ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಇದೇ ತಿಂಗಳ 12ರಂದು ಬೆಳಗ್ಗೆ 11.30ಕ್ಕೆ ರಾಜ್ಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ನಡೆಯಲಿದೆ.
ಈ ವಿಷಯವನ್ನು ಸ್ವತಃ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ಬಹಿರಂಗಪಡಿಸಿದ್ದು, ತಮ್ಮ ಅಧಿಕೃತ ಟ್ವಿಟರ್ ನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಸಮಯ ನಿಗದಿ ಮಾಡಿರುವುದಾಗಿ ಹೇಳಿದ್ದಾರೆ.
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಕುರಿತು ಸಾಕಷ್ಟು ಹಿರಿಯ ಕಾಂಗ್ರೆಸ್ ನಾಯಕರು ಒತ್ತಾಯಪಡಿಸಿದ್ದರು. ಅಲ್ಲದೆ ಮತ್ತೊಂದು ಕಡೆ ಪುನರ್ ರಚನೆ ಇಲ್ಲ; ಸದ್ಯ ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರು ಪಕ್ಷೇತರರು ಮತ್ತು ಕಾಂಗ್ರೆಸ್ ಬಂಡಾಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಕೇವಲ ವಿಸ್ತರಣೆ ಮಾತ್ರ ನಡೆಯಲಿದೆ ಎಂಬ ಮಾಹಿತಿ ಕೂಡ ಇತ್ತು. ಹಾಗಾಗಿ ಸದ್ಯಕ್ಕೆ ಸಂಪುಟ ಪುನರ್ ರಚನೆಯೇ ಅಥವಾ ವಿಸ್ತರಣೆ ಮಾತ್ರವೇ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು.
ಇದೀಗ ಸಿಎಂ ಸ್ವತಃ ಆ ಎಲ್ಲಾ ಗೊಂದಲಗಳಿಗೆ ತಮ್ಮ ಟ್ವೀಟ್ ಮೂಲಕ ತೆರೆ ಎಳೆದಿದ್ದು, ಸಂಪುಟ ಪುನರ್ ರಚನೆಗಾಗಿ ಸಾಕಷ್ಟು ಸರ್ಕಸ್ ಮಾಡಿದ್ದ ಕಾಂಗ್ರೆಸ್ ನಾಯಕರ ಪ್ರಯತ್ನಗಳು ನಿಷ್ಪಲವಾಗಿವೆ.