ್ಯದ ಆ ಶಕ್ತಿಯನ್ನು ಮನಗಂಡಿರುವ ಸಿಎಂ ಕುಮಾರಸ್ವಾಮಿ ಅವರು ಇದೀಗ; ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳ ನಾಯಕರ ಒಳಪೆಟ್ಟು, ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಆಗಿರುವ ವೈಫಲ್ಯ, ಸಾಲ ಮನ್ನಾ ಸೇರಿದಂತೆ ತಮ್ಮ ಸರ್ಕಾರದ ಪ್ರಮುಖ ಕಾರ್ಯಕ್ರಮಗಳ ಅನುಷ್ಠಾನದಲ್ಲಾಗಿರುವ ಹಿನ್ನಡೆ ಮುಂತಾದ ಸಾಲು-ಸಾಲು ವ್ಯತಿರಿಕ್ತ ಪರಿಸ್ಥಿತಿಯ ನಡುವೆ ಕುಸಿದುಹೋಗಿರುವ ಪಕ್ಷದ ಸಂಘಟನೆಗೆ ಬಲ ತುಂಬಲು ಮತ್ತೆ ಗ್ರಾಮ ವಾಸ್ತವ್ಯದ ಮೊರೆ ಹೋಗಿದ್ದಾರೆ. ಪಕ್ಷ ಸಂಘಟನೆಗೆ ಬಲ ತುಂಬುವ ಉದ್ದೇಶವನ್ನು ಸ್ವತಃ ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ ಕೂಡ. ಅದೇ ಹೊತ್ತಿಗೆ, ಹಿಂದಿನ ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಹುಟ್ಟಿಸಿದ್ದ ಭರವಸೆಗೆ ವ್ಯತಿರಿಕ್ತವಾಗಿ ಈ ಬಾರಿಯ ಒಂದು ವರ್ಷದ ಅವಧಿಯಲ್ಲಿ ತಮ್ಮ ವೈಯಕ್ತಿಕ ಕಾರ್ಯವೈಖರಿಯ ಬಗ್ಗೆಯೂ ಜನಸಾಮಾನ್ಯರಿಗೆ ತೃಪ್ತಿ ಇಲ್ಲ ಎಂಬ ಸತ್ಯ ಕೂಡ ಲೋಕಸಭಾ ಚುಣಾವಣೆಯ ಬಳಿಕ ಅವರಿಗೆ ಮನವರಿಕೆಯಾದಂತಿದೆ. ಆ ಹಿನ್ನೆಲೆಯಲ್ಲಿ ಈ ಬಾರಿಯ ಗ್ರಾಮ ವಾಸ್ತವ್ಯ ಕೂಡ ಹಿಂದಿನಂತೆಯೇ ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಖಂಡಿತ ಒದಗಿಬರಲಿದೆ ಎಂಬ ಖಾತ್ರಿ ಅವರಿಗಿದ್ದಂತಿದೆ.
ಆದರೆ, ಮುಖ್ಯಮಂತ್ರಿಗಳ ಈ ರಾಜಕೀಯ ಅಭಿಯಾನ ಅವರ ವೈಯಕ್ತಿಕ ವರ್ಚಸ್ಸು ಮತ್ತು ಅವರ ಪಕ್ಷ ಜೆಡಿಎಸ್ ನ ಬಲವರ್ಧನೆಯ ಹೊರತಾಗಿ ದೋಸ್ತಿ ಸರ್ಕಾರದ ವರ್ಚಸ್ಸು ವೃದ್ಧಿಗೆ ಎಷ್ಟರಮಟ್ಟಿಗೆ ಒದಗಿಬರಲಿದೆ ಎಂಬುದನ್ನು ಈ ಅಭಿಯಾನಕ್ಕೆ ಮಿತ್ರಪಕ್ಷ ಕಾಂಗ್ರೆಸ್ ನಾಯಕರು ಹೇಗೆ ಕೈಜೋಡಿಸುತ್ತಾರೆ ಎಂಬುದರ ಮೇಲೆ ನಿಂತಿದೆ.
