ನರೇಂದ್ರ ಮೋದಿ ಸರ್ಕಾರ ಅಂಕಿ ಅಂಶಗಳನ್ನು ತಿರುಚಿ ತಾನು ಮಾಡದ ಸಾಧನೆಯನ್ನು ತನ್ನದೆಂದು ಬಿಂಬಿಸಿಕೊಳ್ಳುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಅಂಕಿ ಅಂಶಗಳ ಬಗ್ಗೆ ಖುದ್ದು ಭಾರತ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂಕಿ ಅಂಶಗಳ ವಿಷಯದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿರುವುದನ್ನು ತಡೆಯಲು ಮುಂದಾಗುವಂತೆಯೂ ಅವರು ಅವರು ಹೇಳಿದ್ದಾರೆ.
ಜಿಡಿಪಿ, ಉದ್ಯೋಗ ಮತ್ತು ಸರ್ಕಾರಿ ಖರ್ಚು ವೆಚ್ಚಗಳ ಅಂಕಿ ಅಂಶಗಳನ್ನು ಸಿದ್ದಪಡಿಸುವಲ್ಲಿ ಕಳೆದುಕೊಂಡಿರುವ ತನ್ನ ವರ್ಚಸ್ಸನ್ನು ಭಾರತ ಮರುಸ್ಥಾಪಿಸಬೇಕು. ಅದನ್ನು ಶಾಸನಬದ್ಧ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಸಾಂಖ್ಯಿಕ ಆಯೋಗಕ್ಕೆ ನೀಡಿದರಷ್ಟೇ ಸಾಲದು, ಆಯೋಗಕ್ಕೆ ತಾಂತ್ರಿಕ ಪರಿಣಿತಿ ಹೊಂದಿರುವ ಹಾಗು ಉತ್ತಮ ವರ್ಚಸ್ಸುಹೊಂದಿರುವ ವ್ಯಕ್ತಿಗಳನ್ನು ನೇಮಕ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.
ಸಂಶೋಧನಾ ಪ್ರಬಂಧದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಅರವಿಂದ್ ಸುಬ್ರಮಣಿಯನ್ ಜಿಡಿಪಿ ಕುರಿತಂತೆ ಭಾರತ ಸರ್ಕಾರದ ಅಧಿಕಾರಿಗಳು ನೀಡಿರುವ ಅಂಕಿ ಅಂಶಗಳ ನಿಖರತೆಯನ್ನು ಪ್ರಶ್ನಿಸಿದ್ದಾರೆ. ಅಲ್ಲದೇ 2011-12 ಮತ್ತು 2016-17ರ ನಡುವೆ ಭಾರತದ ಜಿಡಿಪಿ ಸರಾಸರಿ ಶೇ.4.5ರಷ್ಟು ಮಾತ್ರ ಬೆಳವಣಿಗೆ ಹೊಂದಿರಬಹುದಷ್ಟೇ, ಸರ್ಕಾರ ನೀಡಿರುವ ಅಂಕಿ ಅಂಶಗಳಂತೆ ಶೇ.7ರಷ್ಟು ಅಲ್ಲಾ ಎಂದೂ ಹೇಳಿದ್ದಾರೆ.
ಅರವಿಂದ್ ಸುಬ್ರಮಣಿಯನ್ ಜಿಡಿಪಿ ಅಂಕಿ ಅಂಶಗಳ ಬಗ್ಗೆ ತಕರಾರು ಎತ್ತಿರುವ ಅವಧಿಯಲ್ಲಿ ಯುಪಿಎ-2 (ಮನಮೋಹನ್ ಸಿಂಗ್) ಮತ್ತು ಎನ್ ಡಿ ಎ -2 (ನರೇಂದ್ರ ಮೋದಿ) ಸರ್ಕಾರಗಳಿದ್ದವು.
ಅರವಿಂದ್ ಸುಬ್ರಮಣಿಯನ್ ಅವರು, ವಾಹನಗಳ ಮಾರಾಟ, ಕೈಗಾರಿಕಾ ಉತ್ಪನ್ನ, ಸಾಲ ವಿತರಣೆ, ರಫ್ತು ಮತ್ತು ಆಮದು ಸೇರಿದಂತೆ ಹದಿನೇಳು ಮಾನದಂಡಗಳನ್ನು ಬಳಸಿ 2001ರಿಂದ 2017ರವರೆಗೆ ಸರ್ಕಾರ ಪ್ರಕಟಿಸಿರುವ ಜಿಡಿಪಿ ಅಂಕಿಅಂಶಗಳನ್ನು ತಾಳೆ ಹಾಕಿದ್ದಾರೆ. 2001-2011 ಅವಧಿಯಲ್ಲಿ ಜಿಡಿಪಿ ಅಂಕಿ ಅಂಶಗಳು ಧನಾತ್ಮಕವಾಗಿ ತಾಳೆಯಾಗಿವೆ. ಆನಂತರ ಅವುಗಳು ತಾಳೆಯಾಗಿಲ್ಲ.
