ಅಧಿಕಾರಸ್ಥ ರಾಜಕಾರಣಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವವರ ವಿರುದ್ಧ ಇಲ್ಲಸಲ್ಲದ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿ ದ್ವೇಷ ಸಾಧಿಸುವ ಪ್ರಕರಣಗಳು ಹೆಚ್ಚುತ್ತಲಿವೆ. ಉತ್ತರಪ್ರದೇಶ ಸರ್ಕಾರ ದೆಹಲಿಯಲ್ಲಿ ಬಂಧಿಸಿ ಜೈಲಿಗೆ ಹಾಕಿದ್ದ ಪ್ರಶಾಂತ್ ಕನೋಜಿಯಾ ಎಂಬ ಪತ್ರಕರ್ತ ಸೇರಿದಂತೆ ಐದು ಮಂದಿಯನ್ನು ಕಳೆದ ಒಂದೇ ವಾರದಲ್ಲಿ ಬಂಧಿಸಲಾಗಿದೆ, ವಿವಿಧ ಕೇಸ್ ದಾಖಲಿಸಲಾಗಿದೆ. ಪ್ರಶಾಂತ್ ಕನೋಜಿಯಾ ಅವರ ಪತ್ನಿ ಕನೌಜಿಯ ಪತ್ನಿ ಜಗೀಶ ಅರೋರ ತಮ್ಮ ಪತಿಯ ಬಿಡುಗಡೆಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ರಜಾಪೀಠದಲ್ಲಿ ಅರ್ಜಿ ವಿಚಾರಣೆಗೆ ಬಂದಿತ್ತು. ನ್ಯಾಯಾಲಯ ಈ ಟ್ವೀಟ್ ಗಳಿಗೆ ಸಮ್ಮತಿ ನೀಡದಿದ್ದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿದು ಕನೋಜಿಯಾ ಬಿಡುಗಡೆಗೆ ಆದೇಶಿಸಿದೆ.
ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇದೀಗ ಅವರಿಗೆ ಜಾಮೀನು ನೀಡಿ ಬಂಧಮುಕ್ತಗೊಳಿಸಲು ಆದೇಶಿಸಿದೆ.
ಅಷ್ಟಕ್ಕೂ ಈ ಪತ್ರಕರ್ತ ಪ್ರಶಾಂತ್ ಕನೌಜಿಯಾ ಎಸಗಿದ್ದ ಅಪರಾಧವೇನು? ಯಾರದ್ದಾದರೂ ಕೊಲೆ ಮಾಡಿದ್ದರೇ? ದರೋಡೆ ಮಾಡಿದ್ದರೇ? ಬಂಧಿಸಿ ಜೈಲಿಗೆ ಹಾಕುವಂತಹ ಯಾವ ಘನಘೋರ ಅಪರಾಧ ಪ್ರಶಾಂತ್ ಮಾಡಿದ್ದರು?
ವಾರದ ಹಿಂದೆ ಯುವತಿಯೊಬ್ಬಳು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಜೊತೆ ಒಂದು ವರ್ಷದಿಂದ ತನ್ನ ಪ್ರೇಮ ವ್ಯವಹಾರ ನಡೆದಿತ್ತೆಂದು, ತನ್ನ ಮತ್ತು ಯೋಗಿಯ ನಡುವೆ ಸಂಬಂಧವಿತ್ತೆಂದು ತಿಳಿಸುತ್ತಾ, ತನಗೆ ಯೋಗಿ ಆದಿತ್ಯನಾಥರಿಂದ ನ್ಯಾಯ ಬೇಕೆಂದು ಕೇಳಿ ಮಾಧ್ಯಮಗಳ ಎದುರು ಅವಲತ್ತುಕೊಂಡಿದ್ದಳು. ಕಳೆದ ಗುರುವಾರ ಪತ್ರಕರ್ತ ಪ್ರಶಾಂತ್ ಕನೌಜಿಯಾ ಇದೇ ವಿಡೀಯೊ ತುಣುಕನ್ನು ಹಂಚಿಕೊಂಡು, “ಇಷ್ಕ್ ಚುಪ್ತಾ ನಹೀ ಚುಪಾನೇ ಸೆ ಯೋಗಿಜಿ” – “(ಬಾಯಿ) ಮುಚ್ಚಿಸುವುದರಿಂದ ಪ್ರೀತಿಯನ್ನು ಮುಚ್ಚಿಡಲಾಗದು ಯೋಗಿಜಿ”) ಎಂದು ಅಣಕಿಸಿ ಟ್ವೀಟ್ ಮಾಡಿದ್ದರು.
