ಕುಂದಾಪುರ: ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಜನರಿಗೆ ಮಾತ್ರವಲ್ಲ ಸ್ವಂತ ಪಕ್ಷದ ಕಾರ್ಯಕರ್ತರಿಗೂ ಗೌರವ ನೀಡುತ್ತಿಲ್ಲ ಎನ್ನುವ ಆರೋಪಕ್ಕೆ ಕಾರಣವಾಗಿದ್ದ ಬಿಜೆಪಿ ಮುಖಂಡ ಹಾಗೂ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾದ ಸುಕುಮಾರ ಶೆಟ್ಟಿ ಇದೀಗ ಸ್ವಂತ ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲದೇ ಹಲ್ಲೆಗೊಳಗಾದವರ ಮೇಲೆಯೇ ಜಿಲ್ಲಾ ಎಸ್ಪಿಯವರ ಮೂಲಕ ಕೇಸು ಹಾಕಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಸಂಜೆ ಶಾಸಕರ ಮನೆಯಂಗಳದಲ್ಲಿಯೇ ನಡೆದಿದೆ.
ಘಟನೆಯ ವಿವರ: ಕುಂದಾಪುರ ತಾಲೂಕಿನ ಮುದ್ದೂರು ಎಂಬಲ್ಲಿ ನಡೆಸಲು ಸಿದ್ಧತೆ ನಡೆಸಲಾಗುತ್ತಿತ್ತೆನ್ನಲಾದ ಬಾರ್ ಒಂದರ ವಿಚಾರಕ್ಕೆ ಸಂಬಂಧಿಸಿ ಗುರುವಾರ ತಡ ರಾತ್ರಿ ಶಾಸಕರಾದ ಸುಕುಮಾರ ಶೆಟ್ಟಿಯವರ ಹಿಂಬಾಲಕ, ಮುದೂರಿನ ಪ್ರದೀಪ ಶೆಟ್ಟಿ ಎಂಬಾತ ತಲ್ಲೂರು ಭರತ್ ಶೆಟ್ಟಿ ಎಂಬುವರ ಸಂಬಂಧಿಕರ ಮನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ಧ ಮಹಿಳೆಯೂ ಸೇರಿದಂತೆ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡಿದ್ದವರು ಕುಂದಾಪುರದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಗಾಯಗೊಂಡವರು ತಮ್ಮ ಮೇಲಿನ ಹಲ್ಲೆಯ ಹಿಂದೆ ಶಾಸಕ ಸುಕುಮಾರ ಶೆಟ್ಟಿ ಹಾಗೂ ಅವರ ಹಿಂಬಾಲಕರ ಕೈವಾಡವಿದೆ ಎಂದು ಹೇಳಿದ್ದರಿಂದ ಶಾಸಕ ಸುಕುಮಾರ ಶೆಟ್ಟಿ ಪಂಚಾಯಿತಿ ನಡೆಸಿ ರಾಜಿಯಲ್ಲಿ ಪ್ರಕರಣ ಇತ್ಯರ್ಥ ನಡೆಸುವುದಾಗಿ ಹಲ್ಲೆಗೊಳಗಾದವರಿಗೆ ತಿಳಿಸಿದ್ದರು ಎನ್ನಲಾಗಿದೆ. ಇದೇ ಸಂದರ್ಭ ತಲ್ಲೂರು ಭರತ್ ಶೆಟ್ಟಿ, ಬೆಲ್ತೂರಿನ ರಕ್ಷಿತ್ ಶೆಟ್ಟಿ(ಗುರು), ರವಿ ಭಟ್, ನಾಗರಾಜ ಗಾಣಿಗ ಮೊದಲಾದವರು ಶಾಸಕ ಸುಕುಮಾರ ಶೆಟ್ಟಿ ಅವರ ಮನೆಗೆ ಬಂದಿದ್ದರು. ಶಾಸಕರ ಹಿಂಬಾಲಕರಾದ ದೀಪಕ್ ಶೆಟ್ಟಿ, ಶಿರೂರಿನ ರವಿ ಶೆಟ್ಟಿ, ಸಂತೋಷ ಹಾಗೂ ಸುಮಾರು ಐವತ್ತಕ್ಕೂ ಹೆಚ್ಚು ಜನರು ಶಾಸಕರ ಮನೆಯಲ್ಲಿ ಸೇರಿದ್ದರು ಎನ್ನಲಾಗಿದೆ.
