ಶಮ್ಲಿ: ಉತ್ತರ ಪ್ರದೇಶದ ಶಮ್ಲಿಯಲ್ಲಿ ರೈಲು ಹಳಿ ತಪ್ಪಿದ್ದನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಇಲ್ಲಿನ ರೈಲ್ವೆ ಪೊಲೀಸರು ಹಲ್ಲೆ ನಡೆಸಿದ್ದು ಅಲ್ಲದೇ, ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರೈಲ್ವೆ ಪೊಲೀಸರು ಟಿವಿ ವರದಿಗಾರ ಅಮಿತ್ ಶರ್ಮಾ ಅವರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಹೀನ ಕೃತ್ಯಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಘಟನೆ ಹಿನ್ನೆಲೆ:
ಶಮ್ಲಿಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿರುವ ಬಗ್ಗೆ ಮಾಹಿತಿ ತಿಳಿದಿದ್ದ ಶರ್ಮಾ ಮಂಗಳವಾರ ರಾತ್ರಿಯೇ ಅಲ್ಲಿಗೆ ತೆರಳಿ ರೈಲಿನ ವಿಡಿಯೋ ಚಿತ್ರೀಕರಿಸಿದ್ದಾರೆ. ಇದನ್ನು ಗಮನಿಸಿದ ಸಾಮಾನ್ಯ ಉಡುಪು ಧರಿಸಿದ್ದ ರೈಲ್ವೇ ಪೊಲೀಸರು, ಶರ್ಮಾನಿಂದ ಮೊದಲು ಕ್ಯಾಮೆರಾವನ್ನು ಕಸಿದುಕೊಂಡಿದ್ದಾರೆ. ನಂತರ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಮಾಡಿದಲ್ಲದೇ, ಅಮಾನವೀಯವಾಗಿ ಶರ್ಮಾನನ್ನು ಕೆಳಗೆ ತಳ್ಳಿ ಬಾಯಿಯಲ್ಲಿ ಮೂತ್ರ ವಿಸರ್ಜನೆ ಮಾಡಿ ನೀಚ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ನ್ಯೂಸ್24 ಸುದ್ದಿ ವಾಹಿನಿಯ ವರದಿಗಾರ ಶರ್ಮಾ ಹೇಳುವಂತೆ “ಅವರು ಸಾಮಾನ್ಯ ಉಡುಪು ಧರಿಸಿದ್ದರು. ಒಬ್ಬ ನನ್ನ ಕ್ಯಾಮೆರಾ ಮೇಲೆ ಹಲ್ಲೆ ಮಾಡಿದ ಅದು ಕೆಳಗೆ ಬಿತ್ತು. ಮತ್ತೆ ಅದನ್ನು ನಾನು ಮೇಲೆತ್ತಲು ಪ್ರಯತ್ನಿಸಿದಾಗ ನನ್ನ ಮೇಲೂ ಹಲ್ಲೆ ನಡೆಸಿ ಕೆಟ್ಟ ಪದಗಳಿಂದ ನಿಂದಿಸಿದರು. ನನ್ನನ್ನು ಹಿಡಿದು ತಳ್ಳಿ ನನ್ನ ಬಾಯಿಯಲ್ಲಿ ಮೂತ್ರ ವಿಸರ್ಜಿಸಿದರು,” ಎಂದು ಆರೋಪಿಸಿದ್ದಾರೆ.
ಅಲ್ಲದೇ 10ರಿಂದ 15 ದಿನಗಳ ಹಿಂದೆ ಮಾಡಿದ್ದ ವರದಿಯೊಂದರ ಬಗ್ಗೆ ರೈಲ್ವೆ ಅಧಿಕಾರಿ ರಾಕೇಶ್ ಕುಮಾರ್ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದರು. ನನ್ನ ಮೊಬೈಲ್ ಅನ್ನು ಕಸಿದುಕೊಂಡಿದ್ದಾರೆ, ಅದರಲ್ಲಿ ವರದಿಯ ವಿಡಿಯೋ ಇದೆ ಎಂದೂ ಸಹ ಆರೋಪಿಸಿದ್ದಾರೆ.
ಕೂಡಲೇ ಹಲವು ಪತ್ರಕರ್ತರು ಠಾಣೆಗೆ ಧಾವಿಸಿ ಘಟನೆ ಬಗ್ಗೆ ರೈಲ್ವೆಯ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ, ಇಂದು ಬೆಳಗ್ಗೆ ಶರ್ಮಾನನ್ನು ಬಿಡುಗಡೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಅಧಿಕಾರಿ ರಾಕೇಶ್ ಕುಮಾರ್ ಮತ್ತು ರೈಲ್ವೆ ಪೊಲೀಸ್ ಪೇದೆ ಸಂಜಯ್ ಪವಾರ್ ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
“ಪತ್ರಕರ್ತನನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆ ಬಗ್ಗೆ ಮಾಹಿತಿ ಲಭಿಸಿದೆ. ಡಿಜಿಪಿ ಸಿಂಗ್ ಕುರಿತು ತನಿಖೆಗೆ ಆದೇಶಿಸಿದ್ದಾರೆ, ರಾಕೇಶ್ ಕುಮಾರ್ ಮತ್ತು ರೈಲ್ವೆ ಪೊಲೀಸ್ ಪೇದೆ ಸಂಜಯ್ ಪವಾರ್ ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇಬ್ಬರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಲಾಗಿದೆ” ಎಂದು ಉ.ಪ್ರ. ಪೊಲೀಸರು ಟ್ವೀಟ್ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಪತ್ರಕರ್ತನನ್ನು ಥಳಿಸುತ್ತಿರುವ ದೃಶ್ಯ ಸ್ಪಷ್ಟವಾಗಿ ದಾಖಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತ ಟ್ವಿಟರ್ ಬರವಣಿಗೆಗೆ ಜೈಲು ಪಾಲಾಗಿದ್ದ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಮರುದಿನವೇ, ಮತ್ತೋರ್ವ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸರೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಪರಿಸ್ಥಿತಿಯನ್ನು ವಿವರಿಸುತ್ತಿದೆ.
More Articles
By the same author
Related Articles
From the same category