ಇದೇ ಅವರು ಮಾಡಿದ್ದ ದೊಡ್ಡ ಅಪರಾಧವಾಗಿಬಿಟ್ಟಿತು! ಯಾರ ಕೊಲೆ ಮಾಡಲಿಲ್ಲ, ಯಾರ ಮನೆಯ ದರೋಡೆಯನ್ನೂ ಮಾಡಲಿಲ್ಲ. ಮುಖ್ಯಮಂತ್ರಿ ಕುರಿತು ಯುವತಿಯೊಬ್ಬಳು ಸಾರ್ವಜನಿಕವಾಗಿ, ಮಾಧ್ಯಮಗಳೆದುರು ಆಡಿದ್ದ ಮಾತಿನ ವಿಡಿಯೋ ಹಂಚಿಕೊಂಡು ಅದಕ್ಕೆ ತನ್ನ ಅಣಕು ಮಾತು ಸೇರಿಸಿ ಟ್ವೀಟ್ ಮಾಡಿದ್ದೇ ದೊಡ್ಡ ಅಪರಾಧವಾಗಿಬಿಟ್ಟಿತು.
ಎರಡೇ ದಿನಗಳಲ್ಲಿ, ಅಂದರೆ ಶನಿವಾರ ಮಧ್ಯಾಹ್ನ ಕನೌಜಿಯರನ್ನು ಅವರ ದೆಹಲಿಯ ನಿವಾಸದಿಂದ ಉತ್ತರಪ್ರದೇಶದ ಪೊಲೀಸರು ಯಾವುದೇ ವಾರಂಟ್ ಇಲ್ಲದೇ ಮಫ್ತಿಯಲ್ಲಿ ಹೋಗಿ ಅನಾಮತ್ತಾಗಿ ಎತ್ತಿಕೊಂಡು ಬಂದು ಜೈಲಿಗೆ ತಳ್ಳಿದ್ದರು. ಸ್ವತಂತ್ರ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿರುವ, ದೆಹಲಿಯ ನಿವಾಸಿ, ಪ್ರಶಾಂತ್ ಕನೌಜಿಯ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ ಎಂಬ ಪ್ರತಿಷ್ಠಿತ ಸಮೂಹ ಮಾಧ್ಯಮ ತರಬೇತಿ ಸಂಸ್ಥೆಯ ಮಾಜಿ ವಿದ್ಯಾರ್ಥಿ. ದ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ದ ವೈರ್ (ಹಿಂದಿ) ಪತ್ರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಗೃಹ ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಯೋಗಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ “ಆಕ್ಷೇಪಾರ್ಹ ಟೀಕೆಗಳನ್ನು” ಮಾಡಿದ್ದಕ್ಕಾಗಿ ಕನೋಜಿಯಾ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಎಫ್ಐಆರ್ ನಲ್ಲಿ ದಾಖಲಾಗಿರುವುದೇನು?
ಉತ್ತರಪ್ರದೇಶ ಪೊಲೀಸರು ತಾವಾಗಿಯೇ (suo moto) ದೂರು ತೆಗೆದುಕೊಂಡು ಐಪಿಸಿ ಸೆಕ್ಷನ್ 500 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ರ ಅಡಿ ಎಫ್ಐಆರ್ ದಾಖಲಿಸಿದ್ದರು. ಇದರಲ್ಲಿ ಪ್ರಶಾಂತ್ ಕನೋಜಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತಮ್ಮ “ಟ್ವಿಟ್ಟರ್ ಸೋಷಿಯಲ್ ಮೀಡಿಯಾ”ದಲ್ಲಿ ಮಾನಹಾನಿ ಉಂಟುಮಾಡುವ ಟೀಕೆಗಳನ್ನು ಮಾಡಿರುವುದಾಗಿ ಮತ್ತು “ಮುಖ್ಯಮಂತ್ರಿಗಳ ವರ್ಚಸ್ಸಿಗೆ ಕುಂದು ತರಲು ಯತ್ನಿಸಿರುವುದಾಗಿ” ಆರೋಪಿಸಲಾಗಿದೆ.
ಹಾಗಾದರೆ ಪತ್ರಕರ್ತ ಪ್ರಶಾಂತ್ ಕನೋಜಿಯಾ ಹಂಚಿಕೊಂಡಿದ್ದ ವಿಡಿಯೋ ಮತ್ತು ಹಾಕಿದ್ದ ಕಮೆಂಟ್ ನಿಜಕ್ಕೂ ಆಕ್ಷೇಪಾರ್ಹವಾಗಿದ್ದವೇ? ಇದರಿಂದ ಮುಖ್ಯಮಂತ್ರಿಗಳಿಗೆ ಮಾನಹಾನಿ ಉಂಟಾಗಿತ್ತೇ? ಅವರ ವರ್ಚಸ್ಸಿಗೆ ಕುಂದುಂಟಾಗಿತ್ತೇ? ಅವರ ಬಂಧನ ಕಾನೂನಾತ್ಮಕವಾಗಿ ಸರಿಯಾಗಿತ್ತೇ?
