ತಂಜಾವೂರು: ಚೋಳರ ಕಾಲದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಮಾತಾಡಿದ್ದಾಕ್ಕಾಗಿ ಖ್ಯಾತ ತಮಿಳು ಚಿತ್ರ ನಿರ್ದೇಶಕ ಪಾ ರಂಜಿತ್ ವಿರುದ್ಧ ಹಿಂದೂ ಮಕ್ಕಳ್ ಕಚ್ಚಿ (ಹೆಚ್ ಎಂಕೆ) ನಾಯಕ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚೋಳರ ದೊರೆ ಒಂದನೇ ರಾಜಾ ರಾಜಾ (985-1014) ಅವಧಿಯಲ್ಲಿ ನಡೆದ ಆಳ್ವಿಕೆಯು ಕಗ್ಗತ್ತಲೆಯ ಕಾಲಾವಧಿಯಾಗಿತ್ತು ಎಂದು ಮದ್ರಾಸ್, ಕಬಾಲಿ ಮತ್ತು ಕಾಲಾ ಚಿತ್ರಗಳ ನಿರ್ದೇಶಕ ಪಾ ರಂಜಿತ್ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ಅವರ ಮೇಲೆ ಕೇಸು ದಾಖಲಿಸಲಾಗಿದೆ.
ದಲಿತ ಹೋರಾಟಗಾರ ನೀಲ ಪುಲಿಗಳ್ ಇಯಕ್ಕಮ್ ಸ್ಥಾಪಕ ಉಮರ್ ಫಾರೂಕ್ ಅವರ ಸ್ಮರಣಾರ್ಥ ಜೂನ್ 5ರಂದು ಕುಂಭಕೋಣಂ ಬಳಿಯ ತಿರುಪ್ಪನಂದನ್ ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾ ರಂಜಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಲಿತರು ಭೂಮಿಗಾಗಿ ಪಡುತ್ತಿದ್ದ ಸಂಕಷ್ಟಗಳು ಹಾಗೂ ಅದರಿಂದ ಹೊರತರಲು ಫಾರೂಕ್ ಅವರು ವಹಸಿದ್ದ ಪಾತ್ರದ ಕುರಿತು ಮಾತನಾಡಿದ್ದರು, ಇದೇ ವೇಳೆ ರಾಜ ರಾಜ ಚೋಳನ ಆಡಳಿತಾವಧಿಯ ಬಗ್ಗೆಯೂ ಪ್ರಸ್ತಾಪಿಸಿದ್ದರು.
“ಚೋಳನ ಆಡಳಿತಾವಧಿಯಲ್ಲಿ ಒಳಸಂಚು ರೂಪಿಸಿ ದಲಿತರಿಂದ ಭೂಮಿಯನ್ನು ತಮ್ಮ ವಶಕ್ಕೆ ಪಡೆದರು. ಅಲ್ಲದೇ ದಲಿತರ ಮೇಲೆ ಸಾಕಷ್ಟು ದಬ್ಬಾಳಿಕೆ ನಡೆಸಿದರು ಹಾಗೂ ಮಹಿಳೆಯರನ್ನು ದೇವಾಲಯಗಳಿಗೆ ಅರ್ಪಿಸುವಂಥ ದೇವದಾಸಿ ಪದ್ದತಿಯನ್ನು ಜಾರಿಗೆ ತರಲಾಗಿತ್ತು,” ಎಂದು ತಮ್ಮ ಭಾಷಣದಲ್ಲಿ ರಂಜಿತ್ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹೇಳಿಕೆ ಖಂಡಿಸಿ ಹೆಚ್ಎಂಕೆ ನಾಯಕ ಬಾಲಾ ತಂಜಾವೂರು ಎಸ್ಪಿಗೆ ನೀಡಿದ್ದ ದೂರಿನಲ್ಲಿ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವಂಥ ಮತ್ತು ದೇಶದ ಏಕತೆಗೆ ಧಕ್ಕೆ ತರುವಂಥ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದರು.