ಒಂದು ಕಡೆ, ಸಾಹಿತಿ ಗಿರೀಶ್ ಕಾರ್ನಾಡರ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಕಾರಣದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ನಿಗದಿಯಾಗಿದ್ದ ಮುಹೂರ್ತ ಎರಡು ದಿನ ಮುಂದೆ ಹೋಗಿದೆ. ಅದೇ ಹೊತ್ತಿಗೆ, ದೆಹಲಿಯಲ್ಲಿ ನಡೆದಿರುವ ಮತ್ತೊಂದು ಬೆಳವಣಿಗೆಯಲ್ಲಿ ಸಂಪುಟ ವಿಸ್ತರಣೆಗೆ ದೊಡ್ಡ ಗೌಡರ ಹುಕುಂನ ಅಡ್ಡಗಾಲು ಬಿದ್ದಿದೆ.
ಲೋಕಸಭಾ ಚುನಾವಣೆಯ ಬಳಿಕ ದೋಸ್ತಿ ಪಕ್ಷಗಳ ನಡುವೆ ಬಿರುಸುಗೊಂಡಿರುವ ಪರಸ್ಪರ ಬಹಿರಂಗ ರಾಜಕೀಯ ಕೆಸರೆರಚಾಟದ ನಡುವೆ, ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಎಂಬ ಗೊಂದಲ ಕೂಡ ಭುಗಿಲೆದ್ದಿತ್ತು. ಸಂಪುಟದಿಂದ ಹೊರಗಿರುವ ಕಾಂಗ್ರೆಸ್ ಹಿರಿಯ ಶಾಸಕರು ಸಂಪುಟ ಪುನರ್ ರಚನೆಯಾಗಲಿ, ಆ ಮೂಲಕ ಈಗಾಗಲೇ ದೋಸ್ತಿ ಸರ್ಕಾರದಲ್ಲಿ ಅಧಿಕಾರ ಅನುಭವಿಸಿರುವವರನ್ನು ಹೊರಹಾಕಿ, ಅವಕಾಶ ವಂಚಿತರಿಗೆ ಅವಕಾಶ ನೀಡಿ ಎಂಬುದು ಅವರ ಆಗ್ರಹವಾಗಿತ್ತು. ಅದಕ್ಕಾಗಿ ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಮುಂತಾದವರು ಭಾರೀ ಬಹಿರಂಗ ಪ್ರಹಸನವನ್ನೇ ಪ್ರದರ್ಶಿಸಿದರು ಕೂಡ.
ಆದರೆ, ಲೋಕಸಭಾ ಚುಣಾವಣೆಯ ಬಳಿಕ ನಡೆಯುತ್ತಿರುವ ಈ ಬೆಳವಣಿಗೆಗಳು ಇಡೀ ಸರ್ಕಾರದ ಮೇಲಿನ ತಮ್ಮ ಹಿಡಿತವನ್ನೇ ತಪ್ಪಿಸುತ್ತಿರುವ ಸೂಚನೆ ಸಿಗುತ್ತಿದ್ದಂತೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಂಪುಟ ವಿಸ್ತರಣೆಗೆ ಪಟ್ಟು ಹಿಡಿಯುವ ಮೂಲಕ ಯಾವುದೇ ಕಾರಣಕ್ಕೂ ಪುನರ್ ರಚನೆ ಬೇಡ ಎಂದು ಪಟ್ಟುಹಿಡಿದು, ಈಗ ಸರ್ಕಾರದಲ್ಲಿ ಆಯಕಟ್ಟಿನ ಸ್ಥಾನದಲ್ಲಿರುವ ತಮ್ಮ ಬಣದವರು ಆ ಸ್ಥಾನದಿಂದ ಕದಲದಂತೆ ಪ್ರಯತ್ನಿಸಿದ್ದಾರೆ. ಹಾಗಾಗಿ, ಸದ್ಯಕ್ಕೆ ಪುನರ್ ರಚನೆ ಇಲ್ಲ; ವಿಸ್ತರಣೆಯಷ್ಟೇ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಹೇಗಾದರೂ ಸರಿ ಸದ್ಯಕ್ಕೆ ಸರ್ಕಾರ ಉಳಿಸಿಕೊಳ್ಳುವ ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಕುಮಾರಸ್ವಾಮಿ ಅವರ ಈ ತೀರ್ಮಾನ ಸಿದ್ದರಾಮಯ್ಯ ಹಠದ ಮುಂದೆ ಶರಣಾದ ಸೂಚನೆ ಎನ್ನಲಾಗುತ್ತಿದೆ.
