ಅಧಿಕಾರ, ಸಂಪ್ರದಾಯ, ಆಚರಣೆ, ಮೌಢ್ಯಗಳನ್ನು ಮೀರಿದ್ದು ಮಾನವೀಯತೆ, ಮನುಷ್ಯ-ಮನುಷ್ಯರ ನಡುವಿನ ಜೀವಪ್ರೀತಿ ಎಂದು ಬರೆದ ಮತ್ತು ಅದರಂತೆ ಬದುಕಿನ ಜ್ಞಾನಪೀಠ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡ್ ನಿಧನರಾಗಿದ್ದಾರೆ. ದೊಡ್ಡವರ ಸಾವು ಕೂಡ ಒಂದು ಸಂದೇಶವನ್ನು ಸಾರುತ್ತದೆ ಎಂಬ ಮಾತಿನಂತೆ ಕಾರ್ನಾಡರ ಸಾವಿನಲ್ಲೂ ಈಗ ಸಮಾಜಕ್ಕೆ ಘನ ಸಂದೇಶ ಮತ್ತು ಎಚ್ಚರಿಕೆ ರವಾನೆಯಾಗಿದೆ.
ಹೌದು, ಎಂತಹ ಕಡುವೈರಿಯೇ ಆಗಿದ್ದರೂ ಆತನ ಸಾವಿಗೆ ಮಿಡಿಯುವುದು ಭಾರತೀಯ ಸಂಸ್ಕೃತಿಯಷ್ಟೇ ಅಲ್ಲ; ಜಗತ್ತಿನ ಉದ್ದಗಲದ ಎಲ್ಲಾ ಸಂಸ್ಕೃತಿಗಳ ಮಾನವೀಯತೆಯ ಪ್ರಥಮ ಪಾಠ. ಮನುಷ್ಯನ ಸಾವನ್ನೇ ಸಂಭ್ರಮಿಸುವ ಮಟ್ಟಿಗೆ, ತಾಲಿಬಾನಿ, ಇಸ್ಲಾಮಿಕ್ ಸ್ಟೇಟ್ ನಂತಹ ಬರ್ಬರ ಪಡೆಗಳನ್ನು ಹೊರತುಪಡಿಸಿ ಯಾವ ಸಮಾಜವೂ ಪೈಶಾಚಿಕವಾಗಿಲ್ಲ. ಆದರೆ, ಕಳೆದ ಐದಾರು ವರ್ಷಗಳಲ್ಲಿ ನಮ್ಮಲ್ಲಿ ಅಂತಹದ್ದೊಂದು ರಾಕ್ಷಸೀತನ ಮೆರೆಯತೊಡಗಿದೆ. ಅದೂ ಹಿಂದೂ ಧರ್ಮ, ಸನಾತನ ಸಂಸ್ಕೃತಿ, ಹಿಂದುತ್ವ, ಆರ್ ಎಸ್ ಎಸ್, ಬಿಜೆಪಿ, ಪ್ರಧಾನಿ ಮೋದಿ, ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯವರ ಅಭಿಮಾನಿ- ಅನುಯಾಯಿಗಳೆಂಬ ಬಹುತೇಕ ಯುವ ಸಮುದಾಯವೇ ಇಂತಹ ಸಂಸ್ಕೃತಿಯನ್ನು ಮೆರೆಯುತ್ತಿದೆ. ಇದು, ಭಾರತೀಯ ಸಮಾಜ ಸಾಗುತ್ತಿರುವ ದಿಕ್ಕಿನ ಸ್ಪಷ್ಟ ನಿದರ್ಶನ.