2011 ನಂತರ ಜಿಡಿಪಿ ಅಂದಾಜು ಮಾಡುವ ವಿಧಾನ ಬದಲಾದ ಕಾರಣದಿಂದಾಗಿ ಜಿಡಿಪಿಯನ್ನು ಉತ್ಪ್ರೇಕ್ಷಿತ ಅಂದಾಜು ಮಾಡಿರುವುದಕ್ಕೆ ಹಲವು ಸಾಕ್ಷ್ಯಗಳಿವೆ ಎಂದು ಸಂಶೋಧನಾ ಪ್ರಬಂಧದಲ್ಲಿ ಬರೆದಿದ್ದಾರೆ ಎಂದು ಮನಿ ಕಂಟ್ರೋಲ್ ಡಾಟ್ಕಾಮ್ ವರದಿ ಮಾಡಿದೆ. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಡಿಪಿ ಲೆಕ್ಕಚಾರ ವಿಧಾನದಲ್ಲಿ ಹಲವು ಬದಲಾವಣೆ ಮಾಡಿದ ನಂತರ ಭಾರತದ ಅಂಕಿಅಂಶಗಳ ಬಗ್ಗೆ ಅನುಮಾನವೆದ್ದಿದೆ. ಅಲ್ಲದೇ ಉದ್ಯೋಗ ಮತ್ತು ಕೈಗಾರಿಕಾ ಉತ್ಪನ್ನ ಕುರಿತಂತೆ ಕೇಂದ್ರೀಯ ಸಾಂಖ್ಯಿಕ (NSSO) ಕಚೇರಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರುಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರೂ ಮೋದಿ ಸರ್ಕಾರ ಒತ್ತಡ ಹೇರಿ ಅಂಕಿಅಂಶಗಳನ್ನು ತಿರುಚುವಂತೆ ಸಾಂಖ್ಯಿಕ ಕಚೇರಿ ಮೇಲೆ ಒತ್ತಡ ಹೇರಿತ್ತೆಂದು ದೂರಿದ ಉದಾಹರಣೆಯೂ ಇದೆ.
ಎನ್ ಡಿ ಎ ಸರ್ಕಾರ 2018 ರಲ್ಲಿ ಆರ್ಥಿಕ ಬೆಳವಣಿಗೆ ಅಳೆಯಲು ಹೊಸ ವಿಧಾನವನ್ನು ಪರಿಚಯಿಸಿತು. ಈ ವಿಧಾನದಲ್ಲಿ ಲೆಕ್ಕಾಚಾರ ಹಾಕಿ, ಎನ್ ಡಿ ಎ-2 ಸರ್ಕಾರದ ಅವಧಿಯಲ್ಲೇ ಯುಪಿಎ-2 ಸರ್ಕಾರದ ಅವಧಿಗಿಂತ ಹೆಚ್ಚು ಆರ್ಥಿಕ ಬೆಳವಣಿಗೆ ಸಾಧಿಸಲಾಗಿದೆ ಎಂಬ ಅಂಕಿ ಅಂಶಗಳನ್ನು ಪ್ರಕಟಿಸಿತ್ತು. 2016ರಲ್ಲಿ ಅಪನಗದೀಕರಣ, 2017ರಲ್ಲಿ ಜಿಎಸ್ಟಿ ಜಾರಿಯಿಂದಾಗಿ ದೇಶದ ಆರ್ಥಿಕತೆ ತೀವ್ರ ಪ್ರಮಾಣದಲ್ಲಿ ಕುಸಿದಿದ್ದರೂ ಜಿಡಿಪಿ ಅಂಕಿ ಅಂಶಗಳು ಮಾತ್ರ ಯುಪಿಎ ಸರ್ಕಾರದ ಅವಧಿಗಿಂತಲೂ ಎನ್ಡಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಹೆಚ್ಚಿದೆ ಎಂಬುದನ್ನು ಪ್ರತಿಬಿಂಬಿಸಿದ್ದವು. ಇದರ ಬಗ್ಗೆ ವ್ಯಾಪಕವಾಗಿ ಅನುಮಾನಗಳೆದ್ದಿದ್ದವು ಅಷ್ಟೇ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿದ್ದವು.