ಹಾಗೆ ನೋಡಿದರೆ, ಕುಮಾರಸ್ವಾಮಿ ಅವರ ಈ ‘ಗ್ರಾಮ ವಾಸ್ತವ್ಯ 2.0’ ಗುರಿ ಯಾವುದು ಎಂಬುದು ಕೂಡ ಈ ಬಾರಿಯ ಅದರ ಯಶಸ್ಸು ಮತ್ತು ಸಫಲತೆಯನ್ನು ನಿರ್ಧರಿಸಲಿದೆ. ಪಕ್ಷ ಸಂಘಟನೆ, ವೈಯಕ್ತಿಕ ವರ್ಚಸ್ಸು ಮೇಲ್ನೋಟಕ್ಕೆ ಕಾಣುವ ಗುರಿಗಳ ಹೊರತಾಗಿಯೂ ಈ ಅಭಿಯಾನಕ್ಕೆ ಹೆಚ್ಚು ಗಹನವಾದ ಮತ್ತು ನಿರ್ದಿಷ್ಟವಾದ ಗುರಿಗಳು ಇವೆ ಎಂಬುದನ್ನು ತಳ್ಳಿಹಾಕಲಾಗದು. ಮುಖ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ರಾಜ್ಯ ರಾಜಕಾರಣ ಮಗ್ಗಲು ಬದಲಿಸಿದೆ ಎಂಬುದು ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಖಾತ್ರಿಯಾಗಿದೆ. ಆ ಬದಲಾವಣೆಯ ತೋರಿಸಿರುವ ಪ್ರಮುಖ ಸಂಗತಿಗಳಲ್ಲಿ, ಜಾತಿ ಮತ್ತು ಪಂಗಡಗಳ ಓಲೈಕೆಯ ರಾಜಕಾರಣವನ್ನು ಬಿಜೆಪಿಯ ‘ದೇಶ ಮತ್ತು ಧರ್ಮ’ ರಾಜಕಾರಣ ಬುಡಮೇಲು ಮಾಡಿದೆ. ರಾಜ್ಯದ ಮಟ್ಟಿಗೆ ಬಿಜೆಪಿ ಲಿಂಗಾಯತರ ಪಕ್ಷ ಎಂಬ ಗ್ರಹಿಕೆಯನ್ನು ಕೂಡ ತೊಡೆದುಹಾಕಿದೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಜನಪರ ಯೋಜನೆಗಳು ಮತ ಕ್ರೋಡೀಕರಣಕ್ಕೆ ಒದಗಿಬಂದಿಲ್ಲ. ರೈತರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಮುಂತಾದ ದುರ್ಬಲ ವರ್ಗಗಳ ಪರ ನೀತಿ-ನಿಲುವುಗಳ ರಾಜಕಾರಣದಲ್ಲಿ ಮತಗಳನ್ನು ತಂದುಕೊಡಲಾರವು.. , ಮುಂತಾದ ಹೊಸ ರಾಜಕೀಯ ಹೊಳವುಗಳನ್ನು ಈ ಚುನಾವಣೆ ನೀಡಿದೆ.
ಆ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಭದ್ರಪಡಿಸುವುದು ಮತ್ತು ಕಾರ್ಯಕರ್ತರ ಪಡೆ ಕಟ್ಟುವುದೊಂದೇ ರಾಜಕಾರಣದಲ್ಲಿ ಪ್ರಸ್ತುತರಾಗಿ ಉಳಿಯಲು ಇರುವ ದಾರಿ ಎಂಬುದು ಈಗ ಸಾಬೀತಾಗಿದೆ. ಹಾಗಾಗಿ ರಾಜಕೀಯ ಪ್ರಸ್ತುತತೆ ಉಳಿಸಿಕೊಳ್ಳುವ ಜೊತೆಗೆ, ಎದುರಾಳಿಗಳನ್ನು ಅಪ್ರಸ್ತುತಗೊಳಿಸುವ ಲೆಕ್ಕಾಚಾರ ಕೂಡ ಈ ಗ್ರಾಮವಾಸ್ತವ್ಯ 2.0ದ ಗುರಿಯಾಗಿದೆ ಎನ್ನಲಾಗುತ್ತಿದೆ.