ಒಂದು ಕ್ಷಣ ಕನೋಜಿಯಾ ಹಂಚಿದ್ದ ಸುದ್ದಿ ನಿಜವಲ್ಲ ಎಂದೇ ನಾವು ಭಾವಿಸಿದರೂ ಮತ್ತು ಅವರ ಟೀಕೆಗಳು ಅಸಭ್ಯ ಎಂದೇ ಅಂದುಕೊಂಡರೂ ಪ್ರಶಾಂತ್ ಬಂಧನ ಕಾನೂನು ಸಮ್ಮತವಲ್ಲ. ಇದು ಅಧಿಕಾರದ ಸ್ಪಷ್ಟ ದುರ್ಬಳಕೆಯಾಗಿದೆ. ಏಕೆಂದರೆ ಎಫ್ಐಆರ್ ನಲ್ಲಿ ನಮೂದಾಗಿರುವ ಅಪರಾಧಗಳು ಬಂಧನವನ್ನು ಸಮರ್ಥಿಸುವುದಿಲ್ಲ.
ಮೊದಲನೆಯದಾಗಿ, ಐಪಿಸಿ ಸೆಕ್ಷನ್ 500ರ ಪ್ರಕಾರ ಕ್ರಿಮಿನಲ್ ಡೆಫಮೇಶನ್ (ಶಿಕ್ಷಾರ್ಹ ಮಾನಹಾನಿ) ನಾನ್ ಕಾಗ್ನೇಜಬಲ್ ಅಪರಾಧ. ಅದರರ್ಥ, ಪೊಲೀಸರು ನೇರವಾಗಿ ಎಫ್ಐಆರ್ ದಾಖಲಿಸುವ ಮೂಲಕ ಇಂತಹ ದೂರಿನ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಮ್ಯಾಜಿಸ್ಟ್ರೇಟ್ ಎದುರು ಖಾಸಗಿ ದೂರನ್ನು ದಾಖಲಿಸಿದ ನಂತರವಷ್ಟೇ ಮುಂದಿನ ಕ್ರಮ ಜರುಗಿಸತಕ್ಕದ್ದು. CrPC ಸೆಕ್ಷನ್ 41ರಂತೆ ಕಾಗ್ನೇಜಬಲ್ ಅಪರಾಧ ಪ್ರಕರಣಗಳಲ್ಲಿ ಮಾತ್ರ ವಾರಂಟ್ ಇಲ್ಲದೆ ಬಂಧಿಸಲು ಅವಕಾಶವಿದೆ.
ಕಂಪ್ಯೂಟರ್ ಹಾನಿಗೂ ಟ್ವಿಟ್ಟರ್ ಕಮೆಂಟ್ ಗೂ ಎಲ್ಲಿಂದೆಲ್ಲಿಯ ಸಂಬಂಧ!
ಎರಡನೆಯದಾಗಿ, ಮಾಹಿತಿ ತಂತ್ರಜ್ಞಾನ (IT) ಕಾಯಿದೆ, ಸೆಕ್ಷನ್ 66ರಲ್ಲಿ ಕಾಗ್ನೇಜಬಲ್ ಅಪರಾಧ ಎಂದು ಗುರುತಿಸಲಾಗಿದ್ದರೂ, ಅದು ಈ ಪ್ರಕರಣದಲ್ಲಿ ಅನ್ವಯವಾಗದು. ಏಕೆಂದರೆ ಈ ಸೆಕ್ಷನ್ ನ ಪ್ರಕಾರ ಅಪರಾಧವು “ಕಂಪ್ಯೂಟರ್ ಸಿಸ್ಟಮ್ ಅನ್ನು ಮೋಸದಿಂದ/ ಸುಳ್ಳು ಹೇಳಿ ಹಾನಿಯುಂಟು ಮಾಡುವುದು” ಎಂದಿದೆ. ಪ್ರಶಾಂತ್ ಕನೋಜಿಯಾ ಪ್ರಕರಣಕ್ಕೂ ಇದಕ್ಕೂ ಸಂಬಂಧವೇ ಇಲ್ಲ! ಕನೌಜಿಯಾ ಅವರ ಟ್ವೀಟ್ ಹಾನಿ ಮಾಡಿದ್ದಾದರೂ ಯಾವ ಕಂಪ್ಯೂಟರ್ ಸಿಸ್ಟಮ್ ಗೆ? ಮೋಸವಾಗಲೀ ಸುಳ್ಳು ಹೇಳುವುದಾಗಲೀ ನಡೆದಿದ್ದಾದರೂ ಎಲ್ಲಿ? ತೀರಾ ವಿಚಿತ್ರ ಎನಿಸಿದರೂ ಯೋಗಿ ರಾಜ್ಯದಲ್ಲಿ ಇದೆಲ್ಲ ನಡೆದಿರುವುದು ನಿಜವೇ. ಬೇಕಾಬಿಟ್ಟಿಯಾಗಿ ಈ ಸೆಕ್ಷನ್ಗಳನ್ನು ಎಫ್ಐಆರ್ ನಲ್ಲಿ ಸೇರಿಸಲಾಗಿದೆ. ಕನೋಜಿಯಾ ವರ ಬಂಧನಕ್ಕೆ ತೀವ್ರ ಪ್ರತಿರೋಧ ಬಂದಾಗ, ಉ.ಪ್ರ. ಪೊಲೀಸರು ಒಂದು ಪತ್ರಿಕಾ ಹೇಳಿಕೆ ನೀಡಿ ಡ್ಯಾಮೇಜ್ ಕಂಟ್ರೋಲಿಗೆ ಯತ್ನಿಸಿದರು. ಅದರಲ್ಲಿ ಕನೋಜಿಯಾ ಮೇಲಿನ ಆರೋಪಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸಿ, ಸುಧಾರಿಸಿ, ಅವರು “ಅಸಭ್ಯ ಟೀಕೆಗಳನ್ನು” ಮಾಡಿದ್ದಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ “ಗಾಳಿಸುದ್ದಿಗಳನ್ನು ಹರಡಿದ್ದಾಗಿ” ತಿಳಿಸಿದರು. ಬಂಧನವನ್ನು ಕಾನೂನುಬದ್ಧ ಎನಿಸುವಂತೆ ತೋರಿಸುವ ಸಲುವಾಗಿಯೇ ಇರಬೇಕು, ಪೊಲೀಸರ ಪತ್ರಿಕಾ ಹೇಳಿಕೆಯಲ್ಲಿ ಇನ್ನೆರಡು ಸೆಕ್ಷನ್ ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು, IPC ಸೆಕ್ಷನ್ 505 ಮತ್ತು IT ಕಾಯಿದೆ ಸೆಕ್ಷನ್ 67. ಆದರೆ ಇವಾವುದರ ಹೆಸರೂ ಎಫ್ಐಆರ್ ನಲ್ಲಿರಲೇ ಇಲ್ಲ.
ಇನ್ನೂ ವಿಚಿತ್ರವೆಂದರೆ ಈ ಸೆಕ್ಷನ್ ಗಳೂ ಪ್ರಶಾಂತ್ ಕನೋಜಿಯಾ ಪ್ರಕರಣಕ್ಕೆ ಅನ್ವಯಿಸುವುದೇ ಇಲ್ಲ! ಸೆಕ್ಷನ್ 505 ರ ಪ್ರಕಾರ “ರಾಜ್ಯದ ವಿರುದ್ಧ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಅಪರಾಧ ಎಸಗಲು ಯಾವುದೇ ವ್ಯಕ್ತಿಗೆ ಪ್ರಚೋದನೆ ನೀಡುವಂತಹ, ಸಾರ್ವಜನಿಕರಿಗೆ ಅಥವಾ ಯಾವುದೇ ವಿಭಾಗದ ಜನರಿಗೆ ಹೆದರಿಕೆ ಇಲ್ಲವೇ ಆತಂಕ ಉಂಟುಮಾಡುವ ಅಥವಾ ಉಂಟುಮಾಡಬಹುದಾದ ಉದ್ದೇಶದಿಂದ ಯಾವುದೇ ಹೇಳಿಕೆಯನ್ನು, ವದಂತಿಯನ್ನು ಅಥವಾ ಹೇಳಿಕೆಯನ್ನು ನೀಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದನ್ನು” ಅಪರಾಧ ಎಂದು ಪರಿಗಣಿಸುತ್ತದೆ. ಕೋಮು ದ್ವೇಷ ಬಿತ್ತುವ ಹೇಳಿಕೆಗಳನ್ನೂ ಇದು ಒಳಗೊಳ್ಳುತ್ತದೆ. ಬಹಳ ಮುಖ್ಯವಾಗಿ, ಸೆಕ್ಷನ್ 505 ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಹುಟ್ಟುಹಾಕುವ ಹೇಳಿಕೆಗಳಿಗೆ ಸಂಬಂಧಿಸಿದ್ದಾಗಿದೆ. ಅಲ್ಲದೆ ಸಂವಿಧಾನದ ಆರ್ಟಿಕಲ್ 19(2)ರ ಅಡಿ “ಸಾರ್ವಜನಿಕ ಸುವ್ಯವಸ್ಥೆ”ಯ ಹಿತದೃಷ್ಟಿಯಿಂದ ವಾಕ್ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳಿಗೂ ಸಂಬಂಧಿಸಬಹುದಾಗಿದೆ.