ವರ್ಷಗಳ ಹಿಂದೆ ಸಾಹಿತಿ ಯು ಆರ್ ಅನಂತಮೂರ್ತಿ ಅವರು ನಿಧನರಾದಾಗ, ಸಂಶೋಧಕ ಡಾ ಎಂ ಎಂ ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಪಟಾಕಿ ಸಿಡಿಸಿ, ಕೇಕೆ ಹಾಕಿ, ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಪಡುವ ಪೈಶಾಚಿಕತನ ಮೆರೆಯಲಾಗಿತ್ತು. ಇದೀಗ ಕಾರ್ನಾಡರ ವಿಷಯದಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಪುನರಾವರ್ತನೆಯಾಗುತ್ತಿದೆ. ಅಂದರೆ, ಭಾರತೀಯ ಸಮಾಜ ಸಾಗುತ್ತಿರುವ ತಾಲಿಬಾನ್ ಹಾದಿಯ ಮುನ್ಸೂಚನೆಗಳು ಸ್ಪಷ್ಟವಾಗಿವೆ. ಆ ಅರ್ಥದಲ್ಲಿ ಕಾರ್ನಾಡರ ಸಾವು ಕೂಡ ಈ ಸಮಾಜದ ಅವನತಿಯ ಹಾದಿಯ ಸೂಚನೆ ನೀಡಿದೆ.
ಹಾಗೆ ನೋಡಿದರೆ, ಕಾರ್ನಾಡರು ಮೂಲಭೂತವಾದಿ, ಮನುಷ್ಯ ವಿರೋಧಿ, ಜೀವ ವಿರೋಧಿ ಪಡೆಗಳ ಕೆಂಗಣ್ಣಿಗೆ ಗುರಿಯಾಗಿದ್ದು ಇದೇ ಮೊದಲೇನಲ್ಲ. ತಲೆದಂಡದಂತಹ ನಾಟಕವನ್ನು ಬರೆದಾಗಲೂ ಸಂಪ್ರದಾಯವಾದಿಗಳ ವಿರೋಧಕ್ಕೆ ಈಡಾಗಿದ್ದರು. ಆ ಬಳಿಕ ಕೂಡ ಹಲವು ಸಂದರ್ಭಗಳಲ್ಲಿ ತಮ್ಮ ಸಮಾಜಮುಖಿ, ಪ್ರಜಾಸತ್ತಾತ್ಮಕ ಧೋರಣೆಗಳ ಕಾರಣಕ್ಕೆ ಪದೇಪದೆ ಮನುವಾದಿ, ಯಥಾಸ್ಥಿತಿವಾದಿ ಮತ್ತು ಜೀವ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅದರಲ್ಲೂ ಗೋಮಾಂಸ ಸೇವನೆ ಪರ ಹೋರಾಟ, ಆಹಾರದ ಹಕ್ಕಿನ ಪರ ಧೋರಣೆ, ಟಿಪ್ಪು ಜಯಂತಿ ಪರ ಹೇಳಿಕೆ ಮತ್ತು ಪ್ರತಿಭಟನೆಗಳು, ಮತ್ತು ತೀರಾ ಇತ್ತೀಚೆಗೆ ವಿಚಾರವಾದಿ, ಸಾಮಾಜಿಕ ಹೋರಾಟಗಾರರನ್ನು ನಕ್ಸಲ್ ಬೆಂಬಲಿಗರು ಎಂಬ ನೆಪವೊಡ್ಡಿ ಬಂಧಿಸಿದಾಗ ಅವರ ಪರ ‘ನಾನೂ ನಗರ ನಕ್ಸಲ್’ ಎಂದು ಫಲಕ ನೇತುಹಾಕಿಕೊಂಡು ಧರಣಿ ನಡೆಸುವ ಮೂಲಕ ಪ್ರಧಾನಿ ಮೋದಿಯವರ ಪ್ರಚೋದನಕಾರಿ ಹೇಳಿಕೆಗೆ ತಿರುಗೇಟು ನೀಡಿದ್ದು,.. ಹೀಗೆ ಬಹುತೇಕ ದಶಕಗಳ ಕಾಲದ ತಮ್ಮ ಬರವಣಿಗೆ ಮತ್ತು ಹೋರಾಟದ ಬದುಕಿನುದ್ದಕ್ಕೂ ಅವರನ್ನು ಒಂದು ಗುಂಪು ವಿರೋಧಿಸುತ್ತಲೇ ಬಂದಿತ್ತು. ಕೆಲವೊಮ್ಮೆ ಅವರ ಮೇಲೆ ಹಲ್ಲೆ ಯತ್ನಗಳೂ ನಡೆದಿದ್ದವು.
