ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ಬಿಜೆಪಿ ಪುಂಡರಿಂದ ಧ್ವಂಸಗೊಳಿಸಲ್ಪಟ್ಟಿದ್ದ ಮಹಾನ್ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ನೂತನ ಇಂದು ಮಮತಾ ಬ್ಯಾನರ್ಜಿ ಅನಾವರಣಗೊಳಿಸಿದರು.
ಪ್ರತಿಮೆಯನ್ನು ಮರುಸ್ಥಾಪಿಸುವ ಸಲುವಾಗಿ ಹರೇ ಶಾಲಾ ಮೈದಾನದಲ್ಲಿ ಇಂದು ನಡೆದ ಸಮಾರಂಭದಲ್ಲಿ ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಸಮ್ಮುಖದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಭೆಯಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ಬಿಜೆಪಿಯ ಪುಂಡರು ಧ್ವಂಸಗೊಳಿಸಿದ್ದರು. ಇಂದು ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಮತ್ತೆ ಅದೇ ಸ್ಥಳದಲ್ಲಿ ಮರುಸ್ಥಾಪಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ನಾಯಕರು, ಪ. ಬಂಗಾಳದ ಸಚಿವರು, ಧರ್ಮ ಗುರುಗಳು ಭಾಗವಹಿಸಿದ್ದರು.
ಘಟನೆ ಹಿನ್ನೆಲೆ
ಮೇ 14ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಪ್ರಚಾರದ ವೇಳೆಯಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆ ಸಂದರ್ಭದಲ್ಲಿ 19ನೇ ಶತಮಾನದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
ನಂತರ ಮೇ 16ರಂದು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಅದೇ ಸ್ಥಳದಲ್ಲಿ ವಿದ್ಯಾಸಾಗರ್ ಅವರ ಹೊಸ ಪ್ರತಿಮೆ ಸ್ಥಾಪಿಸುವ ಭರವಸೆ ನೀಡಿದ್ದರು. ಆದರೆ, ಈ ಪ್ರಸ್ತಾವನೆಯನ್ನು ನಿರಾಕರಿಸಿದ್ದ ಮಮತಾ ಬ್ಯಾನರ್ಜಿ ಪ್ರತಿಮೆ ಸ್ಥಾಪಿಸಲು ನಮ್ಮ ಬಳಿಯೇ ಸಾಕಷ್ಟು ಹಣವಿದೆ ಎಂದಿದ್ದರು.
ಮುಂದುವರೆದು, ತಮ್ಮ ಐದು ವರ್ಷದ ಆಡಳಿತಾಧಿಯಲ್ಲಿ ಒಂದು ಸಣ್ಣ ರಾಮನ ವಿಗ್ರಹವನ್ನು ಸ್ಥಾಪಿಸದವರು ವಿದ್ಯಾಸಾಗರ್ ಪ್ರತಿಮೆಯನ್ನು ಸ್ಥಾಪಿಸುವರೇ ಎಂದು ವ್ಯಂಗ್ಯವಾಡಿದ್ದರು.