“ನಾನು ರಾಜಕೀಯ ವಿವಾದಗಳತ್ತ ಗಮನ ಹರಿಸುತ್ತಿಲ್ಲ, ನನ್ನ ಗಮನವೇನಿದ್ದರೂ 2011ರ ವರ್ಷದ ಆಧಾರದ ಮೇಲೆ ಪ್ರಕಟಿಸಿದ ಜಿಡಿಪಿ ಅಂಕಿ ಅಂಶಗಳು ಇತರ ಅಂಕಿ ಅಂಶಗಳೊಂದಿಗೆ ತಾಳೆಯಾಗುತ್ತಿದ್ದಾವೆಯೇ ಎಂಬುದರತ್ತ ಇದೆ. ಒಟ್ಟಾರೆಯಾಗಿ ಜಿಡಿಪಿ ಅಂಕಿ ಅಂಶಗಳನ್ನು ಲೆಕ್ಕಹಾಕುವ ವಿಧಾನವು ಉತ್ತಮಗೊಳ್ಳಬೇಕು” ಎಂದು ಅರ್ವಿಂದ್ ಸುಬ್ರಮಣಿಯನ್ ಹೇಳಿದ್ದಾರೆ.
ಆರ್ಥಿಕ ಬೆಳವಣಿಗೆಯ ಉತ್ಪ್ರೇಕ್ಷಿತ ಅಂದಾಜು ಮಾಡಿರುವುದು ಭಾರತದ ದತ್ತಾಂಶ ಕ್ರೋಢೀಕರಣದ ವಿಧಾನದ ವರ್ಚಸ್ಸಿಗೆ ಧಕ್ಕೆಯಾಗಿರುವುದಷ್ಟೇ ಅಲ್ಲ, ಇದರಿಂದ ಗಂಭೀರ ಸವಾಲುಗಳು ಉದ್ಭವಿಸುತ್ತವೆ. ಉದಾಹರಣೆಗೆ ವಾಸ್ತವಿಕ ಆರ್ಥಿಕ ಬೆಳವಣಿಗೆಗಿಂತ ಹೆಚ್ಚು ಬೆಳವಣಿಗೆಯ ಅಂಕಿ ಅಂಶಗಳನ್ನು ಪ್ರಕಟಿಸಿದಾಗ ಭಾರತೀಯ ರಿಸರ್ವ್ ಬ್ಯಾಂಕ್ ಅಗತ್ಯಕ್ಕಿಂತಂಲೂ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ನಿಗದಿ ಮಾಡುತ್ತದೆ. ಇದರಿಂದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ ಅನುತ್ಪಾದಕ ಸಾಲಗಳ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸುವಂತೆ ಸರ್ಕಾರ ಒತ್ತಡ ಹೇರುತ್ತದೆ. ತೆರಿಗೆ ಸಂಗ್ರಹದಲ್ಲೂ ಏರುಪೇರಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಡಿಪಿ ಲೆಕ್ಕಚಾರ ವಿಧಾನವನ್ನು ತಾಂತ್ರಿಕ ಪರಿಣತಿ ಹೊಂದಿದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನುರಿತ ತಜ್ಞರನ್ನೊಳಗೊಂಡ ಸ್ವತಂತ್ರ ಕಾರ್ಯಪಡೆ ಪುನರ್ ಪರಿಶೀಲಿಸಬೇಕು ಎಂದೂ ಸಲಹೆ ಮಾಡಿದ್ದಾರೆ.
ಅರವಿಂದ್ ಸುಬ್ರಮಣಿಯನ್ ಕಳೆದ ವರ್ಷ ಜೂನ್ ತಿಂಗಳಲ್ಲಿ ಅವಧಿಗೆ ಮುಂಚಿತವಾಗಿಯೇ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಯನ್ನು ತೊರೆದಿದ್ದರು. ಅಪನಗದೀಕರಣ, ಜಿಎಸ್ಟಿ ತೆರಿಗೆ ಯೋಜನೆ ಜಾರಿ ಸೇರಿದಂತೆ ಪ್ರಮುಖ ಆರ್ಥಿಕ ನೀತಿಗಳನ್ನು ಜಾರಿಗೆ ತರುವಾಗ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರ್ವಿಂದ್ ಸುಬ್ರಮಣಿಯನ್ ಅವರೊಂದಿಗೆ ಸರ್ಕಾರ ಸಮಾಲೋಚನೆ ನಡೆಸಿರಲಿಲ್ಲ. ಅಲ್ಲದೇ ಜಿಎಸ್ಟಿ ಜಾರಿ ಹಂತದಲ್ಲಿ ಅರ್ವಿಂದ್ ಅವರು ನೀಡಿದ್ದ ಹಲವು ಸಲಹೆಗಳನ್ನು ಸರ್ಕಾರ ಪರಿಗಣಿಸಿರಲಿಲ್ಲ.