ಉತ್ತರ ಪ್ರದೇಶದ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ದರ್ವೇಶ್ ಯಾದವ್ ಅವರನ್ನು ಸಹೋದ್ಯೋಗಿ ವಕೀಲನೊಬ್ಬ ಗುಂಡಿಟ್ಟು ಹತ್ಯೆಗೈದಿರುವ ಆಘಾತಕಾರಿ ಘಟನೆ ಆಗ್ರಾ ಕೋರ್ಟಿನ ಆವರಣದಲ್ಲಿ ನಡೆದಿದೆ. ದರವೇಶ್ ಯಾದವ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಎರಡೇ ದಿನಗಳಲ್ಲಿ ಈ ಹತ್ಯೆ ನಡೆದಿದೆ.
ಹತ್ಯೆ ನಡೆಸಿರುವ ವ್ಯಕ್ತಿ ಯಾದವ್ ಅವರ ಸಹೋದ್ಯೋಗಿ ವಕೀಲ ಮನೀಶ್ ಶರ್ಮಾ ಎಂದು ತಿಳಿದು ಬಂದಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೊರಡುತ್ತಿದ್ದ ಶ್ರೀಮತಿ ಯಾದವ್ ಅವರ ಮೇಲೆ ಮೂರು ಸಲ ಗುಂಡು ಹಾರಿಸಿದ್ದಾನೆ. ನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಆಘಾತಕಾರಿ ಹೇಯ ಕೃತ್ಯ ನಡೆದಿರುವ ಹಿನ್ನೆಲೆಯಲ್ಲಿ ಔಧ್ ಬಾರ್ ಅಸೋಸಿಯೇಶನ್ ತುರ್ತು ಸಭೆ ನಡೆಸಿದ್ದು, ಬಾರ್ ಕೌನ್ಸಿಲ್ ಅಧ್ಯಕ್ಷರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದೆ. ನಾಳೆಯಿಂದ ತಮ್ಮ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ದಾಖಲಿಸಲು ಬಾರ್ ಕೌನ್ಸಿಲ್ ತೀರ್ಮಾನಿಸಿದೆ. ಈ ಹತ್ಯೆಯ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖೆ ನಡೆಸಬೇಕು ಎಂದೂ ಆಗ್ರಹಪಡಿಸಿದೆ.
ಹತ್ಯೆ ಹಿಂದೆ ಯಾರಿದ್ದಾರೆ ಮತ್ತು ಯಾಕೆ ನಡೆಸಿದ್ದಾರೆ ಎಂಬ ಕುರಿತು ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.