ಕಲಬುರ್ಗಿ ಅವರ ಹತ್ಯೆ ನಡೆದಾಗ, ಅವರ ಹತ್ಯೆಯನ್ನು ಸಮರ್ಥಿಸಿದ ಹಿಂದುತ್ವವಾದಿ, ‘ವಿಕಲ’ ರಾಷ್ಟ್ರೀಯತಾವಾದಿ, ಸನಾತನವಾದಿ ಗುಂಪುಗಳು, ಕಾರ್ನಾಡರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಟಿಪ್ಪು ಜಯಂತಿಯ ವೇಳೆ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಿನ ಮೊಟ್ಟಮೊದಲ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಹೆಸರಿಡಬೇಕು ಎಂದು ಹೇಳಿದಾಗಲೂ ಅವರಿಗೆ ಗಂಭೀರ ಕೊಲೆ ಬೆದರಿಕೆಗಳು ಬಂದಿದ್ದವು. ಅವರ ಮನೆಯ ಮುಂದೆ ಅವರನ್ನು ನಿಂದಿಸಿ ಘೋಷಣೆ ಕೂಗಿದ ಘಟನೆಗಳೂ ನಡೆದಿದ್ದವು. ಸಾಮಾಜಿಕ ಜಾಲತಾಣಗಳಲ್ಲಂತೂ ಅವರನ್ನು ಹೀನಾಯವಾಗಿ ನಿಂದಿಸುವುದು, ಬೆದರಿಕೆ ಹಾಕುವುದು, ಅವಹೇಳನ ಮಾಡುವುದು ಮಿತಿ ಮೀರಿತ್ತು. ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕವಂತೂ, ಕಾರ್ನಾಡರೇ ಎಲ್ಲಾ ಮೂಲಭೂತವಾದಿ, ಹಿಂದುತ್ವವಾದಿ, ಸನಾತನವಾದಿಗಳ ಪ್ರಮುಖ ಗುರಿಯಾಗಿದ್ದರು. ಅವರನ್ನೂ ಕಲಬುರ್ಗಿ ಮತ್ತು ಗೌರಿ ಮಾದರಿಯಲ್ಲೇ ಕೊಲೆಗೈವುದಾಗಿಯೂ ಬೆದರಿಕೆ ಪತ್ರಗಳು, ಬೆದರಿಕೆ ಕರೆಗಳೂ ಬಂದಿದ್ದವು.
ಆಘಾತಕಾರಿ ಸಂಗತಿಯೆಂದರೆ; ಇಂತಹ ಬೆದರಿಕೆ, ನಿಂದನೆ, ಹಲ್ಲೆ ಯತ್ನ ಎಲ್ಲವನ್ನೂ ಮಾಡುತ್ತಿರುವ ಅದೇ ಗುಂಪಿನವರೇ ಇದೀಗ, ಅವರ ಸಾವಿನ ಹೊತ್ತಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ, ಶುಭ ಕೋರಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ವಿಚಿತ್ರವೆಂದರೆ, ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡರ ಸಾವನ್ನು ಸಂಭ್ರಮಿಸುತ್ತಿರುವವ ಬಹುತೇಕರ ಹೆಸರಿನೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಆರಂಭಿಸಿದ ‘ಮೈ ಭೀ ಚೌಕಿದಾರ್’ದ ಟ್ಯಾಗ್ ಲೈನ್ “ಮೈ ಭೀ ಚೌಕಿದಾರ್’ ಕೂಡ ಇದೆ ಮತ್ತು ಅವರು ಆ ಅಭಿಯಾನದ ಸಕ್ರಿಯ ಸದಸ್ಯರೂ ಕೂಡ. ಹಾಗೇ, ಬಹುತೇಕರು ಸ್ವತಃ ಮೋದಿ, ಅಟಲ್ ಬಿಹಾರಿ ವಾಜಪೇಯಿಯವರ ಚಿತ್ರಗಳನ್ನೂ ತಮ್ಮ ಗುರುತಿನ ಚಿತ್ರಗಳಾಗಿ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಪ್ಗಳಲ್ಲಿ ಹಾಕಿಕೊಂಡಿದ್ದಾರೆ ಮತ್ತು ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಮೋದಿಯವರ ಅನುಯಾಯಿಗಳು ಕೂಡ ಹೌದು.
