ಸಾಮಾಜಿಕ ಮಾಧ್ಯಮದಲ್ಲಿ ಬಲಪಂಥೀಯ ಉತ್ಸಾಹಿಗಳು ಗಿರೀಶ್ ಕಾರ್ನಾಡರ ನಿಧನವನ್ನು ಸಂಭ್ರಮ- ಸಡಗರಗಳೊಂದಿಗೆ ಸ್ವಾಗತಿಸುತ್ತಿದ್ದಾರಂತೆ! ಒಬ್ಬ ಮಹಾನುಭಾವನಂತೂ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮೊದಲ ಬಾರಿ ಆಯ್ಕೆಗೊಂಡಾಗ “ಅನಂತಮೂರ್ತಿ ಗೊಟಕ್’ ಎಂದರು; ದ್ವಿತೀಯ ಬಾರಿಗೆ ಮೋದಿಯವರು ಇನ್ನಷ್ಟು ಭಾರೀ ಬಹುಮತದೊಂದಿಗೆ ಗೆದ್ದು ಬಂದಾಗ ಗಿರೀಶ್ ಸರದಿ!” ಎಂದು ಸಂತೋಷ ವ್ಯಕ್ತಪಡಿಸಿದರಂತೆ. ಸಾವಿನ ಸೂತಕದಲ್ಲೂ ಸಂಭ್ರಮ ಪಡುವವರು ಎಂದು ಇಂತಹವರನ್ನು ಕಡೆಗಣಿಸಿಬಿಡಬೇಡಿ! ಯಾಕೆಂದರೆ, ದೇಶದ ಮತದಾರರಲ್ಲಿ ಅವರೇ ಬಹುಸಂಖ್ಯಾತರು; ಅವರೇ ನಮ್ಮ ಪ್ರತಿನಿಧಿ ಮತದಾರರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ನಾಯಕತ್ವದ ಎನ್ ಡಿ ಎ ಮೈತ್ರಿಕೂಟದ ಪ್ರಧಾನ ಮಂತ್ರಿ ಪದವಿಯ ಅಧಿಕೃತ ಅಭ್ಯರ್ಥಿಯಾಗಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮುಂಚೂಣಿಗೆ ಬಂದಾಗ, ಕನ್ನಡದ ಖ್ಯಾತ ಲೇಖಕ ಯು.ಆರ್. ಅನಂತಮೂರ್ತಿ, “ಮೋದಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡುವ ದೇಶದಲ್ಲಿ ನಾನಿರಲಾರೆ” ಎಂದು ಹೇಳಿದರು. ‘ಇರಲಾರೆ’ ಎಂಬ ಅವರ ಹೊಯ್ದಾಟದ ಮನಸ್ಥಿತಿಯ ಮಾತನ್ನು ‘ಇರುವುದಿಲ್ಲ’ ಎಂಬ ಖಡಾಖಂಡಿತವಾದ ಹೇಳಿಕೆಯನ್ನಾಗಿ ಪ್ರಕಟಿಸಿ ಕನ್ನಡದ ಕೆಲವು ಪತ್ರಿಕೆಗಳು ಸಾಕಷ್ಟು ರಾದ್ಧಾಂತವನ್ನು ಸೃಷ್ಟಿಸಿದವು. ನಂತರ ನಡೆದ ಚುನಾವಣೆಗಳಲ್ಲಿ ಎನ್.ಡಿ.ಎ ಒಕ್ಕೂಟ, ಬಹುಮತ ಪಡೆದು 2002ರ ಗುಜರಾತ್ ನರಮೇಧದ ಕಾರಣಪುರುಷ ನರೇಂದ್ರ ಮೋದಿ, ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಗೊಂಡರು. ಅನತಿ ಕಾಲದಲ್ಲೇ ಮಂಗಳೂರಿನ ಬಿಜೆಪಿ ಅನುಯಾಯಿ, ಹಾಗೂ ಮೋದಿ ಭಕ್ತರೊಬ್ಬರು ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಹೊರಡಲು ಒಂದು ವಿಮಾನದ ಟಿಕೆಟ್ಟನ್ನು ಸಹ ಕಳಿಸಿದರು. ಆದರೆ ಆ ವೇಳೆಗೆ ಅನಂತಮೂರ್ತಿಯವರಿಗೆ, ತನ್ನ ದೇಶ ಎಂದರೆ ತನ್ನ ವಿಧಿ ಹಾಗೂ ದೈವಕ್ಕೆ ಸಮ ಎಂಬ ಹಾಗೆ ಕಂಡಿತ್ತು. ತಾನು ಹಾಗೆ ಬಯಸಿದರೂ, ಈ ದೇಶ ಬಿಟ್ಟು ಬೇರೆಲ್ಲೂ ನೆಲೆಸಲಾರೆ, ತನಗೆ ಯಾರೂ ಜಾಗ ಕೊಡುವುದಿಲ್ಲ; ಆಶ್ರಯವನ್ನೂ ಕೊಡುವುದಿಲ್ಲ, ಭಾರತ ಬಿಟ್ಟು ತನಗೆ ಬೇರೆ ಗತಿ ಇಲ್ಲ, ನೆಲೆಯೂ ಇಲ್ಲ ಎಂಬ ಅರಿವು ಮೂಡಿತ್ತು. ಆ ಅರಿವಿನಿಲ್ಲಿ ವಿಷಾದವೂ ಬೆರೆತಿತ್ತು. ಆ ವೇಳೆಗಾಗಲೇ ಇಳಿವಯಸ್ಸಿನಲ್ಲಿದ್ದ ಅನಂತಮೂರ್ತಿ ದೈಹಿಕ ಅಸ್ವಸ್ಥತೆಯಲ್ಲಿ ಹಾಸಿಗೆ ಹಿಡಿದಿದ್ದರು. (22-08-2014 ಅವರ ತೀರಿಕೊಂಡ ದಿನಾಂಕ). ಅನಂತಮೂರ್ತಿಯವರಿಗೆ, ತಮ್ಮ ಕೊನೆಗಾಲದಲ್ಲಿ ತಿಳಿದು ಬಂದ ಈ ಸತ್ಯ, ಭಾರತದ ಪ್ರತಿಯೊಬ್ಬ ಮುಸ್ಲಿಂ ಪ್ರಜೆಗೂ, ಪ್ರತಿದಿನ, ಪ್ರತಿಕ್ಷಣ, ಅನುಭವವೇದ್ಯವಾಗಿರುವಂತಹದ್ದು. ಇಷ್ಟಾಗಿಯೂ, “ಭಾರತದ ಮುಸ್ಲಿಮರಿಗೆ ಎರಡೇ ಸ್ಥಳಗಳು- ಒಂದೋ ಪಾಕಿಸ್ತಾನ ಇಲ್ಲವೇ ಖಬರಸ್ತಾನ!” ಎಂದು ಘೋಷಣೆ ಕೂಗುವವರು, ಮುಸ್ಲಿಮರು ತುಷ್ಟೀಕರಣಗೊಂಡ ಸಮುದಾಯ ಎಂದು ವಾದಿಸುವವರು ಚುನಾವಣೆಗಳಲ್ಲಿ ಮತಹಾಕಿದವರಲ್ಲಿ ಬಹುಸಂಖ್ಯೆಯವರು! ಅಷ್ಟು ಮಾತ್ರವಲ್ಲ, ಹಾಗೆ ಘೋಷಿಸಿದವರು ಈಗ ಜನಪ್ರತಿನಿಧಿಗಳು ಮತ್ತು ಹಾಲಿ ಪ್ರಧಾನಿಯವರ ಮಂತ್ರಿಮಂಡಲದಲ್ಲಿ ಮಂತ್ರಿಗಳು!
ಮೊದಲು ಯು.ಆರ್. ಅನಂತಮೂರ್ತಿ, ಇದೀಗ ಗಿರೀಶ್ ಕಾರ್ನಾಡ್ – ಕನ್ನಡದ ಈ ಇಬ್ಬರು ಧೀಮಂತರು ವಿದಾಯ ಹೇಳಿರುವ ಭಾರತ ಅಸಹಾಯಕರ ಮಟ್ಟಿಗೆ ಎಷ್ಟು ಕ್ರೂರವಾಗಿದೆ! ಆಳುವ ಪಕ್ಷದ ಅಧ್ಯಕ್ಷರೇ ಒಂದು ಇಡೀ ಸಮುದಾಯದ ನರಮನುಷ್ಯರನ್ನು Termites-ಗೆದ್ದಲು ಹುಳಗಳು’ ಎಂದು ಸಂಬೋಧಿಸುತ್ತಾರೆ ಎಂದರೆ ಈ ದೇಶ ದುರ್ಬಲರ ಮಟ್ಟಿಗೆ ನರಕವಲ್ಲದೆ ಇನ್ನೇನು? ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಇಬ್ಬರಿಗೂ ತಮ್ಮ ಕೊನೆಗಾಲದಲ್ಲಿ ಭಾರತ ನೈತಿಕವಾಗಿ ನರಕದ ಹಾಗೇನೇ ಕಂಡಿತ್ತು ಮತ್ತು ಇಬ್ಬರೂ ಈ ಅಸಹನೀಯ ವಸ್ತುಸ್ಥಿತಿಯ ವಿರುದ್ಧ ತಮ್ಮ ಇಡೀ ವ್ಯಕ್ತಿತ್ವವನ್ನು ತೊಡಗಿಸಿಕೊಂಡು ಹೋರಾಡಿದರು. ಆ ಮಹಾನ್ ಚೇತನಗಳಿಗೆ ನಮಸ್ಕಾರ!