ಆದ್ದರಿಂದ ಕನೋಜಿಯಾ ಅವರ ಟ್ವೀಟ್ ನಲ್ಲಿ ರಾಜ್ಯದ ವಿರುದ್ಧವಾಗಲೀ, ಸಾರ್ವಜನಿಕ ಶಾಂತಿ ಕದಡುವುದಾಗಲೀ ಕೋಮು ವೈಷಮ್ಯವಾಗಲೀ ಯಾವೊಂದು ಅಂಶವೂ ಇಲ್ಲದಿರುವುದರಿಂದ ಈ ಸೆಕ್ಷನ್ ಕೂಡ ಅನಗತ್ಯವಾಗಿ ಹೇರಿದ್ದಾರೆಂದು ಯಾರಿಗಾದರೂ ಅರ್ಥವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮುಖ್ಯಮಂತ್ರಿಯವರ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ ತಕ್ಷಣ, ಅದು ಸುಳ್ಳೋ ನಿಜವೋ, ಬೇರೆ ವಿಚಾರ, ಆದರೂ ಅದು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಅಥವಾ ರಾಜ್ಯದ ವಿರುದ್ಧದ ಹೇಳಿಕೆ ಆಗುವುದು ಹೇಗೆ?
ಯೋಗಿ ರಾಜ್ಯದಲ್ಲಿ ಮಹಿಳೆಯರ ಹೇಳಿಕೆಗಳೇ “ಅಶ್ಲೀಲ”ವೆ??
ಇನ್ನು ಕೊನೆಯಲ್ಲಿ ಹೇಳಲಾದ IT ಕಾಯಿದೆಯ ಸೆಕ್ಷನ್ 67 ಬಗ್ಗೆ ನೋಡೋಣ. ಅದು ಆನ್ಲೈನ್ ಮೂಲಕ ಅಶ್ಲೀಲ ವಿಷಯಗಳನ್ನು ಹರಡುವುದರ ಕುರಿತಾಗಿದೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬಳು ತನಗಾಗಿದೆ ಎನ್ನಲಾದ ಅನುಭವಗಳ ಬಗ್ಗೆ ಮಾಧ್ಯಮಗಳ ಎದುರು ನೀಡಿರುವ ಹೇಳಿಕೆಗಳನ್ನು “ಅಶ್ಲೀಲ” ಎಂದು ಕರೆಯುವುದಾದರೂ ಹೇಗೆ? ಈ ವಿಡೀಯೋ ತುಣಕನ್ನೇ ಕನೋಜಿಯಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವುದು. ಈ ಸೆಕ್ಷನ್ ಕೂಡ ಕನೋಜಿಯಾ ಪ್ರಕರಣಕ್ಕೆ ಎಳ್ಳಷ್ಟೂ ಸರಿಹೊಂದುವುದಿಲ್ಲ.
ಅಷ್ಟೇ ಅಲ್ಲ, “ತೀವ್ರ ವಿಚಾರಣೆ”ಯ ನಂತರ ತನ್ನ ಅಪರಾಧವನ್ನು ಕನೋಜಿಯಾ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಉತ್ತರಪ್ರದೇಶದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಪೊಲೀಸ್ ಕಸ್ಟಡಿಯಲ್ಲಿ ನೀಡುವ ತಪ್ಪೊಪ್ಪಿಗೆ ಹೇಳಿಕೆಗೆ ಕಾನೂನಾತ್ಮಕವಾಗಿ ಯಾವುದೇ ಸಾಕ್ಷ್ಯಕ್ಕೂ ಕಿಂಚಿತ್ತೂ ಕಿಮ್ಮತ್ತಿಲ್ಲ ಎಂಬುದು ವಾಸ್ತವ. ಪೊಲೀಸರ ಇಂತಹ ಹೇಳಿಕೆಗಳು ಜನರನ್ನು ದಿಕ್ಕುತಪ್ಪಿಸುವ ಸಲುವಾಗಿ ಮತ್ತು ಕನೋಜಿಯಾ ವಿರುದ್ಧದ ಜನಾಭಿಪ್ರಾಯವನ್ನು ಸೃಷ್ಟಿಸಲಿಕ್ಕಾಗಿಯೇ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.
ಪೊಲೀಸರು ಎಲ್ಲಾ ಸಂದರ್ಭದಲ್ಲೂ ಏಕಾಏಕಿ ಬಂಧಿಸಲು ಸಾಧ್ಯವೇ?