ಪಂಚಾಯಿತಿ ನಡೆಸಲು ಕರೆದ ಆಹ್ವಾನದ ಮೇಲೆಗೆ ಹೋದಾಗ ಶಾಸಕರ ಮನೆಯೊಳಗೆ ದೀಪಕ್ ಶೆಟ್ಟಿ ಹಾಗೂ ರವಿ ಶೆಟ್ಟಿ, ಅವಾಚ್ಯವಾಗಿ ಬೈದಿದ್ದು, ಮಾತಿಗೆ ಮಾತು ಬೆಳೆದು ರವಿಶೆಟ್ಟಿ ಎಂಬಾತ ರಕ್ಷಿತ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದೇ ಸಂದರ್ಭ ಮನೆಯ ಹೊರಗೆ ನಿಂತಿದ್ದ ರವಿ ಭಟ್ ಎಂಬಾತನಿಗೆ ಶಾಸಕ ಸುಕುಮಾರ ಶೆಟ್ಟಿ ಹಲ್ಲೆ ನಡೆಸಿದ್ದರಿಂದ ಆಕ್ರೋಶ ಗೊಂಡ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ರಾಜಿ ಪಂಚಾಯಿತಿ ನಡೆಸಲು ಕರೆಯಿಸಿ ಸ್ವಂತ ಪಕ್ಷದ ಕಾರ್ಯಕರ್ತರ ಮೇಲೆಯೇ ಹಲ್ಲೆ ನಡೆಸಿರುವುದು ಎಷ್ಟು ಸರಿ ಎಂದು ರಕ್ಷಿತ್ ಶೆಟ್ಟಿ ಮೊದಲಾದವರು ಪ್ರಶ್ನಿಸಿದಾಗ ಸುಕುಮಾರ ಶೆಟ್ಟಿ ಉಡುಪಿ ಜಿಲ್ಲಾ ಎಸ್ಪಿಯವರಿಗೆ ದೂರುವಾಣಿ ಕರೆ ಮಾಡಿ ಸ್ಥಳೀಯ ಪುಡಾರಿಗಳು ಮನೆಯೊಳಗೆ ನುಗ್ಗಿ ದಾಂಧಲೆ ಮಾಡುತ್ತಿದ್ದಾರೆ. ಪೊಲೀಸರು ನೀವೇನು ಮಾಡುತ್ತಿದ್ದೀರಿ ಎಂದು ಒತ್ತಡ ಹೇರಿ ಹಲ್ಲೆಗೊಳಗಾದವರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಒತ್ತಡಕ್ಕೆ ಮಣಿದ ಪೊಲೀಸರು ಶಾಸಕರ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದು, ದೂರಿನಲ್ಲಿ ನಮೂದಿಸಲಾದ ಆರೋಪಿಗಳು ಇದೀಗ ತಲೆ ಮರೆಸಿಕೊಂಡಿದ್ದಾರೆ.
ರಾಜೀನಾಮೆಗೆ ಆಗ್ರಹ: ಬೈಂದೂರು ಕ್ಷೇತ್ರವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬೇಕು ಎನ್ನುವ ದೃಷ್ಟಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ಸಿಗೆ ವಿರೋಧವಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸಿದ್ದೇವೆ. ಆದರೆ ಶಾಸಕರು ಅದನ್ನು ಮರೆತು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಅತ್ಯಂತ ಕೆಟ್ಟ ಪದಗಳಿಂದ ಕಾರ್ಯಕರ್ತರನ್ನು ಬೈಯುತ್ತಾರೆ. ನಮ್ಮ ಪಕ್ಷದ ಶಾಸಕರೇ ನಮ್ಮ ಮೇಲೆ ಹಲ್ಲೆಗೆ ಮುಂದಾದರೆ ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು? ಶಾಸಕರು ತಕ್ಷಣವೇ ರಾಜೀನಾಮೆ ನೀಡಿ ಪಕ್ಷದ ಇತರ ನಾಯಕರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲದೇ ಇದ್ದಲ್ಲಿ ಬಿಜೆಪಿ ಕಾರ್ಯಕರ್ತರೆಲ್ಲಾ ಒಗ್ಗಟ್ಟಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬೈಂದೂರು ಬಿಜೆಪಿಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಶಾಸಕರಾದವರು ತನ್ನ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಬೇಕೆ ವಿನಃ ದಬ್ಬಾಳಿಕೆ ನಡೆಸುವುದಲ್ಲ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುವ ದೌರ್ಜನ್ಯವನ್ನು ಪಕ್ಷದ ಕ್ಷೇತ್ರಾಧ್ಯಕ್ಷನಾಗಿ ಸಹಿಸುವುದಿಲ್ಲ ಎಂದಿರುವ ಸದಾನಂದ ಉಪ್ಪಿನಕುದ್ರು, ಶಾಸಕರು ಕಾರ್ಯಕರ್ತರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದಿದ್ದಾರೆ. “ನನ್ನ ಮೇಲೆಯೂ ಮೂರು ತಿಂಗಳ ಹಿಂದೆ ಶಾಸಕರ ಚೇಲಾಗಳು ಹಲ್ಲೆ ನಡೆಸಿದ್ದರು. ಆದರೆ ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿದ್ದೆ ಎಂದು ಹೇಳಿರುವ ಅವರು, ಕಾರ್ಯಕರ್ತರಿಗೆ ತೊಂದರೆಯಾದರೆ ಸಹಿಸುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
ಮಾಹಿತಿ ಕೃಪೆ: ಕನ್ನಡ ಜನಮಾನಸ ವರದಿ