ಆದರೆ, ಜೆಡಿಎಸ್ ವರಿಷ್ಠ ದೇವೇಗೌಡರು ಮಾತ್ರ ಕೈಕಟ್ಟಿ ಕುಳಿತಿಲ್ಲ. ಜೆಡಿಎಸ್ ಅಧ್ಯಕ್ಷ ಮತ್ತು ಸಿದ್ದರಾಮಯ್ಯ ಅವರ ಬದ್ಧ ವೈರಿ ಎಚ್ ವಿಶ್ವನಾಥ್ ಅವರ ನಿರಂತರ ವಾಗ್ದಾಳಿ, ವೈಯಕ್ತಿಕ ನಿಂದನೆ, ರಾಜಕೀಯ ಸವಾಲುಗಳ ಮೂಲಕ ಕಳೆದ ಒಂದು ತಿಂಗಳಿನಿಂದ ಸಿದ್ದರಾಮಯ್ಯ ಅವರನ್ನು ಹಣಿಯುವ ಯತ್ನಗಳು ಕೈಗೂಡಿಲ್ಲ. ಅಲ್ಲದೆ, ಸ್ವತಃ ರೋಷನ್ ಬೇಗ್, ರಾಮಲಿಂಗಾರೆಡ್ಡಿ, ಜಿ ಪರಮೇಶ್ವರ್ ಅವರಂಥ ಕಾಂಗ್ರೆಸ್ ಘಟಾನುಘಟಿ ನಾಯಕರು ಒಬ್ಬೊಬ್ಬರಾಗಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದರು. ಸರ್ಕಾರವನ್ನು ಸಿದ್ದರಾಮಯ್ಯ ತಮ್ಮ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಮನ್ವಯ ಸಮಿತಿಯಲ್ಲಿ ಉಭಯ ಪಕ್ಷಗಳ ಅಧ್ಯಕ್ಷರಿಗೂ ಸ್ಥಾನ ನೀಡದೆ, ಇಡೀ ಸಮಿತಿಯನ್ನು ತಮ್ಮ ಕೈವಶಮಾಡಿಕೊಂಡಿದ್ದಾರೆ. ಹಾಗಾಗಿ, ಅವರು ಸಮನ್ವಯ ಸಮಿತಿಯಿಂದ ಹೊರಹೋಗದೆ ದೋಸ್ತಿ ಪಕ್ಷಗಳ ನಡುವಿನ ಅಂತಃಕಲಹ ನಿಲ್ಲುವುದಿಲ್ಲ ಎಂಬ ಮಾತುಗಳನ್ನೂ ನೇರವಾಗಿ ಸಿದ್ದರಾಮಯ್ಯ ಅವರನ್ನೇ ಹೊಣೆಯಾಗಿಸಿ ಆಡಿಸಲಾಯಿತು.
ಇಷ್ಟಾಗಿಯೂ, ಮಾಜಿ ಸಿಎಂ ಜಗ್ಗಿಲ್ಲ. ಇದೀಗ ಸಂಪುಟದ ವಿಷಯದಲ್ಲಿಯೂ ತಮ್ಮದೇ ಮಾತು ನಡೆಯುವಂತೆ ನೋಡಿಕೊಂಡಿದ್ದಾರೆ.