ಹಾಗೊಂದು ವೇಳೆ ಇವೆಲ್ಲಾ ಸೆಕ್ಷನ್ಗಳೂ ಅನ್ವಯವಾಗುತ್ತವೆಂದೇ ಒಂದು ಕ್ಷಣ ಭಾವಿಸಿದರೂ ಸಹ, ಆಗಲೂ ಪ್ರಶಾಂತ್ ಕನೋಜಿಯಾ ಬಂಧನ ಕಾನೂನುಬಾಹಿರವೇ. ಏಕೆಂದರೆ…
ಈ ಯಾವ ಅಪರಾಧಕ್ಕೂ ಏಳು ವರ್ಷಗಳಿಗಿಂತ ಹೆಚ್ಚು ಕಾರಾಗೃಹವಾಸದ ಶಿಕ್ಷೆ ಇಲ್ಲ. IT ಕಾಯಿದೆಯ ಸೆಕ್ಷನ್ 67ಕ್ಕೆ ಅನ್ವಯವಾಗುವಂತೆ, ಗರಿಷ್ಠ ಶಿಕ್ಷೆಯೇ 5 ವರ್ಷಗಳು, ಅದರಲ್ಲೂ ಪುನರಾವರ್ತನೆಯಾದ ಅಪರಾಧಕ್ಕೆ ಮಾತ್ರ. ಇಂತಹ ಎಲ್ಲಾ ಪ್ರಕರಣಗಳಲ್ಲೂ ಬಂಧನದ ನಿಯಮವೇನಿಲ್ಲ. CrPC ಸೆಕ್ಷನ್ 41ರ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಏಳು ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ನೀಡಬಹುದಾದ ಅಪರಾಧಗಳಲ್ಲಿ ಆರೋಪಿಗಳನ್ನು ಬಂಧಿಸಬಹುದಾಗಿದೆ. CrPC ಸೆಕ್ಷನ್ 41(1)(b)(ii) ಅನ್ವಯ ಅಂತಹ ಪ್ರಕರಣಗಳಲ್ಲಿ ಬಂಧಿಸುವ ಮೊದಲು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಯು ತಾನು ಏಕೆ ಬಂಧಿಸುತ್ತಿದ್ದೇನೆಂದು ಸಮಾಧಾನಕರ ರೀತಿಯಲ್ಲಿ ಬರೆದು ದಾಖಲಿಸಿಡಬೇಕು: (1) ಅದೇ ವ್ಯಕ್ತಿಯು ಅಂತಹ ಅಪರಾಧವನ್ನು ಪುನಃ ಎಸಗುವುದನ್ನು ತಡೆಗಟ್ಟಲು; ಅಥವಾ (2) ಅಪರಾಧದ ಸೂಕ್ತ ವಿಚಾರಣೆಗಾಗಿ; ಅಥವಾ (3) ಆ ವ್ಯಕ್ತಿಯು ಯಾವುದೇ ರೀತಿಯಲ್ಲೂ ಅಪರಾಧದ ಸಾಕ್ಷ್ಯಾಧಾರಗಳನ್ನು ನಾಶಪಡಿಸದಂತೆ ಅಥವಾ ತಿರುಚದಂತೆ ತಡೆಗಟ್ಟಲು: ಅಥವಾ (4) ನ್ಯಾಯಾಲಯಕ್ಕೆ ಅಥವಾ ಪೊಲೀಸ್ ಅಧಿಕಾರಿಗೆ ವಾಸ್ತವ ಸಂಗತಿಗಳನ್ನು ಹೇಳದಂತೆ ಒತ್ತಾಯಿಸಿ, ಪ್ರಕರಣದ ಸತ್ಯಾಸತ್ಯತೆ ತಿಳಿದಿರುವ ಯಾವುದೇ ವ್ಯಕ್ತಿಗೆ ಯಾವುದೇ ಆಸೆ, ಆಮಿಷ ತೋರುವುದು ಅಥವಾ ಬೆದರಿಕೆ ಒಡ್ಡುವುದು ಅಥವಾ ಆಶ್ವಾಸನೆ ನೀಡುವುದನ್ನು ತಡೆಗಟ್ಟಲು; ಅಥವಾ (5) ಅಂತಹ ವ್ಯಕ್ತಿಯನ್ನು ಬಂಧಿಸುವ ವರೆಗೂ ನ್ಯಾಯಾಲಯದಲ್ಲಿ ಆತನ ಹಾಜರಾತಿಯನ್ನು ಖಾತರಿಪಡಿಸಲು ಸಾಧ್ಯವಾಗದಂತಹ ಸಂದರ್ಭವಿದ್ದಾಗ.