ಆರು ತಿಂಗಳ ಬಳಿಕ ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಾಗಬಹುದು ಎಂಬ ಲೆಕ್ಕಾಚಾರ, ನಾಲ್ಕು ವರ್ಷ ಸರ್ಕಾರ ಉಳಿಯುತ್ತದೆ ಎನ್ನುತ್ತಿರುವ ಕುಮಾರಸ್ವಾಮಿ ಅವರಿಗೂ ಇರಬಹುದು. ಆ ಹಿನ್ನೆಲೆಯಲ್ಲಿ ಬಿಜೆಪಿಯ ಯಡಿಯೂರಪ್ಪ ಅವರಷ್ಟೇ ಅಲ್ಲದೆ, ಮಿತ್ರಪಕ್ಷ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರನ್ನೂ ಮೀರಿ ರಾಜ್ಯದ ಮೂಲೆ ಮೂಲೆಗೆ ತಲುಪಿ, ಪಕ್ಷವನ್ನು ಚುನಾವಣೆಗೆ ಸಜ್ಜುಮಾಡುವ ಅವಕಾಶವಾಗಿಯೂ ಈ ಅಭಿಯಾನವನ್ನು ಬಳಸಿಕೊಳ್ಳುವ ಜಾಣ್ಮೆ ಕೂಡ ಅವರದ್ದಾಗಿದೆ.
ಆದರೆ, ಕಳೆದ ಬಾರಿಯ ಗ್ರಾಮ ವಾಸ್ತವ್ಯಗಳ ಬಳಿಕ ಆ ಗ್ರಾಮಗಳ ಪರಿಸ್ಥಿತಿ ಎಷ್ಟರಮಟ್ಟಿಗೆ ಸುಧಾರಿಸಿದೆ? ಅಂದು ಗಮನ ಹರಿಸಿದ್ದ ಆ ಸಮಸ್ಯೆಗಳು ಎಷ್ಟರಮಟ್ಟಿಗೆ ಪರಿಹಾರವಾಗಿವೆ ಎಂಬ ಪ್ರಶ್ನೆಗಳು ಕೂಡ ಮತ್ತೆ ಎದ್ದುಕೂತಿವೆ. ಜೊತೆಗೆ, ಪ್ರತಿಪಕ್ಷ ಬಿಜೆಪಿ ನಾಯಕರು ಈಗಾಗಲೇ ಗ್ರಾಮ ವಾಸ್ತವ್ಯವನ್ನು ಲೇವಡಿಮಾಡತೊಡಗಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ನಿರೀಕ್ಷೆ ಸಿಎಂ ಅವರ ಈ ಅಭಿಯಾನದ ಮೇಲಿದೆ ಮತ್ತು ಅಷ್ಟೇ ಪ್ರಮಾಣದ ಶಂಕೆ- ಅನುಮಾನಗಳೂ ಕೂಡ.
ಹಾಗಾಗಿ, ಈ ‘ಗ್ರಾಮ ವಾಸ್ತವ್ಯ 2.0’ ನಿಜಕ್ಕೂ ಸಿಎಂ ಪಾಲಿಗೇ ದೊಡ್ಡ ಸವಾಲು ಕೂಡ. ಅದೇ ಕಾರಣಕ್ಕೆ, ಪ್ರಮುಖವಾಗಿ ಬಿಜೆಪಿಯ ಯಡಿಯೂರಪ್ಪ ಮತ್ತು ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರ ಪಾಲಿಗೂ ಇದು ರಾಜಕೀಯವಾಗಿ ಎದುರಿಸಲೇಬೇಕಾದ ಸವಾಲು. ಒಟ್ಟಾರೆ, ಮುಂದಿನ ದಿನಗಳಲ್ಲಿ ಗ್ರಾಮ ವಾಸ್ತವ್ಯ ರಾಜ್ಯ ರಾಜಕಾರಣದ ಮೇಲೆ ಉಂಟುಮಾಡುವ ಪರಿಣಾಮಗಳಂತೂ ಕುತೂಹಲಕಾರಿ.