ಗಿರೀಶ್ ಕಾರ್ನಾಡರ ‘ಐಕಾನಿಕ್ –ಪ್ರತಿಮಾತ್ಮಕ’ ಎನ್ನಬಹುದಾದ ಒಂದು ಚಿತ್ರ ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಅದು ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ‘ಗೌರಿ ದಿನ’ದಂದು ಉಸಿರಿಗೆಂದು ಆಕ್ಸಿಜನ್ ಪೈಪ್ ಮೂಗಿಗೆ ಜೋಡಿಸಿಕೊಂಡು, “Me too Urban Naxal- ನಾನೂ ಕೂಡಾ ನಗರ ನಕ್ಸಲ್’ ಎಂಬ ಪೋಸ್ಟರ್ ಸಮೇತ ಕೂತ ಗಿರೀಶರ ಫೋಟೋ. ಇಂಗ್ಲಿಷ್ ಪತ್ರಿಕೆಯೊಂದು ಈ ಚಿತ್ರದ ಬಗ್ಗೆ ಹೇಳುತ್ತಾ, “ಗಿರೀಶರ ಉಸಿರಾಟದ ಸಂಗಾತಿ ಆಕ್ಸಿಜನ್ ಪೈಪ್ ಮತ್ತು ‘ನಾನೂ ಕೂಡಾ ನಗರ ನಕ್ಸಲ್’ ಎಂಬ ಪೋಸ್ಟರ್, ಎರಡೂ, ಅವುಗಳಷ್ಟಕ್ಕೆ ಅವು ಹೇಳಿಕೆಗಳು’, ಆ ಕುರಿತು ಆಲಾಯದ/ಹೆಚ್ಚುವರಿ ನಿರೂಪಣೆಯೇ ಅನಗತ್ಯ” ಎಂದು ಬರೆಯಿತು.
‘ನಗರ ನಕ್ಸಲ್’- ಇದು ನಮ್ಮನ್ನು ಈಗ ಆಳುತ್ತಿರುವ ಬಲಪಂಥೀಯ, ಅರೆಫ್ಯಾಸಿಸ್ಟ್ ಸರಕಾರ ಮಾನವ ಹಕ್ಕು ಹೋರಾಟಗಾರರಿಗೆ ಮಾಡಿರುವ ನಾಮಕರಣ. ಕಳೆದ ವರ್ಷಾಂತ್ಯದಲ್ಲಿ ಭೀಮಾ ಕೊರೆಗಾಂವ್ನಲ್ಲಿ ದಲಿತರು ಭಾಗವಹಿಸಿ, ಯುದ್ಧದ ಕಾಲಾಳುಗಳಾಗಿ ಬ್ರಾಹ್ಮಣಶಾಹಿ ಪೂನಾದ ಪೇಶ್ವೆ ಆಳ್ವಿಕೆಯ ವಿರುದ್ಧ ಸೆಣಸಾಡಿ ಗೆದ್ದ 200ನೆಯ ವರ್ಷದ ಆಚರಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಮಹಾರಾಷ್ಟ್ರ ಹಿಂದುತ್ವವಾದಿ ಸಂಘಟನೆಗಳೇ ಮುಖ್ಯ ಕಾರಣಕರ್ತರಾಗಿದ್ದರೂ ಸರ್ಕಾರ ದಲಿತ ಮಾನವ ಹಕ್ಕು ಹೋರಾಟಗಾರರನ್ನು