ಇದರ ಅರ್ಥವಿಷ್ಟೇ. ಏಳು ವರ್ಷಗಳೊಳಗಿನ ಶಿಕ್ಷಾರ್ಹ ಅಪರಾಧವಿರುವ ಪ್ರಕರಣಗಳಲ್ಲಿ ಪೊಲೀಸರು ಮೇಲೆ ಹೇಳಿರುವಂತಹ, ಬಹಳ ವಿಶೇಷ ಎನಿಸುವ ಸಂದರ್ಭಗಳಲ್ಲಿ ಮಾತ್ರ ಬಂಧಿಸಲು ಅವಕಾಶವಿರುತ್ತದೆ. ಅದರಲ್ಲೂ ಏಕಾಏಕಿ ಬಂಧಿಸುವ ಬದಲು ವ್ಯಕ್ತಿಗೆ CrPC ಸೆಕ್ಷನ್ 41A ಅಡಿಯಲ್ಲಿ, ನಿಗದಿತ ದಿನಾಂಕಗಳಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿಮಾಡತಕ್ಕದ್ದು. ಮೇಲೆ ಹೇಳಿದಂತೆ ಬಂಧನಕ್ಕೆ ಸೂಕ್ತವಾದ ವಿಶೇಷ ಕಾರಣಗಳನ್ನು ದಾಖಲಿಸಿದ ನಂತರವಷ್ಟೇ ಇಂತಹ ಪ್ರಕರಣಗಳಲ್ಲಿ ಬಂಧನ ಪ್ರಕ್ರಿಯೆ ಜಾರಿಗೊಳಿಸಲು ಅವಕಾಶವಿರುತ್ತದೆ. ಇದನ್ನು Arnesh Kumar vs State of Bihar AIR 2014 SC 2756 ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿವರಿಸಿದೆ.
ಬಂಧಿಸುವ ಅಧಿಕಾರವೇ ಅದರ ಸಮರ್ಥನೆಯೇ?
ಪೊಲೀಸರು ಯದ್ವಾತದ್ವಾ ಬಂಧಿಸುವುದರ ವಿರುದ್ಧ ರಕ್ಷಾಕವಚವಾಗಿ 2009ರಲ್ಲಿ CrPCಗೆ ತಿದ್ದುಪಡಿ ತರಲಾಯಿತು. ಬಂಧನದ ಅಧಿಕಾರವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಒತ್ತಿಹೇಳಿದ ಸುಪ್ರೀಂಕೋರ್ಟ್ ಹೀಗೆ ಹೇಳಿತ್ತು- “ಪೊಲೀಸ್ ಅಧಿಕಾರಿಗಳು ತಮಗೆ ಅಧಿಕಾರವಿದೆ ಎಂದು ತಿಳಿದು ಬಂಧಿಸಿಬಿಡುತ್ತಾರೆ. ಬಂಧನದಿಂದ ಸ್ವಾತಂತ್ರ್ಯಹರಣವಾಗುತ್ತದೆ, ಅವಮಾನವಾಗುತ್ತದೆ ಮತ್ತು ಎಂದೆಂದೂ ಅಳಿಸಲಾರದಂತಹ ಕಲೆಗಳುಂಟಾಗುತ್ತದೆ. ಆದ್ದರಿಂದ ನಾವು ಭಿನ್ನವಾಗಿ ಯೋಚಿಸುತ್ತೇವೆ. ಯಾವುದೇ ಅಪರಾಧ ಜಾಮೀನುರಹಿತ ಮತ್ತು ಕಾಗ್ನೇಜಿಬಲ್ ಎಂದ ಮಾತ್ರಕ್ಕೆ ಬಂಧಿಸುವುದು ಪೊಲೀಸ್ ಅಧಿಕಾರಿಗಳ ಕಾನೂನುಸಮ್ಮತ ಕೆಲಸ ಎಂದು ಭಾವಿಸಿ ಬಂಧನವನ್ನು ಜಾರಿ ಮಾಡಬಾರದೆಂಬುದು ನಮ್ಮ ಅಭಿಪ್ರಾಯ. ಬಂಧಿಸುವ ಅಧಿಕಾರ ಒಂದೆಡೆಯಾದರೆ, ಅಧಿಕಾರ ಚಲಾವಣೆಯ ಸಮರ್ಥನೆ ಮತ್ತೊಂದಾಗುತ್ತದೆ. ಬಂಧಿಸಲು ಅಧಿಕಾರ ಹೊಂದಿರುವುದರ ಹೊರತಾಗಿ ಪೊಲೀಸ್ ಅಧಿಕಾರಿಗಳು ಅದಕ್ಕೆ ಕಾರಣಗಳನ್ನೂ ಸಮರ್ಥಿಸಬೇಕು. ಯಾವುದೇ ವ್ಯಕ್ತಿಯ ವಿರುದ್ಧ ಅಪರಾಧ ಎಸಗಿರುವುದರ ಆರೋಪ ಕೇಳಿಬಂದ ಮಾತ್ರಕ್ಕೆ ಅವನನ್ನು ಸಾಮಾನ್ಯ ರೀತಿಯಲ್ಲಿ ಬಂಧಿಸುವಂತಿಲ್ಲ. ಆರೋಪದ ಸತ್ಯಾಸತ್ಯತೆಯ ಕುರಿತು ಸ್ವಲ್ಪವಾದರೂ ವಿಚಾರಣೆ ನಡೆಸಿ ಬಂಧನಕ್ಕೆ ಅಗತ್ಯವಾದ ತೃಪ್ತಿಕರ ಅಂಶಗಳು ಸಿಗದೆ, ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿವುದು ಪೊಲೀಸ್ ಅಧಿಕಾರಿಯಾದವನ ವಿವೇಕದ ಮತ್ತು ಜಾಣ ನಡೆ ಎನಿಸದು.”
