ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾ ಅವರನ್ನು ಇನ್ನೂ 6 ತಿಂಗಳ ಕಾಲ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ನಿರ್ಧಾರವನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಸಧ್ಯ ಸಂಘಟನಾ ಪದಾಧಿಕಾರಿಗಳನ್ನು ಚುನಾಯಿಸುವ ಪ್ರಕ್ರಿಯೆ ನಡೆಸಲಿದ್ದು ಇದು ಮುಗಿಯು ವರೆಗೂ ಹಾಲಿ ಅಧ್ಯಕ್ಷ ಅಮಿತ್ ಶಾ ಅವರನ್ನೇ ಮುಂದುವರೆಸಲಾಗುವುದು ಎನ್ನಲಾಗಿದೆ.
ಬಿಜೆಪಿ ಸಭೆಯಲ್ಲಿ ಅಮಿತ್ ಶಾ ಅವರ ಮಾತುಗಳನ್ನು ಇಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಹಂಚಿಕೊಂಡರು.
“ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಷ್ಟು ವರ್ಷಗಳಲ್ಲೇ ಅತಿ ಹೆಚ್ಚು- 303 ಸೀಟು ಗಳಿಸಿಕೊಂಡಿದ್ದರೂ ಪಕ್ಷವು ಚುನಾವಣಾ ಕಾರ್ಯನಿರ್ವಹಣೆ ವಿಷಯದಲ್ಲಿ ಇನ್ನೂ ತನ್ನ ಉತ್ತುಂಗವನ್ನು ತಲುಪಿಲ್ಲ” ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ” ಎಂದು ಯಾದವ್ ತಿಳಿಸಿದರು.
ಶೇಕಡಾ 50ಕ್ಕಿಂತ ಹೆಚ್ಚು ಮತದಾರರ ಬೆಂಬಲ ಪಡೆದಿರುವ ಬಿಜೆಪಿಯ ಯಶಸ್ಸಿಗೆ ಕೋಟ್ಯಂತರ ಬಿಜೆಪಿ ಬೆಂಬಲಿಗರ ಮತ್ತು ಕಾರ್ಯಕರ್ತರ ಕಠಿಣ ಶ್ರಮವೇ ಕಾರಣ ಎಂದು ಅಮಿತ್ ಶಾ ಹೇಳಿದ್ದಾರೆ”
ಬಿಜೆಪಿ ಹಮ್ಮಿಕೊಂಡಿರುವ ಸದಸ್ಯತ್ವ ಆಂದೋಲನದ ಹೊಣೆಯನ್ನು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಹಿಸಿಕೊಳ್ಳುವುದಾಗಿ ಸಭೆಯಲ್ಲಿ ತೀರ್ಮಾನವಾಗಿದೆ” ಎಂದು ಭೂಪೆಂದರ್ ತಿಳಿಸಿದರು.
ಸಧ್ಯ ಬಿಜೆಪಿ ದೇಶದಾದ್ಯಂತ 11 ಕೋಟಿ ಸದಸ್ಯರನ್ನು ಹೊಂದಿದ್ದು ಶೇಕಡಾ 20ರಷ್ಟು ಸದಸ್ಯಬಲ ಹೆಚ್ಚಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಯಾದವ್ ತಿಳಿಸಿದರು.