ಬಲಿಪಶುಗಳನ್ನಾಗಿ ಮಾಡಿ, ಆ ಹಿಂಸಾಚಾರಕ್ಕೆ ಹೊಣೆಗಾರರನ್ನಾಗಿಸಿ ಬಂಧಿಸಿತು. ಅದೂ ಸಾಲದ್ದಕ್ಕೆ, ಈ ದಲಿತ ಚಿಂತಕರು ಮತ್ತು ಕಾರ್ಯಕರ್ತರ ಮೇಲೆ ಪ್ರಧಾನಮಂತ್ರಿಯವರ ಜೀವಹತ್ಯೆ ನಡೆಸಲು ಒಳಸಂಚು ಮಾಡಿದ ಸುಳ್ಳು ಆರೋಪವನ್ನೂ ಹೊರಿಸಿತು. ಆಗ ಆಳುವ ವ್ಯವಸ್ಥೆ, ಈ ಮಾನವ ಹಕ್ಕು ಹೋರಾಟಗಾರರಿಗೆ ಕೊಟ್ಟ ಹೆಸರು –‘ನಗರ ನಕ್ಸಲ್’. ಗಿರೀಶ್ ಕಾರ್ನಾಡ್ ಈ ಅನ್ಯಾಯವನ್ನು ಪ್ರತಿಭಟಿಸುತ್ತಿದ್ದರು. ತಮ್ಮ ಪ್ರತಿರೋಧವನ್ನು ಸಾಂಕೇತಿಕವಾಗಿ ಸೂಚಿಸುತ್ತಾ ದಲಿತ ಚಿಂತಕರನ್ನು ನಗರ ನಕ್ಸಲ್ ಎಂದು ಸರ್ಕಾರ ಕರೆಯುವುದಾದರೆ “ನಾನೂ ಕೂಡಾ ನಗರ ನಕ್ಸಲ್’ ಎಂಬ ಪೋಸ್ಟರ್ ಹಿಡಿದು ಕುಳಿತಿದ್ದರು. ನಕ್ಸಲ್ ಹೋರಾಟವನ್ನಾಗಲೀ, ಯಾವುದೇ ಹಿಂಸೆಯ ಮಾರ್ಗವನ್ನಾಗಲೀ ಎಂದೂ ಗಿರೀಶರು ತಮ್ಮ ಜೀವನದಲ್ಲಿ ಒಪ್ಪಿಕೊಂಡವರು ಅಲ್ಲವೆಂಬ ಸತ್ಯ ಅವರನ್ನು ಬಲ್ಲ ಎಲ್ಲರಿಗೂ ತಿಳಿದಿರುತ್ತದೆ.
ದೇಶದ ಬಲಪಂಥೀಯ ಶಕ್ತಿಗಳನ್ನು ಗಿರೀಶ್ ಕಾರ್ನಾಡ್ ಎದುರು ಹಾಕಿಕೊಂಡು, ಪ್ರತಿರೋಧ ತೋರಿಸಿದ್ದು, ಅದೇನೂ ಮೊದಲ ಬಾರಿಯಲ್ಲ. ದಶಕಗಳ ಹಿಂದೆಯೇ, ಅವರು ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣವಾಡುತ್ತ, ಬಲಪಂಥೀಯ ಶಿವಸೇನೆಯನ್ನು ನೇರವಾಗಿ ಹೆಸರಿಸದೇ, “ನಾಗರಿಕ ಸಮಾಜದಲ್ಲಿ ಸೇನೆಗೆ ಯಾವ ಕೆಲಸವೂ ಇಲ್ಲ, ಸಾರ್ವಜನಿಕ ಜೀವನದಲ್ಲಿ ಸೈನಿಕ ಪ್ರವೇಶಿಸಕೂಡದು” ಎಂದು ಬಹಿರಂಗವಾಗಿ ಘೋಷಿಸಿದ್ದರು.