ನೆಲದ ಕಾನೂನಿಗಿಂತ ದೊಡ್ಡವರುಂಟೇ?
ಈ ಪ್ರಕರಣದಲ್ಲಿ ಉ.ಪ್ರ. ಪೊಲೀಸರು ತಮ್ಮ ಸರಹದ್ದನ್ನು ಮೀರಿ ದೆಹಲಿಯಿಂದ ಕನೌಜಿಯರನ್ನು ಬಂಧಿಸಿದಕ್ಕೆ ಯಾವುದೇ ವಿಶೇಷ ಕಾರಣಗಳನ್ನೂ ಲಿಖಿತವಾಗಿ ದಾಖಲಿಸಿಲ್ಲ. ಅಲ್ಲದೆ ನಂತರ ನೀಡಿದ ಹೇಳಿಕೆಯಲ್ಲೂ ಬಂಧಿಸಲೇಬೇಕಾದಂತಹ ಆ ವಿಶೇಷ ಸಂದರ್ಭಗಳನ್ನೂ ಉಲ್ಲೇಖಿಸಿಲ್ಲ. ಕನೋಜಿಯಾ ಅವರ ಮಾತುಗಳು ಮುಖ್ಯಮಂತ್ರಿಗಳಿಗೆ ನೇರವಾಗಿ ವೈಯಕ್ತಿಕವಾಗಿ ತಾಕಿ ಘಾಸಿಗೊಳಿಸಿರುವುದು ನಿಜವಿರಬಹುದು, ಆದರೆ ಕಾನೂನು ಕಟ್ಟಳೆಯನ್ನು ಮೀರಿ ಪತ್ರಕರ್ತನನ್ನು ಬಂಧಿಸಿರುವುದನ್ನು ಉತ್ತರಪ್ರದೇಶ ಸರ್ಕಾರವಾಗಲೀ ಪೊಲೀಸಾಗಲೀ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಯಾರೇ ಆಗಲಿ, ಮುಖ್ಯಮಂತ್ರಿ ಇರಬಹುದು, ಪೊಲೀಸ್ ಅಧಿಕಾರಿ ಇರಬಹುದು, ನೆಲದ ಕಾನೂನಿನಿಗಿಂತ ದೊಡ್ಡವರಲ್ಲ.
ಭಾರತದಲ್ಲಿ ಒಂದು ಕಡೆ ಸುಳ್ಳುಸುದ್ದಿಗಳು ವಿಜೃಂಭಿಸುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕುವ ಯೋಚನೆ ಸರ್ಕಾರಗಳಿಗಿಲ್ಲ. ಆದರೆ ಇನ್ನೊಂದು ಕಡೆ ಸರ್ಕಾರಗಳನ್ನು, ಅಧಿಕಾರಸ್ಥರನ್ನು ಪ್ರಶ್ನಿಸುವವರ ಅಭಿವ್ಯಕ್ತಿ ಸ್ವಾತಂತ್ರ್ಯ ಕಗ್ಗೊಲೆಯಾಗುತ್ತಿರುವುದು ಮತ್ತು ವಾಕ್ ಸ್ವಾತಂತ್ರ್ಯದ ಹರಣವಾಗುತ್ತಿರುವುದು ದಿನೇದಿನೇ ಹೆಚ್ಚುತ್ತಲೇ ಇದೆ. ಕನೋಜಿಯಾ ಪ್ರಕರಣ ಈ ಪಟ್ಟಿಯಲ್ಲಿ ಇತ್ತೀಚಿನದ್ದು. ಆದ್ದರಿಂದಲೇ ಭಾರತದಲ್ಲಿ ಪತ್ರಿಕಾರಂಗ ಅತ್ಯಂತ ಅಪಾಯಕಾರಿ ವೃತ್ತಿಯಾಗಿದೆ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಕುಸಿಯುತ್ತಲೇ ಇದ್ದು 180 ದೇಶಗಳ ಪೈಕಿ 140 ನೇ ಸ್ಥಾನಕ್ಕೆ ಬಂದು ನಿಂತಿದೆ!