ಹಾಗಾಗಿ, ಇದೀಗ ದೊಡ್ಡ ಗೌಡರೇ ಅಂತಿಮವಾಗಿ ಕಣಕ್ಕಿಳಿದಿದ್ದಾರೆ. ನೇರ ದೆಹಲಿಗೇ ಹೋಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನೇ ಭೇಟಿಯಾಗಿ ಮಾತುಕತೆ ನಡೆಸಿ, ಎಲ್ಲವನ್ನೂ ಹೇಳಿಬಂದಿದ್ದಾರೆ. ಸಂಪುಟ ವಿಸ್ತರಣೆಯ ಕಗ್ಗಂಟು, ಲೋಕಸಭಾ ಚುನಾವಣೆಯ ಹೀನಾಯ ಸೋಲು ಮತ್ತು ವಿಶೇಷವಾಗಿ ತಮ್ಮ ಕುಟುಂಬದ ಸೋಲಿನ ಹಿಂದೆ ಇರುವ ಕಾಣದ ಕೈಗಳು, ಮೈತ್ರಿಪಕ್ಷಗಳ ನಾಯಕರ ಬಹಿರಂಗ ಟೀಕೆಗಳು, ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ನೀಡುವ ಕುರಿತ ವಿವಾದ ಸೇರಿದಂತೆ ಹಲವು ಮಹತ್ವದ ರಾಜಕೀಯ ವಿಷಯಗಳನ್ನು ದೇವೇಗೌಡರು, ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇವೆಲ್ಲಕ್ಕಿಂತ ಪ್ರಮುಖವಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಹಠದಿಂದಾಗಿ ದಿನದಿಂದ ದಿನಕ್ಕೆ ದೋಸ್ತಿಗಳ ನಡುವೆ ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿದೆ. ಸರ್ಕಾರದ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುತ್ತಿದೆ. ಸಂಪುಟ ವಿಸ್ತರಣೆಯ ವಿಷಯದಲ್ಲಿಯೂ ಅವರು ಜೆಡಿಎಸ್ ಮೇಲೆ ಸವಾರಿ ಮಾಡುತ್ತಿದ್ದಾರೆ. ನಮ್ಮ ಕೋಟಾದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಪಕ್ಷೇತರರಿಗೆ ನೀಡಬೇಕು ಎಂಬ ಅವರ ಷರತ್ತನ್ನು ಒಪ್ಪಲಾಗದು. ಈಗಾಗಲೇ ಸರ್ಕಾರದಲ್ಲಿ ಜೆಡಿಎಸ್ಗೆ ಇರುವ ಪ್ರಾತಿನಿಧ್ಯವೇ ಕಡಿಮೆ. ಇನ್ನು ಇರುವ ಈ ಖಾಲಿ ಸಚಿವ ಸ್ಥಾನಗಳನ್ನೂ ಅವರಿಗೆ ಬಿಟ್ಟುಕೊಟ್ಟಲ್ಲಿ, ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಅವಕಾಶ ನೀಡುವ ತಮ್ಮ ಉದ್ದೇಶಕ್ಕೆ ಅಡ್ಡಿಯಾಗಲಿದೆ. ಆ ಹಿನ್ನೆಲೆಯಲ್ಲಿ ತಾವು ಆ ಎರಡು ಸ್ಥಾನ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಗೌಡರು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಸೋಮವಾರ ರಾತ್ರಿ ನವದೆಹಲಿಯ ರಾಹುಲ್ ನಿವಾಸದಲ್ಲಿ ನಡೆದಿರುವ ಈ ಮಾತುಕತೆಯ ಕುರಿತ ವರದಿಗಳ ಪ್ರಕಾರ, ಖಾಲಿ ಇರುವ ಸಚಿವ ಸ್ಥಾನಗಳನ್ನು ಬಿಟ್ಟುಕೊಡುವ ವಿಷಯದಲ್ಲಿ, ಸರ್ಕಾರವೇ ಪಥನವಾದರೂ ಸರಿಯೇ. ತಾವು ತಮ್ಮ ಕೋಟಾ ಬಿಟ್ಟುಕೊಡುವುದಿಲ್ಲ. ಅಲ್ಲದೆ, ಸಿದ್ದರಾಮಯ್ಯ ಅವರಿಗೆ ನೀವು ಕಡಿವಾಣ ಹಾಕದೇ ಇದ್ದಲ್ಲಿ ಈ ಸರ್ಕಾರ ಬಹುದಿನ ಉಳಿಯಲಾರದು ಎಂಬ ಬಾಂಬ್ ಹಾಕಿಯೇ ಗೌಡರು ಎದ್ದುಬಂದಿದ್ದಾರೆ. ಕಳೆದ ಜನವರಿಯಲ್ಲಿ ಸಿದ್ದರಾಮಯ್ಯ ಅವರಿಂದಾಗಿ ಮೈತ್ರಿ ಸರ್ಕಾರಕ್ಕೆ ಇರುವ ಅಪಾಯ ಮತ್ತು ಅವರಿಗೆ ಕಡಿವಾಣ ಹಾಕಬೇಕಾದ ಅಗತ್ಯದ ಕುರಿತು ತಾವು ಬರೆದಿದ್ದ ಪತ್ರವನ್ನು ಕೂಡ ಗೌಡರು, ರಾಹುಲ್ ಅವರಿಗೆ ನೆನಪಿಸಿದ್ದಾರೆ.