1992 ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಹಿಂದುತ್ವವಾದಿಗಳು ಧ್ವಂಸಗೊಳಿಸಿದ ನಂತರ, ಕರ್ನಾಟಕದಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾಬುಡನ್ಗಿರಿಯನ್ನು ಇನ್ನೊಂದು ಅಯೋಧ್ಯೆಯನ್ನಾಗಿ ಮಾರ್ಪಡಿಸುವುದು ಬಲಪಂಥೀಯರ ಘೋಷಿತ ಉದ್ದೇಶವಾಗಿತ್ತು. ಗಿರೀಶ್ ಕಾರ್ನಾಡರು ಸಂಘಪರಿವಾರದ ಆ ನಡೆಯನ್ನು ಸಹ ತೀವ್ರವಾಗಿ ಪ್ರತಿಭಟಿಸಿದರು. ಈ ಕುರಿತಂತೆ 2003ರ ಡಿಸೆಂಬರ್ ತಿಂಗಳಿನಲ್ಲಿ ನಾಡಿನ ಸೌಹಾರ್ದ ಪ್ರೇಮಿಗಳು ನಡೆಸಿದ ಬೃಹತ್ ಜನಾಂದೋಲನದಲ್ಲಿ ಗಿರೀಶರು ಸಕ್ರಿಯವಾಗಿ ಭಾಗವಹಿಸಿದ್ದರು. 2004ರಲ್ಲಿ ಉಡುಪಿಯಲ್ಲಿ ಮುಸ್ಲಿಂ ಸಂಘಟನೆಯೊಂದರ ಸಾರ್ವಜನಿಕ ಸಮಾರಂಭದಲ್ಲಿ ಸ್ವಾಮಿ ಅಗ್ನಿವೇಶ್ ಜೊತೆ ಗಿರೀಶ್ ಕಾರ್ನಾಡರು ಸಹ ಭಾಗವಹಿಸಿದ ದಿನ, ಉಡುಪಿಯ ಬಜರಂಗಿಗಳು ಕಾರ್ನಾಡರ ಶವಸಂಸ್ಕಾರವನ್ನು ನೆರವೇರಿಸಿದರು. ಆ ಸುದ್ದಿ ಕೇಳಿ ಗಿರೀಶರು ಬಹಳ ಖುಷಿ ಪಟ್ಟರು. “ಛೇ, ನಾನು ಆಗ ಅಲ್ಲಿರಬೇಕಾಗಿತ್ತು” ಎಂದು ಉದ್ಘರಿಸಿದ್ದರು!
ಅನಂತಮೂರ್ತಿಯವರ ಹಾಗೆ ಗಿರೀಶ್ ಕಾರ್ನಾಡರಿಗೆ ಸಹ ಕರ್ನಾಟಕದಾದ್ಯಂತ ತನ್ನ ರಾಜಕೀಯ ನಿಲುವಿನ ಕಾರಣಕ್ಕೆ ವೈರಿಗಳಿದ್ದಾರೆ ಎಂಬ ಸತ್ಯ ಗೊತ್ತಿತ್ತು. ಗಿರೀಶರು ಅದನ್ನು ಲಘುವಾಗಿ ಪರಿಗಣಿಸಿದರು. “ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವನು” ಎಂದು ಶುರುವಾಗುವ ಕನಕದಾಸರ ರಚನೆಯೊಂದರಲ್ಲಿ “ರಾಯ ಮುನಿದರೆ ರಾಜ್ಯವನೆ ಬಿಡಬಹುದು..” ಎಂಬ ಮಾತು ಬರುತ್ತದೆ. ಕನಕನಿಗೆ ರಾಜ್ಯವನೆ ಬಿಡುವ ಆ ಸ್ವಾತಂತ್ರ್ಯ ಕಾಲ್ಪನಿಕವಲ್ಲ’ ಸ್ವತಃ ಕನಕನೇ ತನ್ನ ಜೀವಿತ ಕಾಲದಲ್ಲಿ ಹಲವು ರಾಜ ಮಹಾರಾಜರ ಸಂಸ್ಥಾನಗಳು, ರಾಜ್ಯಗಳು ಮತ್ತು ಪಾಳೆಯಪಟ್ಟುಗಳಲ್ಲಿ ಸಂಚರಿದವನು. ಆದರೆ 16ನೆಯ ಶತಮಾನದ ಈ ಸಂತ ಕವಿಗೆ ನಿಜಕ್ಕೂ ಇದ್ದ ಈ ಸ್ವಾತಂತ್ರ್ಯ 21ನೆಯ ಶತಮಾನದ ಅನಂತಮೂರ್ತಿಯವರಂತಹ ಧೀಮಂತರಿಗೇನೇ ಇಲ್ಲ. ಗಿರೀಶರಿಗೂ ಇರಲಿಲ್ಲ. ಆದರೆ ಗಿರೀಶರಿಗೆ ಅನಂತಮೂರ್ತಿಯವರ ಹಾಗೆ ಆ ಕುರಿತು ವಿಷಾದವಿದ್ದಂತೆ ಕಾಣಲಿಲ್ಲ.