ಉಡುಪಿ: ಬುದ್ಧಿವಂತರ ಜಿಲ್ಲೆ ಎಂದೇ ಹೆಸರಾದ ಉಡುಪಿಯಲ್ಲಿ ಮಳೆಗಾಗಿ ಜೋಡಿ ಕಪ್ಪೆಗಳ ವಿವಾಹ ಕಾರ್ಯಕ್ರಮ ನೆರವೇರಿಸಿದ ಘಟನೆ ಇಂದು ನಡೆಯಿತು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಹಾಗೂ ಪಂಚರತ್ನ ಸೇವಾ ಟ್ರಸ್ಟ್ (ರಿ) ಆಯೋಜಿಸಿದ್ದ ಜಲಕ್ಷಾಮ ನಿವಾರಣಾರ್ಥ ಮಂಡೂಕ ವಿವಾಹದಲ್ಲಿ ಎರಡು ಬಡಪಾಯಿ ಕಪ್ಪೆಗಳನ್ನು ಹಿಡಿದು ತಂದು ಅವುಗಳಿಗೆ ಚಿ.ರಾ. ವರುಣ, ಚಿ.ಸೌ. ವರ್ಷಾ ಎಂದು ನಾಮಕರಣ ಮಾಡಿ ನಗರದಲ್ಲಿ ಡೋಲು ವಾದ್ಯಗಳೊಂದಿದೆ ಮೆರವಣಿಗೆ ಮೂಲಕ ಕಿದಿಯೂರು ಹೋಟೆಲ್ ವರೆಗೆ ಕೊಂಡೊಯ್ದು ಅಲ್ಲಿ ಮದುವೆ ಮಾಡಿಸುವ ನಾಟಕೀಯ ಘಟನೆ ನಡೆಯಿತು.
ಈ ಕಪ್ಪೆಗಳ ಮದುವೆ ಸಂದರ್ಭದಲ್ಲಿ ಮದುವೆ ಮಾಡಿಸಿದ ಎರಡು ಕಪ್ಪೆಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವುಗಳನ್ನು ಬಲವಂತಾಗಿ ಹಿಡಿದು ಪಂಜರದಲ್ಲಿಟ್ಟು ನಂತರ ಹೊರಕ್ಕೆ ತೆಗೆದು ಅವುಗಳಿಗೆ ಹೂಮಾಲೆ ಹಾಕಿ ಮಾಂಗಲ್ಯ ಕಟ್ಟಲಾಯಿತು. ಆ ಸಂದರ್ಭದಲ್ಲಿ ಅವು ಕಕ್ಕಾಬಿಕ್ಕಿಯಾಗಿ ಏದುಸಿರು ಬಿಡುತ್ತಿದ್ದವು ಎನ್ನಲಾಗಿದೆ.
ಹಿಂದೂ ಮಹಾಸಾಗರದಲ್ಲಿ ಉಂಟಾದ ಎಲ್ ನಿನೋ ಪರಿಣಾಮದಿಂದ ಈ ಬಾರಿ ಮಳೆಗಾಲದಲ್ಲಿ ಏರುಪೇರಾಗಿದ್ದು, ಮುಂಗಾರು ತಡವಾಗಿದೆ. ಪರಿಣಾಮವಾಗಿ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಜಲಕ್ಷಾಮ ತಲೆದೋರಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಸಹ ನೀರಿನ ತೀವ್ರ ಕೊರತೆ ಕಂಡು ಬಂದಿದೆ. ಕುಡಿಯುವ ನೀರಿಗೂ ಜನರು ಪರದಾಡುವಂತಾಗಿದೆ.
ಇಂತಹ ಸಂದರ್ಭದಲ್ಲಿ ಒಂದು ಕಡೆ ರಾಜ್ಯ ಸರ್ಕಾರವೇ ಮುಂದೆ ನಿಂತು ಮುಜರಾಯಿ ಇಲಾಖೆ ಮೂಲಕ ಪರ್ಜನ್ಯ ವ್ರತ, ಹೋಮ, ಹವನಗಳಂತಹ ಮಳೆಗೆ ಸಂಬಂಧವಿಲ್ಲದ ಆಚರಣೆಗಳನ್ನು ಜನರ ತೆರಿಗೆ ಹಣದಿಂದ ನಡೆಸಲು ಆದೇಶ ನೀಡಿ ನಡೆಸಿರುವುದು ಒಂದು ಕಡೆಯಾದರೆ ಕಪ್ಪೆಗಳನ್ನು ಮದುವೆ ಮಾಡಿ ಮಳೆ ಕರೆಸುವಂತಹ ನಂಬಿಕೆ ಹೆಸರಿನ ಮೂಢ ನಂಬಿಕೆಗಳು ಜರುಗುತ್ತಿರುವುದು ಮತ್ತೊಂದು ಕಡೆ. ಆದರೆ ಇದು ರಾಜ್ಯದಲ್ಲಿ ಅತಿ ಹೆಚ್ಚು ಶಿಕ್ಷಿತರಿರುವ ಜಿಲ್ಲೆಯಲ್ಲೇ ನಡೆದಿರುವುದು ವಿಶೇಷವಾಗಿದೆ.
ಮಳೆಗಾಗಿ ಕಪ್ಪೆ ಮದುವೆ ಮಾಡುವ ಸಂಪ್ರದಾಯ ರಾಜ್ಯದಲ್ಲಿ ಈ ಹಿಂದೆಯೂ ಅನೇಕ ಸಂದರ್ಭದಲ್ಲಿ ನಡೆದಿದ್ದರೂ ಇದರಿಂದಾಗಿ ಮಳೆ ಬಂದ ದಾಖಲೆ ಎಲ್ಲೂ ಆಗಿಲ್ಲ. ಜೂನ್ 8 ಆದ ಇಂದು ಕೇರಳಕ್ಕೆ ಮುಂಗಾರು ಮಾರುತಗಳು ಸ್ಪರ್ಶಿಸಲಿದ್ದು ನಾಲ್ಕು ದಿನಗಳ ನಂತರ ಕರ್ನಾಟಕವನ್ನು ತಲುಪಿ ಮಳೆ ಸುರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಕೆಲವು ದಿನಗಳ ಮೊದಲೇ ತಿಳಿಸಿದೆ.