ಅಂದರೆ, ಲೋಕಸಭಾ ಚುಣಾವಣೆ ಮತ್ತು ಆಪರೇಷನ್ ಕಮಲದ ಆತಂಕದ ಹಿನ್ನೆಲೆಯಲ್ಲಿ ಪರಸ್ಪರ ಒಗ್ಗಟ್ಟಿನ ಸೇನಾನಿಗಳಂತೆ ಮಾಧ್ಯಮಗಳ ಮುಂದೆ ಪೋಜು ಕೊಟ್ಟಿದ್ದ ಸಾಂಪ್ರದಾಯಿಕ ರಾಜಕೀಯ ವೈರಿಗಳ ತೆರೆಮರೆಯ ಕತ್ತಿಮಸೆತ ಈಗ ಜಗಜ್ಜಾಹೀರಾಗಿದೆ. ಅಲ್ಲದೆ, ಸಂಘರ್ಷ ಮುಂದಿನ ಒಂದೆರಡು ದಿನಗಳಲ್ಲಿ ಪಡೆದುಕೊಳ್ಳುವ ತಿರುವು ಕುತೂಹಲ ಹುಟ್ಟಿಸಿದ್ದು, ಸದ್ಯದ ಸಂಪುಟ ವಿಸ್ತರಣೆ ಮತ್ತು ಒಟ್ಟಾರೆ ಮೈತ್ರಿ ಸರ್ಕಾರದ ಮೇಲೆ ಅದು ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಯಾಕೆಂದರೆ; ಗೌಡರು ರೊಚ್ಚಿಗೆದ್ದಿದ್ದಾರೆ. ಸರ್ಕಾರ ಬಿದ್ದುಹೋದರೂ ಪರವಾಗಿಲ್ಲ, ನಾವು ನಮ್ಮ ಕೋಟಾದ ಸಚಿವ ಸ್ಥಾನಗಳನ್ನು ಪಕ್ಷೇತರರಿಗೆ ಬಿಟ್ಟುಕೊಡುವುದಿಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆಂದರೆ; ಅದರ ಅರ್ಥ ಅವರು ಈಗ ಎಲ್ಲಕ್ಕೂ ಸಜ್ಜಾಗಿದ್ದಾರೆ ಎಂದೇ. ಅಲ್ಲದೆ, ಒಂದು ಕಡೆ ಸಿಎಂ ಕುಮಾರಸ್ವಾಮಿ ಅವರು ತಮ್ಮ ಜನಪ್ರಿಯ ಗ್ರಾಮ ವಾಸ್ತವ್ಯಕ್ಕೆ ಮರು ಚಾಲನೆ ನೀಡಿರುವುದು, ಮತ್ತೊಂದು ಕಡೆ ದೇವೇಗೌಡರು ರಾಜಕೀಯ ಜೀವನದ ತುತ್ತತುದಿಯಲ್ಲಿ ಮತ್ತೆ ರಾಜ್ಯವನ್ನು ಸುತ್ತಿ ಪಕ್ಷದ ಬಲವರ್ಧನೆಗೆ ಮುಂದಾಗಿರುವುದು ಕೂಡ ದೊಡ್ಡ ಗೌಡರ ಲೆಕ್ಕಾಚಾರಗಳು ಸರಳವಿಲ್ಲ ಎಂಬುದರ ಸೂಚನೆಗಳೇ.
