ನವದೆಹಲಿ: ಭಾರತವು ಮುಂದಿನ ದಿನಗಳಲ್ಲಿ ತನ್ನದೇ ಸ್ವಂತ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಕೆ ಶಿವನ್ ಇಂದು ಘೋಷಿಸಿದ್ದಾರೆ. 2021ರ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಮಾನವ ಸಹಿತ ಅಂತರಿಕ್ಷ ಪ್ರಯಾಣವಾದ “ಗಗನ್ಯಾನ್” ಮಿಶನ್”ನ ವಿಸ್ತರಣೆಯ ಭಾಗವಾಗಿ ಈ ಮಹತ್ವಾಕಾಂಕ್ಷೆಯ ಯೋಜನೆ ಇರಲಿದೆ ಎಂದು ಅವರು ಹೇಳಿದ್ದಾರೆ.
“ಮಾನವ ಅಂತರಿಕ್ಷ ಮಿಶನ್ ನಂತರದಲ್ಲಿ ಗಗನಯಾನ್ ಯೋಜನೆಯನ್ನು ನಾವು ಉಳಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಭಾರತವು ತನ್ನದೇ ಆದಂತಹ ಅಂತರಿಕ್ಷ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ” ಎಂದು ಶಿವನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಜುಲೈ 15ರಂದು ಇಸ್ರೋ ನಡೆಸಲಿರುವ ಚಂದ್ರಯಾನ-2 ಉಡ್ಡಯನದ ಕುರಿತು ಮಾಹಿತಿ ನೀಡಿದ ಕೆ.ಶಿವನ್, ಇಸ್ರೋ ಕಳಿಸಲಿರುವ ಸ್ಪೇಸ್ ಕ್ರಾಫ್ಟ್ 52ದಿನಗಳ ಪಯಣದ ನಂತರ ಸೆಪ್ಟೆಂಬರ್ 5 ಅಥವಾ 6 ರಂದು ಚಂದ್ರನ ಮೇಲೆ ನೆಲೆಯೂರಲಿದೆ ಎಂದರು. ಹತ್ತು ವರ್ಷಗಳ ಹಿಂದೆ ಇಸ್ರೋ ಚಂದ್ರಯಾನ್ -1ನ್ನು ನಡೆಸಿತ್ತು.
ಏನದು ಅಂತರರಾಷ್ಟ್ರೀಯ ಅಂತರಕ್ಷ ನಿಲ್ದಾಣ?
ಅಂತರಿಕ್ಷ ನಿಲ್ದಾಣ ಸಹ ಒಂದು ಬಗೆ ಕೃತಕ ಉಪಗೃಹವಾಗಿದ್ದು ಭೂಮಿಯ ಕೆಳ ಕಕ್ಷೆಯಲ್ಲಿರುತ್ತದೆ. ಇದರ ವಿಶೇಷತೆ ಏನೆಂದರೆ ಇದರಲ್ಲಿ ಮನುಷ್ಯರು ವಾಸಿಸುವ ಎಲ್ಲಾ ವ್ಯವಸ್ಥೆಗಳೂ ಇರುತ್ತವೆ. ಅಂತರಿಕ್ಷ ನಿಲ್ದಾಣಗಳು ಅಂತರಿಕ್ಷದಲ್ಲಿರುವ ಖಗೋಳ ಪ್ರಯೋಗಾಲಯಗಳಾಗಿರುತ್ತವೆ. ಭೂಮಿಯಿಂದ ಬರಿಗಣ್ಣಿನಲ್ಲಿ ವೀಕ್ಷಿಸಬಹುದಾದ ಅತಿದೊಡ್ಡ ಮಾನವನಿರ್ಮಿತ ಕಾಯಗಳೆಂದರೆ ಅಂತರಿಕ್ಷ ನಿಲ್ದಾಣಗಳು.
ಸಧ್ಯ ಅಂತರಿಕ್ಷದಲ್ಲಿರುವ ಅಂತರಿಕ್ಷ ನಿಲ್ದಾಣಗಳೆಂದರೆ ವಿವಿಧ ದೇಶಗಳು ಒಟ್ಟಾಗಿ ನಿರ್ಮಿಸಿರುವ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣ (ISS) ಹಾಗೂ ಚೀನಾದ ತಿಯಾಂಗಾಂಗ್ ಅಂತರಿಕ್ಷ ನಿಲ್ದಾಣ. ಇವುಗಳಲ್ಲದೆ ಇದುವರೆಗೆ ಅಮೆರಿಕ, ಚೀನಾ, ರಷ್ಯಾ ಹಲವು ಅಂತರಿಕ್ಷ ನಿಲ್ದಾಣಗಳನ್ನು 1970ರ ದಶಕದಿಂದಲೂ ನಿರ್ಮಿಸಿದ್ದು ಬಹುತೇಕವು ಸ್ಥಗಿತಗೊಂಡಿವೆ.
ISS ಅಂತರಿಕ್ಷ ನಿಲ್ದಾಣವು 2000ನೇ ಇಸವಿಯಿಂದಲೂ ಸಕ್ರಿಯಗೊಂಡಿದ್ದು ಅದಲ್ಲಿ ಬಿಡದೇ ಗಗನಯಾನಿಗಳು ತಂಗಿದ್ದಾರೆ. ಚೀನಾದ ಅಂತರಿಕ್ಷ ನಿಲ್ದಾಣವು ಸಧ್ಯ ನಿರ್ಜವಾಗಿದೆ.

ಭಾರತ ಇಸ್ರೋ ನಿರ್ಮಿಸಲಿರುವ ಅಂತರಿಕ್ಷ ನಿಲ್ದಾಣವು 2030ರ ಹೊತ್ತಿಗೆ ಸಿದ್ಧಗೊಳ್ಳಲಿದೆ ಎಂದು ಇಸ್ರೋ ತಿಳಿಸಿದೆ.