ಅಂದರೆ, ಸಾಹಿತಿ, ಕಲಾವಿದ, ಜನಪರ ಹೋರಾಟಗಾರರಾಗಿ ಕಾರ್ನಾಡರು ತಮ್ಮ ಬರವಣಿಗೆ ಮತ್ತು ಹೋರಾಟದ ಮೂಲಕ ಕನ್ನಡ ನಾಡಿಗಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತೀಯರಿಗೆ, ದೇಶಕ್ಕೆ ತಂದುಕೊಟ್ಟಿರುವ ಗೌರವ ಮತ್ತು ಮನ್ನಣೆಗಳಿಗೆ ಈ ಮತೀಯ ವಿಕೃತಿಯ ಮನಸ್ಸುಗಳ ನಡುವೆ ಯಾವ ಬೆಲೆಯೂ ಇಲ್ಲ. ದೇಶದ ನಾಟಕ ಮತ್ತು ರಂಗಭೂಮಿಗೆ ಕಾರ್ನಾಡರು ನೀಡಿದ ಕೊಡುಗೆ, ಜಾಗತಿಕ ಮಟ್ಟದಲ್ಲಿ ಭಾರತೀಯ ರಂಗಭೂಮಿಗೆ ತಂದುಕೊಟ್ಟ ಹೆಗ್ಗಳಿಕೆಗಳು, ದ್ವೇಷ ಮತ್ತು ಹಿಂಸೆಯನ್ನೇ ದೇಶದ ಹೆಗ್ಗಳಿಕೆ ಮಾಡುವ ಧಾವಂತದಲ್ಲಿರುವ ಗುಂಪುಗಳಿಗೆ ಲೆಕ್ಕಕ್ಕೇ ಇಲ್ಲ ಎಂಬಂತಾಗಿದೆ.
ವಿಚಿತ್ರವೆಂದರೆ, ಅನಂತಮೂರ್ತಿ, ಗೌರಿ ಲಂಕೇಶ್, ಬಳಿಕ ಇದೀಗ ಕಾರ್ನಾಡರ ವಿಷಯದಲ್ಲಿಯೂ ಅವರ ಸಾವನ್ನು ಸಂಭ್ರಮಿಸುತ್ತಿರುವ ವ್ಯಕ್ತಿಗಳ ಗುರುತು, ಪರಿಚಯ, ಅವರ ಹಿನ್ನೆಲೆಯ ಎಲ್ಲಾ ವಿವರಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದ್ದರೂ, ರಾಜ್ಯ ಪೊಲೀಸರು ಅಂತಹವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಸಮಾಜದಲ್ಲಿ ದ್ವೇಷ ಬಿತ್ತುವ, ಜೀವ ಬೆದರಿಕೆ ಒಡ್ಡುವ, ಹತ್ಯೆಯ ಸಂಚು ನಡೆಸುವ ಮಾತುಗಳನ್ನಾಡುವ ವ್ಯಕ್ತಿಗಳು ಸಾರ್ವಜನಿಕವಾಗಿಯೇ ಅದೆಲ್ಲವನ್ನೂ ಮಾಡುತ್ತಿದ್ದರೂ ಪೊಲೀಸರು ಕೈಕಟ್ಟಿಕೊಂಡು ತಮಾಷೆ ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆ ಮೂಲಕ ಇಂತಹ ವಿಕೃತಿಗಳಿಗೆ ಪರೋಕ್ಷ ಬೆಂಬಲ ಕೂಡ ದೊರೆಯುತ್ತಿದೆ.
ಈಗಲೂ ರಾಜ್ಯ ಸರ್ಕಾರ ಮತ್ತು ಪೊಲೀಸರು ತಮ್ಮ ಆ ಮೌನ ಬೆಂಬಲವನ್ನು ಮುಂದುವರಿಸುವರೇ ? ಅಥವಾ ಕನಿಷ್ಠ ಕಾನೂನು ಮತ್ತು ಸುವ್ಯವಸ್ಥೆ ಕಾಯುವ ತಮ್ಮ ಪ್ರಾಥಮಿಕ ಹೊಣೆಗಾರಿಕೆ ತೋರುವರೇ ಎಂಬುದನ್ನು ಕಾದುನೋಡಬೇಕಿದೆ.
ವಿಕೃತ ಮನೋಭಾವ,