ಈ ನಡುವೆ, ಜೆಡಿಎಸ್ ಪಕ್ಷ ಗೌಡರ ಕುಟುಂಬ ಪಾರುಪಥ್ಯದ ಪಕ್ಷ ಎಂಬ ಹಣೆಪಟ್ಟಿ ಕಳಚಲು ಕೂಡ ಗೌಡರು ಯೋಚಿಸಿದ್ದು, ಮೊನ್ನೆಯ ಸಮಾವೇಶದಲ್ಲಿ ರಾಜ್ಯಾಧ್ಯಕ್ಷರನ್ನಾಗಿ ಒಕ್ಕಲಿಗರನ್ನು ಹೊರತುಪಡಿಸಿ ಇತರರಿಗೆ ಅವಕಾಶ ನೀಡುವ ಮಾತನಾಡಿದ್ದಾರೆ. ಎಚ್ ವಿಶ್ವನಾಥ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಗೌಡರು ಈವರೆಗೆ ಅಂಗೀಕರಿಸಿಲ್ಲವಾದರೂ, ಮುಂದಿನ ಅಧ್ಯಕ್ಷರ ತಲಾಶ್ ನಡೆಸಿದ್ದು, ಬಹುತೇಕ ಹಿರಿಯ ನಾಯಕ ಪಿ ಜಿ ಆರ್ ಸಿಂಧ್ಯಾ ಅವರಿಗೆ ಜೆಡಿಎಸ್ ಸಾರಥ್ಯ ನೀಡಬಹುದು ಎನ್ನಲಾಗುತ್ತಿದೆ.
ಆ ಮೂಲಕ ಮೂಲ ಜೆಡಿಎಸ್ ನಾಯಕರಿಗೆ ಅಧಿಕಾರ ನೀಡಿ, ಬಿಜೆಪಿಯ ಪರ್ಯಾಯವಾಗಿ ರಾಜ್ಯದಲ್ಲಿ ಜೆಡಿಎಸ್ ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಇರುವ ಜನತಾ ಪರಿವಾರದ ನಾಯಕರನ್ನು ಸೆಳೆಯುವ ಯೋಜನೆ ಗೌಡರದ್ದು. ಈಗಾಗಲೇ ಸಿದ್ದರಾಮಯ್ಯ ಕಾರಣದಿಂದ ಕಾಂಗ್ರೆಸ್ಸಿನ ಹಲವು ಪ್ರಭಾವಿ ನಾಯಕರು ಆ ಪಕ್ಷದಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿದ್ದಾರೆ. ಅಂತಹವರೊಂದಿಗೆ ಸಂಪರ್ಕದಲ್ಲಿರುವ ಗೌಡರು, ಮುಂದಿನ ದಿನಗಳಲ್ಲಿ ದೊಡ್ಡ ಆಟವನ್ನೇ ಹೂಡಲಿದ್ದಾರೆ. ಅತೃಪ್ತ ಮತ್ತು ಆತಂಕಿತ ಕಾಂಗ್ರೆಸ್ ನಾಯಕರಿಗೆ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವ ಭರವಸೆ ನೀಡಿ ಸೆಳೆಯುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲಾ ಭವಿಷ್ಯದ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿಯೇ ಇದೀಗ ಗೌಡರು, ದಿಲ್ಲಿಯಲ್ಲಿ ಹೋಗಿ ಗುಡುಗಿ ಬಂದಿದ್ದಾರೆ ಎಂಬ ಮಾತುಗಳೂ ಇವೆ
ಒಟ್ಟಾರೆ, ದಿಲ್ಲಿಯ ಗೌಡರ ಗುಡುಗು ಸದ್ಯದ ರಾಜಕೀಯ ಮೋಡಕವಿದ ವಾತಾವರಣದ ನಡುವೆ ಕೆಲವರಿಗೆ ಚಳಿ ಹುಟ್ಟಿಸಿದ್ದರೆ, ಭವಿಷದ ಚಂಡಮಾರುತದ ಬಗ್ಗೆಯೂ ನಡುಕ ಹುಟ್ಟಿಸಿದೆ. ಅಕಾಲಿಕ ವಿಕೋಪಕ್ಕೆ ಈಡಾಗಿ ಕೊಚ್ಚಿಹೋಗುವವರು ಮತ್ತು ದಡ ಸೇರಿ ಬಚಾವಾಗುವವರು ಯಾರ್ಯಾರು ಎಂಬುದನ್ನು ಕಾದುನೋಡಬೇಕಷ್ಟೇ!